Tuesday, February 10, 2026
Tuesday, February 10, 2026

ಸಹ್ಯಾದ್ರಿಯ ಶಿಖರದಲ್ಲಿ ಮಹಾಬಲೇಶ್ವರ ಸನ್ನಿದಾನ

ಇದು ಕೃಷ್ಣಾ, ಕೊಯ್ನಾ, ಗಾಯಿತ್ರಿ, ಸಾವಿತ್ರಿ, ವೆನ್ನಾ ಎಂಬ ಐದು ನದಿಗಳ ಸಂಗಮ ಸ್ಥಳದ ಪವಿತ್ರ ನೆಲೆಯಾಗಿದೆ. ಈ ದೇವಾಲಯದಲ್ಲಿ ಹಸುವಿನ ಮುಖ ರೂಪದ ಕಲ್ಲಿನ ಪ್ರತಿಮೆಯ ಬಾಯಿಯಿಂದ ನೀರು ಹೊರ ಚಿಮ್ಮುತ್ತಿರುತ್ತದೆ. ಹಾಗಾಗಿ ಇದಕ್ಕೆ ಗೋಮುಖಿ ಎಂದು ಹೆಸರು. ಐದು ನದಿಗಳ ಸಂಗಮ ತಾಣವಾದ್ದರಿಂದ ಇದಕ್ಕೆ ಪಂಚಗಂಗಾ ಮಂದಿರ ಎಂದು ಕರೆಯಲಾಗುತ್ತದೆ.

  • ವೇದಾವತಿ ಹೆಚ್. ಎಸ್.

ಸಹ್ಯಾದ್ರಿಯ ಪರ್ವತ ಶ್ರೇಣಿಯ ನಡುವೆ ನಿತ್ಯ ಹರಿದ್ವರ್ಣದ ಕಾಡಿನಿಂದ ಸುತ್ತುವರಿದಿರುವ ಸುಂದರ ಪ್ರಶಾಂತವಾದ ತಾಣ ಮಹಾಬಲೇಶ್ವರ. ಈ ಪ್ರವಾಸಿ ತಾಣ ಸಮುದ್ರ ಮಟ್ಟಕ್ಕಿಂತ ಸುಮಾರು 1372 ಮೀಟರ್ ಎತ್ತರದಲ್ಲಿದೆ. ಇದು ಪುಣೆ ನಗರದಿಂದ 120 ಕಿಮೀ ಹಾಗೂ ಮುಂಬೈನಿಂದ 285 ಕಿಮೀ ದೂರದಲ್ಲಿದ್ದು, ಈ ಎರಡೂ ನಗರಗಳಿಂದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಮೂಲಕ ಮಹಾಬಲೇಶ್ವರ ತಲುಪಬಹುದು.

ಇದನ್ನೂ ಓದಿ: ಇದು ಒನ್ ಅಂಡ್ ಓನ್ಲೀ ಅಮ್ಮಂದಿರ ’ಮಾ’ರುಕಟ್ಟೆ!

ಸಾಮಾನ್ಯವಾಗಿ ಬೇಸಗೆಯ ಸಮಯದಲ್ಲಿ ತಂಪಾದ ಗಿರಿಧಾಮಗಳಿಗೆ ಪ್ರವಾಸಕ್ಕೆಂದು ಜನರು ಹೋಗುವುದನ್ನು ನೋಡಿದ್ದೇವೆ. ಆದರೆ, ಮಹಾಬಲೇಶ್ವರಕ್ಕೆ ವರ್ಷದ ಎಲ್ಲಾ ಸಮಯದಲ್ಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಇಲ್ಲಿ ಮಳೆಗಾಲ ಇರುತ್ತದೆ. ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಪ್ರವಾಸಿಗರ ಭೇಟಿಗೆ ಉತ್ತಮ ಸಮಯ. ಈ ಸಮಯದಲ್ಲಿ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯ ನೂರ್ಮಡಿಯಾಗಿರುತ್ತದೆ. ಪ್ರವಾಸಕ್ಕೆ ಸ್ವಿಜರ್‌ಲ್ಯಾಂಡ್ ಅಥವಾ ಮಾರಿಶಸ್ ದ್ವೀಪಕ್ಕೆ ಹೋಗಬೇಕಾದ ಅವಶ್ಯಕತೆ ಇಲ್ಲ! ಅಂಥ ಸುಂದರ ತಾಣ ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರದಲ್ಲಿರುತ್ತದೆ.

Untitled design (22)

ಮಹಾಬಲೇಶ್ವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಟ್ರಾಬೆರಿಯನ್ನು ಬೆಳೆಯಲಾಗುತ್ತದೆ. ಇದನ್ನು ‘ಸ್ಟ್ರಾಬೆರಿಯ ರಾಜಧಾನಿ’ ಎಂದು ಕರೆಯುತ್ತಾರೆ. ಇಲ್ಲಿನ ಸ್ಟ್ರಾಬೆರಿ, ಮತ್ತದರ ಜಾಮ್, ಐಸ್‌ಕ್ರೀಮ್, ಮಿಲ್ಕ್‌ಶೇಕ್, ವೈನ್ ಇತ್ಯಾದಿಗಳು ವಿದೇಶಗಳಿಗೂ ರಫ್ತು ಆಗುತ್ತವೆ.

ಮಹಾಬಲೇಶ್ವರಕ್ಕೆ ಹೋದಾಗ ನೋಡಲು ಪ್ರಮುಖ ಸ್ಥಳಗಳು,

ಪ್ರತಾಪ್‌ಗಢ ಕೋಟೆ

ಪ್ರತಾಪ್‌ಗಢ ಮಹಾಲೇಶ್ವರದಿಂದ 21 ಕಿಮೀ ದೂರದಲ್ಲಿದೆ. ಈ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರು 1656ರಲ್ಲಿ ನಿರ್ಮಿಸಿದರು. 1659ರ ನವೆಂಬರ್ 10ರಂದು ಅಫ್ಜಲ್ ಖಾನ್ ಜತೆಗೆ ಶಿವಾಜಿ ಮಹಾರಾಜರು ಹೋರಾಟ ನಡೆಸಿದ ಸ್ಥಳವಿದು. ಇದರ ಎತ್ತರ ಸಮುದ್ರ ಮಟ್ಟದಿಂದ 1080 ಮೀಟರ್. ತುಳಜಾ ಭವಾನಿ ದೇವಾಲಯವನ್ನು ಶಿವಾಜಿ ಮಹಾರಾಜರು ಈ ಕೋಟೆಯಲ್ಲಿ ನಿರ್ಮಿಸಿದ್ದಾರೆ. ಈಗಲೂ ಅಲ್ಲಿನ ಭವಾನಿ ದೇವಿಯ ಪಕ್ಕದಲ್ಲಿ ಶಿವಾಜಿ ಪೂಜಿಸುತ್ತಿದ್ದ ಸ್ಟಟಿಕ ಶಿವಲಿಂಗವನ್ನು, ಮರಾಠಾ ಜನರಲ್ ಹಂಬಿರಾವ್ ಮೋಹಿತೆ ಆರು ಗಂಟೆಯಲ್ಲಿ 600 ಶತ್ರುಗಳನ್ನು ಸಂಹಾರ ಮಾಡಿರುವ ಖಡ್ಗವನ್ನು ನೋಡಬಹುದು. ಕೋಟೆಯೊಳಗೆ ಶಿವಲಿಂಗ, ಅಭಯ ಹನುಮಾನ್ ದೇವಾಲಯವನ್ನು ನೋಡಬಹುದು. 1957ರಲ್ಲಿ ಮರಾಠಾ ಯೋಧ ರಾಜ ಶಿವಾಜಿ ಮಹಾರಾಜರ ಗೌರವಾರ್ಥವಾಗಿ ಕೋಟೆಯಲ್ಲಿ 17 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಈ ಕೋಟೆಯು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮಹಾಬಲೇಶ್ವರ ದೇವಸ್ಥಾನ

ಇದೊಂದು ಪ್ರಾಚೀನ ದೇವಾಲಯ. ಮರಾಠ ಪರಂಪರೆಯನ್ನು ಇಲ್ಲಿ ನೋಡಬಹುದು. ಶಿವನು ಇಲ್ಲಿ ಪ್ರಧಾನ ದೇವತೆ. ಈ ದೇವಾಲಯವು 16ನೆಯ ಶತಮಾನಕ್ಕಿಂತ ಹಿಂದಿನದು. ಹೇಮದಂತ ಶೈಲಿಯ ವಾಸ್ತುಶಿಲ್ಪ ಇದಕ್ಕಿದೆ. ಗರ್ಭಗುಡಿಯಲ್ಲಿ 1500 ವರ್ಷಗಳಷ್ಟು ಹಳೆಯದಾದ 6 ಅಡಿ ಎತ್ತರದ ಸ್ವಯಂಭೂ ಆತ್ಮಲಿಂಗ ಮತ್ತು ಪರಲಿಂಗವಿದೆ. ಈ ದೇವಾಲಯವು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಏಕೆಂದರೆ ಇಲ್ಲಿರುವುದು ರುದ್ರಾಕ್ಷಿ ರೂಪದಲ್ಲಿನ ಲಿಂಗ. ಮರಾಠಾ ಸಾಮ್ರಾಜ್ಯ ಅಡಳಿತದಲ್ಲಿ ಈ ದೇವಾಲಯ ಪ್ರಸಿದ್ಧಿ ಪಡೆದಿತ್ತು. ವರ್ಷವಿಡೀ ಭಕ್ತರು, ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ನವರಾತ್ರಿ, ಮಹಾ ಶಿವರಾತ್ರಿ ಜತೆಗೆ ಇತರ ಹಿಂದೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

Untitled design (25)

ಪಂಚಗಂಗಾ ದೇವಾಲಯ

ಇದು ಕೃಷ್ಣಾ, ಕೊಯ್ನಾ, ಗಾಯಿತ್ರಿ, ಸಾವಿತ್ರಿ, ವೆನ್ನಾ ಎಂಬ ಐದು ನದಿಗಳ ಸಂಗಮ ಸ್ಥಳದ ಪವಿತ್ರ ನೆಲೆಯಾಗಿದೆ. ಈ ದೇವಾಲಯದಲ್ಲಿ ಹಸುವಿನ ಮುಖ ರೂಪದ ಕಲ್ಲಿನ ಪ್ರತಿಮೆಯ ಬಾಯಿಯಿಂದ ನೀರು ಹೊರ ಚಿಮ್ಮುತ್ತಿರುತ್ತದೆ. ಹಾಗಾಗಿ ಇದಕ್ಕೆ ಗೋಮುಖಿ ಎಂದು ಹೆಸರು. ಐದು ನದಿಗಳ ಸಂಗಮ ತಾಣವಾದ್ದರಿಂದ ಇದಕ್ಕೆ ಪಂಚಗಂಗಾ ಮಂದಿರ ಎಂದು ಕರೆಯಲಾಗುತ್ತದೆ. ಈ ಪಂಚಗಂಗಾ ದೇವಾಲಯವನ್ನು 13ನೆಯ ಶತಮಾನದಲ್ಲಿ ಯಾದವ ರಾಜ ಸಿಂಘೋಡಿಯ ನಿರ್ಮಿಸಿದ ಎನ್ನಲಾಗಿದೆ. ಬಳಿಕ ಛತ್ರಪತಿ ಶಿವಾಜಿ ಮಹಾರಾಜರು ಇದನ್ನು ಪುನಃ ನಿರ್ಮಾಣ ಮಾಡಿದರು. ಈ ದೇವಾಲಯ ಶ್ರೀಕೃಷ್ಣನಿಗೆ ಅರ್ಪಿಸಲಾಗಿದ್ದು, ಶ್ರೀಕೃಷ್ಣನ ಸುಂದರವಾದ ವಿಗ್ರಹವನ್ನು ಇಲ್ಲಿ ಕಾಣಬಹುದು.

ಕೃಷ್ಣಬಾಯಿ ದೇವಸ್ಥಾನ

1888ರಲ್ಲಿ ಕೃಷ್ಣಾ ಕಣಿವೆಯ ಮೇಲಿರುವ ಬೆಟ್ಟದ ಮೇಲೆ ರತ್ನಾಗಿರಿಯ ಆಡಳಿಗಾರರಿಂದ ಈ ದೇವಾಲಯವನ್ನು ನಿರ್ಮಿಸಲಾಯಿತು. ಕೃಷ್ಣಬಾಯಿ ದೇವಾಲಯವು ಕೃಷ್ಣ ನದಿಯ ಮೂಲವಾಗಿದೆ. ಈ ದೇವಸ್ಥಾನವು ಶಿವಲಿಂಗವನ್ನು ಮತ್ತು ಸುಂದರ ಕೃಷ್ಣನ ಪ್ರತಿಮೆಯನ್ನು ಹೊಂದಿದೆ. ಇದು ಶಿವನಿಗೆ ಅರ್ಪಿತವಾದ ದೇವಾಲಯ. ಈ ದೇವಾಲಯವು ಕಲ್ಲಿನಿಂದ ಕೆತ್ತಿದ ಹಸುವನ್ನು ಹೊಂದಿದ್ದು, ಅದರ ಬಾಯಿಂದ (ಗೋಮುಖ) ಬರುವ ನೀರನ್ನು ಕೃಷ್ಣಾ ನದಿಯ ಉಗಮ ಸ್ಥಳವೆಂದು ಪರಿಗಣಿಸಲಾಗಿದೆ.

Untitled design (24)

ಮ್ಯಾಪ್ರೋ ಗಾರ್ಡನ್

1959ರಲ್ಲಿ ಮ್ಯಾಪ್ರೋ ಗಾರ್ಡನ್ ಸ್ಥಾಪನೆ ಮಾಡಲಾಯಿತು. ಇಲ್ಲಿನ ಸ್ಟ್ರಾಬೆರಿ ತೋಟ, ಚಾಕೋಲೆಟ್ ಕಾರ್ಖಾನೆ, ಸ್ಟ್ರಾಬೆರಿ ಶೇಕ್‌ಗಳು, ಐಸ್‌ಕ್ರೀಮ್‌ಗಳು ಮತ್ತು ಸಲಾಡ್‌ಗಳು ಪ್ರವಾಸಿಗರನ್ನು ಸೆಳೆಯುತ್ತವೆ. ತಾಜಾ ಸ್ಟ್ರಾಬೆರಿಗಳು ಮತ್ತು ಜಾಮ್‌ಗಳು ಹಾಗೂ ಇತರ ಸ್ಟ್ರಾಬೆರಿ ಉತ್ಪನ್ನಗಳನ್ನೂ ಇಲ್ಲಿ ಖರೀದಿಸಬಹುದು.

ಎಲಿಫೆಂಟ್ಸ್ ಹೆಡ್ ಪಾಯಿಂಟ್

ಸಹ್ಯಾದ್ರಿ ಪರ್ವತ ಶ್ರೇಣಿಯ ತುದಿಯಲ್ಲಿನ ನೈಸರ್ಗಿಕ ಶಿಲಾ ರಚನೆಯಿಂದ ಎಲಿಫೆಂಟ್ಸ್ ಹೆಡ್ ಪಾಯಿಂಟ್‌ ನಿರ್ಮಾಣವಾಗಿದೆ. ಇದರ ಆಕಾರವು ಆನೆಯ ತಲೆ ಮತ್ತು ಸೊಂಡಿಲನ್ನು ಹೋಲುತ್ತದೆ. ಮಹಬಲೇಶ್ವರದ ಈ ಅದ್ಭುತ ವೀಕ್ಷಣಾ ಸ್ಥಳದಲ್ಲಿ ನಿಂತು ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ನೋಡಲು ಬಲು ಸೊಗಸಾಗಿರುತ್ತದೆ.

ಮಹಾಬಲೇಶ್ವರಕ್ಕೆ ಪ್ರವಾಸ ಹೋದಾಗ ಲಿಂಗಮಾಲಾ ಜಲಪಾತ, ವೆನ್ನಾ ಸರೋವರ, ವಿಲ್ಸನ್ ಪಾಯಿಂಟ್, ಬಾಂಬೆ ಪಾಯಿಂಟ್, ಚೈನಾಮನ್ಸ್ ಜಲಪಾತ, ಧೋಬಿ ಜಲಪಾತ, ಕನ್ನಾಟ್ ಶಿಖರ, ಲೋಡ್ವಕ್ ಪಾಯಿಂಟ್, ರಾಜಪುರಿ ಗುಹೆಗಳು, ಬಾಬಿಂಗ್ಟನ್ ಪಾಯಿಂಟ್, ಟೇಬಲ್ ಲ್ಯಾಂಡ್, ಪಾರ್ಸಿ ಪಾಯಿಂಟ್, ಕೇಟ್ ಪಾಯಿಂಟ್, ತಪೋಲಾ, ಪಂಚಗಣಿ, ಹೆಲೆನ್ಸ್ ಪಾಯಿಂಟ್, ಸಿಡ್ನಿ ಪಾಯಿಂಟ್, ಆರ್ಥರ್‌ ಸೀಟ್ ಇವುಗಳನ್ನು ನೋಡಲು ಮರೆಯದಿರಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!