ಧುರಂಧರ್ ಮದುವೆಯಲ್ಲಿ ಇವರದ್ದೇ ನಳಪಾಕ!
ಅಡುಗೆ ಎಂಬ ಕಲೆ ಎಲ್ಲರಿಗೂ ಒಲಿಯುವುವಂಥದ್ದಲ್ಲ. ಅದನ್ನು ಪ್ರಯತ್ನಿಸಲು ಮುಂದಾಗಿ ಕೈ ಸುಟ್ಟುಕೊಂಡ ಅನೇಕ ಮಂದಿಯಿದ್ದಾರೆ. ಆದರೆ ಕಳೆದ 50 ವರ್ಷಗಳಿಂದಲೂ ಹೊಟೇಲ್, ಕೇಟರಿಂಗ್ ಉದ್ಯಮದಲ್ಲೇ ತೊಡಗಿಸಿಕೊಂಡು ಮನೆಮಾತಾಗಿರುವವರು ಸೆಲೆಬ್ರಿಟಿ ಶೆಫ್ ಸೋನಾ ಗಣೇಶ್ ನಾಯಕ್. ಇಟಲಿಯಲ್ಲಿ ನಡೆದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ವಿವಾಹ ಸಮಾರಂಭದಲ್ಲೂ ಕರಾವಳಿಯ ಕೈರುಚಿಯನ್ನು ಉಣಬಡಿಸಿದ ಹಿರಿಮೆ ಇವರಿಗೇ ಸಲ್ಲುತ್ತದೆ.
ಅದು 2018ರ ನವೆಂಬರ್ 14. ಇಟಲಿಯ ಲೇಕ್ ಕೋಮೊ ರೆಸಾರ್ಟ್‌ನಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ವಿವಾಹ ಸಮಾರಂಭ ಕೊಂಕಣಿ ಸಂಪ್ರದಾಯದಂತೆ ಬಹಳ ಅದ್ದೂರಿಯಾಗಿಯೇ ನೆರವೇರಿತ್ತು. ಆದರೆ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದು ಕರಾವಳಿ ಹಾಗೂ ಕೊಂಕಣಿ ಭಾಗದ ಊಟೋಪಹಾರ. ತಮ್ಮ ವಿವಾಹಕ್ಕೆ ಕೊಂಕಣಿ ಶೈಲಿಯ ಆಹಾರವೇ ಬೇಕು ಎಂಬುದಾಗಿ ಮೊದಲೇ ಹೇಳಿದ್ದ ದೀಪಿಕಾ ಪಡುಕೋಣೆ ಪರಿಚಯಸ್ಥರೇ ಆಗಿದ್ದ ಮಂಗಳೂರು ಮೂಲದವರಾದ ಸೋನಾ ಗಣೇಶ್ ನಾಯಕ್ ಅವರನ್ನೇ ಮೊದಲ ಆಯ್ಕೆಯನ್ನಾಗಿಸಿಕೊಂಡಿದ್ದರು. ಹೀಗೆ ಪಡುಕೋಣೆ ಕುಟುಂಬ, ಅದರಲ್ಲೂ ಸೆಲೆಬ್ರಿಟಿ ವಿವಾಹದಲ್ಲಿ ರುಚಿಕರ ಅಡುಗೆಯನ್ನು ಉಣಬಡಿಸುವ ಮೂಲಕ ಹೆಸರಾಗಿ ಮುನ್ನೆಲೆಗೆ ಬಂದವರೇ ಸೆಲೆಬ್ರಿಟಿ ಶೆಫ್ ಸೋನಾ ಗಣೇಶ್ ನಾಯಕ್.
ಇದನ್ನೂ ಓದಿ: ಹನಿಮೂನ್‌ಗೂ ತಟ್ಟಿದ ಯುದ್ಧದ ಬಿಸಿ
ಸ್ವೀಟ್ ಸ್ಟಾಲ್ ಮೂಲಕ ಉದ್ಯಮಕ್ಕೆ ಪದಾರ್ಪಣೆ
ಕೂಡು ಕುಟುಂಬದಲ್ಲಿ ಹುಟ್ಟಿ ಬೆಳೆದ ಗಣೇಶ್ ನಾಯಕ್ ಅವರು ಸಿಹಿತಿಂಡಿಗಳ ಮಾರಾಟದ ಉದ್ಯಮವನ್ನು ಮಂಗಳೂರು ಭಾಗದಲ್ಲಿ ಮೊದಲಿಗೆ ಪ್ರಾರಂಭಿಸಿ, ಗುರುತಿಸಿಕೊಂಡರಾದರೂ ಹೆಚ್ಚು ಲಾಭ ಗಳಿಸುವುದು ಕಷ್ಟಸಾಧ್ಯವಾಗಿತ್ತು. ಹೀಗೆ ಜೀವನ ನಡೆಸುವುದಕ್ಕಾಗಿ ಅನಿವಾರ್ಯವಾಗಿ ಮಹಾನಗರಿ ಬೆಂಗಳೂರಿಗೆ ಬಂದ ಗಣೇಶ್ ನಾಯಕ್ ಅವರು ಮುಂದೇನು ಎಂಬ ಯೋಚನೆಯೊಂದಿಗೆ ಇಳಿದಿದ್ದೇ ಹೊಟೇಲ್ ಉದ್ಯಮಕ್ಕೆ.

ಆಹಾರಪ್ರಿಯರ ನೆಚ್ಚಿನ ಕೊಡಿಯಾಲ್ ಹೊಟೇಲ್
2004ರಲ್ಲಿ ಮಲ್ಲೇಶ್ವರಂನ 8ನೇ ಅಡ್ಡರಸ್ತೆಯಲ್ಲಿ ಕೊಡಿಯಾಲ್ ಎಂಬ ಹೊಟೇಲ್ ಪ್ರಾರಂಭಿಸಿದ ಗಣೇಶ್ ಅವರು, ವರ್ಷಗಳ ಕಾಲ ಈ ಉದ್ಯಮದಲ್ಲಿ ಭಾರಿ ಹೆಸರು ಮಾಡಿದ್ದರು. ಕೊಂಕಣಿ ಭಾಷೆಯಲ್ಲಿ ಮಂಗಳೂರನ್ನೇ ಕೊಡಿಯಾಲ್ ಎಂಬುದಾಗಿ ಕರೆಯಲಾಗುತ್ತಿದ್ದು, ಇಲ್ಲಿ ಕರಾವಳಿ ಭಾಗದ ಕೊಟ್ಟೆಕಡುಬು, ಪತ್ರೊಡೆ, ಗೆಣಸೆಲೆ, ಪುಳಿಮುಂಚಿ ಸೇರಿದಂತೆ ಸುಮಾರು 40-50 ವಿಶೇಷ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸಲಾಗುತ್ತಿತ್ತು. ಆ ಮೂಲಕ ಬರಿಯ ಕರಾವಳಿ ಭಾಗದ ಜನತೆಗಷ್ಟೇ ಅಲ್ಲದೆ ಬೆಂಗಳೂರಿಗರ ಮೆಚ್ಚುಗೆಗೂ ಪಾತ್ರರಾಗಿದ್ದರು.
ಸೋನಾ ಕೇಟರರ್ಸ್- ಸೋನಾ ಇವೆಂಟ್ಸ್
ಕೊಡಿಯಾಲ್ ಹೊಟೇಲ್ ನಡೆಸುತ್ತಿದ್ದಾಗ ಸ್ಥಳೀಯವಾಗಿ ಅನೇಕ ಕೇಟರಿಂಗ್ ಆರ್ಡರ್‌ಗಳನ್ನು ಪಡೆದು, ಅಚ್ಚುಕಟ್ಟಾಗಿ ಸರ್ವಿಸ್ ನೀಡುತ್ತಿದ್ದ ಕಾರಣದಿಂದಲೇ ಸೋನಾ ಇವೆಂಟ್ಸ್ ಹಾಗೂ ಸೋನಾ ಕೇಟರರ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಮೂಲಕ ಸೆಲೆಬ್ರಿಟಿಗಳಾದ ʻದೀಪ್ ವೀರ್ʼ ವಿವಾಹದ ವೇಳೆ ಇವರಿಗೆ ಕೇಟರಿಂಗ್ ಅವಕಾಶ ಒದಗಿ ಬಂದಿತ್ತು. ಇದಾಗ ಬಳಿಯ ಹೊಟೇಲ್‌ಗಿಂತಲೂ ಹೆಚ್ಚಿಗೆ ಕೇಟಿರಿಂಗ್‌ನತ್ತ ಮುಖ ಮಾಡಿದ ಸೆಲೆಬ್ರಿಟಿ ಶೆಫ್ ವಿನೂತನ ಪ್ರಯತ್ನಗಳಿಂದಲೇ ನಂತರ ದಿನಗಳಲ್ಲಿ ಅಮೆರಿಕ, ಕೆನಡಾ, ಲಂಡನ್, ಯುರೋಪ್‌ನ ನಾಲೈದು ದೇಶಗಳು, ಥೈಲ್ಯಾಂಡ್, ದುಬೈ ಹೀಗೆ ಅನೇಕ ದೇಶಗಳಿಗೆ ಬರಿಯ ಕೇಟರಿಂಗ್ ಸರ್ವಿಸ್ ನೀಡುವ ಸಲುವಾಗಿಯೇ ಪ್ರಯಾಣ ಬೆಳೆಸಿದ್ದಾರೆ. ಡೆಸ್ಟಿನೇಷನ್ ವೆಡ್ಡಿಂಗ್ ನೆಚ್ಚಿಕೊಳ್ಳುವ ಅದೆಷ್ಟೋ ಜೋಡಿ, ಸೆಲೆಬ್ರಿಟಿ ಶೆಫ್‌ನ ನಳಪಾಕಕ್ಕಾಗಿಯೇ ಹಾತೊರೆಯುತ್ತಾರೆ.
ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಕನಕಪುರದಲ್ಲಿ ತಮ್ಮ ಡಿ.ಕೆ.ಎಸ್ ಚಾರಿಟೇಬಲ್ ಇನ್‌ಸ್ಟಿಟ್ಯೂಟ್ ಹಾಗೂ ಸಂಘ ಸಂಸ್ಥೆಗಳ ಮೂಲಕ ಕನಕೋತ್ಸವ 2026 ಕಾರ್ಯಕ್ರಮವನ್ನು ಆಯೋಜಿಸಿದ್ದರು. 4ಲಕ್ಷ್ಕಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ರುಚಿಕರವಾದ ಆಹಾರವನ್ನು ಉಣಬಡಿಸಿದ ಕೀರ್ತಿ ಸೋನಾ ಗಣೇಶ್ ನಾಯಕ್ ಅವರಿಗೆ ಸಲ್ಲುತ್ತದೆ.
ಕೊಂಕಣಿ ಸಮ್ಮೇಳನ, ತುಳು ಸಮ್ಮೇಳನಗಳ ಆಯೋಜಕ
ಬೆಂಗಳೂರಷ್ಟೇ ಅಲ್ಲದೇ ಅಮೆರಿಕದಲ್ಲೂ ಅಮ್ಚಿ ಕೊಂಕಣಿಯಂಥ ಕೊಂಕಣಿ ಸಮ್ಮೇಳನಗಳು, ತುಳು ಕೂಟದ ಸಮ್ಮೇಳನ ಹಾಗೂ ಆಹಾರ ಮೇಳಗಳನ್ನು ವರ್ಷಕ್ಕೊಮ್ಮೆಯಾದರೂ ಆಯೋಜಿಸುತ್ತಲೇ ಬಂದಿರುವ ಗಣೇಶ್ ನಾಯಕ್ ಅವರು, ಈ ಮೂಲಕ ಕರಾವಳಿಯ ಸೊಗಡನ್ನು ಮಹಾನಗರಿಗಳಿಗೂ ಪಸರಿಸುತ್ತಲೇ ಬಂದಿದ್ದಾರೆ. ಕರಾವಳಿಯ ಕಲೆ ಸಂಪ್ರದಾಯ, ವಿಚಾರಗಳೆಲ್ಲವನ್ನೂ ಎಲ್ಲೆಡೆ ತಿಳಿಯುವಂತೆ ಮಾಡುವುದಷ್ಟೇ ಅಲ್ಲದೆ, ಕರಾವಳಿ ಹಾಗೂ ಕೊಂಕಣಿಯ ಅದ್ಭುತ ರುಚಿಯನ್ನೂ ಸವಿಯಲು ಅವಕಾಶ ನೀಡಿದ್ದಾರೆ. 5 ಮಂದಿಯಿಂದ ಪ್ರಾರಂಭಿಸಿ 5 ಲಕ್ಷ ಮಂದಿಗೂ ಅಡುಗೆ ಮಾಡಿ ಉಣಬಡಿಸುವ ಸಾಮರ್ಥ್ಯವಿರುವ ಸೋನಾ ಗಣೇಶ್ ನಾಯಕ್ ಅವರು ಇಂದಿಗೂ ಉದ್ಯಮದಲ್ಲಿ ನೆಲೆ ನಿಲ್ಲಲು ಪತ್ನಿ ಸರೋಜಾ ನಾಯಕ್ ಅವರ ಸಹಕಾರವೇ ಕಾರಣ ಎನ್ನುತ್ತಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕೊಡಿಯಾಲ್ ಹೊಟೇಲ್ ನಡೆಸುವ ವೇಳೆಗೆ ಸಾಕಷ್ಟು ಕೇಟರಿಂಗ್ ಆರ್ಡರ್ಸ್ ಬರುತ್ತಿತ್ತು. ಮದುವೆ, ನಾಮಕರಣ ಹೀಗೆ ಶುಭ ಸಮಾರಂಭಗಳಿಗೂ ಅಡುಗೆ ಮಾಡಿಸಿಕೊಡುತ್ತಿದ್ದೆ. ಹೀಗೆ ಪ್ರಾರಂಭವಾದ ಲೈಫ್ ಜರ್ನಿಯ ಟರ್ನಿಂಗ್ ಪಾಯಿಂಟ್ ಆಗಿತ್ತು ಇಟಲಿಯಲ್ಲಿ ನಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ವಿವಾಹದ ಅಡುಗೆ ವ್ಯವಸ್ಥೆ. ಅದನ್ನು ಶುಚಿ, ರುಚಿಯಾಗಿ ಮಾಡಿಕೊಟ್ಟನಂತರ ಎಲ್ಲೆಡೆ ಸೆಲೆಬ್ರಿಟಿ ಶೆಫ್ ಸೋನಾ ಗಣೇಶ್ ನಾಯಕ್ ಅಂತಲೇ ನನಗೆ ಹೆಸರುಬಂತು. ಬೆಂಗಳೂರಷ್ಟೇ ಅಲ್ಲದೆ ದೇಶದ ಹಲವೆಡೆ, ವಿದೇಶಗಳಿಗೂ ಕೇಟರಿಂಗ್ ಸರ್ವಿಸ್ ನೀಡುವುದಕ್ಕಾಗಿ ಸುತ್ತಾಡಿದ್ದೇನೆ. ಯುರೋಪಿಯನ್ ದೇಶಗಳಲ್ಲಿ ಅಡುಗೆ ಮಾಡುವುದು ನನಗೆ ಸವಾಲಿನ ವಿಷಯವಾಗಿತ್ತು. ಏಕೆಂದರೆ ಅಲ್ಲಿ ಭಾರತೀಯ ಶೈಲಿಯ ಆಹಾರ ತಯಾರಿಕೆಗೆ ಬೇಕಾದ ಮೂಲ ವಸ್ತುಗಳು ಸಿಗುತ್ತಿರಲಿಲ್ಲ. ಆದರೂ ಅಲ್ಲಿ ಸಿಗುವ ವಸ್ತುಗಳ ಮೂಲಕವೇ ವಿಶೇಷ ಖಾದ್ಯಗಳನ್ನು ತಯಾರಿಸಿ ಭೇಷ್ ಎನ್ನಿಸಿಕೊಂಡಿದ್ದೆ. ನಾನು ನಡೆದು ಬಂದ ಹಾದಿ ಸುಗಮವಾಗಿಲಿಲ್ಲ. ಸಾಕಷ್ಟು ಸವಾಲುಗಳು, ಕಷ್ಟಗಳನ್ನು ದಾಟುತ್ತಲೇ ಇಂದು ಈ ಯಶಸ್ವೀ ಜೀವನ ನಡೆಸುತ್ತಿದ್ದೇನೆ.
- ಸೆಲೆಬ್ರಿಟಿ ಶೆಫ್ ಸೋನಾ ಗಣೇಶ್ ನಾಯಕ್
ವಿಶೇಷ ಅಡುಗೆಗಳನ್ನು ಕಲಿತುಕೊಳ್ಳಬೇಕು, ಕೇಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವವರಿಗಾಗಿ ಸೆಲೆಬ್ರಿಟಿ ಶೆಫ್ ಗಣೇಶ್ ನಾಯಕ್ ಅವರು ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಆಸಕ್ತರು 9008001663/9844071663 ಈ ಮೊಬೈಲ್