ಭಾರತೀಯ ರೈಲ್ವೇ ಪ್ರಯಾಣಿಕರ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಹೊಸ Passenger Reservation System (PRS) ಅನ್ನು ಪರಿಚಯಿಸಲು ಮುಂದಾಗಿದೆ. ಹೊಸ ವ್ಯವಸ್ಥೆಯ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ವೇಗವಾಗಿ, ಸರಳವಾಗಿ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪುಗೊಳ್ಳಲಿದೆ. ಹೊಸ ಪಿಆರ್‌ಎಸ್‌ನಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಸೀಟ್ ಅಥವಾ ಬರ್ತ್‌ ಆಯ್ಕೆ, ದರಗಳ ಹೋಲಿಕೆ ಹಾಗೂ ವಿವಿಧ ರೈಲುಗಳ ಮಾಹಿತಿ ಸುಲಭವಾಗಿ ದೊರೆಯುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.

ಹೊಸ ವ್ಯವಸ್ಥೆಯಲ್ಲಿ Seat/Berth Selection, Fare Calendar, ಬಹುಭಾಷಾ ಇಂಟರ್‌ಫೇಸ್ ಮತ್ತು ಸುಧಾರಿತ Enquiry & Booking Interface ಮುಂತಾದ ಸೌಲಭ್ಯಗಳು ಇರಲಿವೆ. ಇದರಿಂದ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ ತಮ್ಮ ಅಗತ್ಯಕ್ಕೆ ತಕ್ಕ ಸೀಟ್ ಅಥವಾ ಬರ್ತ್ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಇದರ ಜತೆಗೆ ಟಿಕೆಟ್ ಬುಕಿಂಗ್ ಮೇಲಿನ ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ. ಹೊಸ ಡಿಜಿಟಲ್ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಒಂದೇ ಸಮಯದಲ್ಲಿ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲೂ ಸುಗಮ ಸೇವೆ ಒದಗಿಸುವ ಗುರಿ ಹೊಂದಿದೆ. ಈ ಬದಲಾವಣೆಗಳು ರೈಲು ಪ್ರಯಾಣಿಕರ ಬುಕಿಂಗ್ ಅನುಭವವನ್ನು ಸುಧಾರಿಸುವ ನಿರೀಕ್ಷೆಯಿದೆ.