- ರಮೇಶ್‌ ಬಳ್ಳಮೂಲೆ

Road to Heaven-ಈ ರಸ್ತೆಯಲ್ಲಿ ಸಾಗುತ್ತಿದ್ದರೆ ನಿಮ್ಮ ಬಾಯಲ್ಲಿ ತನ್ನಿಂದ ತಾನೇ ಇಂಥದ್ದೊಂದು ಉದ್ಘಾರ ಬಂದೇ ಬರುತ್ತದೆ. ಹೌದು, ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿರುವ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಈ ರಸ್ತೆಯನ್ನು ಸ್ವರ್ಗದ ದಾರಿ ಅಥವಾ ರೋಡ್‌ ಟು ಹೆವೆನ್‌ ಎಂದು ಕರೆಯಲಾಗುತ್ತದೆ. ಪ್ರಕೃತಿ ವಿಸ್ಮಯದ ಜತೆಗೆ ನೇರ, ಉದ್ದಕ್ಕೆ ಸಾಗುವ ಸಾಗುವ ಈ ಮಾನವ ನಿರ್ಮಿತ ರಸ್ತೆ ಸ್ವರ್ಗವನ್ನೇ ಧರೆಗಿಳಿಸಿದಂತಿದೆ.

ಸುಮಾರು 30 ಕಿಮೀ. ಉದ್ದವಿರುವ ಕಛ್‌-ದೋಲಾವಿರಾ ರಸ್ತೆ ದೇಶ-ವಿದೇಶಿಗರ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿದೆ. ಈ ರಸ್ತೆಯಲ್ಲಿ ಸಾಗಲೆಂದೇ ಪ್ರತಿವರ್ಷ ಸಾವಿರಾರು ಸಂಖ್ಯೆಯ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ: ಕೋಝಿಕೋಡ್‌ನಲ್ಲಿ ಸಮುದ್ರದ ಅಲೆ, ಕೇರಳದ ಕಲೆ ಇದೆ

ಏನಿದು ರೋಡ್‌ ಟು ಹೆವೆನ್‌?

ಕಛ್‌ ಜಿಲ್ಲೆಯಲ್ಲಿರುವ ಈ ರಸ್ತೆ ಖವ್ಡಾವನ್ನು ದೋಲವಿರಾ ಹಳ್ಳಿಯೊಂದಿಗೆ ಸಂಪರ್ಕಿಸುತ್ತದೆ. ಖವ್ಡಾದಿಂದ ಸುಮಾರು 22 ಕಿಮೀ ದೂರದ ಅಧವ್‌ ಎಂಬ ಹಳ್ಳಿಯಿಂದ ಸ್ವರ್ಗದ ಯಾತ್ರೆ ಆರಂಭವಾಗುತ್ತದೆ. ಎರಡೂ ಕಡೆ ನೀಲಿ ನೀಲಿ, ಸ್ವಚ್ಛ ನೀರು, ಅದನ್ನು ಸೀಳಿ ಉದ್ದಕ್ಕೆ ಸಾಗಿರುವ ರಸ್ತೆ ದೂರದ ದಿಗಂತದಲ್ಲಿ ಆಗಸವನ್ನು ಸ್ಪರ್ಶಿಸುವಂತೆ ಭಾಸವಾಗುತ್ತದೆ. ಈ ರಸ್ತೆಯ ಪ್ರಯಾಣ ಸ್ವರ್ಗದಲ್ಲಿ ಸಾಗುತ್ತಿರುವ ಅನುಭವ ನೀಡುತ್ತದೆ. ಒಂದುಕ್ಷಣ ಕನಸೊ ನನಸೊ ಎನ್ನುವ ಗೊಂದಲಕ್ಕೆ ದೂಡುತ್ತದೆ. ಮಾತ್ರವಲ್ಲ ಎರಡೂ ಬದಿ ನೀರು ಆವರಿಸಿರುವುದರಿಂದ ನೀವು ನೀರಿನಲ್ಲೇ ಸಾಗುತ್ತಿದ್ದಿರೇನೋ ಎನ್ನುವ ಅನುಭೂತಿ ಮೂಡಿಸುತ್ತದೆ. ಹಿಂದೆ ಪುರಾಣದಲ್ಲಿ ವಾಸುದೇವ ಆಗಷ್ಟೇ ಜನಿಸಿದ ಕೃಷ್ಣನನ್ನು ಕಂಸನಿಂದ ಕಾಪಾಡಲು ಕರೆದೊಯ್ಯುತ್ತಿದ್ದಾಗ ಸಮುದ್ರ ಇಬ್ಬಾಗವಾಗಿ ನಡುವೆ ದಾರಿಯೊಂದು ಕಂಡುಬಂದಿತ್ತಂತೆ. ಅದೇ ರೀತಿ ನಿಮ್ಮ ಕಣ್ಣ ಮುಂದೆ ರಸ್ತೆ ಸೃಷ್ಟಿಯಾಯ್ತೇ ಎಂದುಕೊಂಡರೆ ಖಂಡಿತಾ ಅದು ಅತಿಶಯೋಕ್ತಿಯಲ್ಲ ಎನ್ನುವುದು ಪ್ರವಾಸಿಗರ ಮಾತು.

Untitled design - 2026-03-23T173917.642

ಬದಲಾಗುತ್ತದೆ ನೋಟ

ವಿಶೇಷ ಎಂದರೆ ರಸ್ತೆಯ ಎರಡೂ ಬದಿಯ ನೋಟ ಕಾಲಕ್ಕೆ ಅನುಗುಣವಾಗಿ ಬದಲಾಗುತ್ತದೆ. ಮಳೆಗಾಲದಲ್ಲಿ ನೀರಿನಿಂದ ಕೂಡಿ ನೀಲ ಸುಂದರಿಯಾಗುವ ರಸ್ತೆಯ ಎರಡು ಬದಿ ಉಳಿದ ವೇಳೆ ಉಪ್ಪು ಮರುಭೂಮಿಯಾಗಿ ಶ್ವೇತ ಸುಂದರಿಯಾಗಿತ್ತದೆ. ನೀರು ಇಳಿದ ನಂತರ, ರಸ್ತೆಯ ಎರಡೂ ಕಡೆ ಬಿಳಿ ಉಪ್ಪಿನ ಮರುಭೂಮಿ ಸೃಷ್ಟಿಯಾಗುತ್ತದೆ. ಇದರ ಮೇಲೆ ಸೂರ್ಯ ರಶ್ಮಿ ಬಿದ್ದು ವಜ್ರದಂತೆ ಹೊಳೆಯುತ್ತದೆ. ಆ ಮೂಲಕ ನಿಮ್ಮ ಪಯಣವನ್ನು ಮತ್ತೊಂದು ರೀತಿಯಲ್ಲಿ ಸ್ಮರಣೀಯವಾಗಿಸುತ್ತದೆ. ಕೆಲವೊಮ್ಮೆ ನಮ್ಮ ಗುರಿಯ ಜತೆಗೆ ಸಾಗುವ ದಾರಿಯೂ ಚೆನ್ನಾಗಿರುತ್ತದೆ ಎನ್ನುವ ಮಾತಿದೆ.ಅದು ಈ ರಸ್ತೆಯ ಪಾಲಿಗೆ ಶೇ.100ರಷ್ಟು ನಿಜ.

ದೋಲವಿರಾ ಎನ್ನುವ ಐತಿಹಾಸಿಕ ಗ್ರಾಮ

ಸ್ವರ್ಗದ ದಾರಿ ನಿಮ್ಮನ್ನು ಅಂತಿಮವಾಗಿ ದೋಲವಿರಾ ಎನ್ನುವ ಐತಿಹಾಸಿಕ ಮಹತ್ವವಿರುವ ಹಳ್ಳಿಗೆ ತಲುಪಿಸುತ್ತದೆ. ರೋಡ್‌ ಟು ಹೆವೆನ್‌ನಂತೆಯೇ ಈ ಗ್ರಾಮವೂ ಅವರ್ಣನೀಯ ಅನುಭೂತಿ ನೀಡುತ್ತದೆ.ದೋಲವಿರಾ ಎನ್ನುವುದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಗ್ರಾಮ. ಭಾರತದ ಅತ್ಯಂತ ಸುಂದರ ತಾಣಗಳಲ್ಲಿ ಇದೂ ಒಂದು. 4,500 ವರ್ಷಗಳ ಹಿಂದಿನ ಸಿಂಧೂ ನಾಗರಿಕತೆಯಲ್ಲಿ ದೋಲವಿರಾ ಅತ್ಯಂತ ಪ್ರಮುಖ ಸ್ಥಳ ಎನಿಸಿಕೊಂಡಿತ್ತು. ಸೂಕ್ತ ನೀರು, ಚರಂಡಿ, ರಸ್ತೆಯನ್ನು ಹೊಂದಿ ಸುಸಜ್ಜಿತ ನಗರ ವ್ಯವಸ್ಥೆಯ ಮೂಲಕ ಶತಮಾನಗಳ ಹಿಂದೆಯೇ ಗಮನ ಸೆಳೆದಿತ್ತು. ಇಲ್ಲಿ ಓಡಾಡುವುದೇ ಒಂದು ದಿವ್ಯ ಅನುಭೂತಿ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ.

ಯಾವಾಗ ಹೋಗಬಹುದು?

ರೋಡ್‌ ಟು ಹೆವೆನ್‌ ಮತ್ತು ಕಛ್‌ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ನವೆಂಬರ್‌ನಿಂದ ಫೆಬ್ರವರಿ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಬೇಸಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶ, ಮಳೆಗಾಲದಲ್ಲಿ ಭಾರಿ ವರ್ಷಧಾರೆ ಕಂಡುಬರುತ್ತದೆ. ಹೀಗಾಗಿ ನೀವು ಚಳಿಗಾಲದಲ್ಲಿ ಭೇಟಿ ನೀಡಿದರೆ ಉತ್ತಮ. ಬೇಸಗೆಯಲ್ಲಿ ಕೆಲವೊಮ್ಮೆ ಇಲ್ಲಿನ ಉಷ್ಣಾಂಶ 45 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಯಾವಾಗ ವಾತಾವರಣ ಬದಲಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಮಳೆಗಾಲದಲ್ಲಿ ಅದರಲ್ಲಿಯೂ ಜುಲೈ-ಆಗಸ್ಟ್‌ನಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಇದೇ ಕಾರಣಕ್ಕೆ ಚಳಿಗಾಲ ಎಲ್ಲ ರೀತಿಯಿಂದಲೂ ಅನುಕೂಲ ಎನ್ನುತ್ತಾರೆ ಸ್ಥಳೀಯರು. ಶುಭ್ರ ಆಕಾಶ, ಆಗಾಗ ಕವಿಯುವ ಮಂಜು ಫೊಟೋಗ್ರಾಫಿಗೆ ಹೇಳಿ ಮಾಡಿಸಿದಂತಿರುತ್ತದೆ. ಜತೆಗೆ ಈ ವಾತಾವರಣ ನಿಮ್ಮ ಭೇಟಿಯನ್ನು ಮತ್ತಷ್ಟು ದೈವಿಕವಾಗಿಸುತ್ತದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತ ನಿಮ್ಮ ಪಾಲಿಗೆ ಲೈಫ್‌ ಟೈಮ್‌ ಮೆಮೊರಿ ಆಗಿರಲಿದೆ.

Untitled design - 2026-03-23T173924.615

ದಾರಿ ಯಾವುದಯ್ಯ ಈ ಸ್ವರ್ಗಕ್ಕೆ?

ರೋಡ್‌ ಟು ಹೆವೆನ್‌ಗೆ ಸಮೀಪದ ನಗರ ಭುಜ್‌. ಭುಜ್‌ನಿಂದ ಇಲ್ಲಿಗೆ 80-85 ಕಿಮೀ. ಅಂತರವಿದೆ. ನೀವು ಭುಜ್‌ಗೆ ವಿಮಾನ ಅಥವಾ ರೈಲಿನಲ್ಲಿ ಸಂಚರಿಸಿ ಬಳಿಕ ಅಲ್ಲಿಂದ ಟೂ ವ್ಹೀಲರ್‌ ಅಥವಾ ಕಾರ್‌ನಲ್ಲಿ ತೆರಳಬಹುದು.

ಇಲ್ಲಿಗೆ ಭೇಟಿ ನೀಡುವುದನ್ನೂ ಮರೆಯಬೇಡಿ

ರೋಡ್‌ ಟು ಹೆವೆನ್‌ಗೆ ಪ್ರವಾಸ ಹೋಗುವಾಗ ಸಮೀಪದ ಸ್ಥಳಗಳಿಗೂ ಭೇಟಿ ನೀಡುವುದನ್ನು ಮರೆಯಬೇಡಿ.

* ವಿಜಯ ವಿಲಾಸ ಅರಮನೆ

* ಕಾಲೊ ಡಂಗರ್‌

* ಕಛ್‌ ಮ್ಯೂಸಿಯಂ

* ಮಾಂಡವಿ ಬೀಚ್‌

* ಶ್ರೀ ಸ್ವಾಮಿನಾರಾಯಣ ದೇವಸ್ಥಾನ

* ಅಯ್ನಾ ಮಹಲ್‌

* ಮರಿನ್‌ ನ್ಯಾಶನಲ್‌ ಪಾರ್ಕ್‌

* ಕಛ್‌ ಡೆಸರ್ಟ್‌ ವನ್ಯಜೀವಿ ಅಭಯಾರಣ್ಯ

* ನಾರಾಯಣ ಸರೋವರ

* ರೋಹಾ ಕೋಟೆ

* ಧಿನೋಧಾರ್‌ ಹಿಲ್ಸ್‌

* ಸಿಯೋಟ್‌ ಕೇವ್ಸ್‌

* ಕಛ್‌ ಗ್ರೇಟ್ ಇಂಡಿಯನ್ ಬಸ್ಟರ್ಡ್ ಅಭಯಾರಣ್ಯ

* ಹಮಿರ್‌ಸರ್‌ ಸರೋವರ

* ಭದ್ರೇಶ್ವರ ಜೈನ ದೇವಾಲಯ

* ಗ್ರೇಟ್ ರನ್ ಆಫ್ ಕಛ್