ವನ್ಯಜೀವಿ ಪ್ರೇಮಿಗಳು ಮತ್ತು ಪ್ರವಾಸಿಗರಿಗೆ ಉತ್ತರ ಪ್ರದೇಶ ಸರಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ಪ್ರಸಿದ್ಧ 'ಅಮನಗಢ್ ಹುಲಿ ಸಂರಕ್ಷಿತ ಪ್ರದೇಶ'ದ ಪ್ರಸಕ್ತ ಸಾಲಿನ ನಾಲ್ಕನೆಯ ಇಕೋ-ಟೂರಿಸಂ ಸೀಸನ್ ಇನ್ನೂ 15 ದಿನಗಳ ಕಾಲ ವಿಸ್ತರಿಸಲಾಗಿದ್ದು, ಪ್ರವಾಸಿಗರು ಜೂನ್ 30ರವರೆಗೆ ಜಂಗಲ್ ಸಫಾರಿ ಮತ್ತು ಹುಲಿ ವೀಕ್ಷಣೆಯನ್ನು ಆನಂದಿಸಬಹುದಾಗಿದೆ.

ಇದನ್ನೂ ಓದಿ: ತಡೋಬಾ ಹುಲಿ ಸಂರಕ್ಷಿತ ಪ್ರದೇಶ ತಾತ್ಕಾಲಿಕ ಬಂದ್

ಬಿಜ್ನೋರ್ ವಿಭಾಗೀಯ ಅರಣ್ಯಾಧಿಕಾರಿ ಜೈ ಸಿಂಗ್ ಕುಶ್ವಾಹಾ ಅವರು ಶನಿವಾರ ಈ ಮಾಹಿತಿ ನೀಡಿದ್ದು, ʼಪೂರ್ವ ನಿಗದಿಯಂತೆ ಅಮನಗಢ್ ಹುಲಿ ಸಂರಕ್ಷಿತ ಪ್ರದೇಶದ ಪ್ರವಾಸಿ ಸೀಸನ್ ಜೂನ್ 15ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅನುರಾಧಾ ವೇಮುರಿ ಅವರು ಈ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆʼ ಎಂದು ತಿಳಿಸಿದ್ದಾರೆ.

ಜೂನ್ 30ರ ನಂತರ ಮಳೆ ಪ್ರಾರಂಭವಾಗುವುದರಿಂದ, ಅರಣ್ಯದೊಳಗೆ ನೀರು ನಿಲ್ಲುವುದು ಮತ್ತು ರಸ್ತೆಗಳು ಹಾಳಾಗುವುದರಿಂದ ವಾಹನಗಳ ಸಂಚಾರ ಕಠಿಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 1 ರಿಂದ ಈ ಸಂರಕ್ಷಿತ ಪ್ರದೇಶವನ್ನು ಪ್ರವಾಸಿಗರಿಗಾಗಿ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಪ್ರಸ್ತುತ ವಿಸ್ತರಣೆಯು ವನ್ಯಜೀವಿ ಪ್ರೇಮಿಗಳಿಗೆ ಹುಲಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಹತ್ತಿರದಿಂದ ವೀಕ್ಷಿಸಲು ಹೆಚ್ಚಿನ ಅವಕಾಶವನ್ನು ಒದಗಿಸಲಿದೆ.