ಉತ್ತರಾಖಂಡದ ಇಬ್ಬರು ಪುಟ್ಟ ಪರ್ವತಾರೋಹಿಗಳು ತಮ್ಮ ಸಾಹಸದಿಂದ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. 9 ವರ್ಷದ ರೆಯಾನ್ಶ್ ಪಂತ್ ಮತ್ತು 10 ವರ್ಷದ ಪ್ರಿಶಾ ರಾವತ್ ಆಫ್ರಿಕದ ಅತಿ ಎತ್ತರದ ಶಿಖರ ಮೌಂಟ್ ಕಿಲಿಮಂಜಾರೋ ಏರಿ, ಈ ಸಾಧನೆ ಮಾಡಿದ ಉತ್ತರಾಖಂಡದ ಅತ್ಯಂತ ಕಿರಿಯ ಪರ್ವತಾರೋಹಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮುದ್ರಮಟ್ಟದಿಂದ 5,895 ಮೀಟರ್ ಎತ್ತರದಲ್ಲಿರುವ ಕಿಲಿಮಂಜಾರೋದ ಉಹುರು ಪೀಕ್‌ ತಲುಪುವ ಮೂಲಕ ಇಬ್ಬರೂ ತಮ್ಮ ಸಾಹಸವನ್ನು ಪೂರ್ಣಗೊಳಿಸಿದ್ದಾರೆ.

Untitled design - 2026-08-27T130410.499

ಟ್ರೆಕ್ ದಿ ಹಿಮಾಲಯಾಸ್ ತಂಡದ ಪ್ರಕಾರ, ರೆಯಾನ್ಶ್ ಮತ್ತು ಪ್ರಿಶಾ ಆಗಸ್ಟ್ 16ರಂದು ತಮ್ಮ ಚಾರಣ ಆರಂಭಿಸಿದ್ದರು. ದಟ್ಟ ಮಳೆಕಾಡಿನಿಂದ ಆರಂಭವಾದ ಪ್ರಯಾಣವು ಕ್ರಮೇಣ ತೆರೆದ ಹುಲ್ಲುಗಾವಲು, ಎತ್ತರದ ಮರುಭೂಮಿ ಪ್ರದೇಶ, ಕಲ್ಲಿನ ಜ್ವಾಲಾಮುಖಿ ಭೂಪ್ರದೇಶ ಮತ್ತು ಹಿಮನದಿಗಳಿರುವ ಪ್ರದೇಶಗಳ ಮೂಲಕ ಸಾಗಿತ್ತು. ಎತ್ತರ ಹೆಚ್ಚಾದಂತೆ ಹವಾಮಾನ ಹಾಗೂ ಭೂಪ್ರದೇಶ ಸವಾಲಾಗಿ ಪರಿಣಮಿಸಿತ್ತು.

ಆಗಸ್ಟ್ 24ರಂದು ಇಬ್ಬರೂ 5,895 ಮೀಟರ್ ಎತ್ತರದ ಉಹುರು ಪೀಕ್ ತಲುಪಿದರು. ಒಟ್ಟು 11 ಮಂದಿ ಇದ್ದ ಚಾರಣ ತಂಡದ ಭಾಗವಾಗಿದ್ದ ಈ ಮಕ್ಕಳ ಸಾಧನೆ, ವಯಸ್ಸು ಸಾಹಸಕ್ಕೆ ಅಡ್ಡಿಯಲ್ಲ ಎಂಬುದನ್ನು ತೋರಿಸಿದೆ. ಕಿಲಿಮಂಜಾರೋ ಆಫ್ರಿಕದ ಅತ್ಯುನ್ನತ ಶಿಖರವಾಗಿದ್ದು, ಇದು ಸುಪ್ತ ಜ್ವಾಲಾಮುಖಿಯೂ ಆಗಿದೆ. ಈ ಸಾಧನೆ ಯುವ ಪೀಳಿಗೆಯಲ್ಲಿ ಸಾಹಸ ಪ್ರವಾಸ ಮತ್ತು ಪರ್ವತಾರೋಹಣದ ಆಸಕ್ತಿಗೆ ಪ್ರೇರಣೆ ನೀಡುವಂತಿದೆ.