ಪರಾಶರ ಪರ್ವತ: ಹಿಮದ ನಾಡಲ್ಲಿ ಅಧ್ಯಾತ್ಮದ ಲಯ
ಹಿಮಾಲಯ ಪರ್ವತಗಳು, ಮುಗಿಲೆತ್ತರದಲ್ಲಿ ಪ್ರಶಾಂತ ವಾತಾವರಣ, ಸುಂದರ ಸರೋವರ, ತಣ್ಣನೆಯ ಗಾಳಿ, ಎತ್ತರಕ್ಕೆ ಏರಿದಂತೆ ಮೈಕೋರೈಯುವ ಚಳಿ, ಅತ್ತಿಂದಿತ್ತ ಕುಣಿದು ಕುಪ್ಪಳಿಸುವಷ್ಟು ಸಂತಸ ತರುವ ಪರಿಸರ, ಪರ್ವತದ ಮೇಲೆ ಮುನಿಗಳ ಆಲಯಗಳು, ಅಲ್ಲಿಲ್ಲೊಂದು ಮನೆಗಳು, ಇದು ಪರಾಶರ ಪರ್ವತದ ಅಮೋಘ ಚಿತ್ರಣ.
- ಪೂರ್ಣಚಂದ್ರ
ಭಾರತದ ಉತ್ತರ ಭಾಗದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಗಳು ಎಲ್ಲಾ ಆಯಾಮಗಳಿಂದಲೂ ವಿಶೇಷತೆಯಿಂದ ಕೂಡಿವೆ. ತಮ್ಮ ಒಡಲಾಳದಲ್ಲಿ ಪ್ರಕೃತಿ ಸೌಂದರ್ಯ, ಪವಿತ್ರತೆ, ನಿಗೂಢತೆ ಎಲ್ಲವನ್ನು ಬಚ್ಚಿಟ್ಟುಕೊಂಡಿವೆ. ಗಂಗೆ, ಯಮುನೆ, ಸಿಂಧು ಹಾಗೂ ಬ್ರಹ್ಮಪುತ್ರ ನದಿಗಳ ಉಗಮ ಸ್ಥಾನಗಳು ಇಲ್ಲಿವೆ. ಅದೆಷ್ಟೋ ಪುಣ್ಯಕ್ಷೇತ್ರಗಳಿಗೂ ಇದು ತವರು. ಕೇದಾರನಾಥ, ಬದರಿನಾಥ, ವೈಷ್ಣೋದೇವಿ ಹೀಗೆ ಹತ್ತು ಹಲವು ತೀರ್ಥಕ್ಷೇತ್ರಗಳು ಇಲ್ಲಿವೆ. ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಮುಂತಾದ ರಾಜ್ಯಗಳಲ್ಲಿ ಹಿಮಾವೃತ ವಲಯಗಳಿವೆ. ಹೆಸರಲ್ಲೇ ಹಿಮವನ್ನು ಒಳಗೊಂಡ ರಾಜ್ಯ ಹಿಮಾಚಲ ಪ್ರದೇಶ. ಶಿಮ್ಲಾ, ಕುಲು, ಮನಾಲಿ, ಧರ್ಮಶಾಲಾ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡು ಪ್ರವಾಸಿಗರ ನೆಚ್ಚಿನ ರಾಜ್ಯ. ಹಿಮಾಚಲದ ಮಂಡಿ ಜಿಲ್ಲೆಯ ಹಿಮಾಲಯದ ತಪ್ಪಲಿನಲ್ಲಿನ ಪರಾಶರ ಪರ್ವತ ನಮ್ಮನ್ನು ಪರವಶವಾಗಿಸಿದ ತಾಣ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ: ಭಾರತಕ್ಕೆ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಭೇಟಿ
ಪರ್ವತದ ಮೇಲೆ ಮುನಿಯ ದೇವಾಲಯ
ಹಿಮಾಲಯ ಪರ್ವತಗಳು, ಮುಗಿಲೆತ್ತರದಲ್ಲಿ ಪ್ರಶಾಂತ ವಾತಾವರಣ, ಸುಂದರ ಸರೋವರ, ತಣ್ಣನೆಯ ಗಾಳಿ, ಎತ್ತರಕ್ಕೆ ಏರಿದಂತೆ ಮೈಕೋರೈಯುವ ಚಳಿ, ಅತ್ತಿಂದಿತ್ತ ಕುಣಿದು ಕುಪ್ಪಳಿಸುವಷ್ಟು ಸಂತಸ ತರುವ ಪರಿಸರ, ಪರ್ವತದ ಮೇಲೆ ಮುನಿಗಳ ಆಲಯಗಳು, ಅಲ್ಲಿಲ್ಲೊಂದು ಮನೆಗಳು, ಇದು ಪರಾಶರ ಪರ್ವತದ ಅಮೋಘ ಚಿತ್ರಣ. ಸಮುದ್ರಮಟ್ಟದಿಂದ 2730 ಮೀ. ಎತ್ತರದಲ್ಲಿ ಈ ಪರಾಶರ ಪರ್ವತವಿದೆ. ಪರ್ವತದ ತುದಿಯಲ್ಲಿನ ಸರೋವರ ಇಲ್ಲಿನ ರುದ್ರ ರಮಣೀಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. 13- 14ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುವ ಪರಾಶರಮುನಿಗಳ ದೇವಾಲಯ ಇಲ್ಲಿರುವುದು ಮತ್ತಷ್ಟು ವಿಶೇಷ.

ಪರಾಶರ ಯಾರು?
ಪರಾಶರಮುನಿಗಳ ದೇವಾಲಯವನ್ನು ಪಗೋಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಒಂದೇ ದೇವದಾರು ವೃಕ್ಷದಿಂದ ಕಟ್ಟಲಾಗಿದೆ ಎಂದು, ಕಟ್ಟಲು ಸುಮಾರು 12 ವರ್ಷಗಳ ಸಮಯ ಹಿಡಿಯಿತು ಎಂದೂ ಹೇಳಲಾಗುತ್ತದೆ. ಮೂಲ ಮಹಾಭಾರತದ ಕರ್ತೃ ವ್ಯಾಸ ಮಹರ್ಷಿಗಳ ತಂದೆ, ಶಕ್ತಿ ಋಷಿಯ ಪುತ್ರ ಪರಾಶರ ಮುನಿಗಳು ಈ ದೇವಾಲಯದಲ್ಲಿ ಪೂಜಿಸಲ್ಪಡುತ್ತಾರೆ. ಪುರಾಣದ ಪುಟಗಳಲ್ಲಿ ಪರಾಶರರು ಮಹತ್ವದ ಪಾತ್ರ ವಹಿಸಿದ್ದಾರೆ. ಈ ಪರ್ವತ ಮತ್ತು ಸರೋವರಕ್ಕೂ ಮುನಿಗಳ ಹೆಸರೇ ಇದೆ.
ಚಳಿಗಾಲದಲ್ಲಿ ಈ ಪರ್ವತ ಸಂಪೂರ್ಣ ಹಿಮದಿಂದ ಆವೃತವಾಗುತ್ತದೆ. ಚಾರಣಕ್ಕೂ ಹೇಳಿಮಾಡಿಸಿದಂಥ ಸ್ಥಳ. ಹಿಮಾಲಯದ ಬೆರಗನ್ನು ಅನುಭವಿಸಲು, ಒಮ್ಮೆಯಾದರೂ ಭಾರತದ ಉತ್ತರ ಧ್ರುವದಲ್ಲಿನ ಹಿಮಾಚಲದ ಪರಾಶರ ಶಿಖರವನ್ನು ಏರಬೇಕು.

ದಾರಿ ಹೇಗೆ?
ಹಿಮಾಚಲ ಪ್ರದೇಶದ ಮಂಡಿಯಿಂದ 50 ಕಿಮೀ ದೂರದಲ್ಲಿ ಈ ಸ್ಥಳವಿದೆ. ಇಲ್ಲಿಗೆ ತಲುಪಲು ಬಸ್ಸಿನ ವ್ಯವಸ್ಥೆಯಿದೆ. ಪರ್ವತದ ಕೆಳಗಿನ ಹಳ್ಳಿಗಳಿಂದ ಶಿಖರದ ತುದಿಗೆ ವಾಹನ ಸೌಲಭ್ಯದ ವ್ಯವಸ್ಥೆ ಇರುತ್ತದೆ.
ಮಾಹಿತಿ ಪೆಟ್ಟಿಗೆ:
- ಚಳಿಗಾಲದಲ್ಲಿ ವಾಹನ ಸಂಚಾರ ಕಷ್ಟ ಸಾಧ್ಯ. ಸ್ವಂತ ವಾಹನಗಳಲ್ಲಿ ಬಂದರೂ ಹಿಮಾವೃತ ರಸ್ತೆಗಳಲ್ಲಿ ಸಂಚರಿಸುವುದು ಅಪಾಯ.
- ಶಿಖರದ ತುದಿಯಲ್ಲಿ ಹೋಮ್‌ಸ್ಟೇಗಳು ಇವೆ. ಕ್ಯಾಂಪಿಂಗ್ ಮಾಡಲು ಅವಕಾಶವಿದೆ.
- ಜೂನ್ ತಿಂಗಳಲ್ಲಿ ಬಂದರೆ ಪರ್ವತದ ತುದಿಯವರೆಗೂ ಆಹಾರ ತಲುಪುತ್ತದೆ. ದೇವಾಲಯದ ದರ್ಶನ ಪಡೆದು, ಸರೋವರದ ಅಂದ ಸವಿದು, ಶಾಂತ ಪರಿಸರದ ಮಧ್ಯೆ ಕಾಲ ಕಳೆಯಬಹುದು.