ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಂಪಿ, ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ಹೆಲಿಪೋರ್ಟ್‌ಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಚೀಮತನೆ ನಡೆಸಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (KSIIDC) ಮೂಲಕ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ.ಚಿಕ್ಕಮಗಳೂರಿನ ಹಿರೇಮಗಳೂರು ಮತ್ತು ಚಿಕ್ಕಮಗಳೂರು ಗ್ರಾಮಗಳ ಸಮೀಪ ಸುಮಾರು 137 ಎಕರೆ ಪ್ರದೇಶದಲ್ಲಿ ವಿಮಾನಪಟ್ಟಿ ಹಾಗೂ ಹೆಲಿಪೋರ್ಟ್‌ ಒಳಗೊಂಡ ಸಮಗ್ರ ಸೌಲಭ್ಯ ನಿರ್ಮಿಸುವ ಯೋಜನೆಯಿದೆ.

ಇಲ್ಲಿ ಪ್ರಯಾಣಿಕರ ಟರ್ಮಿನಲ್‌, ಹೆಲಿಕಾಪ್ಟರ್‌ಗಳ ನಿಲುಗಡೆ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ವಿಜಯನಗರ ಜಿಲ್ಲೆಯ ಹಂಪಿಯ ಕಮಲಾಪುರ ಸಮೀಪ ಸುಮಾರು 10 ಎಕರೆ ಪ್ರದೇಶದಲ್ಲಿ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚಿಕ್ಕತೂರು ಗ್ರಾಮದಲ್ಲಿ ಸುಮಾರು 7.2 ಎಕರೆ ಪ್ರದೇಶದಲ್ಲಿ ಹೆಲಿಪೋರ್ಟ್‌ ನಿರ್ಮಿಸುವ ಯೋಜನೆಯಿದೆ. ಚಿಕ್ಕಮಗಳೂರಿನ ಪ್ರಯಾಣಿಕರ ಟರ್ಮಿನಲ್‌ನಲ್ಲಿ ಆಗಮಿಸುವ 20 ಮತ್ತು ನಿರ್ಗಮಿಸುವ 20 ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾವನೆಯಿದೆ.

ಚೆಕ್‌-ಇನ್‌ ಕೌಂಟರ್‌ಗಳು, ಆಸನ ವ್ಯವಸ್ಥೆ, ಬ್ಯಾಗೇಜ್‌ ಟ್ರಾಲಿಗಳು ಮತ್ತು ಭದ್ರತಾ ತಪಾಸಣೆ ಸೌಲಭ್ಯಗಳೂ ಯೋಜನೆಯ ಭಾಗವಾಗಿವೆ. ಈ ಯೋಜನೆಗಳು ಜಾರಿಗೆ ಬಂದರೆ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಸುಧಾರಿಸುವುದರ ಜತೆಗೆ ಪ್ರವಾಸಿಗರ ಸಂಚಾರ ಸುಗಮವಾಗುವ ನಿರೀಕ್ಷೆಯಿದೆ. ಯೋಜನೆಗಳ ಅಂತಿಮ ರೂಪುರೇಷೆ ಸಿದ್ಧಪಡಿಸುವ ಮೊದಲು ಪ್ರವಾಸಿಗರ ಸಂಖ್ಯೆ, ಪ್ರಯಾಣಿಕರ ಬೇಡಿಕೆ, ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಮತ್ತು ಭವಿಷ್ಯದ ಹೆಲಿಕಾಪ್ಟರ್‌ ಸಂಚಾರದ ಅಗತ್ಯಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯ ಪರಿಸರ ಮತ್ತು ವಿಮಾನಯಾನ ಸಂಬಂಧಿತ ಅನುಮತಿಗಳನ್ನು ಪಡೆದ ಬಳಿಕ ಮುಂದಿನ ಹಂತದ ಕಾಮಗಾರಿಗಳು ನಡೆಯಲಿವೆ.