ಭಾರತದ ಈಶಾನ್ಯ ರಾಜ್ಯ ಮೇಘಾಲಯದ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ನಾರ್ವೆ ರಾಯಭಾರಿ ಮೇ-ಎಲಿನ್ ಸ್ಟೆನರ್ ಮನಸೋತಿದ್ದಾರೆ. ಕುಟುಂಬದೊಂದಿಗೆ ವಾರಾಂತ್ಯದಲ್ಲಿ ಶಿಲ್ಲಾಂಗ್‌ಗೆ ಭೇಟಿ ನೀಡಿದ ಅವರು, ಅಲ್ಲಿನ ಜಲಪಾತಗಳು, ಸುಣ್ಣದ ಕಲ್ಲಿನ ಗುಹೆಗಳು ಹಾಗೂ ಹಚ್ಚಹಸಿರಿನ ನೈಸರ್ಗಿಕ ತಾಣಗಳನ್ನು ವೀಕ್ಷಿಸಿದ್ದಾರೆ. ಪ್ರವಾಸದ ಸುಂದರ ಕ್ಷಣಗಳ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೋಹ್ರಾ (ಚಿರಾಪುಂಜಿ) ಸಮೀಪದಲ್ಲಿರುವ ವೈ ಸಾಡಾಂಗ್ ಜಲಪಾತ ಅವರ ಪ್ರವಾಸದ ಪ್ರಮುಖ ಆಕರ್ಷಣೆಯಾಗಿತ್ತು. ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಈ ಜಲಪಾತದ ನೀರು ನೀಲಿ-ಹಸಿರು ಬಣ್ಣದ ಕೊಳಗಳನ್ನು ಸೃಷ್ಟಿಸುತ್ತದೆ. ಶಿಲ್ಲಾಂಗ್‌ನಿಂದ ಸುಮಾರು 60 ಕಿಮೀ. ದೂರದಲ್ಲಿರುವ ಈ ತಾಣದ ಸುತ್ತಲಿನ ಹಸಿರು ಪರಿಸರವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜಲಪಾತ ತಲುಪಲು ಕಡಿದಾದ ಹಾದಿಯಲ್ಲಿ ಇಳಿಯಬೇಕಾಗಿರುವುದರಿಂದ ಸೂಕ್ತ ಪಾದರಕ್ಷೆಗಳನ್ನು ಧರಿಸುವುದು ಅಗತ್ಯ.

ಸ್ಟೆನರ್ ಅವರು ಅರ್ವಾ ಗುಹೆಗೂ ಭೇಟಿ ನೀಡಿದ್ದಾರೆ. ಸುಣ್ಣದ ಕಲ್ಲಿನ ಗೋಡೆಗಳಲ್ಲಿ ಕಾಣಸಿಗುವ ಪಳೆಯುಳಿಕೆಗಳು, ಶಿಲಾರಚನೆಗಳು ಹಾಗೂ ಮೇಲ್ಛಾವಣಿಯಿಂದ ನೇತಾಡುವ ಸುಣ್ಣದ ರಚನೆಗಳು ಈ ಗುಹೆಯ ವಿಶೇಷತೆಗಳಾಗಿವೆ. ಮೇಘಾಲಯದ ನೈಸರ್ಗಿಕ ವೈವಿಧ್ಯ ಮತ್ತು ಭಾರತದ ಅಪರೂಪದ ಪ್ರವಾಸಿ ತಾಣಗಳ ಶ್ರೀಮಂತಿಕೆಯನ್ನು ತಮ್ಮ ಪ್ರವಾಸದ ಮೂಲಕ ಅವರು ಮೆಚ್ಚಿಕೊಂಡಿದ್ದಾರೆ.