ಕರ್ನಾಟಕದಲ್ಲಿ ಹೋಮ್‌ಸ್ಟೇಗಳಿಗೆ ಕಡ್ಡಾಯ ನೋಂದಣಿ
ಕರ್ನಾಟಕದಲ್ಲಿ ಹೋಂಸ್ಟೇಗಳಿಗೆ ಕಡ್ಡಾಯ ನೋಂದಣಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೋಮ್‌ಸ್ಟೇಗಳಿಗೆ ನೋಂದಣಿಯನ್ನು ಕರ್ನಾಟಕ ಸರಕಾರ ಕಡ್ಡಾಯಗೊಳಿಸಿದೆ. ಪ್ರವಾಸೋದ್ಯಮ ಇಲಾಖೆಯು ಜಾರಿಗೆ ತಂದಿರುವ ಹೊಸ ಹೋಮ್‌ಸ್ಟೇ ನೋಂದಣಿ ಮಾರ್ಗಸೂಚಿಗಳಿಗೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಈಗಾಗಲೇ 500ಕ್ಕೂ ಹೆಚ್ಚು ಹೋಮ್‌ಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಪ್ರವಾಸೋದ್ಯಮ ಆಯುಕ್ತ ವಿ. ರಾಮ್ ಪ್ರಸಾತ್ ಮನೋಹರ್ ಅವರು, ಇನ್ನೂ ನೋಂದಣಿ ಮಾಡಿಸದ ಎಲ್ಲ ಅರ್ಹ ಹೋಮ್‌ಸ್ಟೇ ನಿರ್ವಾಹಕರು ವಿಳಂಬ ಮಾಡದೆ ಪ್ರವಾಸೋದ್ಯಮ ಇಲಾಖೆಯ ಮೂಲಕ ನೋಂದಣಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ಕ್ರಮದಿಂದ ರಾಜ್ಯದಲ್ಲಿನ ಎಲ್ಲ ಹೋಮ್‌ಸ್ಟೇಗಳನ್ನು ಅಧಿಕೃತ ನಿಯಂತ್ರಣ ವ್ಯವಸ್ಥೆಯಡಿ ತರಲು, ಪ್ರವಾಸಿಗರ ಸುರಕ್ಷತೆ, ಸೇವೆಯ ಗುಣಮಟ್ಟ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾಗಿ ಡಾ. ರಾಮ್ ಪ್ರಸಾತ್ ಮನೋಹರ್ ನೇಮಕ
ಈವರೆಗೆ ಸುಮಾರು 400 ಅರ್ಜಿಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ಉಳಿದ ಅರ್ಜಿಗಳ ಸ್ಥಳ ಪರಿಶೀಲನೆ ಪ್ರಗತಿಯಲ್ಲಿದೆ. ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಅರ್ಹ ಹೋಮ್‌ಸ್ಟೇಗಳಿಗೆ ಅಧಿಕೃತ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ.
ಹೊಸ ಮಾರ್ಗಸೂಚಿಗಳ ಮೂಲಕ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಗ್ರಾಮೀಣ ಆತಿಥ್ಯವನ್ನು ಪ್ರವಾಸಿಗರಿಗೆ ಸುರಕ್ಷಿತವಾಗಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ನೋಂದಾಯಿತ ಹೋಮ್‌ಸ್ಟೇಗಳು ಸರಕಾರದ ಅಧಿಕೃತ ಪ್ರವಾಸೋದ್ಯಮ ಜಾಲದಲ್ಲಿ ಸ್ಥಾನ ಪಡೆಯುವುದರ ಜತೆಗೆ ಭವಿಷ್ಯದಲ್ಲಿ ವಿವಿಧ ಸರಕಾರಿ ಪ್ರೋತ್ಸಾಹ ಯೋಜನೆಗಳು ಹಾಗೂ ಪ್ರವಾಸೋದ್ಯಮ ಪ್ರಚಾರದ ಪ್ರಯೋಜನಗಳಿಗೂ ಅರ್ಹರಾಗಲಿವೆ. ಅಧಿಕಾರಿಗಳು ನೋಂದಣಿ ಮಾಡಿಸದ ಹೋಮ್‌ಸ್ಟೇಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.