ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ನೀಲಿ-ನೇರಳೆ ಬಣ್ಣದಲ್ಲಿ ಕಂಗೊಳಿಸುವಂತೆ ಮಾಡುವ ಅಪರೂಪದ ಹೂವು ನೀಲಕುರಿಂಜಿ. Strobilanthes kunthiana ವೈಜ್ಞಾನಿಕ ಹೆಸರಿನ ಈ ಹೂವು ಸಾಮಾನ್ಯ ಹೂವುಗಳಂತೆ ಪ್ರತಿವರ್ಷ ಅರಳುವುದಿಲ್ಲ. ಸುಮಾರು 12 ವರ್ಷಗಳಿಗೊಮ್ಮೆ ಸಾಮೂಹಿಕವಾಗಿ ಅರಳುವ ಇದು ಬೆಟ್ಟ ಪ್ರದೇಶಗಳಿಗೆ ವಿಶಿಷ್ಟ ಸೌಂದರ್ಯ ನೀಡುತ್ತದೆ.

1 (44)

ಕೇರಳಂನ ಮುನ್ನಾರ್ ನೀಲಕುರಿಂಜಿ ವೀಕ್ಷಣೆಗೆ ಪ್ರಸಿದ್ಧ ತಾಣ. ಇಲ್ಲಿನ ಎರವಿಕುಲಂ ರಾಷ್ಟ್ರೀಯ ಉದ್ಯಾನ, ಟಾಪ್ ಸ್ಟೇಷನ್ ಹಾಗೂ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಹೂವು ಅರಳಿದಾಗ ಹಸಿರು ಬೆಟ್ಟಗಳು ನೀಲಿ-ನೇರಳೆ ಬಣ್ಣದ ಹೂವಿನ ಹೊದಿಕೆಯನ್ನು ಹೊದ್ದಂತೆ ಕಾಣುತ್ತವೆ. ಎರವಿಕುಲಂ ಪ್ರದೇಶವು ಅಪರೂಪದ ನೀಲಗಿರಿ ತಾರ್‌ಗಳಿಗೂ ನೆಲೆಯಾಗಿದೆ.

ಕರ್ನಾಟಕದಲ್ಲಿಯೂ ಪಶ್ಚಿಮ ಘಟ್ಟಗಳ ಕೆಲವು ಎತ್ತರದ ಪ್ರದೇಶಗಳಲ್ಲಿ ನೀಲಕುರಿಂಜಿ ಕಂಡುಬರುತ್ತದೆ. ಬಿಳಿಗಿರಿರಂಗನ ಬೆಟ್ಟ (BRT) ಹುಲಿ ಸಂರಕ್ಷಿತ ಪ್ರದೇಶವೂ ನೀಲಕುರಿಂಜಿ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ.

2026ರಲ್ಲಿ ಕೇರಳಂನ ಇಡುಕ್ಕಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ನೀಲಕುರಿಂಜಿ ಹೂವು ಅರಳಲು ಆರಂಭಿಸಿರುವುದು ಪ್ರಕೃತಿ ಪ್ರವಾಸಿಗರ ಗಮನ ಸೆಳೆದಿದೆ. ಕಲ್ಯಾಣತಂಡು, ನಿರ್ಮಲ ಸಿಟಿ ಮತ್ತು ವಳವಾರ ಬಳಿಯ ಕ್ಯಾಲ್ವರಿ ಮೌಂಟ್ ಪ್ರದೇಶಗಳು ನೀಲಿ-ನೇರಳೆ ಹೂವುಗಳಿಂದ ಕಂಗೊಳಿಸುತ್ತಿವೆ. ಈ ಅಪರೂಪದ ನೈಸರ್ಗಿಕ ವಿದ್ಯಮಾನವು ಪ್ರವಾಸಿಗರು, ಛಾಯಾಗ್ರಾಹಕರು ಮತ್ತು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದೆ.

ನೀಲಕುರಿಂಜಿಯಂಥ ಅಪರೂಪದ ಸಸ್ಯಗಳ ವೀಕ್ಷಣೆ ಪ್ರವಾಸೋದ್ಯಮಕ್ಕೆ ಹೊಸ ಅನುಭವ ನೀಡಿದರೂ, ಅವುಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಹಾನಿಯಾಗದಂತೆ ಜವಾಬ್ದಾರಿಯುತ ಪ್ರವಾಸ ಅತ್ಯಗತ್ಯ. ಪ್ರಕೃತಿಯ ಈ ಕ್ಷಣಿಕ ಅದ್ಭುತವನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಅದರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರವಾಸಿಗರು ಹೊತ್ತುಕೊಳ್ಳಬೇಕಿದೆ.