ಗುಜರಾತ್‌ನ ಏಕತಾ ನಗರದಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ಗೆ ಮತ್ತೊಂದು ಪ್ರವಾಸಿ ಆಕರ್ಷಣೆ ಸೇರ್ಪಡೆಯಾಗಿದೆ. ವರ್ಷವಿಡೀ ಮಳೆಗಾಲದ ಅನುಭವ ನೀಡುವ ವಿಶಿಷ್ಟ ಮಳೆಕಾಡು ಪ್ರವಾಸಿಗರಿಗಾಗಿ ತೆರೆಯಲಾಗಿದ್ದು, ಕೃತಕ ಮಳೆ, ಹಚ್ಚ ಹಸಿರಿನ ಪರಿಸರ ಮತ್ತು ಗಾಜಿನ ಸ್ಕೈವಾಕ್ ಇದರ ಪ್ರಮುಖ ವಿಶೇಷತೆಗಳಾಗಿವೆ.

ಸುಮಾರು 12 ಎಕರೆ ವಿಸ್ತೀರ್ಣದಲ್ಲಿ 12 ಕೋಟಿ ರು.ವೆಚ್ಚದಲ್ಲಿ ಈ ಮಳೆಕಾಡನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಮುಂಗಾರು ಅವಧಿ ಮುಗಿದ ಬಳಿಕವೂ ಪ್ರವಾಸಿಗರು ಮಳೆಗಾಲದ ವಾತಾವರಣವನ್ನು ಅನುಭವಿಸಬಹುದು. ಮಳೆಕಾಡಿನ ಸೌಂದರ್ಯವನ್ನು ಹೆಚ್ಚಿಸಲು ಬಬಲ್ ಫೌಂಟನ್‌ಗಳು, ಜಲಪಾತಗಳು ಹಾಗೂ ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಮರಗಳನ್ನು ಬೆಳೆಸಲಾಗಿದೆ. ಹಚ್ಚ ಹಸಿರಿನ ಸಸ್ಯವರ್ಗ ಮತ್ತು ಕೃತಕ ಮಳೆಯ ಸಂಯೋಜನೆಯು ಪ್ರವಾಸಿಗರಿಗೆ ಪ್ರಕೃತಿಯ ನಡುವೆ ವಿಹರಿಸುವ ಅನುಭವ ನೀಡಲಿದೆ.

ಇದನ್ನೂ ಓದಿ: ರಾತ್ರಿ ಪ್ರಯಾಣ: ರೈಲಲ್ಲಿ ಚಾರ್ಜಿಂಗ್‌ಗೆ ನಿಷೇಧ

ಈ ಆಕರ್ಷಣೆಯ ಪ್ರಮುಖ ವಿಶೇಷವೆಂದರೆ ವೃತ್ತಾಕಾರದ ಗಾಜಿನ ಸ್ಕೈವಾಕ್. 35 ಮಿಲಿಮೀಟರ್ ದಪ್ಪದ ಕೊರಿಯನ್ ಗಾಜಿನಿಂದ ತಯಾರಿಸಲಾದ 132 ಫಲಕಗಳನ್ನು ಬಳಸಿ ಈ ಎತ್ತರದ ನಡಿಗೆ ಮಾರ್ಗವನ್ನು ನಿರ್ಮಿಸಲಾಗಿದೆ. ಇದರ ಮೇಲೆ ನಡೆಯುವ ಪ್ರವಾಸಿಗರು ಕೆಳಗಿನ ದೃಶ್ಯಗಳನ್ನು ಗಾಜಿನ ಮೂಲಕ ವೀಕ್ಷಿಸುತ್ತಾ ವಿಭಿನ್ನ ಅನುಭವವನ್ನು ಪಡೆಯಬಹುದು. ಭಾರತದಲ್ಲೇ ಈ ಮಾದರಿಯ ಮೊದಲ ಯೋಜನೆ ಇದಾಗಿದ್ದು, ಈ ಮಳೆಕಾಡು, ಸ್ಟ್ಯಾಚ್ಯೂ ಆಫ್ ಯೂನಿಟಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಅನುಭವವನ್ನು ಒದಗಿಸಲಿದೆ. ಕೃತಕ ಮಳೆ, ಹಸಿರು ಪರಿಸರ ಮತ್ತು ಸಾಹಸಮಯ ಗಾಜಿನ ನಡಿಗೆ ಮಾರ್ಗವನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವ ಮೂಲಕ ಗುಜರಾತ್‌ನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆಕರ್ಷಣೆ ನೀಡುವ ನಿರೀಕ್ಷೆಯಿದೆ.