ಸ್ಕಂದಗಿರಿ ಬೆಟ್ಟದಲ್ಲಿ ಮತ್ತೆ ಚಾರಣಕ್ಕೆ ಅವಕಾಶ ನೀಡಲಾಗಿದೆ. ಕಳೆದ 6 ತಿಂಗಳಿಂದ ಸ್ಥಗಿತಗೊಂಡಿದ್ದ ಚಾರಣಕ್ಕೆ ಅರಣ್ಯ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದ್ದು, ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಗರ ಉತ್ಸಾಹ ಇಮ್ಮಡಿಗೊಂಡಿದೆ. ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಚಾರಣ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಆದರೆ ಇದೀಗ ಅರಣ್ಯ ಪ್ರದೇಶದ ಸುರಕ್ಷತೆ ಮತ್ತು ಚಾರಣ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಕಾರ್ಯವಿಧಾನ ರೂಪಿಸಿ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲೆಯ ಪ್ರಸಿದ್ಧ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟಗಳಲ್ಲಿಚಾರಣಕ್ಕೆ ಮರು ಅನುಮತಿ ಕಲ್ಪಿಸಿದ್ದಾರೆ.

ಅನುಮತಿ ದೊರೆತ ಮೊದಲ ದಿನವೇ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 150 ಕ್ಕೂ ಹೆಚ್ಚು ಚಾರಣಿಗರು ಆಗಮಿಸಿ, ಮುಂಜಾನೆಯ ಮಂಜಿನ ನಡುವೆ ಚಾರಣ ಸಂಭ್ರಮಿಸಿದರು. ಅರಣ್ಯ ಇಲಾಖೆಯು ಚಾರಣಿಗರ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿದ್ದು, ವಾರಾಂತ್ಯದಲ್ಲಿ ದುಬಾರಿ ಶುಲ್ಕದ ಬಿಸಿ ತಟ್ಟಿದೆ. ಸೋಮವಾರದಿಂದ ಶುಕ್ರವಾರ ಪ್ರತಿ ವ್ಯಕ್ತಿಗೆ 250 ರು. ಪ್ರವೇಶ ಶುಲ್ಕ. ಶನಿವಾರ ಮತ್ತು ಭಾನುವಾರ ಪ್ರತಿ ವ್ಯಕ್ತಿಗೆ 500 ರು. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಾರಾಂತ್ಯದಲ್ಲಿ ಶುಲ್ಕ ಹೆಚ್ಚಳವಾಗಿರುವುದರಿಂದ ಹಣವಿದ್ದವರಿಗೆ ಮಾತ್ರ ಚಾರಣವೇ ಎಂಬ ಅಸಮಾಧಾನವೂ ಕೆಲ ಯುವ ಚಾರಣಿಗರಿಂದ ವ್ಯಕ್ತವಾಗಿದೆ.