ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ರಾಜ್ಯದ ಸರಕಾರಿ ಬಸ್‌ಗಳಲ್ಲಿ ಜೀವಿತಾವಧಿ ಉಚಿತ ಪ್ರಯಾಣಕ್ಕೆ ಅನುಮೋದನೆ ನೀಡಿದೆ. ಆಗಸ್ಟ್ 25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಲೋಕಮಾತಾ ಅಹಲ್ಯಾಬಾಯಿ ಮಾತೃಶಕ್ತಿ ಯೋಜನೆ’ಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ.

ಯೋಜನೆಯಡಿ ಅರ್ಹ ಮಹಿಳೆಯರು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC) ನಿರ್ವಹಿಸುವ ಎಲ್ಲ ಬಸ್‌ಗಳಲ್ಲಿ ಯಾವುದೇ ಪ್ರಯಾಣ ದರ ಪಾವತಿಸದೆ ಸಂಚರಿಸಬಹುದಾಗಿದೆ. ವಯಸ್ಸು ಮತ್ತು ಅರ್ಹತೆಯನ್ನು ದೃಢಪಡಿಸಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ.

ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರ ಪ್ರಕಾರ, ಪ್ರತಿದಿನ ಸುಮಾರು 88,438 ಮಹಿಳೆಯರು ಈ ಉಚಿತ ಪ್ರಯಾಣ ಸೌಲಭ್ಯವನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಯೋಜನೆಗೆ ತಿಂಗಳಿಗೆ ಸುಮಾರು ₹22.55 ಕೋಟಿ ಆರ್ಥಿಕ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ, ಧಾರ್ಮಿಕ ಕಾರ್ಯಗಳು, ಕುಟುಂಬ ಭೇಟಿಗಳು ಹಾಗೂ ಇತರ ಅಗತ್ಯ ಪ್ರಯಾಣಗಳಿಗೆ ತೆರಳುವ ಹಿರಿಯ ಮಹಿಳೆಯರಿಗೆ ಈ ಯೋಜನೆ ಅನುಕೂಲವಾಗಲಿದೆ.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಕ್ಷಾಬಂಧನದ ಸಂದರ್ಭದಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಹತ್ವದ ಕೊಡುಗೆಯಾಗಿ ಸರಕಾರ ಇದನ್ನು ಬಿಂಬಿಸಿದೆ.