ದಾರಿ ತಪ್ಪಿಸುವ ಲಖನೌದ ಭೂಲ್ ಭುಲೈಯಾ
ಉತ್ತರ ಪ್ರದೇಶವು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಪ್ರಸಿದ್ಧ ಹಿಂದೂ ದೇವಾಲಯಗಳು ಮತ್ತು ಸುಂದರವಾದ ಇಸ್ಲಾಂ ಪ್ರಾರ್ಥನಾ ಮಂದಿರಗಳು ಹಾಗೂ ಸ್ಮಾರಕಗಳ ಅಪೂರ್ವ ಸಂಗಮವಾಗಿದೆ. ಒಂದೆಡೆ ಸನಾತನ ಧರ್ಮದ ಪವಿತ್ರ ಕ್ಷೇತ್ರಗಳು ಕೋಟಿಗಟ್ಟಲೆ ಭಕ್ತರನ್ನು ಆಕರ್ಷಿಸಿದರೆ, ಇನ್ನೊಂದೆಡೆ ನವಾಬರು ಹಾಗೂ ಮೊಘಲ್ ಸಾಮ್ರಾಜ್ಯದ ಕಾಲದ ಭವ್ಯ ಇಸ್ಲಾಮಿಕ್ ವಾಸ್ತುಶಿಲ್ಪಗಳು ಇಸ್ಲಾಮಿನ ಆಕ್ರಮಣದ ವೈಭವವನ್ನು ಸಾರುತ್ತವೆ.
- ವಿನಾಯಕ ಓಣಿ ವಿಘ್ನೇಶ್ವರ
ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ಪ್ರಮುಖ ಇಸ್ಲಾಂ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬಡಾ ಇಮಾಂಬಾಡಾ (ಭೂಲ್ ಭುಲೈಯಾ) ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಅದರ ವಿಶಾಲವಾದ ಅಂಗಳವು ಅತ್ಯಂತ ಸುಂದರ ಹಾಗೂ ವಿಸ್ಮಯಕಾರಿಯಾಗಿದೆ. ಈ ಇಡೀ ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿ ಜನಮನ ಗೆಲ್ಲುವುದು ಇಲ್ಲಿನ ಭೂಲ್ ಭುಲೈಯಾ.
ಇದನ್ನೂ ಓದಿ: ಯುನೆಸ್ಕೋ ಪಟ್ಟಿಗೆ ಸೇರಿದ ಮರಾಠರ ಕೋಟೆಗಳು
ಏನಿದು ಕಥೆ?
1784 ರಲ್ಲಿ, ಈ ಅವಧ್ (ಆಧುನಿಕ ಲಖನೌ) ಪ್ರಾಂತ್ಯವು ಭೀಕರ ಕ್ಷಾಮಕ್ಕೆ ತುತ್ತಾಗಿತ್ತಂತೆ. ಈ ಬರಗಾಲವು ಎಷ್ಟು ತೀವ್ರವಾಗಿತ್ತೆಂದರೆ ಸಾಮಾನ್ಯ ಜನರಿಗಷ್ಟೇ ಅಲ್ಲದೆ, ಶ್ರೀಮಂತರಿಗೂ ಆಹಾರದ ಅಭಾವ ಉಂಟಾಯಿತಂತೆ. ಆ ಸಮಯದಲ್ಲಿ ಅವಧ್ನ ನವಾಬ್ನಾಗಿದ್ದವನು ಆಸಫ್-ಉದ್-ದೌಲಾ. ಅವನು ವಿಕ್ಷಿಪ್ತ, ವಿಚಿತ್ರ ಹವ್ಯಾಸಗಳನ್ನು ಹೊಂದಿದ್ದರೂ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯಿಲ್ಲದ, ಅತ್ಯಂತ ಉದಾರ ಗುಣದವನಾಗಿದ್ದನಂತೆ. ಆದ್ದರಿಂದ ʼಬ್ರೆಡ್ ಸಿಗದಿದ್ದರೆ ಕೇಕ್ ತಿನ್ನಲಿʼ ಎಂದು ಉಡಾಫೆಯ ಮಾತಾಡಿದ ಫ್ರಾನ್ಸ್ನ ರಾಣಿ ಮೇರಿ ಆಂಟೊಯಿನೆಟ್ಳಂತೆ ಮಾಡದೆ, ವಿಶಿಷ್ಟವಾದ ನಿರ್ಧಾರವೊಂದನ್ನು ತೆಗೆದುಕೊಂಡನು. ಅದರಂತೆ ಸಾಮಾನ್ಯ ಜನರು ಹಾಗೂ ಕೆಲಸವಿಲ್ಲದೆ ಕಷ್ಟಪಡುತ್ತಿದ್ದವರಿಗೆ ಆದಾಯ ಮತ್ತು ಉದ್ಯೋಗದ ಮಾರ್ಗವನ್ನು ಸೃಷ್ಟಿಸಲು ಬಡಾ ಇಮಾಂಬಾಡಾದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಈ ಭೀಕರ ಕ್ಷಾಮವು ಸುಮಾರು ಒಂದು ದಶಕದ ಕಾಲ ಮುಂದುವರಿಯಿತು ಮತ್ತು ಸ್ಮಾರಕದ ನಿರ್ಮಾಣವೂ ಅಷ್ಟೇ ಕಾಲ ನಡೆಯಿತು ಎನ್ನಲಾಗಿದೆ. ಕ್ಷಾಮದ ಅವಧಿಯಲ್ಲಿ ಕಾರ್ಮಿಕರಿಗೆ ಉದ್ಯೋಗ ತಪ್ಪಬಾರದು ಎಂಬ ಉದ್ದೇಶದಿಂದ, ಹಗಲಿನಲ್ಲಿ ಕಾರ್ಮಿಕರು ಈ ಕಟ್ಟಡವನ್ನು ನಿರ್ಮಿಸಿದರೆ, ರಾತ್ರಿಯಲ್ಲಿ ಶ್ರೀಮಂತರು ಮತ್ತು ನವಾಬರ ಸಂಸ್ಥಾನದ ಪ್ರಮುಖರು ಆ ನಿರ್ಮಾಣವನ್ನು ಕೆಡವುತ್ತಿದ್ದರು ಎಂದೂ ಹೇಳಲಾಗುತ್ತದೆ. ಈ ಬೃಹತ್ ಇಮಾಂಬಾಡಾದ ನಿರ್ಮಾಣ ಕಾರ್ಯಕ್ಕಾಗಿ ನವಾಬರು ಸುಮಾರು 20,000 ಜನರಿಗೆ ಉದ್ಯೋಗ ನೀಡಿದ್ದರು ಎನ್ನುವ ಕಥೆಗಳು ಪ್ರಚಲಿತದಲ್ಲಿದೆ.

ಸುಂದರ ವಾಸ್ತುಶಿಲ್ಪ
ಭೂಲ್ ಭುಲೈಯಾ ಮೊಘಲ್ ಮತ್ತು ರಾಜಪೂತ ವಾಸ್ತುಶಿಲ್ಪ ಶೈಲಿಗಳ ಸುಂದರ ಸಮ್ಮಿಶ್ರಣವಾಗಿದೆ. ಇದರ ನಿರ್ಮಾಣದಲ್ಲಿ ಯಾವುದೇ ಕಬ್ಬಿಣ ಅಥವಾ ಯುರೋಪಿಯನ್ ಮಾದರಿಯ ಮರಮುಟ್ಟುಗಳನ್ನು ಬಳಸಲಾಗಿಲ್ಲ. ನವಾಬನಿಗೆ ಜನರೆಲ್ಲರೂ ಒಟ್ಟಾಗಿ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಯಾವುದೇ ಬೆಂಬಲಿತ ಕಂಬಗಳಿಲ್ಲದ ಬೃಹತ್ ಸಭಾಂಗಣವನ್ನು ನಿರ್ಮಿಸುವ ಆಸೆಯಿತ್ತು. ಸಾಮಾನ್ಯ ಕಟ್ಟಡ ನಿರ್ಮಾಣ ಪದ್ಧತಿಯ ಪ್ರಕಾರ ಇಷ್ಟೊಂದು ದೊಡ್ಡ ಮೇಲ್ಚಾವಣಿ ಮತ್ತು ಬೃಹತ್ ಗೋಪುರದ ಭಾರವನ್ನು ಹೊರಲು ಮಧ್ಯದಲ್ಲಿ ಕಂಬಗಳ ಅಗತ್ಯವಿರುತ್ತದೆ. ಆದರೆ, ಈ ಇಮಾಂಬಾಡಾದಲ್ಲಿ ಪ್ರಮುಖ ಮಧ್ಯದ ಹಾಲ್ಅನ್ನು ಮಧ್ಯದಲ್ಲಿ ಯಾವುದೇ ಕಂಬಗಳ ಬೆಂಬಲವಿಲ್ಲದೆ ಅದ್ಭುತವಾಗಿ ನಿರ್ಮಿಸಲಾಗಿದೆ. ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕಂಬಗಳಿಲ್ಲದ ಕಮಾನಿನ ಸಭಾಂಗಣಗಳಲ್ಲಿ ಒಂದಾಗಿದೆ. ಮಧ್ಯದಲ್ಲಿ ಯಾವುದೇ ಕಂಬಗಳಿಲ್ಲದೆ ಇಷ್ಟೊಂದು ಬೃಹತ್ ಮೇಲ್ಚಾವಣಿಯ ಭಾರವನ್ನು ಸಮತೋಲನಗೊಳಿಸಿ ನಿಲ್ಲಿಸುವುದಕ್ಕಾಗಿಯೇ ಈ 'ಭೂಲ್ ಭುಲೈಯಾ'ವನ್ನು ವಿನ್ಯಾಸಗೊಳಿಸಲಾಯಿತು. ಕಟ್ಟಡದ ಮೇಲ್ಭಾಗದ ತೂಕವನ್ನು ಹಂಚಲು ಮತ್ತು ಮೇಲ್ಚಾವಣಿಗೆ ಬೆಂಬಲ ನೀಡಲು ಅದರ ಮೇಲೆ ಸಂಕೀರ್ಣವಾದ ಕಾರಿಡಾರ್ಗಳು ಹಾಗೂ ಗೊಂದಲಮಯ ಹಾದಿಗಳ ಜಾಲವನ್ನು ನಿರ್ಮಿಸಲಾಯಿತು.

ದಾರಿ ಯಾವುದಯ್ಯಾ?
ಇದರ ಒಳಗೆ ಇರುವುದೇ ನಿಜವಾದ ಮಜ. ಕ್ಲಿಷ್ಟಕರ ದಾರಿಗಳು ಮತ್ತು ಬಾಗಿಲುಗಳು, ಈ ಭೂಲ್ ಭುಲೈಯಾದಲ್ಲಿ ಗೊಂದಲಮಯವಾದ ಕಾರಿಡಾರ್ ಜಾಲ ಹಾಗೂ ನಾನೂರಕ್ಕೂ ಹೆಚ್ಚು ಒಂದೇ ರೀತಿಯಾಗಿ ಕಾಣುವ ಬಾಗಿಲುಗಳಿವೆ. ಗೈಡ್ಗಳ ಸಹಾಯವಿಲ್ಲದೆ ಒಳಗೆ ಹೋದರೆ ಹೊರಬರುವುದು ಅತ್ಯಂತ ಕಷ್ಟ. ಇಲ್ಲಿನ ಗೋಡೆಗಳಲ್ಲಿ ಅತ್ಯಂತ ಅದ್ಭುತ ಶಬ್ದ ವ್ಯವಸ್ಥೆಯಿದೆ. ಗೋಡೆಯ ಒಂದು ತುದಿಯಲ್ಲಿ ಪಿಸುಗುಟ್ಟಿದರೆ, ಅದು ನೂರಾರು ಅಡಿ ದೂರದಲ್ಲಿರುವ ಗೋಡೆಯ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ! ಇಂಥ ಒಂದು ವಿಶಿಷ್ಟವಾದ ಶಬ್ದ ತಂತ್ರಜ್ಞಾನವನ್ನು ಆ ಕಾಲದಲ್ಲೇ ನಿರ್ಮಿಸಲಾಗಿದೆ. ಗೈಡ್ಗಳು ಪ್ರವಾಸಿಗರನ್ನು ಭೂಲ್ ಭುಲೈಯಾದ ಒಳಗೆ ಕರೆತಂದಾಗ ಕೆಳಗೆ ಹೋಗುವ ದಾರಿಯನ್ನು ಸ್ವತಃ ಹುಡುಕಲು ಹೇಳುತ್ತಾರೆ. ಆದರೆ ಅದಕ್ಕೂ ಮುನ್ನ ಒಂದು ಉಪಾಯವನ್ನು ನೀಡುತ್ತಾರೆ, ಯಾವಾಗಲೂ ನೇರ ಸೂರ್ಯನ ಬೆಳಕು ಬರುವ ದಾರಿಗಳನ್ನು ಹಿಂಬಾಲಿಸಿದರೆ ಅದು ನಿಮ್ಮನ್ನು ಮತ್ತೆ ಪ್ರಾರಂಭದ ಸ್ಥಳಕ್ಕೆ ತಲುಪಿಸುತ್ತದೆ! ಮತ್ತೊಂದು ವಿಚಿತ್ರ ಏನೆಂದರೆ ಪ್ರವೇಶ ದ್ವಾರದಿಂದ ಭೂಲ್ ಭುಲೈಯಾ ಪ್ರವೇಶಿಸಲು ಹಲವಾರು ಮೆಟ್ಟಿಲುಗಳನ್ನು ಹತ್ತುವಾಗ, ಜನರು ತಿಳಿಯದೆ ನೇರವಾಗಿ ಎರಡನೆಯ ಮಹಡಿಗೆ ಏರಿರುತ್ತಾರೆ (ಮೊದಲನೆಯ ಮಹಡಿಗಲ್ಲ). ಹೆಚ್ಚಿನ ಪ್ರವಾಸಿಗರು ಈ ವಿಷಯವನ್ನು ಗಮನಿಸುವುದಿಲ್ಲ. ಹೀಗಾಗಿ, ಮೇಲ್ಚಾವಣಿಯಿಂದ ಕೆಳಗೆ ಇಳಿಯುವಾಗ ಪ್ರತಿಯೊಬ್ಬರೂ ಕೇವಲ ಮೆಟ್ಟಿಲು ಇಳಿಯಬೇಕು ಎಂದೇ ಭಾವಿಸಿರುತ್ತಾರೆ. ಆದರೆ, ಕೆಳಗಿಳಿಯುವ ಹಾದಿಯಲ್ಲಿ ಒಂದು ಹಂತದಲ್ಲಿ, ಪ್ರವೇಶದ್ವಾರದ ದಾರಿಯನ್ನು ತಲುಪಲು ಮೊದಲು ಮೆಟ್ಟಿಲುಗಳನ್ನು ಮೇಲಕ್ಕೆ ಹತ್ತಿ (ಎರಡನೆಯ ಮಹಡಿಗೆ) ನಂತರ ನೆಲಮಹಡಿಗೆ ಕೆಳಗಿಳಿಯಬೇಕಾಗುತ್ತದೆ! ಬರೆಯಲೂ ಕೇಳಲೂ ಗೊಂದಲ ಇಷ್ಟಿದ್ದರೆ, ಇನ್ನು ಅಲ್ಲಿ ಓಡಾಡಲು ಎಷ್ಟು ಗೊಂದಲ ಎಂಬುದನ್ನು ಅನುಭವಿಸಿಯೇ ತಿಳಿಯಬೇಕು! ಒಂದು ವೇಳೆ ಕಂಪೆನಿಯ ಕೆಲಸಕ್ಕೆ ಲಖನೌ ಹೋದರೂ ಒಂದು ಅರ್ಧ ದಿನ ಬಿಡುವು ಮಾಡಿಕೊಂಡು ಇದನ್ನು ನೋಡಿಕೊಂಡೇ ಬರಬೇಕು. ಇದರ ಬಗೆಗಿನ ಅದೆಷ್ಟು ವಿಡಿಯೋ ನೋಡಿದರೂ, ಫೊಟೋ ನೋಡಿದರೂ ಅಲ್ಲಿ ಹೋಗಿ ಸಿಕ್ಕಿಕೊಂಡು ಹೊರಗೆ ಬರಲಾರದೇ ಪೇಚಾಡುವ ಆ ಥ್ರಿಲ್ ಇದೆಯಲ್ಲಾ, ಅದು ಅವಿಸ್ಮರಣೀಯ.
ದಾರಿ ಹೇಗೆ?
ಲಖನೌ ಚಾರ್ಬಾಗ್ ರೈಲ್ವೇ ನಿಲ್ದಾಣದಿಂದ ಇದು ಸುಮಾರು 5 ಕಿಮೀ, ವಿಮಾನ ನಿಲ್ದಾಣದಿಂದ 15 ಕಿಮೀ ದೂರದಲ್ಲಿರುವ ಈ ಸ್ಮಾರಕಕ್ಕೆ ಆಟೋ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.
ಮಾಹಿತಿಗಾಗಿ
ಲಖನೌಗೆ ಭೇಟಿ ನೀಡಲು ಅಕ್ಟೋಬರ್ನಿಂದ ಮಾರ್ಚ್ ತಿಂಗಳುಗಳು ಅತ್ಯಂತ ಸೂಕ್ತ. ಈ ಸಮಯದಲ್ಲಿ ವಾತಾವರಣವು ತಂಪಾಗಿರುತ್ತದೆ ಮತ್ತು ರಜಾದಿನಗಳನ್ನು ಆನಂದಿಸಲು ಸೂಕ್ತವಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿ ತೀವ್ರ ಸೆಖೆ ಇರುವುದರಿಂದ ಶೀತಲ ಋತುವಿನಲ್ಲಿ ಹೋಗುವುದು ಉತ್ತಮ.