ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಮಂಗಳೂರಿನಲ್ಲಿ ಶನಿವಾರ ನಡೆದ 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026' ದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿ 320 ಕಿ.ಮೀ. ಕರಾವಳಿ ಪ್ರದೇಶವಿದೆ. ಇಲ್ಲಿ ಪ್ರಕೃತಿ ಸಂಪತ್ತಿನ ಜತೆಗೆ, ಸುಂದರ ಸಮುದ್ರ ತೀರವಿದೆ. ಗೋವಾ ಹಾಗೂ ನಮಗೆ ಇರುವ ವ್ಯತ್ಯಾಸವೇನು? ಅಲ್ಲಿರುವ ಸೌಂದರ್ಯ ನಮ್ಮಲ್ಲೂ ಇವೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಏಳೆಂಟು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚೆ ಮಾಡಲಾಯಿತು. ಆಗ ಪ್ರವಾಸೋದ್ಯಮ ಅಂತಿಮ ನೀತಿಯನ್ನು ತಡೆ ಹಿಡಿಯುವಂತೆ ಹೇಳಿದೆ. ಕರಾವಳಿ ಭಾಗದಲ್ಲಿ ನಾವು ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಇಲ್ಲಿರುವ ಅಡಚಣೆ ಹೇಗೆ ಸರಿಪಡಿಸಬಹುದು. ಕಾನೂನು ಚೌಕಟ್ಟಿನಲ್ಲಿ ನಿವಾರಣೆ ಮಾಡಿ ನೂತನ ನೀತಿ ತರಬೇಕು ಎಂದು ಹೇಳಿದೆ ಎಂದರು.

ಇದನ್ನೂ ಓದಿ: ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಜಡ್ ಕಾನೂನು ಸರಳೀಕರಣ: ಡಿ.ಕೆ.ಶಿವಕುಮಾರ್‌

ಬಹಳಷ್ಟು ಮಂದಿ ವಿದೇಶದಲ್ಲಿ ಇರುವವರು, ಮುಂಬೈ, ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿಗಳು ತಮ್ಮ ಸ್ವಂತ ಊರಲ್ಲಿ ಏನಾದರೂ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದಾರೆ. ಅವರುಗಳು ಸರ್ಕಾರದಿಂದ ಅನುಕೂಲ ಮಾಡಿಕೊಟ್ಟರೆ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ. ಈ ಕಾರಣಕ್ಕೆ ನಾನು ವಿಧಾನಸಭೆ ಸೇರಿದಂತೆ ಹಲವಾರು ಕಡೆ ಇದರ ಬಗ್ಗೆ ಮಾತನಾಡಿದ್ದೇನೆ ಎಂದರು.

ಇಲ್ಲಿ ಖಾಸಗಿಯವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸರ್ಕಾರ ಒಂದಷ್ಟು ಮೂಲಸೌಕರ್ಯಗಳನ್ನು ಒದಗಿಸಿಕೊಡುತ್ತದೆ. ಜತೆಗೆ ಅನುಕೂಲತೆ, ಅನಾನುಕೂಲತೆ, ಸಮಸ್ಯೆಗಳನ್ನ ಚರ್ಚೆ ನಡೆಸಬೇಕಿದೆ. ಈ ಭಾಗದ ಎಲ್ಲಾ ಶಾಸಕರ ಬಳಿ ಈ ಬಗ್ಗೆ ಮಾತನಾಡಿದ್ದೇನೆ.‌ ಎಲ್ಲರೂ ಬಹಳ ಆಸಕ್ತಿ ತೋರಿದ್ದಾರೆ ಎಂದರು.

ಈ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಜತೆ ಚರ್ಚೆ ಮಾಡಿದಾಗ ಮಂಗಳೂರಿನಲ್ಲೇ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ಹೇಳಿದರು. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚೆಸುವಾಗ ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ನಂಬಿದ್ದೇನೆ. ಹೀಗಾಗಿ ಇಂದು ನಿಮ್ಮ ಜತೆ ಚರ್ಚೆ ಮಾಡಲು ಬಂದಿದ್ದೇನೆ. ನಮ್ಮ ಈ ಪ್ರಯತ್ನಕ್ಕೆ ನಾವು ಕೈಜೊಡಿಸುತ್ತೇವೆ ಎಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಈ ಭಾಗದ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯಲಿದೆ ಎಂದರು.

ಈ ಭಾಗಕ್ಕೆ ಮತ್ತೆ ಮರುಜೀವ ನೀಡಲು ಈ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಈ ಭಾಗ ರಾತ್ರಿ 7 ರ ನಂತರ ಸ್ತಬ್ಧವಾಗುತ್ತದೆ ಎಂದು ನಾನು ಈ ಹಿಂದೆ ಹೇಳಿದ್ದೇನೆ. ಕೆಲವರು ಸ್ವಾಗತಿಸಿದರು, ಕೆಲವರು ಟೀಕಿಸಿದರು. ನನ್ನ ಮಾತನ್ನು ಸುಳ್ಳು ಮಾಡುವ ಛಲ ಬರಲಿ ಎಂದು ನಾನು ಟೀಕೆ ಮಾಡಿದ್ದೆ. ಇಂದು ನಾನು ಎಲ್ಲಾ ಉದ್ಯಮದವರನ್ನು ಈ ಸಮಾವೇಶಕ್ಕೆ ಆಹ್ವಾನಿಸಿದ್ದೇನೆ. ನಿಮ್ಮ ಅಭಿಪ್ರಾಯ ಸ್ವೀಕರಿಸಲು ನಾವು ಬದ್ಧವಾಗಿದ್ದೇವೆ. ನೀವು ಮುಕ್ತವಾಗಿ ನಿಮ್ಮ ಸಲಹೆಗಳನ್ನು ನೀಡಿ, ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಹಣಕಾಸು ಸ್ಥಿತಿಗೆ ಅನುಗುಣವಾಗಿ ನಾವು, ಸಿಎಂ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ಮಾಡಿ ಸಚಿವ ಸಂಪುಟದ ಮುಂದೆ ಪ್ರಸ್ತಾಪ ಮಾಡುತ್ತೇವೆ ಎಂದರು.

coastal tourism

ನಮ್ಮ ಯುವಕರ ಶ್ರಮ, ಪ್ರತಿಭೆ ಕರಾವಳಿ ಭಾಗದ ಅಭಿವೃದ್ಧಿಗೆ ಬಳಕೆಯಾಗಬೇಕು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಕರಾವಳಿ, ಮಲೆನಾಡು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಇಲ್ಲಿನ ಸಂಪತ್ತು ಯುವಕರ ಕ್ರಿಯಾಶೀಲತೆ ಬಳಸಿಕೊಂಡು ಈ ಭಾಗದ ಅಭಿವೃದ್ಧಿ ಮಾಡಬೇಕು. ನಮ್ಮ ಯುವಕರ ಪ್ರತಿಭೆ, ಶ್ರಮ ಕರಾವಳಿ ಭಾಗದ ಅಭಿವೃದ್ಧಿಗೆ ಬಳಕೆಯಾಗಬೇಕುʼ ಎಂದು ತಿಳಿಸಿದರು.

ಕರಾವಳಿ, ಮಲೆನಾಡು ಭಾಗದ ಯುವಕರು ಹೊರದೇಶ ಹಾಗೂ ಊರುಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತಿದ್ದಾರೆ. ಅವರ ಪ್ರತಿಭೆಯನ್ನು ನಾವು ಬಳಸಿಕೊಳ್ಳಬೇಕು. ಇವರಿಗೆ ಅಗತ್ಯ ಸೌಲಭ್ಯ, ಪ್ರೋತ್ಸಾಹ ಕೊಟ್ಟರೆ ಕರಾವಳಿ ಭಾಗದಲ್ಲೇ ಹೆಜ್ಜೆಗುರುತು ಮೂಡಿಸಬಹುದು. ಹೀಗಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ನಾನೊಬ್ಬ ಅಥವಾ ನಾಲ್ಕೈದು ಜನ ಅಧಿಕಾರಿಗಳು ಇದನ್ನು ಮಾಡಲು ಆಗುವುದಿಲ್ಲ. ಈ ಹಿಂದೆ ಸೇವೆ ಸಲ್ಲಿಸಿದ ಅಧಿಕಾರಿಗಳು ಇದರ ಬಗ್ಗೆ ಉತ್ತಮ ಅಂಶಗಳನ್ನು ಗುರುತಿಸಿದ್ದಾರೆ ಎಂದರು.

ಸಿಆರ್‌ಜಡ್, ರಕ್ಷಣಾ ಇಲಾಖೆ, ಕರಾವಳಿ ಅಭಿವೃದ್ಧಿ ಇಲಾಖೆ ಹೀಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಹೇಳಿದ್ದೇನೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಸಹ ಪಡೆಯಲಾಗುವುದು. ಯಾವುದನ್ನೂ ಸಹ ಗುಟ್ಟಾಗಿ ಮಾಡುವುದಿಲ್ಲ. ಸಭೆಯಲ್ಲಿ ಬಂದ ಅಭಿಪ್ರಾಯಗಳನ್ನು ಸಾರ್ವಜನಿಕರ ಗಮನಕ್ಕೆ ತರಲಾಗುತ್ತದೆ. ಯಾವುದೇ ಬದಲಾವಣೆ ಮಾಡಬೇಕು ಎಂದರೂ ಮಾಡಲಾಗುವುದು.‌ ಒಟ್ಟಾರೆ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಇಲ್ಲಿ ಉತ್ತಮವಾದ ಪಂಚತಾರ ಹೊಟೇಲ್‌ಗಳಿಲ್ಲ. ಕೇರಳ, ಗೋವಾ ಹೇಗಿವೆ ಎಂದು ಚರ್ಚೆ ನಡೆಸಲು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.