ರಾಜಸ್ಥಾನದ ವಿಶ್ವಪ್ರಸಿದ್ಧ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಮುಂಬರುವ ಪ್ರವಾಸಿ ಸೀಸನ್‌ನ ಜಂಗಲ್ ಸಫಾರಿ ಮುಂಗಡ ಬುಕಿಂಗ್‌ಗೆ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಆನ್‌ಲೈನ್ ಬುಕಿಂಗ್ ತೆರೆದ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಸುಮಾರು 40,000 ಪ್ರವಾಸಿಗರು ಸಫಾರಿಗಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ ಯೋಜನೆಗಳ ರಾಜ್ಯವ್ಯಾಪಿ ಪರಿಶೀಲನೆ ಆರಂಭ

ಇದೇ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರು ತಮ್ಮ ಸ್ವಂತ ದೇಶಗಳಿಂದಲೇ ಅಧಿಕೃತ ಪೋರ್ಟಲ್ ಮೂಲಕ ನೇರವಾಗಿ ಸಫಾರಿ ಟಿಕೆಟ್ ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಹೊಸ ಸೌಲಭ್ಯಕ್ಕೆ ಅತ್ಯುತ್ತಮ ಚಾಲನೆ ಸಿಕ್ಕಿದ್ದು, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನೆದರ್‌ಲ್ಯಾಂಡ್ಸ್ ಸೇರಿದಂತೆ ವಿವಿಧ ದೇಶಗಳಿಂದ ವಿದೇಶಿ ಪ್ರವಾಸಿಗರು ಯಶಸ್ವಿಯಾಗಿ ಆನ್‌ಲೈನ್ ಬುಕಿಂಗ್ ಪೂರ್ಣಗೊಳಿಸಿದ್ದಾರೆ. ಒಟ್ಟು ಬುಕಿಂಗ್‌ನಲ್ಲಿ ಸುಮಾರು 40% ರಷ್ಟು ಪಾಲು ವಿದೇಶಿಯರದಾಗಿದೆ.

ಬುಕಿಂಗ್ ಸಮಯದಲ್ಲಿ ಒಂದೇ ಬಾರಿಗೆ ಸುಮಾರು 2 ಕೋಟಿಗೂ ಹೆಚ್ಚು ನಕಲಿ ರಿಕ್ವೆಸ್ಟ್‌ಗಳು ಹಾಗೂ 20 ಲಕ್ಷದಷ್ಟು ಸೈಬರ್ ದಾಳಿ ಮತ್ತು ಸಸ್ಪೀಷಿಯಸ್ ಐಪಿ ಅಡ್ರೆಸ್‌ಗಳ ಯತ್ನಗಳು ನಡೆದಿದ್ದರೂ, ಪೋರ್ಟಲ್‌ನ ಅತ್ಯಾಧುನಿಕ ಸೆಕ್ಯೂರಿಟಿ ಸಿಸ್ಟಮ್ ಅವುಗಳನ್ನು ಸಂಪೂರ್ಣವಾಗಿ ತಡೆಹಿಡಿದು ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಿದೆ.

ಇದರ ಜತೆಗೆ, ನೂತನ ರಿಯಲ್-ಟೈಮ್ ಸೀಟ್ ಲಭ್ಯತೆಯ ವ್ಯವಸ್ಥೆಯಿಂದಾಗಿ ದೀಪಾವಳಿ ಮತ್ತು ಕ್ರಿಸ್‌ಮಸ್‌ನಂಥ ರಜಾದಿನಗಳ ಸೀಸನ್‌ನಲ್ಲೂ ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ರಣಥಂಬೋರ್ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸೋದ್ಯಮ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಸರಳೀಕರಣಗೊಳಿಸಲು ಈ ನೂತನ ಡಿಜಿಟಲ್ ವ್ಯವಸ್ಥೆ ನೆರವಾಗಿದೆ.