ಪ್ಯಾರಿಸ್ನಲ್ಲಿ ಮೊದಲ ಭವ್ಯ ಹಿಂದೂ ದೇಗುಲ
ಫ್ರಾನ್ಸ್‌ನ ಪ್ಯಾರಿಸ್ ಸಮೀಪದ ಬುಸ್ಸಿ-ಸೇಂಟ್-ಜಾರ್ಜಸ್‌ನಲ್ಲಿ ದೇಶದ ಮೊದಲ ಸಾಂಪ್ರದಾಯಿಕ ಶೈಲಿಯ ಕಲ್ಲಿನ ಹಿಂದೂ ದೇವಾಲಯವಾದ BAPS ಸ್ವಾಮಿನಾರಾಯಣ ಹಿಂದೂ ಮಂದಿರ ಸೆಪ್ಟೆಂಬರ್ 2026ರಲ್ಲಿ ಉದ್ಘಾಟನೆಗೊಳ್ಳಲಿದೆ.
ಫ್ರಾನ್ಸ್‌ನ ಪ್ಯಾರಿಸ್ ಸಮೀಪದ ಬುಸ್ಸಿ-ಸೇಂಟ್-ಜಾರ್ಜಸ್‌ನಲ್ಲಿ ದೇಶದ ಮೊದಲ ಸಾಂಪ್ರದಾಯಿಕ ಶೈಲಿಯ ಕಲ್ಲಿನ ಹಿಂದೂ ದೇವಾಲಯವಾದ BAPS ಸ್ವಾಮಿನಾರಾಯಣ ಹಿಂದೂ ಮಂದಿರ ಸೆಪ್ಟೆಂಬರ್ 2026ರಲ್ಲಿ ಉದ್ಘಾಟನೆಗೊಳ್ಳಲಿದೆ. ಭಾರತದ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿರುವ ಈ ಮಂದಿರವು ಫ್ರಾನ್ಸ್‌ನ ಹಿಂದೂ ಸಮುದಾಯಕ್ಕೆ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗುವ ನಿರೀಕ್ಷೆಯಿದೆ. ದೇವಾಲಯದ ಉದ್ಘಾಟನೆಯ ಅಂಗವಾಗಿ ಸೆಪ್ಟೆಂಬರ್ 2ರಿಂದ 14ರವರೆಗೆ 13 ದಿನಗಳ ‘ಫೆಸ್ಟಿವಲ್ ಆಫ್ ಕಲ್ಚರ್’ ಆಯೋಜಿಸಲಾಗಿದೆ.
ಉತ್ಸವದಲ್ಲಿ ಪಾಲ್ಖಿ ಯಾತ್ರೆ, ವೈದಿಕ ಮಹಾಯಜ್ಞ, ಜಲಯಾತ್ರೆ, ನಗರಯಾತ್ರೆ, ಮೂರ್ತಿ ಪ್ರತಿಷ್ಠಾಪನೆ, ಸಮರ್ಪಣಾ ಸಮಾರಂಭ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 14ರಂದು ಹಿಂದೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ.
ಈ ಮಂದಿರವು ಧಾರ್ಮಿಕ ಕೇಂದ್ರದ ಜತೆಗೆ ಸಂಸ್ಕೃತಿ, ಸಮುದಾಯದ ಒಗ್ಗಟ್ಟು ಮತ್ತು ಅಂತರ್‌ಧರ್ಮೀಯ ಸೌಹಾರ್ದಕ್ಕೆ ವೇದಿಕೆಯಾಗುವ ಉದ್ದೇಶ ಹೊಂದಿದೆ. ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪ, ಆಧ್ಯಾತ್ಮಿಕತೆ ಮತ್ತು ಪರಂಪರೆಯಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೂ ಇದು ಹೊಸ ಆಕರ್ಷಣೆಯಾಗಲಿದೆ.