Tuesday, April 7, 2026
Tuesday, April 7, 2026

ಒಂಟಿ ಒಂಟಿಯಾಗಿರುವುದು ಬೋರೋ ಬೋರು!

ಏನೋ ಹೊಸ ಅನುಭವ ಸಿಗುತ್ತದೆ ಎಂಬ ಆಸೆಯಿಂದಲೋ, ಗೆಳೆಯರೆಲ್ಲರೂ ಮಾಡಿದ ಒತ್ತಾಯದಿಂದಲೋ, ಏಕಾಂತ ಬೇಕು ಎಂಬ ಹಂಬಲದಿಂದಲೋ ಹೀಗೆ ಯಾವುದಾದರೊಂದು ಕಾರಣಕ್ಕೆ ಅನೇಕರು ಪ್ರಯಾಣ ಮಾಡುತ್ತಾರೆ. ಪ್ರಯಾಣ ಎಂದರೆ ಹಾಗೆ, ಸ್ವಾತಂತ್ರ್ಯ ಅಥವಾ ನೆಮ್ಮದಿ ಹಾಗೂ ಸಂತೋಷಕ್ಕೆ ಇರುವ ದಾರಿ ಎಂದು ಹೇಳಲಾಗಿದೆ. ಒಂದು ವೇಳೆ ಹಾಗೆ ಹೋದ ಪ್ರಯಾಣದಲ್ಲೇ ಒಂಟಿತನ ಕಾಡಿದರೆ? ಏನು ಮಾಡುವುದು? ಇದರ ಬಗ್ಗೆಯೂ ಹಲವರು ಅಧ್ಯಯನ ಮಾಡಿ ಒಂದಿಷ್ಟು ಉಪಾಯಗಳನ್ನು ಸೂಚಿಸಿದ್ದಾರೆ.

ಗೆಳೆಯರ ಜತೆಗೆ ಮಜಾ ಮಾಡಬಹುದು ಎಂಬ ಆಸೆ ಇಟ್ಟುಕೊಂಡು ಹೋದಾಗ ಅವರೆಲ್ಲರೂ ಕೆಫೆಯಲ್ಲಿ ಕುಳಿತು ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ತಮಾಷೆ ಮಾಡುವಾಗ ನಿಮಗೊಬ್ಬರಿಗೆ ಏನೋ ವಿಚಿತ್ರ ಒಂಟಿತನ ಕಾಡಬಹುದು. ಅನೇಕರು ಇಂಥ ಸಂದರ್ಭಗಳನ್ನು ಎದುರಿಸಬಹುದು. ಇನ್‌ಸ್ಟಾಗ್ರಾಮ್‌ ಅಲ್ಲಿ ನೋಡಿದ ಯಾವುದೋ ರೀಲ್‌ನ ಮಜಾ, ಆ ಜಾಗಕ್ಕೆ ಹೋದಾಗ ಸಿಗದಿರಬಹುದು. ಎಲ್ಲರಿಗೂ ವಾವ್‌ ಎನಿಸುವ ಸೂರ್ಯಾಸ್ತ, ನಿಮಗೆ ಇದು ಮುಳುಗುತ್ತಿರುವ ಸೂರ್ಯ ಮಾತ್ರ ಅಂತ ಅನಿಸಬಹುದು. ಸುತ್ತಲೂ ಪರಿಚಿತ ಮುಖಗಳೇ ಇದ್ದರೂ ಅಪರಿಚಿತರ ನಡುವೆ ಇರುವ ಭಾವನೆ ಮೂಡಬಹುದು. ಆದರೆ, ಆ ಪ್ರಯಾಣದಲ್ಲಿ ಸ್ವಲ್ಪ ಗಮನ ನೀಡಿದರೆ ಈ ಭಾವನೆ ಇಂದಲೂ ಹೊರ ಬಂದು ಉಳಿದ ಸುಂದರ ಕ್ಷಣಗಳ ಅನುಭವವನ್ನು ಪಡೆಯಬಹುದು.

ಇದನ್ನೂ ಓದಿ:ಜೀವನ ಕಲಿಸುತ್ತೆ ಸೋಲೋ ಟ್ರಿಪ್

ಮೊದಲನೆಯ ವಿಷಯ ಎಂದರೆ, ಅಂಥ ಸಂದರ್ಭದಲ್ಲಿ ಸಣ್ಣ ವಿರಾಮ ತೆಗೆದುಕೊಳ್ಳಬಹುದು. ಪ್ರಯಾಣವೇ ದಿನನಿತ್ಯದ ಜೀವನದಿಂದ ಒಂದು ವಿರಾಮ. ಈಗ ಪ್ರಯಾಣವೇ ಆಯಾಸ ಆದರೆ ಅದರಲ್ಲೂ ಸಣ್ಣ ವಿರಾಮ ತೆಗೆದುಕೊಳ್ಳಬಹುದು. ಒಂದಿಷ್ಟು ಹೊತ್ತು ಒಬ್ಬರೇ ಕುಳಿತು ಯೋಚನೆ ಮಾಡಿದರೆ ನಿಜವಾಗಿಯೂ ಯಾವ ವಿಷಯಕ್ಕೆ ಒಂಟಿತನ ಕಾಡುತ್ತಿದೆ ಎಂದು ಗೊತ್ತಾಗುತ್ತದೆ. ಯಾರದ್ದೋ ನೆನಪೋ ಅಥವಾ ಯಾರದ್ದೋ ಮಾತು ಬೇಸರ ಉಂಟುಮಾಡಿ ಯಾರ ಜತೆಗೂ ಮಾತನಾಡುವುದು ಬೇಡ ಅನಿಸಿದ್ದೋ ಎಂಬುದು ಗೊತ್ತಾಗುತ್ತದೆ. ಮೊದಲು ಸಮಸ್ಯೆ ಅರ್ಥ ಮಾಡಿಕೊಂಡರೆ ಪರಿಹಾರ ಸುಲಭ.

ಇನ್ನೊಂದು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಪ್ರಸ್ತುತ ಕ್ಷಣವನ್ನು ಸ್ವೀಕರಿಸುವುದು. ಆ ಭಾವನೆಗೆ ವಿರುದ್ಧವಾಗಿ ಹೋರಾಡುವ ಬದಲು, ಅದನ್ನು ಒಪ್ಪಿಕೊಳ್ಳುವುದು ಒಳ್ಳೆಯದು. ಒಂದು ಕೆಫೆಯಲ್ಲಿ ಕುಳಿತು, ಸುತ್ತ ಇರುವ ಜನರನ್ನು ಗಮನಿಸಿ, ಸಂಭಾಷಣೆಗಳನ್ನು ಕೇಳಿ ಮತ್ತು ಆ ಸ್ಥಳದ ರಿದಮ್‌ ಅಲ್ಲಿ ಮನಸ್ಸನ್ನು ಜೋಡಿಸಿಕೊಳ್ಳಬಹುದು. ಸುತ್ತಮುತ್ತಲಿನ ಜಗತ್ತಿನಲ್ಲಿ ತೊಡಗಿಸಿಕೊಂಡಾಗ, ಅದು ನಿಧಾನವಾಗಿ ಒಂಟಿತನ ದೂರ ಮಾಡುತ್ತದೆ.

New Project (63)

ಇನ್ನೊಂದು ಸಹಾಯಕ ವಿಧಾನವೆಂದರೆ ಸಣ್ಣ ಸಂಪರ್ಕಗಳನ್ನು ನಿರ್ಮಿಸುವುದು. ಕೆಲವೊಮ್ಮೆ ಪರಿಚಿತರ ಬಳಿ ಎಲ್ಲವನ್ನೂ ಹೇಳಲು ಸಾಧ್ಯವಾಗದಿದ್ದಾಗ ಯಾರಾದರೂ ತೀರಾ ಹತ್ತಿರ ಅಲ್ಲದ ವ್ಯಕ್ತಿಗಳ ಜತೆ ಹಾಗೇ ಒಂದಿಷ್ಟು ಮಾತಾಡಬಹುದು. ಸ್ಥಳೀಯರು, ಸಹ ಪ್ರಯಾಣಿಕರು ಅಥವಾ ಅಂಗಡಿಯವರೊಂದಿಗೆ ಮಾತುಕತೆ ಕೂಡ ಮನಸ್ಥಿತಿಯನ್ನು ಸುಧಾರಿಸಬಹುದು. ಒಂದು ನಗು, ಸಂಪೂರ್ಣವಾಗಿ ಒಂಟಿಯಾಗಿಲ್ಲವೆಂದು ನೆನಪಿಸುತ್ತದೆ.

ಒಬ್ಬರೇ ಪ್ರವಾಸಕ್ಕೆ ಹೋದಾಗ ಹೀಗಾದರೆ ಸ್ಥಳೀಯ ಪ್ರವಾಸದಲ್ಲಿ ಭಾಗವಹಿಸಿ, ಕಾರ್ಯಾಗಾರಗಳಲ್ಲಿ ಸೇರಿ ಅಥವಾ ಹೈಕಿಂಗ್ ಅಥವಾ ಅಡುಗೆ ತರಗತಿಗಳಂಥ ಗುಂಪು ಚಟುವಟಿಕೆಗಳನ್ನು ಅನುಭವಿಸಬಹುದು. ಇಂಥ ಪರಿಸರಗಳು ಸಹಜವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತವೆ. ನಿಮ್ಮಂತೆ ಯೋಚಿಸುವವರನ್ನು ಭೇಟಿಯಾಗಲು ಅವಕಾಶ ನೀಡುತ್ತವೆ. ಈ ವಿಷಯದಲ್ಲಿ ತಂತ್ರಜ್ಞಾನ ಕೂಡ ನಿಮ್ಮ ಸ್ನೇಹಿತರಾಗಬಹುದು. ಅಪ್ಲಿಕೇಶನ್‌ಗಳು ಮತ್ತು ಪ್ರಯಾಣ ಸಮುದಾಯಗಳು ನಿಮ್ಮ ಹತ್ತಿರದಲ್ಲಿರುವವರೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತವೆ.

ದಿನಚರಿ ಬರೆಯುವುದು ಕೂಡ ಒಂದು ದಾರಿ. ಯಾರಿಗೂ ಹೇಳಲು ಆಗದಥ ಬೇಸರ ಕಾಡುತ್ತಿದ್ದರೆ ಅದನ್ನೊಂದು ಹಾಳೆಯಲ್ಲೋ, ಡೈರಿ ಇದ್ದರೆ ಡೈರಿಯಲ್ಲೋ, ಫೋನ್‌ನಲ್ಲೋ ಬರೆದಿಡಬಹುದು. ಬರೆದು ಕೆಲವು ಭಾವನೆಗಳನ್ನು ಹೊರಗೆ ಹಾಕಿದಾಗ ಮನಸ್ಸು ಹಗುರವಾಗುತ್ತದೆ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಪ್ರಯಾಣಿಕರಿಗೆ ಈ ಕ್ಷಣಗಳೇ ಮುಂದೆ ಮನಸನ್ನು ಪರಿವರ್ತನೆ ಮಾಡಲು ಸಹಾಯ ಆಗಿರುತ್ತದೆ. ರೂಮಿ ಹೇಳುವ ಒಂದು ಸಾಲು. ʼನೀವು ಹುಡುಕುತ್ತಿರುವುದು ಕೂಡ ನಿಮ್ಮನ್ನು ಹುಡುಕುತ್ತಿರುತ್ತದೆʼ. ಸಾಧ್ಯವಾದರೆ ದೂರು ಇರುವ ಸ್ನೇಹಿತರಿಗೋ ಅಥವಾ ಸಂಬಂಧಿಕರಿಗೋ, ಆಪ್ತರಿಗೋ ಕರೆ ಮಾಡಿ ಮಾತನಾಡಬಹುದು. ಪ್ರೀತಿಪಾತ್ರರಿಗೆ ಮಾಡುವ ಸಣ್ಣ ಕರೆ ಅಥವಾ ಸಂದೇಶ ನಿಮ್ಮನ್ನು ಸಮಾಧಾನಪಡಿಸಬಹುದು. ಚಿತ್ರ ಬಿಡಿಸುವ ಅಭ್ಯಾಸ ಇದ್ದರೆ, ಪುಸ್ತಕ ಓದುವ ಅಭ್ಯಾಸ ಇದ್ದರೆ, ಬರೆಯುವ ಅಭ್ಯಾಸ ಇದ್ದರೆ, ಫೋಟೋಗ್ರಫಿ ಅಥವಾ ಇನ್ಯಾವುದೇ ಹವ್ಯಾಸಗಳಿದ್ದರೆ ಕೆಲ ಹೊತ್ತು ಅದರಲ್ಲಿ ತೊಡಗಿಸಿಕೊಳ್ಳುವುದು ಕೂಡ ಒಂದು ದಾರಿ.

New Project (65)

ಪರ್ಯಾಯ ಮಾರ್ಗಗಳು:

  • ಇರುವ ಜಾಗವನ್ನು ಸ್ವಲ್ಪ ಬದಲಿಸಿ ಸಾಧ್ಯವಾದರೆ ಜನಸಂದಣಿ ಇರುವ ಕೆಫೆ, ಉದ್ಯಾನವನ ಅಥವಾ ಸ್ಥಳೀಯ ಮಾರುಕಟ್ಟೆಗೆ ಹೋಗಿ ಕುಳಿತುಕೊಳ್ಳಬಹುದು. ಹತ್ತು ನಿಮಿಷದ ಬ್ರೇಕ್‌ ಪಡೆಯಬಹುದು. ಸ್ನೇಹಿತರ ಜತೆ 8 ನಿಮಿಷ ಮಾತನಾಡಿದರೆ ಮನಸ್ಸು ಹಗುರವಾಗುತ್ತದೆ ಎಂದು ಒಂದು ಅಧ್ಯಯನ ಹೇಳುತ್ತದೆ.
  • ಮೀಟಪ್‌, ಬಂಬಲ್‌ ಬಿಬಿಎಫ್‌, ಹ್ಯಾಂಗೌಟ್ಸ್‌ ಸೇರಿದಂತೆ ಹಲವು ಮೊಬೈಲ್‌ ಅಪ್ಲಿಕೇಶನ್‌ ಸಹಾಯಗಳನ್ನು ಕೂಡ ಪಡೆಯಬಹುದು.
  • ಕೆಲವೊಮ್ಮೆ ಆಂಕ್ಸೈಟಿ ಅಥವಾ ಒವರ್‌ಥಿಂಕ್‌ ಮಾಡುವಾಗ ಗ್ರೌಂಡಿಂಗ್ ಅಭ್ಯಾಸ (5,4,3,2,1) ರೂಢಿಸಿಕೊಳ್ಳಬಹುದು. ಅಂದರೆ, ಸುತ್ತ ನೋಡಬಹುದಾದ 5 ವಸ್ತುಗಳು, ಅನುಭವಿಸಬಹುದಾದ 4 ವಸ್ತುಗಳು (ಕುಳಿತ ಕುರ್ಚಿ, ಕೈಯಲ್ಲಿರುವ ಫೋನ್‌), ಕೇಳಿಸಬಹುದಾದ 3 (ಹಾಡು, ಟ್ರಾಫಿಕ್‌ ಶಬ್ದ), ಸ್ಮೆಲ್‌ ಮಾಡಬಹುದಾದ 2 ವಸ್ತು (ಕಾಫಿ, ಹೂವು), ಟೇಸ್ಟ್‌ ಮಾಡಬಹುದಾದ 1 ವಸ್ತುಗಳ ಬಗ್ಗೆ ಗಮನ ಹರಿಸಿದಾಗ ಮನಸ್ಸು ಹಗುರವಾಗುತ್ತದೆ.
  • ಮುಂಚಿತವಾಗಿ ಒಂದಿಷ್ಟು ನೆಚ್ಟಿನ ವಸ್ತು ಅಥವಾ ವಿಷಯಗಳನ್ನು ಜತೆಗಿಟ್ಟುಕೊಳ್ಳುವುದು ಉತ್ತಮ. ಉದಾಹರಣೆಗೆ, ಮನಸ್ಸಿಗೆ ಹಿತವೆನಸುವ ಹಾಡುಗಳ ಪ್ಲೇ ಲಿಸ್ಟ್‌, ಯಾವಾಗ ನೋಡಿದರು ಖುಷಿ ನೀಡುವ ಸಿನಿಮಾ ಅಥವಾ ಸೀರೀಸ್ ಇಟ್ಟುಕೊಳ್ಳಬಹುದು. ನೆಟ್ವರ್ಕ್‌ ಸಿಗದಂಥ ಸ್ಥಳಕ್ಕೆ ಹೋಗುವು ಮುನ್ನ ಡೌನ್ಲೋಡ್‌ ಮಾಡಿಟ್ಟುಕೊಂಡರೆ ಹೆಚ್ಚು ಉಪಯೋಗಕಾರಿ.
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!