ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ದಕ್ಷಿಣ ಆಫ್ರಿಕ ಸರಕಾರವು ಭಾರಿ ದೊಡ್ಡ ಸಮಾಧಾನಕರ ನಿರ್ಧಾರವೊಂದನ್ನು ಪ್ರಕಟಿಸಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅರ್ಹ ಪ್ರಯಾಣಿಕರಿಗೆ ದಕ್ಷಿಣ ಆಫ್ರಿಕಾ ಪ್ರವೇಶಿಸಲು ನೂತನ 'ಇಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್' (ETA) ಡಿಜಿಟಲ್ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶ ಸ್ಥಗಿತಗೊಳಿಸಿದ ನಾಲ್ಕು ದೇಶಗಳು

ಈ ನೂತನ ವ್ಯವಸ್ಥೆಯ ಮೂಲಕ ಅರ್ಜಿದಾರರು ವೀಸಾ ಕೇಂದ್ರಗಳಿಗೆ ಅಲೆಯುವ ಅಗತ್ಯವಿಲ್ಲದೆ, ಸಂಪೂರ್ಣ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಕೇವಲ 24 ರಿಂದ 48 ಗಂಟೆಗಳ ಒಳಗಾಗಿ ಡಿಜಿಟಲ್ ಪ್ರಯಾಣ ಅನುಮೋದನೆಯನ್ನು ಪಡೆದುಕೊಳ್ಳಬಹುದು.

ಪ್ರವಾಸೋದ್ಯಮ, ಕುಟುಂಬ ಭೇಟಿ ಹಾಗೂ ಸಣ್ಣ ಪ್ರಮಾಣದ ವ್ಯವಹಾರದ ಉದ್ದೇಶದಿಂದ ದಕ್ಷಿಣ ಆಫ್ರಿಕಾಗೆ ತೆರಳುವ ಭಾರತೀಯರು ಈ ETA ಮೂಲಕ ಗರಿಷ್ಠ 90 ದಿನಗಳ ಕಾಲ ತಂಗಬಹುದು.

ಅನುಮೋದನೆಗೊಂಡ ETA ನೇರವಾಗಿ ಪ್ರಯಾಣಿಕರ ಪಾಸ್‌ಪೋರ್ಟ್‌ಗೆ ಡಿಜಿಟಲ್ ಆಗಿ ಲಿಂಕ್ ಆಗಿರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಯಾವುದೇ ಭೌತಿಕ ವೀಸಾ ಅಗತ್ಯವಿರುವುದಿಲ್ಲ. ಈ ETA ಯ ಸಿಂಧುತ್ವದ ಅವಧಿಯಲ್ಲಿ ಭಾರತೀಯರು ದಕ್ಷಿಣ ಆಫ್ರಿಕಾಗೆ ಹಲವು ಬಾರಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಕೆಯಾದ 24 ರಿಂದ 48 ಗಂಟೆಗಳಲ್ಲಿ ಇ-ಮೇಲ್ ಮತ್ತು ಪೋರ್ಟಲ್ ಮೂಲಕ QR ಕೋಡ್ ಹೊಂದಿರುವ ETA ಅನುಮೋದನೆ ಪತ್ರ ಸಿಗಲಿದೆ. ಆನ್‌ಲೈನ್ ಅನುಮೋದನೆ ಸಿಕ್ಕರೂ, ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕದ ಇಮಿಗ್ರೇಷನ್ ಅಧಿಕಾರಿಗಳ ಅಂತಿಮ ಪರಿಶೀಲನೆಯ ನಂತರವಷ್ಟೇ ಪ್ರವೇಶಕ್ಕೆ ಅನುಮತಿಸಲಾಗುತ್ತದೆ.