ಕತಾರ್ನಲ್ಲಿರುವ ಭಾರತೀಯರಿಗೆ ತುರ್ತು ಸೂಚನೆ
ಕತಾರ್‌ನ ಆಂತರಿಕ ಸಚಿವಾಲಯವು ನಿವಾಸಿಗಳು ಅತ್ಯಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರಬರಬಾರದು, ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಹಾಗೂ ಕಿಟಕಿಗಳು ಮತ್ತು ತೆರೆದ ಪ್ರದೇಶಗಳಿಂದ ದೂರವಿರಬೇಕು ಎಂದು ಸೂಚಿಸಿದೆ.
ಕತಾರ್‌ನಲ್ಲಿ ಪ್ರಸ್ತುತ ಉದ್ಭವಿಸಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಅಲ್ಲಿನ ಎಲ್ಲ ಭಾರತೀಯ ನಾಗರಿಕರು ಕತಾರ್ ಸರಕಾರ ಹಾಗೂ ವಿಶೇಷವಾಗಿ ಆಂತರಿಕ ಸಚಿವಾಲಯ ಹೊರಡಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.

ಕತಾರ್‌ನ ಆಂತರಿಕ ಸಚಿವಾಲಯವು ನಿವಾಸಿಗಳು ಅತ್ಯಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರಬರಬಾರದು, ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಹಾಗೂ ಕಿಟಕಿಗಳು ಮತ್ತು ತೆರೆದ ಪ್ರದೇಶಗಳಿಂದ ದೂರವಿರಬೇಕು ಎಂದು ಸೂಚಿಸಿದೆ.
ಭದ್ರತಾ ಕಾರಣಗಳಿಂದ ಕತಾರ್‌ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಇದಲ್ಲದೆ, ಅವಧಿ ಮುಗಿದಿರುವ ಅಥವಾ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವ ಎಲ್ಲ ವರ್ಗದ ಪ್ರವೇಶ ವೀಸಾಗಳನ್ನು ಒಂದು ತಿಂಗಳ ಕಾಲ ವಿಸ್ತರಿಸುವುದಾಗಿ ಕತಾರ್ ಸರಕಾರ ಘೋಷಿಸಿದೆ. ಪರಿಸ್ಥಿತಿಗೆ ಅನುಗುಣವಾಗಿ ಈ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಯೂ ಇದೆ.

ತುರ್ತು ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾದ ಸಲ್ವಾ ಭೂ ಗಡಿ ಮಾರ್ಗದ ಮೂಲಕ ಕತಾರ್‌ನಿಂದ ಹೊರಹೋಗುವ ಅವಕಾಶ ಲಭ್ಯವಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅಮೆರಿಕ, ಬ್ರಿಟನ್ ಅಥವಾ ಷೆಂಗೆನ್ ವೀಸಾ ಹೊಂದಿರುವ ಭಾರತೀಯರು ಸೌದಿ ಅರೇಬಿಯಾಗೆ ತಲುಪಿದ ನಂತರ 'ವೀಸಾ ಆನ್ ಅರೈವಲ್' ಪಡೆಯಬಹುದು. ಇತರರು ನಿಯಮಾನುಸಾರ ಸೌದಿ ವೀಸಾಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ.
ಕತಾರ್‌ನಲ್ಲಿ ಟ್ರಾನ್ಸಿಟ್ ವೇಳೆ ಸಿಲುಕಿರುವ ಭಾರತೀಯರಿಗಾಗಿ ಸೌದಿ ಅರೇಬಿಯಾ ಮೂಲಕ ಪ್ರಯಾಣಿಸಲು ತಾತ್ಕಾಲಿಕ ಟ್ರಾನ್ಸಿಟ್ ವೀಸಾ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ವಿಶೇಷ ನೋಂದಣಿ ವ್ಯವಸ್ಥೆಯನ್ನೂ ಭಾರತೀಯ ರಾಯಭಾರ ಕಚೇರಿ ಆರಂಭಿಸಿದೆ. ಭಾರತೀಯ ಸಮುದಾಯದ ಸುರಕ್ಷತೆಗಾಗಿ ರಾಯಭಾರ ಕಚೇರಿ 24x7 ಸಹಾಯವಾಣಿಯನ್ನೂ ಕಾರ್ಯನಿರ್ವಹಿಸುತ್ತಿದೆ.