ಚೀನಾದ ಬ್ಯುಸಿನೆಸ್ ವೀಸಾ: ಭಾರತೀಯ ಕಂಪನಿಗಳಿಗೆ ಸಂಕಷ್ಟ
ಚೀನಾಕ್ಕೆ ಉದ್ಯಮ ಸಂಬಂಧಿತ ಕೆಲಸಗಳಿಗಾಗಿ ತೆರಳುವ ಭಾರತೀಯ ಕಂಪನಿಗಳ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಗೆ ಬ್ಯುಸಿನೆಸ್ ವೀಸಾ ಪಡೆಯುವುದು ಸವಾಲಾಗಿ ಪರಿಣಮಿಸಿದೆ.
ಚೀನಾಕ್ಕೆ ಉದ್ಯಮ ಸಂಬಂಧಿತ ಕೆಲಸಗಳಿಗಾಗಿ ತೆರಳುವ ಭಾರತೀಯ ಕಂಪನಿಗಳ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಗೆ ಬ್ಯುಸಿನೆಸ್ ವೀಸಾ ಪಡೆಯುವುದು ಸವಾಲಾಗಿ ಪರಿಣಮಿಸಿದೆ.
ಕೆಲವು ಭಾರತೀಯ ಕಂಪನಿಗಳ ಚೀನಾ ಬ್ಯುಸಿನೆಸ್ ವೀಸಾ ಅರ್ಜಿಗಳ ಅನುಮೋದನೆ ಪ್ರಮಾಣ ಕೇವಲ ಶೇ.20ರಿಂದ 40ರಷ್ಟಿದ್ದು, ಕೆಲವು ಸಂಸ್ಥೆಗಳಲ್ಲಿ ನಿರಾಕರಣೆ ಪ್ರಮಾಣ ಶೇ.95ರವರೆಗೆ ತಲುಪಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ ಇಂಥ ಅರ್ಜಿಗಳಿಗೆ ಬಹುತೇಕ ಸುಲಭವಾಗಿ ಅನುಮೋದನೆ ದೊರೆಯುತ್ತಿತ್ತು. ಆದರೆ, ಈಗ ಅರ್ಜಿಗಳ ಪರಿಶೀಲನೆ ಹೆಚ್ಚಾಗಿದ್ದು, ಪ್ರಕ್ರಿಯೆಯೂ ನಿಧಾನ ಹಾಗೂ ಅನಿಶ್ಚಿತವಾಗಿದೆ.
ಚೀನಾದ ಮೇಲೆ ಅವಲಂಬಿತವಾಗಿರುವ ಉತ್ಪಾದನಾ, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಕ್ಷೇತ್ರದ ಕಂಪನಿಗಳಿಗೆ ಈ ಬೆಳವಣಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ಉದ್ಯೋಗಿಗಳು ಸಮಯಕ್ಕೆ ವೀಸಾ ಪಡೆಯದ ಕಾರಣ ಕಾರ್ಖಾನೆ ಭೇಟಿ, ಉಪಕರಣ ಅಳವಡಿಕೆ, ತಾಂತ್ರಿಕ ಕಾರ್ಯ, ಮಾತುಕತೆ ಸೇರಿದಂತೆ ಹಲವು ಕೆಲಸಗಳು ಮುಂದೂಡಲ್ಪಡುತ್ತಿವೆ. ಕೆಲ ಕಂಪನಿಗಳು ಚೀನಾದ ಬದಲು ಸಿಂಗಾಪುರ, ಥಾಯ್ಲೆಂಡ್, ಮಲೇಷ್ಯಾ ಮತ್ತು ಹಾಂಕಾಂಗ್‌ನಲ್ಲಿ ಸಭೆ ನಡೆಸಲು ಮುಂದಾಗಿವೆ. ಚೀನಾ ಬಿಸಿನೆಸ್ ವೀಸಾ ಸಂಪೂರ್ಣ ನಿಷೇಧವಾಗಿಲ್ಲ. ಆದರೆ, ಅನುಮೋದನೆ ಪ್ರಮಾಣ ಕುಸಿದಿದೆ.