ತಿರುಮಲಕ್ಕೆ ಬರುವ ದೇಶ-ವಿದೇಶದ ಯಾತ್ರಾರ್ಥಿಗಳಿಗೆ ಅವರ ಮೊಬೈಲ್‌ ಫೋನ್‌ನಲ್ಲಿ ಸೂಕ್ತ ಮಾರ್ಗದರ್ಶನ ಸಿಗುವಂತೆ ಮಾಡುವುದಕ್ಕಾಗಿ ತಿರುಪತಿ ತಿರುಮಲ ದೇಗುಲ(ಟಿಟಿಸಿ) ಟ್ರಸ್ಟ್ 'ವೆಂಕಟಾದ್ರಿ' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನೂತನ ಆ್ಯಪ್ ಅನ್ನು ವರ್ಚುವಲ್ ಮಾರ್ಗದಲ್ಲಿ ಲೋಕಾರ್ಪಣೆ ಗೊಳಿಸಿದ್ದಾರೆ. ಅಮೆರಿಕದ ಎನ್‌ಆರ್‌ಐ ದಾನಿಯೊಬ್ಬರು ಈ ಆ್ಯಪ್ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದಾರೆ. ಈ ಆಪ್ ಅನ್ನು ಮೊಬೈಲ್ ಫೋನ್ನಲ್ಲಿ ಅಳವಡಿಸಿಕೊಂಡರೆ ತಿರುಮಲದಲ್ಲಿನ ರಸ್ತೆ, ಕೊಠಡಿ, ದೇಗುಲದಲ್ಲಿನ ಸರತಿ ಸಾಲು, ಪ್ರಮುಖ ಪ್ರವಾಸಿ ಸ್ಥಳಗಳ ಮಾಹಿತಿ ಸುಲಭ ಲಭ್ಯವಾಗಲಿದೆ. 25 ವಿಭಾಗಗಳಲ್ಲಿನ 350ಕ್ಕೂ ಹೆಚ್ಚು ಪ್ರಮುಖ ಸ್ಥಳಗಳ ನಿಖರವಾದ ಲೊಕೇಶನ್‌ಗಳನ್ನು ತೋರಿಸಿಕೊಡಲಿದೆ. ಆಫ್‌ಲೈನ್‌ನಲ್ಲಿಯೂ ನ್ಯಾವಿಗೇಷನ್ ಸೌಲಭ್ಯವಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ (ಎ.ಐ) ವಾಯ್ಸ್ ಅಸಿಸ್ಟೆಂಟ್ ಕೂಡಾ ಇದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಒದಗಿಸಲಿದೆ. 'ಮಾರ್ಕ್ ಮೈ ಸ್ಪಾಟ್' ವೈಶಿಷ್ಟ್ಯವೂ ಇದರಲಿದೆ. ಈ ಅಪ್ಲಿಕೇಶನ್ ಬಳಕೆಯಿಂದ ತಿರುಮಲದಲ್ಲಿ ದಾರಿ ತಪ್ಪುವ ಚಿಂತೆ ಇರದೆ,ಭಕ್ತರ ತಿರುಪತಿ ಯಾತ್ರೆ ಸುಗಮಗೊಳ್ಳಲಿದೆ.