• ಅನುಪಮ ರಂಗನಾಥ ಗುಂಡ್ಲುಪೇಟೆ

NIELT ಯಿಂದ ಕ್ಯಾಲಿಕೆಟ್‌ನ ಕಟ್ಟನಂಗಲ್‌ನಲ್ಲ ನಮಗೆ ಎರಡು ವಾರದ ತರಬೇತಿ ಶಿಬಿರ ಇತ್ತು. ಮೈಸೂರಿನಿಂದ ಹೆಚ್ಚುಕಮ್ಮಿ 240 ಕಿಮೀ ಪ್ರಯಾಣದ ಹಾದಿ. ಪ್ರಯಾಣದಲ್ಲಿ ಗುಂಡ್ಲುಪೇಟೆಯ ಮೂಲೆ ಹೊಳೆಯಿಂದಲೇ ನಮ್ಮ ಕಣ್ಣಿಗೆ ರಸದೌತಣ ಶುರುವಾಗಿತ್ತು. ಇದು ಹಸಿರು ಪ್ರಿಯರಿಗೆ ಮರೆಯಲಾಗದ ಪ್ರವಾಸ ಎನ್ನಬಹುದು. ಏಕೆಂದರೆ ಬಂಡೀಪುರ ಮುತಂಗ ಚೆಕ್ ಪೋಸ್ಟ್‌ನಿಂದ ನಾವು ತಲುಪುವ ಸ್ಥಳದವರೆಗೂ ಬೆಟ್ಟ-ಗುಡ್ಡ, ಹಲವು ತಿರುವುಗಳು, ಹೆಮ್ಮರಗಳು, ಆಗಾಗ್ಗೆ ಕಾಡು ಪ್ರಾಣಿಗಳು ನಮ್ಮ ಕಣ್ಣಿಗೆ ಬೀಳುತ್ತವೆ. ನಾಮ್ಮ ತರಬೇತಿ ಮುಗಿದ ನಂತರ ಮತ್ತು ವಾರಾಂತ್ಯದಲ್ಲಿ ನಾವಿದ್ದ ಜಾಗದ ಸುತ್ತಲಿನ ಎಲ್ಲಾ ಪ್ರವಾಸಿ ತಾಣಗಳನ್ನು ನೋಡಿದ್ದು, ಅಲ್ಲಿನ ಸೀಸನಲ್‌ ಫುಡ್‌ ರುಚಿಯನ್ನು ಸವಿದಿದ್ದೂ ಆಯಿತು. ನಾವಿದ್ದ ಸ್ಥಳ ಒಂದು ದೊಡ್ಡ ಕ್ಯಾಂಪಸ್. ಅಲ್ಲಿ ಎಲ್ಲಿನೋಡಿದರು ಅರಳಿನಿಂತ ಹೂಗಳು ಮತ್ತು ಹಚ್ಚಹಸುರಿನ ನೋಟಗಳೇ ನಮ್ಮ ಕಣ್ಣಿಗೆ ಬೀಳುತ್ತವೆ. ಕ್ಯಾಂಪಸ್‌ ಒಳಗೆ ಹೋಗಲು ಮತ್ತು ಆಚೆ ಬರಲು ಎಂಥ ಅಧಿಕಾರಿಯಾಗಿದ್ದರು ಚೆಕ್‌ ಇನ್ ಮತ್ತು ಚೆಕ್‌ ಔಟ್ ಮಾಡಿಸಲೇಬೇಕು.

ಇದನ್ನೂ ಓದಿ: ಶೋಲಾ ಕಾಡಿನ ನಡುವೆ

ಕೃಷ್ಣ ಆಟವಾಡಲು ಬಳಸಿದ್ದ ಕಲ್ಲುಗಳು

ನಾವು ಉಳಿದಿದ್ದ ಕ್ಯಾಂಪಸ್‌ನಿಂದ ಕೇವಲ ಒಂದು ಕಿಮೀ ದೂರದಲ್ಲಿ ಒಂದು ಸುಂದರ ಕೃಷ್ಣನ ದೇವಾಲಯವಿದೆ. ಇಲ್ಲಿ ಒಂದಷ್ಟು ಬಣ್ಣ ಬಣ್ಣದ ಸಣ್ಣ ಕಲ್ಲುಗಳನ್ನು ಇಟ್ಟಿದ್ದಾರೆ. ನೋಡುವಾಗ ಅವು ಥೇಟ್‌ ಅಕ್ವೇರಿಯಮ್‌ನಲ್ಲಿ ಹಾಕುವ ಕಲ್ಲುಗಳಂತೆ ಕಾಣಿಸುತ್ತವೆ. ಆದರೆ, ಅವು ಕೃಷ್ಣನು ಅಟವಾಡುತ್ತಿದ್ದ ಕಲ್ಲುಗಳು ಎಂಬುದು ಇಲ್ಲಿನ ಪ್ರತೀತಿ. ಒಂದು ಹಿತ್ತಾಳೆಯ ದೊಡ್ಡ ಬಟ್ಟಲಿನಲ್ಲಿ ಇವುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಇವುಗಳನ್ನು ನೋಡಿ ನಮಗೆ ಸೋಜಿಗವಾಯಿತು. ದೇವಕಿ ನಂದನ ಆಟವಾಡಿದ್ದ ಕಲ್ಲುಗಳು ಎಂದು ತಿಳಿದ ಮೇಲಂತೂ ಭಕ್ತಿಯೂ ಹೆಚ್ಚಾಗಿತ್ತು.

Untitled design - 2026-03-23T145351.206

ಕೋಝಿಕೋಡ್‌ ಬೀಚ್‌ನಲ್ಲಿ ನೋಟ-ಊಟ

ಕೃಷ್ಣ ದೇವಾಲಯದಿಂದ ಸುಮಾರು 22 ಕಿಮೀ ದೂರದಲ್ಲಿ ಕೋಝಿಕೋಡ್‌ ಬೀಚ್ ಇದೆ. ಇಲ್ಲಿಗೆ ಹೋಗುವ ಅವಕಾಶ ಸಿಕ್ಕಾಗಲೆಲ್ಲ ಸೂರ್ಯಾಸ್ತ ನೋಡುವುದು ನಮಗೆ ರೂಢಿಯಾಗಿತ್ತು. ಇದು ಕೇರಳದ ಮಲಬಾರ್ ಕರಾವಳಿಯ ಒಂದು ಸುಂದರ ಮತ್ತು ಐತಿಹಾಸಿಕ ಬೀಚ್. ರಸ್ತೆ ದಾಟಿದ ಕೂಡಲೆ ಕಣ್ಣಳತೆಯ ದೂರದಲ್ಲಿ ಅಲೆಗಳ ಅಬ್ಬರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿಗೆ ಹತ್ತಿರದಲ್ಲೇ ಡಾಲ್ಪಿನ್ ವೀಕ್ಷಣೆ ಪಾಯಿಂಟ್, ಬೀಚ್ ವಾಕ್, ಸೌತ್ ಪಿಯರ್, ಲಯನ್ ಪಾರ್ಕ್ ಸಹ ನೋಡಬಹುದು. ಯಾರ್ಡ್‌ಯಾನ ಮಾಡಲುಬಹುದು.

ಸ್ಟ್ರೀಟ್‌ನಲ್ಲಿ ಸುತ್ತಾಟ

ಬೀಚ್‌ ಪಕ್ಕದಲ್ಲಿ ಶಾಪಿಂಗ್ ಸ್ಟ್ರೀಟ್‌ ಇದೆ. ಇಲ್ಲಿ ಕಣ್ಣಿಗೆ ಬೇಕಾದ ಎಲ್ಲಾ ವಸ್ತುಗಳು ಸಿಗುತ್ತವೆ. ಕಾಟನ್ ಬಟ್ಟೆ- ಸೀರೆಗಳು, ಅಲಂಕಾರಿಕ ವಸ್ತುಗಳು, ಮಕ್ಕಳ ಅಟಿಕೆಗಳನ್ನು ಕೊಂಡುಕೊಳ್ಳಬಹುದು. ಸಾಕಷ್ಟು ಪ್ರವಾಸಿಗರು ಇಲ್ಲಿ ಸದಾ ಇರುತ್ತಾರೆ. ವಿವಿಧ ಬಗೆಯ ತಿಂಡಿಗಳು, ಗಾಜಿನ ಜಾಡಿಯಲ್ಲಿ ತುಂಬಿಡಲಾದ ನೆಲ್ಲಿಕಾಯಿ, ಮಾವಿನಕಾಯಿಗಳನ್ನು ಬಾಯಿಚಪ್ಪರಿಸಿಕೊಂಡು ತಿನ್ನದವರಿಲ್ಲ. ಸೀಫುಡ್‌ಗಳು, ಬಿಸಿ ಬಿಸಿ ಬಜ್ಜಿ ಬೋಂಡ, ಗೋಬಿ ಮಂಚೂರಿಗಳು ಆಹಾರ ಪ್ರಿಯರಿಗೆ ರುಚಿಸುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಹಳೆಯ ಲೈಟ್‌ಹೌಸ್ ಸಹ ಇದೆ. ಒಳಗೆ ಹೋಗಿ ನೋಡಲೂ ಅವಕಾಶವಿದೆ.

Untitled design - 2026-03-23T145358.848

ನಾವು ಓಣಂ ಸಂದರ್ಭದಲ್ಲಿ ಅಲ್ಲಿದ್ದುದರಿಂದ ಹೂವಿನ ಬಗೆಬಗೆಯ ಅಲಂಕಾರದ ರಂಗೋಲಿಗಳು ನಮಗೆ ಹೆಜ್ಜೆ ಹೆಜ್ಜೆಗೂ ನೋಡಲು ಸಿಗುತ್ತಿದ್ದವು. ಕೇರಳದ ಸಾಂಪ್ರದಾಯಿಕ ಉಡುಗೆಯಲ್ಲಿ ಮಕ್ಕಳು ದೊಡ್ಡವರು ಹಾಗೂ ಹರೆಯದವರನ್ನು ನೋಡುವುದೇ ಚೆಂದ. ಎಲ್ಲೆಡೆಯೂ ತಿರುಗಾಡಿ, ಎಲ್ಲವನ್ನೂ ನೋಡಿ ಕೊನೆಯದಾಗಿ ಎಂದಿನಂತೆ ಐ ಲವ್ ಕೋಝಿಕೋಡ್‌ ಫಲಕದ ಕಡೆಗೆ ಹೋಗಿ ಫೊಟೋ ಕ್ಲಿಕ್ಕಿಸಿಕೊಂಡು ಮರಳಿ ರೂಮ್‌ಗೆ ಹೊರೆಟೆವು.

ದಾರಿ ಹೇಗೆ?

ಬೆಂಗಳೂರಿನಿಂದ ಕೋಝಿಕೋಡ್‌ಗೆ ನೇರ ಬಸ್‌ ಮತ್ತು ರೈಲು ಸಂಚಾರ ಇದೆ. ಕೋಝಿಕೋಡ್‌ನಿಂದ ಕೇವಲ ಎರಡು ಕಿಮೀ ದೂರದಲ್ಲೇ ಕೋಝಿಕೋಡ್‌ ಬೀಚ್‌ ಇದೆ. ಸ್ಥಳೀಯ ವಾಹನಗಳ ಮೂಲಕ ಬೀಚ್‌ ತಲುಪಬಹುದು. ಕ್ಯಾಲಿಕಟ್‌ ಹತ್ತಿರದ ವಿಮಾನ ನಿಲ್ದಾಣ. ಬೀಚ್‌ನಿಂದ ಸುಮಾರು 27 ಕಿಮೀ ದೂರದಲ್ಲಿದೆ.