ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವನ್ನು ಅಚ್ಚರಿಗೊಳಿಸುವ ಜಪಾನ್‌ ಈಗ ತನ್ನ ವಿಶಿಷ್ಟ ಸಸ್ಪೆಂಡೆಡ್ ಮೊನೊರೈಲ್‌ನಿಂದ ಮತ್ತೊಮ್ಮೆ ಗಮನ ಸೆಳೆದಿದೆ. ಈ ರೈಲು ಆಕಾಶದಲ್ಲಿ ತಲೆಕೆಳಗಾಗಿ ನೇತಾಡುತ್ತಾ ಚಲಿಸುವಂತೆ ಕಾಣುತ್ತದೆ. ಭಾರತದ ಕಂಟೆಂಟ್ ಕ್ರಿಯೇಟರ್ ದೇವ್ ವಿಜಯ್ ವರ್ಗಿಯಾ ಜಪಾನ್ ಪ್ರವಾಸದ ವೇಳೆ ಈ ಅಪರೂಪದ ರೈಲಿನಲ್ಲಿ ಪ್ರಯಾಣಿಸಿ ಅದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯ ರೈಲುಗಳಂತೆ ಹಳಿಗಳ ಮೇಲೆ ಚಲಿಸುವ ಬದಲು ಈ ಮೊನೊರೈಲ್ ಮೇಲ್ಭಾಗದಲ್ಲಿರುವ ವ್ಯವಸ್ಥೆಗೆ ನೇತಾಡಿಕೊಂಡು ಚಲಿಸುತ್ತದೆ. ಇದರಿಂದ ಹೊರಗಿನಿಂದ ನೋಡಿದವರಿಗೆ ರೈಲು ತಲೆಕೆಳಗಾಗಿ ಸಾಗುತ್ತಿರುವಂತೆ ಭಾಸವಾಗುತ್ತದೆ. ರೈಲಿನ ಕೆಳಭಾಗದಲ್ಲಿ ಸಾಮಾನ್ಯ ಹಳಿಗಳು ಕಾಣಿಸದೆ ವಿಶೇಷ ಹಸಿರು ಮಾರ್ಗ ಮಾತ್ರ ಗೋಚರಿಸುತ್ತದೆ.

ರೈಲಿನ ಒಳಭಾಗದ ಮತ್ತೊಂದು ವಿಶೇಷವೆಂದರೆ ಪಾರದರ್ಶಕ ನೆಲ. ಇದರ ಮೂಲಕ ಕೆಳಗಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನೋಡಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ನೆಲವೇ ಇಲ್ಲದಂಥ ವಿಚಿತ್ರ ಅನುಭವ ಉಂಟಾಗುತ್ತದೆ. ಮೊದಲಿಗೆ ಇದು ಇತ್ತೀಚಿನ ಭವಿಷ್ಯದ ತಂತ್ರಜ್ಞಾನ ಎಂದು ಭಾವಿಸಿದ್ದ ಕ್ರಿಯೇಟರ್‌ಗೆ, ಈ ಸಸ್ಪೆಂಡೆಡ್ ರೈಲು ಸುಮಾರು ಐದು ದಶಕಗಳಿಂದ ಕಾರ್ಯಾಚರಿಸುತ್ತಿದೆ ಎಂಬುದು ತಿಳಿದು ಅಚ್ಚರಿಯಾಗಿದೆ. 1988ರಲ್ಲೇ ಆರಂಭವಾದ ಈ ಮೊನೊರೈಲ್ ಜಪಾನ್‌ನ ತಾಂತ್ರಿಕ ಸಾಮರ್ಥ್ಯಕ್ಕೆ ವಿಶಿಷ್ಟ ಉದಾಹರಣೆಯಾಗಿದೆ.