ಕೆನಡಾದ ಕ್ಯಾಲ್ಗರಿಯಿಂದ ವ್ಯಾಂಕೂವರ್‌ಗೆ ಹೊರಡಬೇಕಿದ್ದ ಕೆನಡಾ ಮೂಲದ 'ವೈಸ್-ಜೆಟ್' ವಿಮಾನಯಾನ ಸಂಸ್ಥೆಯ ಪ್ರಯಾಣವೊಂದು, ಕೇವಲ 19 ತಿಂಗಳ ಮಗು ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿದ ಕಾರಣಕ್ಕೆ ಸಂಪೂರ್ಣವಾಗಿ ರದ್ದಾದ ಆತಂಕಕಾರಿ ಹಾಗೂ ವಿಚಿತ್ರ ಘಟನೆಯೊಂದು ವರದಿಯಾಗಿದೆ.

ಇದನ್ನೂ ಓದಿ: ಫುಕೆಟ್– ದೆಹಲಿ ಏರ್ ಇಂಡಿಯಾ ವಿಮಾನ: ಪ್ರಯಾಣಿಕರು ಸೇಫ್‌

ಸಫಿಯಾ ಅಹ್ಮದ್ ಮತ್ತು ಸಫೀನ್ ಅಹ್ಮದ್ ದಂಪತಿ ತಮ್ಮ ಮೂರು ವರ್ಷದ ಹಿರಿಯ ಮಗಳು ಹಾಗೂ 19 ತಿಂಗಳ ಕಿರಿಯ ಮಗಳೊಂದಿಗೆ ಪ್ರಯಾಣಿಸಲು ವಿಮಾನ ಏರಿದ್ದರು. ವಿಮಾನ ಟೇಕ್-ಆಫ್ ಆಗುವ ಮುನ್ನ ವಿಮಾನಯಾನ ನಿಯಮಗಳಂತೆ ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಕಟ್ಟುವುದು ಕಡ್ಡಾಯವಾಗಿತ್ತು. ಆದರೆ, 19 ತಿಂಗಳ ಹೆಣ್ಣು ಮಗು ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಒಪ್ಪದೆ ಹಟ ಹಿಡಿದು ಕಣ್ಣೀರು ಹಾಕಲು ಆರಂಭಿಸಿತು.

ಮಗುವನ್ನು ಸಮಾಧಾನಪಡಿಸಲು ತಾಯಿ ಸಫಿಯಾ ಸಮಯ ಕೇಳಿದರಾದರೂ, ವಿಮಾನದ ಸಿಬ್ಬಂದಿ ವಿಮಾನಯಾನ ಸುರಕ್ಷತಾ ನಿಯಮಗಳ ನೆಪವೊಡ್ಡಿ ತಕ್ಷಣವೇ ಮಗುವಿಗೆ ಸೀಟ್ ಬೆಲ್ಟ್ ಧರಿಸುವಂತೆ ಒತ್ತಾಯಿಸಿದರು.

ಪರಿಸ್ಥಿತಿ ಕೈಮೀರಿದಾಗ, ಸಿಬ್ಬಂದಿ ಮತ್ತು ಕುಟುಂಬದ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ವಿಮಾನಯಾನ ಸಿಬ್ಬಂದಿಯು ಭದ್ರತಾ ಸಿಬ್ಬಂದಿಯನ್ನು ಕರೆಸಿ, ಆ ಕುಟುಂಬವನ್ನು ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಿದರು. ಕುಟುಂಬವು ಕೆಳಗಿಳಿಯಲು ನಿರಾಕರಿಸಿದಾಗ ಮತ್ತು ಇತರ ಪ್ರಯಾಣಿಕರು ಕುಟುಂಬದ ಪರವಾಗಿ ಧ್ವನಿ ಎತ್ತಿದಾಗ, ವಿಮಾನದ ಪೈಲಟ್ ಇಡೀ ವಿಮಾನದ ಪ್ರಯಾಣವನ್ನೇ ಸಂಪೂರ್ಣವಾಗಿ ರದ್ದುಗೊಳಿಸಿ, ಎಲ್ಲ ಪ್ರಯಾಣಿಕರನ್ನೂ ಕೆಳಗಿಳಿಯಲು ಆದೇಶಿಸಿದರು.

ಈ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ವೈಸ್-ಜೆಟ್ ಸಂಸ್ಥೆಯು, ʼಪ್ರಯಾಣಿಕರ ಹಾಗೂ ವಿಮಾನದ ಸುರಕ್ಷತೆಯೇ ನಮಗೆ ಮುಖ್ಯ. ಕೆನಡಿಯನ್ ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಾಗಿದ್ದರೂ, ಸ್ವಂತ ಸೀಟಿನಲ್ಲಿ ಕುಳಿತಿದ್ದರೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಪ್ರಯಾಣಿಕರು ಸಿಬ್ಬಂದಿಯ ಸುರಕ್ಷತಾ ಸೂಚನೆಗಳನ್ನು ಪಾಲಿಸದ ಕಾರಣ ಹಾಗೂ ನೌಕರರ ಮೇಲೆ ಅಸಭ್ಯವಾಗಿ ವರ್ತಿಸಿದ್ದರಿಂದ ವಿಮಾನ ರದ್ದುಗೊಳಿಸಬೇಕಾಯಿತುʼ ಎಂದು ತಿಳಿಸಿದೆ.

ಆದರೆ ಸಂತ್ರಸ್ತ ಕುಟುಂಬವು ತಮ್ಮ ಮಗುವಿಗೆ ಕೇವಲ 19 ತಿಂಗಳಾಗಿದ್ದು, ಅವಳಿಗೆ ಸೀಟ್ ಬೆಲ್ಟ್‌ನ ಅವಶ್ಯಕತೆ ಅರ್ಥವಾಗುವುದಿಲ್ಲ. ವಿಮಾನಯಾನ ಸಿಬ್ಬಂದಿ ಯಾವುದೇ ಮಾನವೀಯತೆ ಇಲ್ಲದೆ ತಮ್ಮೊಂದಿಗೆ ವರ್ತಿಸಿದ್ದಾರೆ ಎಂದು ಆರೋಪಿಸಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವಿಮಾನಯಾನ ನಿಯಮಗಳು ಮತ್ತು ಸಣ್ಣ ಮಕ್ಕಳ ಪ್ರಯಾಣದ ವೇಳೆಯ ಮಾನವೀಯತೆಯ ಕುರಿತು ಭಾರಿ ಚರ್ಚೆಗೆ ಒಳಗಾಗಿದೆ.