ಪ್ರವಾಸ ಯೋಜನೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಗೂಗಲ್ ತನ್ನ AI Modeನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆಗಸ್ಟ್ 27ರಿಂದ ಲಭ್ಯವಾಗಿರುವ ಈ ಅಪ್‌ಡೇಟ್‌ನಲ್ಲಿ ವಿಮಾನ ದರಗಳನ್ನು ಟ್ರ್ಯಾಕ್ ಮಾಡುವುದು, ಬೆಲೆ ಇಳಿಕೆಯ ಮಾಹಿತಿ ಪಡೆಯುವುದು, ಲಾಯಲ್ಟಿ ಪಾಯಿಂಟ್ಸ್ ಅಥವಾ ಮೈಲ್ಸ್ ಮೂಲಕ ವಿಮಾನ ಮತ್ತು ಹೋಟೆಲ್‌ಗಳ ಬುಕ್ಕಿಂಗ್ ವೆಚ್ಚ ತಿಳಿದುಕೊಳ್ಳುವುದು ಹಾಗೂ ಹೊಟೇಲ್ ಬುಕ್ ಮಾಡುವ ಸೌಲಭ್ಯಗಳನ್ನು ನೀಡಲಾಗಿದೆ.

ಪ್ರವಾಸಿಗರು ತಮ್ಮ ಪ್ರಯಾಣದ ಸ್ಥಳ ಮತ್ತು ದಿನಾಂಕಗಳನ್ನು ನಮೂದಿಸಿದರೆ, 300ಕ್ಕೂ ಹೆಚ್ಚು ಪಾಲುದಾರ ವಿಮಾನಯಾನ ಸಂಸ್ಥೆಗಳು ಮತ್ತು ಟ್ರಾವೆಲ್ ಸೈಟ್‌ಗಳಿಂದ ಲಭ್ಯವಿರುವ ದರಗಳನ್ನು AI Mode ತೋರಿಸುತ್ತದೆ. ಬೆಲೆ ಬದಲಾದಾಗ ಇ-ಮೇಲ್ ಮೂಲಕ ಎಚ್ಚರಿಕೆಯನ್ನೂ ಪಡೆಯಬಹುದು. ಈ ಸೌಲಭ್ಯ 180ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ.

ಇದರೊಂದಿಗೆ ಆಯ್ದ ಲಾಯಲ್ಟಿ ಕಾರ್ಯಕ್ರಮಗಳ ಮೈಲ್ಸ್ ಬಳಸಿ ವಿಮಾನ ಅಥವಾ ಹೊಟೇಲ್ ಬುಕ್ ಮಾಡಲು ಬೇಕಾದ ಪಾಯಿಂಟ್ಸ್‌ಗಳನ್ನೂ ನೋಡಬಹುದು. ಬಳಕೆದಾರರು ಪ್ರಯಾಣದ ದಿನಾಂಕ, ಸ್ಥಳ ಮತ್ತು ಹೊಟೇಲ್ ಆದ್ಯತೆಗಳನ್ನು ನೀಡಿದರೆ, AI Mode ಮೂಲಕ ನೇರವಾಗಿ ಹೊಟೇಲ್ ಬುಕ್ ಮಾಡುವ ಆಯ್ಕೆಯೂ ಇದೆ.