ಭಾರತೀಯ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್ ಅವರನ್ನು ಸ್ವಿಟ್ಜರ್‌ಲ್ಯಾಂಡ್ ಪ್ರವಾಸೋದ್ಯಮ ಸಂಸ್ಥೆಯ ಭಾರತದ ನೂತನ ಸ್ನೇಹ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಪ್ರವಾಸೋದ್ಯಮದ ಸಿಇಒ ಮಾರ್ಟಿನ್ ನೈಡೆಗ್ಗರ್ ಈ ಮಾಹಿತಿ ಹಂಚಿಕೊಂಡರು. ಭಾರತೀಯ ಪ್ರವಾಸಿಗರಲ್ಲಿ ಸ್ವಿಟ್ಜರ್‌ಲ್ಯಾಂಡ್ ಪ್ರವಾಸದ ಆಸಕ್ತಿಯನ್ನು ಹೆಚ್ಚಿಸುವುದು ಹಾಗೂ ಯುವ ಪೀಳಿಗೆಗೆ ಅಲ್ಲಿನ ವಿವಿಧ ಪ್ರವಾಸಿ ಅನುಭವಗಳನ್ನು ಪರಿಚಯಿಸುವುದು ಈ ಸಹಯೋಗದ ಉದ್ದೇಶವಾಗಿದೆ.

ಪ್ರವಾಸಿಗರು ಪ್ರಸಿದ್ಧ ತಾಣಗಳ ಜತೆಗೆ ಕಡಿಮೆ ಪರಿಚಿತವಲ್ಲದ ಸ್ಥಳಗಳನ್ನೂ ಅನ್ವೇಷಿಸುವಂತೆ ಸಂಸ್ಥೆಯ ‘ಟ್ರಾವೆಲ್ ಬೆಟರ್’ ಪರಿಕಲ್ಪನೆಯ ಪ್ರಮುಖ ಭಾಗವಾಗಿದೆ. ಈ ಅಭಿಯಾನದ ಟ್ರೇಲರ್‌ನಲ್ಲಿ ಜೆಮಿಮಾ ಅವರ ಇಂಟರ್‌ಲಾಕನ್ ಮತ್ತು ಜ್ಯೂರಿಕ್ ಪ್ರವಾಸದ ಕ್ಷಣಗಳನ್ನು ಪರಿಚಯಿಸಲಾಗಿದೆ. ಇಂಟರ್‌ಲಾಕನ್‌ನಲ್ಲಿ ಅವರು ಜೆಟ್‌ಬೋಟ್ ಸವಾರಿ, ಸ್ವಿಸ್ ಚಾಕೊಲೆಟ್ ತಯಾರಿಕೆ ಹಾಗೂ ಬಾಲೆನ್‌ಬರ್ಗ್ ತೆರೆದ ವಸ್ತುಸಂಗ್ರಹಾಲಯದ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದಾರೆ. ಜಂಗ್‌ಫ್ರೌಯೋಚ್‌ನಲ್ಲಿ ಹಿಮದ ಅನುಭವ ಪಡೆದ ಅವರು, ಜ್ಯೂರಿಕ್‌ನಲ್ಲಿ ಸೈಕ್ಲಿಂಗ್, ಇ-ಬೋಟ್ ಸವಾರಿ ಹಾಗೂ ನಗರದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಈ ಪ್ರವಾಸದಲ್ಲಿ ಪ್ರಮುಖವಾಗಿ ತೋರಿಸಲಾಗಿದೆ. ಈ ಸಹಯೋಗದ ಭಾಗವಾಗಿ ಜೆಮಿಮಾ ನಾಲ್ಕು ಋತುಗಳಲ್ಲೂ ಸ್ವಿಟ್ಜರ್‌ಲ್ಯಾಂಡ್‌ನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಸಿದ್ಧ ಆಕರ್ಷಣೆಗಳು, ಸ್ಥಳೀಯ ಸಂಸ್ಕೃತಿ ಮತ್ತು ವಿಭಿನ್ನ ಪ್ರವಾಸಿ ಅನುಭವಗಳನ್ನು ಭಾರತೀಯ ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಸ್ವಿಟ್ಜರ್‌ಲ್ಯಾಂಡ್ ಪ್ರವಾಸೋದ್ಯಮದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದ್ದು, ಯುವ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಈ ಅಭಿಯಾನ ನೆರವಾಗುವ ನಿರೀಕ್ಷೆಯಿದೆ.