ಅಡೆತಡೆಗಳ ಕುರಿತು ಕೋರ್ಟ್‌ಗೆ ಶೀಘ್ರದಲ್ಲೇ ವರದಿ
ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಪ್ರಕಾಶ್ ಗೋಯಲ್ ಅವರು, “ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆಗಳಿಗೆ ಅತ್ಯಂತ ಮಹತ್ವವಾದ ಮೂರು ಕಾರಿಡಾರ್‌ಗಳು ಹಾಳಾಗಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಪರಿಣಾಮವಾಗಿ ವನ್ಯಜೀವಿ–ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ,” ಎಂದು ಹೇಳಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪರಿಸರಸೂಕ್ಷ್ಮ ವಲಯದಲ್ಲಿ ನಡೆಯುತ್ತಿರುವ ಅನಧಿಕೃತ ಬಡಾವಣೆ ಹಾಗೂ ರೆಸಾರ್ಟ್ ಚಟುವಟಿಕೆಗಳಿಂದ ಆನೆಗಳ ಸಂಚಾರ ಮಾರ್ಗವಾದ ಕಾರಿಡಾರ್‌ಗಳಿಗೆ ತೀವ್ರ ಅಡ್ಡಿಯಾಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ 2025ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯ ಆಧಾರದ ಮೇಲೆ ಸ್ಥಳ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹ ನಡೆಸಲಾಗಿದ್ದು, ಸಿಇಸಿ (ಕೇಂದ್ರ ಸಬಲೀಕರಣ ಸಮಿತಿ) ಸದಸ್ಯ ಚಂದ್ರಪ್ರಕಾಶ್ ಗೋಯಲ್ ಅವರು ಈ ಕುರಿತು ಸುಪ್ರೀಂ ಕೋರ್ಟ್‌ಗೆ ವಿವರವಾದ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆಗಳಿಗೆ ಅತ್ಯಂತ ಮಹತ್ವವಾದ ಮೂರು ಕಾರಿಡಾರ್‌ಗಳು ಹಾಳಾಗಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಪರಿಣಾಮವಾಗಿ ವನ್ಯಜೀವಿ–ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ,” ಎಂದು ಹೇಳಿದರು.

ಇದಲ್ಲದೆ, ಕರ್ನಾಟಕ ಗೃಹ ಮಂಡಳಿ ನಿರ್ಮಿಸುತ್ತಿರುವ ಬಡಾವಣೆಗಳು ಹಾಗೂ ಇತರೆ ಖಾಸಗಿ ನಿರ್ಮಾಣ ಚಟುವಟಿಕೆಗಳು ಆನೆ ಕಾರಿಡಾರ್‌ಗಳ ಮೇಲೆ ಎಷ್ಟು ಪ್ರಮಾಣದಲ್ಲಿ ಪರಿಣಾಮ ಬೀರಿವೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು. ಪರಿಸರಸೂಕ್ಷ್ಮ ವಲಯದಲ್ಲಿ ನಿರ್ಮಾಣ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ಜನವರಿ 7ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ಮಾಹಿತಿಯೊಂದಿಗೆ ವರದಿಯನ್ನು ಸಿಇಸಿ ಅಧ್ಯಕ್ಷರಿಗೆ ಸಲ್ಲಿಸುವುದಾಗಿ ಚಂದ್ರಪ್ರಕಾಶ್ ಗೋಯಲ್ ಸ್ಪಷ್ಟಪಡಿಸಿದರು.
ಪರಿಸರ ತಜ್ಞರ ಪ್ರಕಾರ, ಆನೆ ಕಾರಿಡಾರ್‌ಗಳಿಗೆ ಉಂಟಾಗಿರುವ ಅಡ್ಡಿಯು ವನ್ಯಜೀವಿಗಳ ಸ್ವಾಭಾವಿಕ ಸಂಚಾರಕ್ಕೆ ತೊಂದರೆ ಉಂಟುಮಾಡುವುದರೊಂದಿಗೆ, ಗ್ರಾಮೀಣ ಹಾಗೂ ನಗರ ಸೀಮೆಯ ಪ್ರದೇಶಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷವನ್ನು ಮತ್ತಷ್ಟು ಗಂಭೀರಗೊಳಿಸುವ ಅಪಾಯವಿದೆ.