ಎಪ್ಪತ್ತುಗಿರಿಗಿಂತ ಕಪ್ಪತಗಿರಿ ಮೇಲು!
ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿಯಾಗಿರುವ ಗಿರಿಯೆಂದರೆ ಅದು ಕಪ್ಪತಗುಡ್ಡ. ಪ್ರಪಂಚದ ಎಲ್ಲಾ ಕಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುವ ಈ ಅಭಿನವಸಹ್ಯಾದ್ರಿ ವಾಯು ವಿಹಾರ ಮತ್ತು ಟ್ರೆಕ್ಕಿಂಗ್ ಗೆ ಹೇಳಿ ಮಾಡಿಸಿದಂತಿದೆ. ಮಳೆಗಾಲದಲ್ಲಿ ಕಪ್ಪತಗುಡ್ಡದ ಸೌಂದರ್ಯ ದುಪ್ಪಟ್ಟಾಗುತ್ತದೆ.
- ಮಾಳಿಂಗರಾಯ ಪೂಜಾರ
ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಗದಗ ಜಿಲ್ಲೆಯು ತನ್ನ ಐತಿಹಾಸಿಕ ಸ್ಮಾರಕಗಳು, ನೈಸರ್ಗಿಕ ಸೌಂದರ್ಯ, ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳಿಂದ ಪ್ರವಾಸಿಗರಿಗೆ ಆಕರ್ಷಣೀಯವಾಗಿದೆ.
ಗದಗ ಜಿಲ್ಲೆ ಬಯಲು ಸೀಮೆ ಪ್ರದೇಶವನ್ನು ಹೊಂದಿದೆ. ಆದರೆ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶವು ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲೂಕಿನಲ್ಲಿ ಸುಮಾರು ಮೂವತ್ತಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ. ಜಿಲ್ಲೆಯ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರುವರೆಗೆ ಚಾಚಿಕೊಂಡಿರುವ ಕಪ್ಪತ್ತಗುಡ್ಡವು ಜಿಲ್ಲೆಯ ಉತ್ತರದಿಂದ ದಕ್ಷಿಣಕ್ಕೆ ಸುಮಾರು 65 ಕಿ.ಮೀ.ಗಳಷ್ಟು ಉದ್ದವಿದೆ.

ಮಳೆಗಾಲ ಬಂದರೆ ಕಪ್ಪತ್ತಗುಡ್ಡದ ಸಸ್ಯಕಾಶಿಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ತಂಪಾದ ವಾತಾವರಣ, ಮೇಘರಾಜ ಆಗಮನ ಜಿಟಿಜಿಟಿ ಮಳೆ ಮೋಡ ಕವಿದ ವಾತಾವರಣದಲ್ಲಿ ಕಪ್ಪತ್ತಗುಡ್ಡ ಹಚ್ಚ ಹಸಿರಿನಿಂದ ಕೂಡಿರುವ ವಾತಾವರಣ ಕಣ್ತುಂಬಿಕೊಳ್ಳಲು ಯುವಕರ ದಂಡು ಆಗಮಿಸುತ್ತಾರೆ.
ಕಪ್ಪತ್ತಗುಡ್ಡದ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಗುಡ್ಡಕ್ಕೆ ಮೋಡಗಳು ಮುತ್ತಿಡುತ್ತಿವೆ ಎನ್ನುವಂತೆ ಕಂಗೊಳಿಸುತ್ತಿವೆ. ರಮಣೀಯವಾದ ಈ ದೃಶ್ಯ ಕಣ್ಣಿಗೆ ರಾಚಿ ಇದು ಬಯಲುಸಿಮೆಯೋ ಅಥವಾ ಮಲೆನಾಡ ಪರ್ವತ ಶ್ರೇಣಿಯೋ ಎನ್ನುವಂತೆ ಮಾಡುತ್ತದೆ ಕಪ್ಪತ್ತಗುಡ್ಡದ ಪರಿಸರ. ಇಲ್ಲಿ ವನಸ್ಪತಿ (ಔಷಧಿ) ಸಸ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದು, ಈ ಪ್ರದೇಶವನ್ನು ನೂರಾರು ವರ್ಷಗಳಿಂದ ಔಷಧೀಯ ಸಸ್ಯಗಳ ವಾಸಸ್ಥಾನ ಎಂದು ಕರೆಯಲಾಗಿದೆ. ಇಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಟಿ(ಆಯುರ್ವೇದಿಕ) ತಜ್ಞರು ಭೇಟಿ ನೀಡಿ ಅಧ್ಯಯನ ಮಾಡುತ್ತಾರೆ. ಅಲ್ಲದೆ ಇಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳು ನೆಲೆಸಿದ್ದು ಆದ್ದರಿಂದ ಜೀವವೈವಿಧ್ಯ ಸಂಶೋಧಕರು ಸಂಶೋಧನೆ ನಡೆಸುತ್ತಾರೆ. ಪ್ರಾಣಿ ಪಕ್ಷಿಗಳ ಸಮೀಕ್ಷೆ ಕೂಡ ನಡೆಸಿದ್ದಾರೆ.
ಎಪ್ಪತ್ತಗಿರಿಗಿಂತ ಕಪ್ಪತ್ತಗಿರಿ ಮೇಲು ಎನ್ನುವಂತೆ ಇಲ್ಲಿ ಸಾಕಷ್ಟು ಪುರಾತನ ಮಠ-ಮಂದಿರಗಳು ದೇವಸ್ಥಾನಗಳು ಇವೆ. ಇಲ್ಲಿಗೆ ಭಕ್ತರು ಆಗಮಿಸಿ ಶ್ರದ್ಧೆ, ಏಕಾಗ್ರತೆ, ತಲ್ಲೀನತೆ, ಶುದ್ಧಮನಸ್ಸು, ಸ್ವಚ್ಛ, ನಿಷ್ಕಲ್ಮಶ, ನಿಷ್ಕಳಂಕ ಹೃದಯ, ಮೌನ, ನಿಗರ್ವದಿಂದ ಕೂಡಿದ ಭಜನೆ, ಪ್ರಾರ್ಥನೆ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ಮೈಸೂರು ಮೃಗಾಲಯ ಪ್ರಾಧಿಕಾರ ಹಾಗೂ ಗದಗ ವಲಯ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಇದೆ. ಇದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಗದಗನಿಂದ ೪ ಕಿಮೀ ದೂರದಲ್ಲಿ ಒಂದು ಮಕ್ಕಳ ಉದ್ಯಾನ ಹಾಗೂ ಸಣ್ಣ ಪ್ರಾಣಿ ಸಂಗ್ರಹಾಲಯ ಇದೆ. ಉತ್ತರ ಕರ್ನಾಟಕಲ್ಲಿಯೇ ಅತಿ ದೊಡ್ಡದಾದ ಪ್ರಾಣಿ ಸಂಗ್ರಹಾಲಯ ಇದಾಗಿದ್ದು 18.21 ಹೆಕ್ಟೇರಿನ ವಿಸ್ತಾರ ಹೊಂದಿದೆ.
ಪ್ರವಾಸಿಗರನ್ನು ಆಕರ್ಷಿಸಲು ಅರಣ್ಯ ಇಲಾಖೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಕಪ್ಪತ್ತಗುಡ್ಡ ಗಾಳಿಗುಂಡಿ ಸ್ಥಳದಲ್ಲಿರುವ ವೀಕ್ಷಣಾ ಸ್ಥಳ, ಗಜೆಬೋ, ಮಹಿಳಾ ಮತ್ತು ಬಾಲಕರ ಶೌಚಾಲಯ, ಟಿಕೆಟ್ ಕೌಂಟರ್, ಸೂಚನಾ ಫಲಕಗಳು ಚಾರಣಪಥ, ಪರಗೋಲ, ಸೆಲ್ಫೀ ಪಾಯಿಂಟ್ ಈಗಾಗಲೇ ನಿರ್ಮಾಣ ಮಾಡಲಾಗಿದ್ದು, ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಅರಣ್ಯ ಇಲಾಖೆ ಯೋಜನೆಗಳನ್ನು ರೂಪಿಸಿಕೊಂಡಿದೆ. ಜಿಲ್ಲಾ ಕೇಂದ್ರದಿಂದ ಹಾಗೂ ತಾಲೂಕ ಕೇಂದ್ರಗಳಿಂದ ಕಪ್ಪತ್ತಗುಡ್ಡ ಅರಣ್ಯ ಪ್ರದೇಶಕ್ಕೆ ಹೋಗಲು ಸಾರಿಗೆ ಸಂಸ್ಥೆಗಳ ವಾಹನ ವ್ಯವಸ್ಥೆ ಇದ್ದು, ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಸರಕಾರ ಘೋಷಿಸಿದೆ.
ಕಪ್ಪತ್ತಗುಡ್ಡ ಅರಣ್ಯ ಪ್ರದೇಶ ನೋಡಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದ್ದು, ಅರಣ್ಯ ಇಲಾಖೆಯಿಂದ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇನ್ನೂ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
-ಮಂಜುನಾಥ ಕೆಂಚಪ್ಪನವರ, ಡಿಸಿಎಫ್ ಅರಣ್ಯ ಇಲಾಖೆ ಗದಗ