• ಹೊಸ್ಮನೆ ಮುತ್ತು

ಕೆಳದಿ ಸಂಸ್ಥಾನವು ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಸಮೃದ್ಧವಾದ ರಾಜವಂಶಗಳಲ್ಲಿ ಒಂದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಈ ನಾಯಕರ ಪ್ರಥಮ ರಾಜಧಾನಿಯಾಗಿತ್ತು. ಕೆಳದಿ ರಾಜವಂಶದ ಅರಸರಲ್ಲಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಹಾಗೂ ಹಿರಿಯ ವೆಂಕಟಪ್ಪ ನಾಯಕ ಅತ್ಯಂತ ಪ್ರಸಿದ್ಧರು. ಅದರಲ್ಲೂ ಶಿವಪ್ಪ ನಾಯಕ ಜಾರಿಗೆ ತಂದ ಭೂಕಂದಾಯ ಪದ್ಧತಿಯು ಇತಿಹಾಸದಲ್ಲೇ ಅತ್ಯಂತ ಜನಪ್ರಿಯವಾಗಿದ್ದು, ಇದನ್ನು ʻಶಿವಪ್ಪ ನಾಯಕನ ಶಿಸ್ತುʼ ಎಂದೇ ಕರೆಯಲಾಗಿದೆ.

ಇದನ್ನೂ ಓದಿ:ಗಂಡು ಭೂಮಿಯ ವೀರ ಯೋಧರ ಚರಿತೆಯ ನಾನು ಹಾಡುವೆ!

ಜನಜನಿತ ಕಥೆಯಂತೆ…

ಕೆಳದಿಯ ನಾಯಕರ ಮೂಲದ ಕುರಿತು ಒಂದು ಜನಜನಿತ ಐತಿಹ್ಯವಿದೆ. ಅದರ ಪ್ರಕಾರ, ಕೆಳದಿಯ ಚೌಡಪ್ಪ ನಾಯಕ ಒಮ್ಮೆ ಹೊಲವನ್ನು ಉಳುತ್ತಿದ್ದಾಗ ಆತನ ನೇಗಿಲಿಗೆ ನಿಧಿಯ ಕೊಪ್ಪರಿಕೆ ಸಿಗುತ್ತದೆ. ಆದರೆ ಅದನ್ನು ಹೊರತೆಗೆಯಲು ಹೆದರಿದ ಆತನಿಗೆ, ಅಂದೇ ರಾತ್ರಿ ಒಂದು ಕನಸು ಬೀಳುತ್ತದೆ. ಆ ನಿಧಿಯನ್ನು ಪಡೆಯಬೇಕಾದರೆ ನರಬಲಿ ನೀಡಬೇಕೆಂಬುದೇ ಆ ಕನಸಿನ ಸಾರವಾಗಿರುತ್ತದೆ. ಚೌಡಪ್ಪ ನಾಯಕನ ಮನೆಯಲ್ಲಿ ಯಾದವ ಮತ್ತು ಮುರಾರಿ (ಎಡವ ಮತ್ತು ಮುರಾರಿ) ಎಂಬ ನಿಷ್ಠಾವಂತ ಸೇವಕರಿದ್ದರು. ಈ ವಿಷಯ ತಿಳಿದ ಅವರು ತಮ್ಮ ಒಡೆಯನ ಏಳಿಗೆಗಾಗಿ ತಾವೇ ಸ್ವತಃ ಬಲಿಯಾಗಲು ಸಿದ್ಧರಾಗುತ್ತಾರೆ. ಅವರ ಆ ತ್ಯಾಗದ ನಂತರ, ಅವರ ಹೆಂಡತಿಯರಾದ ಮಾರಿ ಮತ್ತು ದುರ್ಗಿಯರೂ 'ಸಹಗಮನʼ ಮಾಡಿಕೊಳ್ಳುತ್ತಾರೆ.

ಸೇವಕರ ತ್ಯಾಗದಿಂದ ದೊರೆತ ಅಪಾರ ಸಂಪತ್ತಿನ ಸಹಾಯದಿಂದ ಚೌಡಪ್ಪ ನಾಯಕ ಒಂದು ಸಣ್ಣ ಸೈನ್ಯವನ್ನು ಕಟ್ಟುತ್ತಾನೆ. ಪಾಳೇಗಾರನಾಗಿ ಆಳ್ವಿಕೆ ಆರಂಭಿಸುತ್ತಾನೆ. ಮುಂದೆ ಕೆಳದಿಯು ವೀರಭೂಮಿ ಎಂಬುದನ್ನು ಅರಿತು, ಅಲ್ಲಿಯೇ ವಿಜಯನಗರಕ್ಕೆ ಅಧೀನನಾಗಿ ತನ್ನ ಸಾಮ್ರಾಜ್ಯ ಸ್ಥಾಪಿಸುತ್ತಾನೆ. ಹೀಗೆ, ಒಬ್ಬ ಸಾಮಾನ್ಯ ರೈತ, ಅಪ್ರತಿಮ ಸಾಮ್ರಾಜ್ಯವೊಂದರ ಸ್ಥಾಪಕನಾದ.

Untitled design (17)

ಕಾಷ್ಠ ಗೊಂಬೆಗಳ ಇತಿಹಾಸ

ಚೌಡಪ್ಪ ನಾಯಕ ತನ್ನ ಏಳಿಗೆಗಾಗಿ ಜೀವತೆತ್ತ ನಿಷ್ಠಾವಂತ ಸೇವಕರ ಸ್ಮರಣಾರ್ಥವಾಗಿ ಕಾಷ್ಠ ಗೊಂಬೆಗಳನ್ನು ನಿರ್ಮಿಸಿದ. ಅವುಗಳನ್ನು ಪ್ರತಿವರ್ಷ ಜರುಗುವ ರಾಮೇಶ್ವರ ದೇವರ ತೇರಿನ ಸಂದರ್ಭದಲ್ಲಿ ರಥದಲ್ಲಿಟ್ಟು ಎಳೆಯುವ ಸಂಪ್ರದಾಯವನ್ನು ಜಾರಿಗೆ ತಂದ. ಇದು ಇಂದಿಗೂ ನಡೆದುಕೊಂಡು ಬಂದಿದೆ. ಪ್ರಸ್ತುತ ದೇಗುಲದ ಆವರಣದ ಜಗುಲಿಯಲ್ಲಿ ಕಾಣಬರುವ ಈ ಪ್ರಸಿದ್ಧ ಕಾಷ್ಠ ಶಿಲ್ಪಗಳು, ತಮ್ಮ ಇತಿಹಾಸ, ಆಕರ್ಷಕ ಆಕಾರ ಮತ್ತು ಬಣ್ಣಗಳಿಂದ ಇಂದಿಗೂ ಸಂದರ್ಶಕರ ಮನಸೆಳೆಯುತ್ತಿವೆ.

ಯಾವುದೇ ಒಂದು ಮಹೋನ್ನತ ಅಧಿಕಾರ ಅಥವಾ ಸಾಮ್ರಾಜ್ಯದ ಉದಯ ಕೇವಲ ವ್ಯಕ್ತಿಯೊಬ್ಬನ ಶೌರ್ಯದಿಂದ ಮಾತ್ರ ಸಾಧ್ಯವಾಗುವುದಿಲ್ಲ; ಅದರ ಯಶಸ್ಸಿನ ಆಳದಲ್ಲಿ ಮತ್ತೊಬ್ಬರ ಪರಮೋನ್ನತ ತ್ಯಾಗದ ಅಡಿಪಾಯವಿರುತ್ತದೆ. ಅದಕ್ಕೊಂದು ಸಾಕ್ಷಿಯೇ ಈ ಸೇವಕರ ತ್ಯಾಗ.

ಅಧಿಕಾರದ ಉತ್ತುಂಗಕ್ಕೇರಿದ ನಂತರ ಸೇವಕರ ತ್ಯಾಗಕ್ಕೆ ಗೌರವ ಸಲ್ಲಿಸಿ, ಸಂಪ್ರದಾಯದ ರೂಪದಲ್ಲಿ ಅವರನ್ನು ಅಮರರಾಗಿಸಿದ ಕಾರ್ಯ, ಚೌಡಪ್ಪ ನಾಯಕರು ಪಡೆದ ರಾಜವೈಭವಕ್ಕೆ ನಿಜವಾದ ಯೋಗ್ಯತೆ ಮತ್ತು ಮೌಲ್ಯವನ್ನು ಒದಗಿಸಿದೆ. ಕೃತಜ್ಞತೆಯಿಲ್ಲದ ಅಧಿಕಾರ ಕೇವಲ ಆಡಳಿತವಾಗಿ ಉಳಿಯುತ್ತದೆ; ಆದರೆ ತ್ಯಾಗವನ್ನು ಸ್ಮರಿಸುವ ನಾಯಕತ್ವವು ತಲೆಮಾರುಗಳ ದಾರಿದೀಪವಾಗಿ ಅಮರವಾಗುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಈ ಪ್ರಸಂಗವು ಕೇವಲ ರಾಜವಂಶದ ಕಥೆಯಾಗಿ ಉಳಿಯದೆ ಮಾನವೀಯ ಮೌಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Untitled design (15)

ಚಂದ್ರಂಗೆ ರಾಹು ಅಡ್ಡ ಬಂದಲ್ಲಿ

ಒಂದು ಬಾಹ್ಯಾಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಖಗೋಳಶಾಸ್ತ್ರೀಯ ಘಟನೆಯನ್ನು 'ಗ್ರಹಣ' ಎನ್ನುತ್ತೇವೆ. ವಿಸ್ತಾರವಾದ ಬಾನಂಗಳದ ಈ ವಿಸ್ಮಯಗಳ ಕುರಿತು ಇಂದು ವಿಜ್ಞಾನ ನಮಗೆ ಕರಾರುವಾಕ್ಕಾಗಿ ತಿಳಿಸಿಕೊಟ್ಟಿದೆ. ಆದರೆ ಪುರಾತನ ಕಾಲದಲ್ಲಿ ಗ್ರಹಣಗಳ ಕುರಿತು ಅನೇಕ ದಂತಕಥೆಗಳಿದ್ದವು. ಮಹಾ ಕರ‍್ಕೋಟಕ ರಾಹು, ತನ್ನ ವಿಷದ ಹೆಡೆಯಿಂದ ಚಂದ್ರನನ್ನು ಮಿಸುಕಾಡದಂತೆ ಹಿಡಿದು ನುಂಗುತ್ತಾನೆ ಎಂಬುದು ಚಂದ್ರ ಗ್ರಹಣದ ಕುರಿತು ಆ ಕಾಲದ ಕಲ್ಪನೆಯಾಗಿತ್ತು.

ಅಂದಿನ ಕಾಲದ ಈ ಕಲ್ಪನೆಯನ್ನು ಶಿಲ್ಪಿಯೊಬ್ಬ ಕಲ್ಲಿನಲ್ಲಿ ಸಾಂಕೇತಿಕವಾಗಿ ಕಡೆದಿಟ್ಟಿರುವುದನ್ನು ಇಂದು ನಾವು ಕಾಣಬಹುದು. ಶಿಲ್ಪಿಯ ಕರಕುಶಲತೆಗೆ ಹಾಗೂ ಸೃಜನಶೀಲತೆಗೆ ಸಾಕ್ಷಿಯಾಗಿರುವ ಈ ಕೆತ್ತನೆಯಲ್ಲಿ ರಾಹುವಿನ ಆಕ್ರೋಶ ಮತ್ತು ಚಂದ್ರನ ಭಯ ಎದ್ದು ಕಾಣುತ್ತವೆ. ಈ ಸುಂದರ ಶಿಲ್ಪಕಲೆಯನ್ನು ಕೆಳದಿಯ ರಾಮೇಶ್ವರ ದೇವಸ್ಥಾನದ ಸಮುಚ್ಚಯದ ಗೋಡೆಯಲ್ಲಿ ಕಾಣಬಹುದಾಗಿದೆ.

Untitled design (16)

ನಾದ ಹೊಮ್ಮಿಸುವ ಶಿಲಾ ಕಂಬ

ವಿಸ್ಮಯ, ಅಗೋಚರ, ತರ್ಕಕ್ಕೆ ನಿಲುಕದ ಎಷ್ಟೋ ವಿಚಾರಗಳು ನಮ್ಮ ಸುತ್ತಮುತ್ತ ಇರುತ್ತವೆ. ಅಂಥದ್ದೇ ಒಂದು ವಿಸ್ಮಯ ನಾದ ಹೊಮ್ಮಿಸುವ ಕಂಬ ಕೆಳದಿಯಲ್ಲಿದೆ. ಸಾಧಾರಣ ಕಲ್ಲಿನಂತೆ ಕಂಡರೂ, ಈ ಕಂಬ ನಿಜಕ್ಕೂ ಕೌತುಕದ ವಿಷಯ. ಈ ಕಲ್ಲಿನ ಕಂಬವನ್ನು ಮೃದುವಾಗಿ ತಟ್ಟಿದಾಗ ಒಂದು ವಿಧದ ನಿನಾದ ಹೊರಹೊಮ್ಮುತ್ತದೆ. ಕೆಳದಿಯಲ್ಲಿರುವ ಈ ಕಂಬವು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ನಾದ ವೈಶಿಷ್ಟ್ಯದಿಂದ ಮಹತ್ವ ಪಡೆದಿದೆ. ಇದು ಕೇವಲ ಕಲ್ಲಲ್ಲ, ಅಂದಿನ ಶಿಲ್ಪಿಗಳು ಶಬ್ದ ತರಂಗಗಳ ಬಗ್ಗೆ ಹೊಂದಿದ್ದ ಅಪಾರ ಜ್ಞಾನದ ಕುರುಹು. ಪ್ರವಾಸಿಗರ ಅತಿಯಾದ ಕುತೂಹಲ ಮತ್ತು ಹಾವಳಿಗೆ ತುತ್ತಾಗಿ ಈ ಅಪರೂಪದ ಕಲ್ಲು ಕಂಬ ಇಂದು ಹಾನಿಗೊಳಗಾಗಿದೆ. ಈ ಅಪರೂಪದ ಕಂಬವನ್ನು ಕೆಳದಿ ವೀರಭದ್ರೇಶ್ವರ ದೇವಸ್ಥಾನದ ಹಿಂಬದಿಯ ಗೋಡೆಯಲ್ಲಿ ಕಾಣಬಹುದು. ಈ ಇಡೀ ದೇಗುಲವು ಕೆಳದಿ ನಾಯಕರ ಕಾಲದ ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದ ಗೋಡೆಗಳ ಮೇಲೆ ಅದ್ಭುತ ಶಿಲಾ ಕೆತ್ತನೆಗಳನ್ನು ಕಾಣಬಹುದು.

Untitled design (18)

ಹಿಂದೂ ಪುರಾಣಗಳಲ್ಲಿ ಉಲ್ಲೇಖಿತ ಅಪಾರ ಶಕ್ತಿಯ ಎರಡು ತಲೆಯ ಕಾಲ್ಪನಿಕ ಪಕ್ಷಿ ‘ಗಂಡಭೇರುಂಡ’ದ ಕೆತ್ತನೆಯನ್ನು ಕೆಳದಿ ವೀರಭದ್ರ ದೇಗುಲದ ಮೇಲ್ಚಾವಣಿಯಲ್ಲಿ ಕಾಣಬಹುದು. ಗಂಡಭೇರುಂಡ ಪೌರಾಣಿಕ ಕಲ್ಪನೆ ಮತ್ತು ಕರ್ನಾಟಕದ ರಾಜವಂಶಗಳ ಪರಂಪರೆಯ ವಿಶಿಷ್ಟ ಸಂಕೇತ. ಒಂದೇ ಶರೀರ, ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿದ ಎರಡು ತಲೆಗಳನ್ನು ಹೊಂದಿದ ಒಂದು ದೈವಿಕ ಪಕ್ಷಿ ಎಂದು ನಂಬಲಾಗಿದೆ. ಅಪಾರ ಶಕ್ತಿ, ಶೌರ್ಯ, ಪರಾಕ್ರಮ ಮತ್ತು ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತದೆ. ದುಷ್ಟಶಕ್ತಿಗಳ ಮೇಲಿನ ವಿಜಯದ ಪ್ರತೀಕವಾದ ಇದು, ತನ್ನ ಅಗಾಧ ಪರಾಕ್ರಮವನ್ನು ಬಿಂಬಿಸಲು ಆನೆಗಳನ್ನು ತನ್ನ ಕೊಕ್ಕು ಮತ್ತು ನಖಗಳಲ್ಲಿ ಹಿಡಿದುಕೊಂಡಂತೆ ಚಿತ್ರಿಸಲ್ಪಟ್ಟಿದೆ. ವಿಜಯನಗರ ಸಾಮ್ರಾಜ್ಯದ ಅರಸರು ಗಂಡಭೇರುಂಡವನ್ನು ತಮ್ಮ ನಾಣ್ಯಗಳ ಮೇಲೆ ಮುದ್ರಿಸಿದ್ದರು; ಆ ನಂತರ ಮೈಸೂರಿನ ಒಡೆಯರ್ ಸಂಸ್ಥಾನವು ಇದನ್ನು ತನ್ನ ರಾಜಲಾಂಛನವನ್ನಾಗಿ ಬಳಸಿಕೊಂಡಿತು. ಐತಿಹಾಸಿಕವಾಗಿ ಕನ್ನಡಿಗರ ಹೆಮ್ಮೆ ಮತ್ತು ಸಾಂಸ್ಕೃತಿಕ ವೈಭವದ ಗುರುತಾಗಿರುವ ಈ ಚಿಹ್ನೆಯನ್ನು ಪ್ರಸ್ತುತ ಕರ್ನಾಟಕ ಸರಕಾರದ ಅಧಿಕೃತ ರಾಜ್ಯ ಲಾಂಛನವನ್ನಾಗಿ ಉಳಿಸಿಕೊಳ್ಳಲಾಗಿದೆ. ಇಂದಿಗೂ ಸರಕಾರದ ಎಲ್ಲಾ ಅಧಿಕೃತ ಪತ್ರಗಳು, ಕಚೇರಿಗಳು ಮತ್ತು ಸರಕಾರಿ ಬಸ್‌ಗಳಲ್ಲಿ ಗಂಡಭೇರುಂಡ ಪಕ್ಷಿಯ ಚಿತ್ರವಿರುವುದನ್ನು ಕಾಣಬಹುದು. ಇದು ಕೇವಲ ಒಂದು ಪೌರಾಣಿಕ ಪಕ್ಷಿಯಲ್ಲ; ಕರ್ನಾಟಕದ ಅಸ್ಮಿತೆ.