ಬೆಂಗಳೂರಿನ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರಿನ ಆತ್ಮ' ಹೆಸರಿನ ಸುಂದರ ಹಾಗೂ ಬೃಹತ್ ಕಲಾತ್ಮಕ ಶಿಲ್ಪವನ್ನು ಲೋಕಾರ್ಪಣೆ ಮಾಡಲಾಗಿದೆ. ಸ್ಪೇನ್‍ನ ಖ್ಯಾತ ಕಲಾಕಾರ ಜೌಮೆ ಪ್ಲೆನ್ಸಾ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಶಿಲ್ಪವನ್ನು ಟರ್ಮಿನಲ್-2ರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಬಯೊಕಾನ್ ಫೌಂಡೇಷನ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್)ಸಹಯೋಗದಲ್ಲಿ ಈ ಕಲಾಕೃತಿಯನ್ನು ಸ್ಥಾಪಿಸಲಾಗಿದೆ. ಭಾರತದಲ್ಲಿನ ಸ್ಪೇನ್ ರಾಯಭಾರಿ ಜುವಾನ್ ಆಂಟೋನಿಯೊ ಮಾರ್ಚ್ ಪೂಜೋಲ್ ಅವರು ಈ ಕಲಾಕೃತಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಬಯೊಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್ ಮತ್ತು ಕಲಾಕೃತಿಯ ರೂವಾರಿ ಜೌಮೆ ಪ್ಲೆನ್ಸಾ ಉಪಸ್ಥಿತರಿದ್ದರು.

ಇದನ್ನೂ ಓದಿ: ನೀಲಕುರಂಜಿ ಹೂವುಗಳಿಗೆ ಅಪಾಯ

Untitled design - 2026-04-28T182016.532

ಕಲಾಕೃತಿಯ ವಿಶೇಷತೆಗಳೇನು?

ಬಣ್ಣ ಬಳಿದಿರುವ ಸ್ಟೇನ್‍ಲೆಸ್ ಸ್ಟೀಲ್ ಲೋಹದಿಂದ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಇದು 500 x 319 x 375 ಸೆಂ.ಮೀ ಗಾತ್ರ ಹೊಂದಿದೆ. ಬೆಂಗಳೂರು ನಗರವು ಹೇಗೆ ಭಿನ್ನ-ವಿಭಿನ್ನ ಸಂಸ್ಕೃತಿಗಳು, ನಾವೀನ್ಯತೆ ಹಾಗೂ ಸೃಜನಶೀಲತೆಯ ಸಂಗಮವಾಗಿದೆ ಎಂಬುದನ್ನು ಈ ಕಲಾಕೃತಿ ಪ್ರತಿನಿಧಿಸುತ್ತದೆ. ಇದರ ಕಲಾವಿದ ಜೌಮೆ ಪ್ಲೆನ್ಸಾ ಅವರು ಶಿಕಾಗೊ, ನ್ಯೂಯಾರ್ಕ್, ಲಂಡನ್, ಟೋಕಿಯೊ, ಬಾರ್ಸಿಲೋನಾ,ಮ್ಯಾಡ್ರಿಡ್ ಸೇರಿದಂತೆ ಜಗತ್ತಿನ ಬಹುದೊಡ್ಡ ಮಹಾನಗರಗಳಲ್ಲಿ ತಮ್ಮ ಸಾರ್ವಜನಿಕ ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಯೊಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ‘ನಗರವೊಂದರ ಅಭಿವೃದ್ಧಿ ಎಂದರೆ ಕೇವಲ ಮೂಲ ಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಲ್ಲ.ಕಲೆ ಮತ್ತು ಸಂಸ್ಕೃತಿಯಲ್ಲೂ ಹೂಡಿಕೆ ಮಾಡುವುದು ಅತ್ಯಗತ್ಯ ಎಂಬುದು ಬಯೊಕಾನ್ ಫೌಂಡೇಷನ್‍ನ ನಂಬಿಕೆಯಾಗಿದೆ. ಜೌಮೆ ಪ್ಲೆನ್ಸಾ ಅವರ ಈ ಕಲಾಕೃತಿಯು, ಜಾಗತಿಕವಾಗಿ ಸಂಪರ್ಕ ಹೊಂದಿರುವ ಜತೆಗೆ ನಮ್ಮ ಮೂಲ ವೈವಿಧ್ಯತೆಯನ್ನು ಎತ್ತಿಹಿಡಿಯುತ್ತದೆ. ದಿನನಿತ್ಯ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ ಲಕ್ಷಾಂತರ ದೇಶ-ವಿದೇಶಿ ಪ್ರಯಾಣಿಕರಿಗೆ ಈ 'ಬೆಂಗಳೂರಿನ ಆತ್ಮ' ಶಿಲ್ಪವು ಉದ್ಯಾನ ನಗರಿಯ ಮರೆಯಲಾಗದ ನೆನಪನ್ನು ಕಟ್ಟಿಕೊಡಲಿದೆ ಎಂದು ಹೇಳಿದರು.