ನಾಲ್ಕು ದಿನ, 4,000 ಕಿಮೀ. ಪ್ರಯಾಣ
ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಸಾಗುವ ವಿವೇಕ್ ಎಕ್ಸ್‌ಪ್ರೆಸ್ 4,000 ಕಿಮೀ. ದೂರವನ್ನು ಸುಮಾರು 74 ಗಂಟೆಗಳಲ್ಲಿ ಕ್ರಮಿಸುತ್ತದೆ. ಒಂಬತ್ತು ರಾಜ್ಯಗಳ ಮೂಲಕ ಹಾದುಹೋಗುವ ಈ ರೈಲು ಪ್ರಯಾಣವು ಭಾರತದ ಪ್ರಕೃತಿ, ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯವನ್ನು ಪರಿಚಯಿಸುತ್ತದೆ.
ಭಾರತದ ಭೌಗೋಳಿಕ ವೈವಿಧ್ಯ, ಪ್ರಕೃತಿ ಸೌಂದರ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಂದೇ ಪ್ರಯಾಣದಲ್ಲಿ ಅನುಭವಿಸಲು ಅವಕಾಶ ಕಲ್ಪಿಸುವ ರೈಲು ಎಂದರೆ ವಿವೇಕ್ ಎಕ್ಸ್‌ಪ್ರೆಸ್. ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಸಂಚರಿಸುವ ಈ ರೈಲು ಸುಮಾರು 4,000 ಕಿಮೀ. ದೂರವನ್ನು ಕ್ರಮಿಸಲು 74 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಒಂಬತ್ತು ರಾಜ್ಯಗಳ ಮೂಲಕ ಹಾದುಹೋಗುವ ಈ ರೈಲು ಮಾರ್ಗದಲ್ಲಿ ಸುಮಾರು 59 ನಿಲ್ದಾಣಗಳಿವೆ.
ಪ್ರಯಾಣದ ವೇಳೆ ಚಹಾ ತೋಟಗಳು, ಹಸಿರು ಹೊಲಗಳು, ಜನನಿಬಿಡ ನಗರಗಳು ಹಾಗೂ ಬದಲಾಗುವ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಸ್ಸಾಂ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಕೇರಳಂ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಭಾಷೆ, ಆಹಾರ ಪದ್ಧತಿ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಪರಿಚಯಿಸಿಕೊಳ್ಳಲು ಈ ಪ್ರಯಾಣ ನೆರವಾಗುತ್ತದೆ.
2011-12ರ ರೈಲ್ವೇ ಬಜೆಟ್‌ನಲ್ಲಿ ಪರಿಚಯಿಸಲಾದ ವಿವೇಕ್ ಎಕ್ಸ್‌ಪ್ರೆಸ್, ಸ್ವಾಮಿ ವಿವೇಕಾನಂದರ 150ನೆಯ ಜನ್ಮವಾರ್ಷಿಕೋತ್ಸವದ ಸ್ಮರಣಾರ್ಥ ಆರಂಭಿಸಲಾಯಿತು. ದೀರ್ಘ ಪ್ರಯಾಣದ ಅನುಭವ ನೀಡುವ ಈ ರೈಲು ಪ್ರವಾಸಿಗರಿಗೆ ಭಾರತದ ವೈವಿಧ್ಯವನ್ನು ಅರಿಯುವ ವಿಶಿಷ್ಟ ಅವಕಾಶವಾಗಿದೆ.