ರಜೆಯೆಂದರೆ ವರ್ಷಕ್ಕೊಮ್ಮೆ ಏಳು–ಹತ್ತು ದಿನಗಳ ಪ್ರವಾಸ ಎಂಬ ಕಲ್ಪನೆ ನಿಧಾನವಾಗಿ ಬದಲಾಗುತ್ತಿದೆ. ಬಿಡುವಿನ ಕೊರತೆ, ಬ್ಯುಸಿ ಜೀವನಶೈಲಿ ಹಾಗೂ ಸರಳ ಪ್ರವಾಸದ ಬಯಕೆಯಿಂದಾಗಿ ಪ್ರವಾಸಿಗರು ಈಗ ಒಂದರಿಂದ ನಾಲ್ಕು ರಾತ್ರಿಗಳ ‘ಮೈಕ್ರೋ-ಕೇಶನ್ʼ‌ಗಳತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕೆಲಸದ ಪ್ರವಾಸಕ್ಕೆ ಎರಡು ದಿನ ಹೆಚ್ಚಿಸಿ ಸಣ್ಣ ರಜೆಯನ್ನಾಗಿ ಮಾಡಿಕೊಳ್ಳುವುದೂ ಈ ಪ್ರವೃತ್ತಿಯ ಭಾಗವಾಗಿದೆ.

1 (33)

ಮುಂಗಾರು ಸಂದರ್ಭದಲ್ಲಿ ಗೋವಾ ಇಂಥ ಸಣ್ಣ ಪ್ರವಾಸಗಳಿಗೆ ಜನಪ್ರಿಯ ತಾಣವಾಗಿ ಹೊರಹೊಮ್ಮಿದೆ. ಗೋವಾ ಪ್ರವಾಸೋದ್ಯಮ ಇಲಾಖೆ, Airbnb ಹುಡುಕಾಟ ದತ್ತಾಂಶವನ್ನು ಉಲ್ಲೇಖಿಸಿ, ದೇಶೀಯ ಪ್ರವಾಸಿಗರ ಮುಂಗಾರು ಪ್ರವಾಸ ಹುಡುಕಾಟಗಳು ವರ್ಷದಿಂದ ವರ್ಷಕ್ಕೆ ಸುಮಾರು ಶೇ.40ರಷ್ಟು ಹೆಚ್ಚಾಗಿವೆ ಎಂದು ತಿಳಿಸಿದೆ. ಮಳೆಗಾಲದಲ್ಲಿ ಜನರು ಗೋವಾಕ್ಕೆ ತಕ್ಷಣದ ವೀಕೆಂಡ್ ಪ್ರವಾಸಗಳು ಹಾಗೂ ಮೂರುರಿಂದ ಐದು ದಿನಗಳ ಸಣ್ಣ ರಜೆಗಳನ್ನು ಯೋಜಿಸುತ್ತಿದ್ದಾರೆ.

ಚಳಿಗಾಲದ ಬೀಚ್ ಮತ್ತು ನೈಟ್‌ಲೈಫ್‌ಗಿಂತ ಮುಂಗಾರು ಗೋವಾಕ್ಕೆ ವಿಭಿನ್ನ ರೂಪ ನೀಡುತ್ತದೆ. ಹಸಿರು ಕಾಡುಗಳು, ಜಲಪಾತಗಳು, ಪಾರಂಪರಿಕ ತಾಣಗಳು, ಆಧ್ಯಾತ್ಮಿಕ ಅನುಭವಗಳು, ಸ್ಥಳೀಯ ಹಬ್ಬಗಳು ಹಾಗೂ ಗ್ರಾಮೀಣ ಪ್ರವಾಸೋದ್ಯಮ ಪ್ರವಾಸಿಗರನ್ನು ಸೆಳೆಯುತ್ತಿವೆ.

ಮೈಕ್ರೋ-ಕೇಶನ್‌ನ ಪ್ರಮುಖ ಆಕರ್ಷಣೆ ಕಡಿಮೆ ರಜೆ ಬಳಸಿ ಹೆಚ್ಚು ಬಾರಿ ಪ್ರವಾಸ ಮಾಡುವ ಅವಕಾಶ. ಒಂದು ದಿನದ ರಜೆ ಬಳಸಿ ಗುರುವಾರ ಸಂಜೆ ಹೊರಟು ಸೋಮವಾರ ಬೆಳಗ್ಗೆ ಮರಳುವ ಮೂಲಕ ದೀರ್ಘ ವೀಕೆಂಡ್ ರೂಪಿಸಿಕೊಳ್ಳಬಹುದು. ಕಡಿಮೆ ಪ್ರಯಾಣದ ಸಮಯ, ಹಗುರವಾದ ಪ್ರವಾಸ ಯೋಜನೆ ಮತ್ತು ಅನುಕೂಲಕರ ವಸತಿ ಆಯ್ಕೆ ಈ ರೀತಿಯ ಪ್ರವಾಸವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.