ಅಮೆರಿಕದ ಯುನೈಟೆಡ್ ಏರ್‌ಲೈನ್ಸ್ ತನ್ನ ಹೊಸ ಏರ್‌ಬಸ್ A321XLR ವಿಮಾನಗಳಲ್ಲಿ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಅನುಭವ ನೀಡುವ ಉದ್ದೇಶದಿಂದ ಹೊಸ ‘ಇಕಾನಮಿ ಪ್ಲಸ್ʼ ಆಸನ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಹೊಸ ವಿನ್ಯಾಸದಲ್ಲಿ ಮಧ್ಯದ ಆಸನವನ್ನು ತೆಗೆದು ಅದರ ಸ್ಥಳದಲ್ಲಿ ಹಂಚಿಕೆ ಬಳಸಬಹುದಾದ ಸ್ಥಿರ ಟೇಬಲ್ ಅಳವಡಿಸಲಾಗುತ್ತದೆ. ಇದರಿಂದ ಕಿಟಕಿ ಮತ್ತು ಹಾದಿ ಬದಿಯ ಆಸನಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಹೆಚ್ಚುವರಿ ಮೊಣಕೈ ಹಾಗೂ ವೈಯಕ್ತಿಕ ಸ್ಥಳ ಲಭ್ಯವಾಗಲಿದೆ.

ಈ ಹೊಸ ಸೌಲಭ್ಯವನ್ನು ಮೊದಲು ಯುನೈಟೆಡ್‌ನ 50 ಏರ್‌ಬಸ್ A321XLR ವಿಮಾನಗಳಲ್ಲಿ ಅಳವಡಿಸಲಾಗುವುದು. ಬಳಿಕ ಇತರೆ ವಿಮಾನಗಳಿಗೂ ವಿಸ್ತರಿಸುವ ಸಾಧ್ಯತೆಯನ್ನು ಕಂಪನಿ ಪರಿಶೀಲಿಸುತ್ತಿದೆ. ಹೊಸ ಆಸನಗಳನ್ನು ಈ ವರ್ಷದ ಅಂತ್ಯದೊಳಗೆ ಬುಕಿಂಗ್‌ಗೆ ತೆರೆಯಲಾಗಲಿದ್ದು, ದರಗಳ ವಿವರವನ್ನು ನಂತರ ಪ್ರಕಟಿಸಲಾಗುತ್ತದೆ.

ಹೊಸ ಇಕಾನಮಿ ಪ್ಲಸ್ ಆಸನಗಳಲ್ಲಿ ಈಗಾಗಲೇ ದೊರೆಯುವ ಹೆಚ್ಚುವರಿ ಮೂರು ಇಂಚಿನ ಕಾಲಿನ ಜಾಗದ ಜತೆಗೆ ಮಧ್ಯದ ಆಸನದ ಬದಲಿಗೆ ಟೇಬಲ್ ಇರುವುದರಿಂದ ದೀರ್ಘಾವಧಿಯ ಪ್ರಯಾಣದಲ್ಲಿ ಇನ್ನಷ್ಟು ಆರಾಮ ಸಿಗಲಿದೆ. ಟೇಬಲ್‌ನಲ್ಲಿ ಕಪ್ ಹಿಡಿಯುವ ವ್ಯವಸ್ಥೆಯೂ ಇರಲಿದೆ.

ಯುನೈಟೆಡ್ ಏರ್‌ಲೈನ್ಸ್‌ನ ವಾಣಿಜ್ಯ ವಿಭಾಗದ ಮುಖ್ಯಸ್ಥ ಆಂಡ್ರೂ ನೊಸೆಲ್ಲಾ, ವಿಮಾನದ ಪ್ರತಿಯೊಂದು ವಿಭಾಗದಲ್ಲೂ ಪ್ರಯಾಣಿಕರಿಗೆ ಉತ್ತಮ ಆಯ್ಕೆ ಮತ್ತು ಮೌಲ್ಯ ನೀಡುವ ಉದ್ದೇಶದಿಂದ ನಾವು ಹೂಡಿಕೆ ಮಾಡುತ್ತಿದ್ದೇವೆ. ಹೊಸ A321XLR ವಿಮಾನಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೆಚ್ಚು ಆರಾಮದಾಯಕ ಪ್ರಯಾಣವನ್ನು ಒದಗಿಸಲಿವೆ ಎಂದು ತಿಳಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಆಸನ ವಿನ್ಯಾಸವನ್ನು ಪರಿಚಯಿಸುವ ಮೊದಲ ವಿಮಾನಯಾನ ಸಂಸ್ಥೆಯಾಗುವ ನಿರೀಕ್ಷೆಯನ್ನೂ ಯುನೈಟೆಡ್ ವ್ಯಕ್ತಪಡಿಸಿದೆ.