ಒಂದೇ ಒಂದು ಹಿಟ್ ಸಿನಿಮಾ ಇಡೀ ಊರಿನ ಅಥವಾ ಅಜ್ಞಾತ ತಾಣದ ಭವಿಷ್ಯವನ್ನೇ ಬದಲಾಯಿಸಿಬಿಡಬಹುದು ಎಂಬುದಕ್ಕೆ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯಲ್ಲಿರುವ ಪ್ರಶಾಂತ ಬೆಟ್ಟ 'ಸೀಗೆಗುಡ್ಡ' ಹಾಗೂ ಐತಿಹಾಸಿಕ 'ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನ'ವೇ ಸಾಕ್ಷಿ. ಇತ್ತೀಚೆಗೆ ಸದ್ದು ಮಾಡಿದ 'ಪ್ರೇಮದ ಊರಲಿ' ಕನ್ನಡ ಚಿತ್ರದ ಪ್ರಮುಖ ಸನ್ನಿವೇಶಗಳು ಇಲ್ಲಿ ಚಿತ್ರೀಕರಣಗೊಂಡ ನಂತರ, ಈ ತಾಣ ರಾತ್ರೋರಾತ್ರಿ ಕರ್ನಾಟಕದ ಹಾಟ್ ಟೂರಿಸ್ಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಸಿನಿಮಾದಲ್ಲಿನ ರಮಣೀಯ ದೃಶ್ಯಗಳಿಗೆ ಮಾರುಹೋದ ಜನಸಾಗರವೇ ಹರಿದುಬರುತ್ತಿದ್ದು, ಕಿರಿದಾದ ಬೆಟ್ಟದ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಪ್ರವಾಸಿಗರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾದ ಹಿನ್ನೆಲೆಯಲ್ಲಿ ಹಾಗೂ ರಸ್ತೆ ಅಪಾಯಕಾರಿಯಾಗಿರುವುದರಿಂದ, ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಸೀಗೆಗುಡ್ಡ ಮಳೆ ಮಲ್ಲೇಶ್ವರ ದೇವಸ್ಥಾನದ ರಸ್ತೆಯಲ್ಲಿ ಖಾಸಗಿ ಹಾಗೂ ಪ್ರವಾಸಿ ವಾಹನಗಳ ಸಂಚಾರವನ್ನು ನವೆಂಬರ್ 11 ರವರೆಗೆ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಪ್ರತಿದಿನ ಬರೋಬ್ಬರಿ 5,000 ಕ್ಕೂ ಹೆಚ್ಚು ಪ್ರವಾಸಿಗರು ಮತ್ತು ಯುವಜನತೆ ಸೀಗೆಗುಡ್ಡಕ್ಕೆ ವಾಹನಗಳಲ್ಲಿ ಲಗ್ಗೆ ಇಡುತ್ತಿದ್ದಾರೆ. ದೇವಸ್ಥಾನದ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಹಾಗೂ ಸಿನಿಮಾದ ಹಿಟ್ ಹಾಡುಗಳಿಗೆ ಬೆಟ್ಟದ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದು ಸಾಮಾನ್ಯ ದೃಶ್ಯವಾಗಿದೆ. ಇದು ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆಯಾದರೂ, ಸಂಚಾರ ನಿರ್ವಹಣೆ ಭಾರಿ ಸವಾಲಾಗಿ ಪರಿಣಮಿಸಿದೆ.ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ನಿರ್ಧಾರ ಕೈಗೊಂಡಿದ್ದು, ಪ್ರವಾಸಿಗರು ಸಹಕರಿಸುವಂತೆ ಕೋರಿದೆ. ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 115 ಹಾಗೂ 1989 ರ ನಿಯಮ 221ಎ(5) ರ ಅಡಿಯಲ್ಲಿ ಹೊರಡಿಸಲಾಗಿರುವ ಈ ಆದೇಶವು ಅಕ್ಟೋಬರ್ 25 ರಿಂದ ನವೆಂಬರ್ 11 ರವರೆಗೆ ಜಾರಿಯಲ್ಲಿರಲಿದೆ.