ಸ್ಥಳೀಯರ ಪ್ರತಿಭಟನೆಯಿಂದ ಸ್ಥಗಿತಗೊಂಡಿದ್ದ ನೇಪಾಳದ ಎವರೆಸ್ಟ್ ಪ್ರದೇಶದ ರಕ್ಷಣಾ ಹೆಲಿಕಾಪ್ಟರ್ ಸೇವೆಗಳನ್ನು ಮತ್ತೆ ಆರಂಭಿಸಲಾಗಿದೆ. ಪರ್ವತಾರೋಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತುರ್ತು ರಕ್ಷಣಾ ಮತ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಸ್ಥಳೀಯರು ಹೆಲಿಕಾಪ್ಟರ್‌ಗಳ ಹೆಚ್ಚಿದ ವಾಣಿಜ್ಯ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಮತ್ತು ಚಾರಣಿಗರಿಂದ ದೊರೆಯುವ ಆದಾಯ ಕಡಿಮೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ವಾಣಿಜ್ಯ ಹಾರಾಟಗಳ ಮೇಲಿನ ನಿರ್ಬಂಧ ಮುಂದುವರಿದಿದ್ದು, ಸರಕಾರ ಮತ್ತು ಸ್ಥಳೀಯರ ನಡುವೆ ಮಾತುಕತೆ ನಡೆಯುತ್ತಿದೆ.

ಎವರೆಸ್ಟ್ ಪ್ರದೇಶದಲ್ಲಿ ರಸ್ತೆ ಸಂಪರ್ಕ ಸೀಮಿತವಾಗಿರುವುದರಿಂದ ತುರ್ತು ಸಂದರ್ಭಗಳಲ್ಲಿ ಹೆಲಿಕಾಪ್ಟರ್ ಸೇವೆ ಜೀವ ರಕ್ಷಕವಾಗಿದ್ದು, ರಕ್ಷಣಾ ಕಾರ್ಯಾಚರಣೆಗಳಿಗೆ ಅವು ಅತ್ಯಗತ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.