ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನವನ್ನು ಮತ್ತೆ ಗೋವಾಗೆ ವಾಪಸ್ ಕರೆತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಸೆಪ್ಟೆಂಬರ್ 1ರಂದು ಬೆಳಗ್ಗೆ 9:15ಕ್ಕೆ ಉತ್ತರ ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 6E 2102 ವಿಮಾನ ದೆಹಲಿಯತ್ತ ಪ್ರಯಾಣ ಆರಂಭಿಸಿತ್ತು.

ವಿಮಾನ ಹಾರಾಟ ಆರಂಭಿಸಿದ ಸುಮಾರು ಐದು ನಿಮಿಷಗಳಲ್ಲೇ ಅದರ ಒಂದು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾಗಿದ್ದು, ಪರಿಸ್ಥಿತಿಯನ್ನು ಗಮನಿಸಿದ ಪೈಲಟ್‌ಗಳು ತಕ್ಷಣ ವಿಮಾನವನ್ನು ಗೋವಾಕ್ಕೆ ಹಿಂದಿರುಗಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ವೇಳೆ ಕೆಲಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು ಎಂದು ವರದಿಯಾಗಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ಘಟನೆಯ ನಂತರ ವಿಮಾನವನ್ನು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯ ಪರಿಶೀಲನೆ ಮತ್ತು ಅನುಮತಿಗಳು ಪೂರ್ಣಗೊಂಡ ಬಳಿಕವೇ ವಿಮಾನ ಮತ್ತೆ ಸೇವೆಗೆ ಮರಳಲಿದೆ ಎಂದು ಇಂಡಿಗೋ ತಿಳಿಸಿದೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ಉಪಾಹಾರ, ಅಗತ್ಯ ಮಾಹಿತಿ ಹಾಗೂ ದೆಹಲಿ ತಲುಪಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.