• ಬಾಲಚಂದ್ರ ಹೆಗಡೆ

ದಿನ ನಿತ್ಯದ ಬದುಕಿನ ಜಂಜಾಟ ಹಾಗೂ ಗದ್ದಲದ ಬೆಂಗಳೂರಿನ ಜೀವನ ಬೇಸರವಾಗಿ ಪ್ರಶಾಂತ ವಾತಾವರಣದಲ್ಲಿ ಸಮಯ ಕಳೆಯಲು ಬಯಸಿದರೆ ಬೆಂಗಳೂರಿನ ಸಮೀಪದ ಪಿರಮಿಡ್ ವ್ಯಾಲಿ ಉತ್ತಮ ತಾಣ.

ಪಿರಮೀಡ್ ವ್ಯಾಲಿ ಇಂಟರ್‌ ನ್ಯಾಷನಲ್ ಬೆಂಗಳೂರು ನಗರದ ಮಧ್ಯ ಭಾಗದಿಂದ ಸುಮಾರು 35 ಕಿಮೀ ದೂರದಲ್ಲಿ ಕನಕಪುರ ಮುಖ್ಯ ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರವಾಗಿದೆ. ಕನಕಪುರ ರಸ್ತೆಯ ಹಾರೋಹಳ್ಳಿಯಿಂದ 5 ಕಿಮೀ ದೂರದಲ್ಲಿ ರಸ್ತೆಯ ಎಡಬದಿಗೆ ಪಿರಮಿಡ್ ಇಂಟರ್ ನ್ಯಾಷನಲ್ ಫಲಕವಿದೆ. ಅಲ್ಲಿಂದ ಸುಮಾರು 2 ಕಿಮೀ ದೂರದಲ್ಲಿ ಪಿರಮಿಡ್ ವ್ಯಾಲಿ ಇದೆ. ಈ ಎರಡು ಕಿಮೀ ರಸ್ತೆ ಹಾಳಾಗಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುವ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವಿದು. ಉತ್ತಮ ರಸ್ತೆಯ ಅವಶ್ಯಕತೆ ಇದೆ. ವ್ಯಾಲಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಚೆನ್ನಾಗಿದೆ. ಇಡೀ ವ್ಯಾಲಿ ಬೆಟ್ಟಗಳು ಮತ್ತು ಪ್ರಶಾಂತ ಹಸಿರು ಪರಿಸರದಿಂದ ಆವೃತವಾಗಿದೆ. ಬ್ರಹ್ಮರ್ಷಿ ಪಿತಾಮಹ ಡಾ. ಪತ್ರಿಜಿ ಅವರು 2003ರಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದರು. ಇದನ್ನು ಮೈತ್ರೇಯ-ಬುದ್ಧ ವಿಶ್ವಾಲಯಂ (Maitreya-Buddha Vishwalayam) ಎಂದೂ ಕರೆಯಲಾಗುತ್ತದೆ. ಪಿರಮಿಡ್ ಪ್ರವೇಶಿಸುವ ಮುನ್ನ ಎದುರಿಗೆ ಒಂದು ಕಪ್ಪು ಶಿಲೆಯ ಬುದ್ಧನ ಸುಂದರ ಮೂರ್ತಿ ಇದೆ. ಇಲ್ಲಿ ಫೊಟೋ ಕ್ಲಿಕ್ಕಿಸಿ ಕೊಳ್ಳಬಹುದು. ಆದರೆ, ಪಿರಮಿಡ್ ಒಳಗೆ ಫೊಟೋ ತೆಗೆಯುವಂತಿಲ್ಲ.

Untitled design (77)

ವಿಶ್ವದ ಅತಿದೊಡ್ಡ ಧ್ಯಾನ ಪಿರಮಿಡ್

ಪಿರಮಿಡ್ ವ್ಯಾಲಿಯು ವಿಶ್ವದ ಅತಿದೊಡ್ಡ ಧ್ಯಾನ ಪಿರಮಿಡ್‌ಗಳಲ್ಲಿ ಒಂದಾದ ಮೈತ್ರೇಯ ಬುದ್ಧ ಪಿರಮಿಡ್‌ಗೆ ನೆಲೆಯಾಗಿದೆ. ಈ ಪಿರಮಿಡ್ ಅನ್ನು ಈಜಿಪ್ಟ್‌ನ ಗೀಸಾ ಪಿರಮಿಡ್‌ನ ತತ್ತ್ವಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇದು ನಿಖರವಾಗಿ ಉತ್ತರ-ದಕ್ಷಿಣ ದಿಕ್ಕಿಗೆ ಅಭಿಮುಖವಾಗಿದೆ. ಇದರ ತಳವು 160 x 160 ಅಡಿ ವಿಸ್ತೀರ್ಣದಲ್ಲಿದೆ. ಎತ್ತರವು 102 ಅಡಿಗಳಷ್ಟು ಇದ್ದು, ಸುಮಾರು 10 ಅಂತಸ್ತಿನ ಕಟ್ಟಡದಷ್ಟಿದೆ. ಈ ಪಿರಮಿಡ್ ನೀರು, ಗಾಳಿ, ಬೆಂಕಿ ಹಾಗೂ ಭೂಮಿಯ ಅಂಶವನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ.

ಏಕಕಾಲದಲ್ಲಿ ಸುಮಾರು 5,000 ಜನರು ಧ್ಯಾನ ಮಾಡಲು ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಪಿರಮಿಡ್‌ನ ಶಕ್ತಿಯುತ ಕೇಂದ್ರವೆಂದು ಪರಿಗಣಿಸಲಾದ 'ಕಿಂಗ್ಸ್ ಚೇಂಬರ್' ಪಿರಾಮಿಡ್ ನಡುವೆ ಇದ್ದು, ಅದನ್ನು ಹತ್ತಲು ಮೆಟ್ಟಿಲುಗಳಿವೆ. ಈ ಸ್ಥಳದಲ್ಲಿ ಧ್ಯಾನ ಮಾಡುವುದರಿಂದ ಕಾಸ್ಮಿಕ್ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯ ಸುಮಾರು ಮೂರು ಪಟ್ಟು ಹೆಚ್ಚುತ್ತದೆ ಎಂದು ನಂಬಲಾಗಿದೆ. ಅನೇಕರು ಇಲ್ಲಿ ಅರ್ದ ಗಂಟೆಯಿಂದ ಒಂದು ಗಂಟೆಯವರೆಗೂ ಧ್ಯಾನ ಮಾಡುತ್ತಾರೆ.

ಇಲ್ಲಿ ವರ್ಷವಿಡೀ ಉಚಿತವಾಗಿ ಅನಪಾನಸತಿ ಧ್ಯಾನ (ಉಸಿರಾಟದ ಮೇಲೆ ಗಮನ ಇಡುವುದು) ತರಗತಿಗಳನ್ನು ನಡೆಸಲಾಗುತ್ತದೆ. ಆತ್ಮಸಾಕ್ಷಾತ್ಕಾರ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಪಡೆಯುವಂತೆ ಮಾಡಲು ಇಲ್ಲಿ ಹಲವು ಕಾರ್ಯಾಗಾರಗಳು ಮತ್ತು ಸಮಾವೇಶಗಳು ನಡೆಯುತ್ತಾ ಇರುತ್ತವೆ.

Untitled design (79)

ಪಿರಮಿಡ್ ವ್ಯಾಲಿಯಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ಪುಸ್ತಕಗಳ ಗ್ರಂಥಾಲಯ ಹಾಗೂ ದೇಶ-ವಿದೇಶಗಳ ಆಧ್ಯಾತ್ಮಿಕ ಗುರುಗಳ ಉತ್ತಮ ಪುಸ್ತಕಗಳ ಬುಕ್ ಸ್ಟಾಲ್, ಆರ್ಟ್ ಗ್ಯಾಲರಿ, ಕೆಫೆ ಮತ್ತು ವಸತಿ (ಡಾರ್ಮಿಟರಿ) ಸೌಲಭ್ಯಗಳು ಲಭ್ಯವಿವೆ.

ಎಲ್ಲ ಸಂದರ್ಶಕರಿಗೆ ಮತ್ತು ಧ್ಯಾನಿಗಳಿಗೆ ಉಚಿತ ಸಸ್ಯಾಹಾರ ಊಟ (ಅನ್ನದಾನ) ಎರಡೂ ಹೊತ್ತು ನೀಡಲಾಗುತ್ತದೆ. ಗೋಶಾಲೆ, ಓಡಾಡಲು ಸುಂದರ ಉದ್ಯಾನವನ, ಮಕ್ಕಳಿಗೆ ಆಟವಾಡಲು ಅನುಕೂಲವಾಗುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ ಸರೋವರ ಹಾಗೂ ಬೋಟಿಂಗ್ ವ್ಯವಸ್ಥೆಯೂ ಇದೆ.

ಕುಟುಂಬದೊಂದಿಗೆ ಒಂದು ದಿನ ಶಾಂತ, ಸುಂದರ ಪರಿಸರದಲ್ಲಿ ಧ್ಯಾನ-ಯೋಗ ಮತ್ತು ಅದರ ಪ್ರಾಮುಖ್ಯತೆ ಅರಿತು ಓಡಾಡಿ ಬರಲು ಈ ಪಿರಮಿಡ್ ವ್ಯಾಲಿ ಸೂಕ್ತ ತಾಣ.