ಪ್ಲ್ಯಾನ್ಡ್‌ ಟ್ರಿಪ್‌ ಮಾಡಿರುವುದೇ ಕಡಿಮೆ

ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಲೇ ಇದ್ದುದರಿಂದ ಬಿಡುವೆಂಬುದು ಸಿಗಲೇ ಇಲ್ಲ. ಶೂಟ್‌, ಲೊಕೇಷನ್‌ ಹುಡುಕಾಟಕ್ಕಾಗಿ ಟ್ರಾವೆಲ್‌ ಮಾಡಿರುವುದು ಬಿಟ್ಟರೆ ಪ್ಲ್ಯಾನ್ಡ್‌ ಟ್ರಿಪ್‌ ಮಾಡಿರುವುದೇ ಕಡಿಮೆ. ನಮಗಾಗಿ ಪ್ರವಾಸ ಹೋಗುವುದಕ್ಕೆ ಸಮಯವೇ ಸಿಕ್ಕಿಲ್ಲ. ಕಾಂತಾರ ಚಾಪ್ಟರ್‌ 1 ತೆರೆಕಂಡ ನಂತರ ರಿಷಬ್‌ ಜತೆಗೆ ಕುಳಿತು ಈ ಬಗ್ಗೆ ಮಾತನಾಡಿಕೊಂಡೆ. ಬದುಕಿನಲ್ಲಿ ಟ್ರಾವೆಲ್‌ ಎಂಬುದನ್ನು ಮಿಸ್‌ ಮಾಡಿಕೊಂಡಿದ್ದೇವೆ. ಮಕ್ಕಳೂ ಈಗ ಸ್ವಲ್ಪ ದೊಡ್ಡವರಾಗುತ್ತಿರುವುದರಿಂದ ಇನ್ನು ಮುಂದೆ ವರ್ಷಕ್ಕೆರಡು ಪ್ರವಾಸ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಕಾಂತಾರ ಚಾಪ್ಟರ್‌ 1 ಬಿಡುಗಡೆಯ ನಂತರ ದುಬೈಗೆ ಹೋಗಿದ್ದೆವು. ಮಕ್ಕಳಿಗೆ ಅದು ಒಪ್ಪುವಂಥ ಜಾಗ. ವಿಮಾನವೇರಿದರೆ 4 ಗಂಟೆಗಳ ಪ್ರಯಾಣವಷ್ಟೇ. ರಿಷಬ್‌ ಎಲ್ಲೇ ಹೋದರೂ ಇಂಡಿಯನ್‌ ಫುಡ್‌ ಹುಡುಕುವುದರಿಂದ ದುಬೈ ಅವರಿಗೂ ಬಲು ಪ್ರಿಯವಾಗುತ್ತದೆ.

ಇದನ್ನೂ ಓದಿ: ಕೆಜಿಎಫ್‌ ನಟಿಯ ಫಾರಿನ್‌ ಪ್ರವಾಸ

ಧಾರ್ಮಿಕ ಪ್ರವಾಸಗಳೇ ಹೆಚ್ಚು

ನನಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದೆಂದರೆ ಬಹಳ ಖುಷಿ. ಅಲ್ಲಿ ಸಿಗುವ ಶಾಂತಿ ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಇತ್ತೀಚೆಗಷ್ಟೇ ಮಂತ್ರಾಲಯಕ್ಕೆ ಹೋಗಿದ್ದೆವು. ನಮ್ಮೂರ ದೇವಾಲಯಗಳಿಗೆ ಹೋಗುತ್ತಲೇ ಇರುತ್ತೇವೆ. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿ ನನಗೆ ಬಹಳ ಅಚ್ಚುಮೆಚ್ಚು.

Untitled design (69)

ಕಾಂತಾರ ಚಾಪ್ಟರ್‌ 1 – ಚಿತ್ರೀಕರಣದ ಸುತ್ತ

ಕುಂದಾಪುರದ ಸುತ್ತಮುತ್ತಲಿನ ಅನೇಕ ಜಾಗಗಳಲ್ಲಿ ಕಾಂತಾರ ಚಾಪ್ಟರ್‌ 1 ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲಿ ರಾಜಬೀದಿಯ ಚಿತ್ರೀಕರಣವನ್ನು ಕರಾವಳಿಯ ಮುದೂರು ಎಂಬ ಜಾಗದಲ್ಲಿ ಮಾಡಲಾಗಿತ್ತು. ಅದು ಮೋಸ್ಟ್‌ ಟಫ್ಫೆಸ್ಟ್‌ ಲೊಕೇಷನ್‌ ಆಗಿತ್ತು. ಯಾಕೆಂದರೆ 360 ಡಿಗ್ರಿ ವ್ಯೂ ಇರುವುದರಿಂದ ಕಾಸ್ಟ್ಯೂಮ್‌ ಹಟ್‌ಗಳನ್ನು ಅಲ್ಲಿ ಹಾಕಲಾಗಲಿಲ್ಲ. ಗುಡ್ಡದ ಕೆಳಭಾಗದಲ್ಲಿ ಹಟ್‌ ಗಳನ್ನು ನಿರ್ಮಿಸಿ ಪ್ರತಿ ಬಾರಿಯೂ ಅಲ್ಲಿಗೆ ಹತ್‌ತಿ, ಇಳಿದು ಮಾಡಬೇಕಾದ ಪರಿಸ್ಥಿತಿಯಿತ್ತು. ಇನ್ನು ಬ್ರಹ್ಮಕಲಶ ಹಾಡಿನ ಚಿತ್ರೀಕರಣಕ್ಕಂತೂ ಸುಮಾರು ಒಂದು ತಿಂಗಳ ಕಾಲ ಶೂಟ್‌ ಮಾಡಿದ್ದೆವು. ಕರಾವಳಿಯ ಆ ಸುಡು ಬಿಸಿಲು, ಸೆಕೆಯ ನಡುವೆ ಕೆಲಸ ಮಾಡುವುದಕ್ಕೂ ಭೂಮಿಮಟ್ಟದ ತಾಳ್ಮೆ ಬೇಕು. ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಈಗಲೂ ಒಂದೊಮ್ಮೆ ಶೂಟಿಂಗ್‌ ತಾಣಗಳಿಗೆ ಹೋಗಿ ಬರುತ್ತೇವೆ.

ಕಿರಿಕ್‌ ಜತೆ ಮೊದಲ ವಿದೇಶ ಪ್ರವಾಸ

ಕಿರಿಕ್‌ ಪಾರ್ಟಿಯ ಪ್ರಮೋಷನ್‌ ಯನ್ನು ಫ್ಲೋರಿಡಾದ ಕೀವೆಸ್ಟ್‌ ನಲ್ಲಿ ಪ್ಲ್ಯಾನ್‌ ಮಾಡಿಕೊಂಡಿದ್ದರು. ನಮಗದು ಮೊದಲ ವಿದೇಶ ಪ್ರವಾಸ, ಅಲ್ಲದೆ ಹನಿಮೂನ್‌ ಕೂಡ! ಮತ್ತೊಂದು ವಿಶೇಷವೆಂದರೆ ಅಲ್ಲೇ ನನ್ನ ಬರ್ತ್‌ ಡೇ ಸೆಲೆಬ್ರೇಷನ್‌ ಸಹ ಮಾಡಿದ್ದು ವಿಶೇಷವಾಗಿತ್ತು.

ಸೆಲೆಬ್ರೇಷನ್‌ ಟೂರ್‌

ಪ್ರತಿ ಬಾರಿಯೂ ಬರ್ತ್‌ ಡೇ, ವಿವಾಹ ವಾರ್ಷಿಕೋತ್ಸವದಂದು ಪ್ರವಾಸ ಮಾಡುತ್ತಲೇ ಇರುತ್ತೇವೆ. ಅದು ನಾವು ನಮಗಾಗಿ ಮಾಡಿಕೊಳ್ಳುವ ಸಮಯ. ಗೋವಾ, ಬೀಚ್‌ ಪ್ರಾಪರ್ಟಿಗಳು, ಕೋಸ್ಟಲ್‌ ಬೆಲ್ಟ್‌ ತುಂಬಾ ಎಕ್ಸ್‌ಪ್ಲೋರ್ ಮಾಡಿದ್ದೇವೆ. ಚಿಕ್ಕಮಗಳೂರಿನ ಅನೇಕ ತಾಣಗಳು ಹೀಗೆ ನಮ್ಮದು ಸದ್ಯಕ್ಕಂತೂ ಚಿಕ್ಕಪುಟ್ಟ ಪ್ರವಾಸಗಳು.

ಶೂಟಿಂಗ್‌ ಸ್ಪಾಟ್‌ಗಳು ಪ್ರವಾಸಿ ತಾಣಗಳಾದಾಗ

ಕಾಂತಾರ, ಕಾಂತಾರ ಚಾಪ್ಟರ್‌ 1 ಚಿತ್ರೀಕರಣ ಮಾಡಿರುವ ತಾಣಗಳಲ್ಲಿ ಹಲವು ಈಗ ಪ್ರವಾಸಿ ತಾಣಗಳಾಗಿ ಬದಲಾಗಿರುವುದು ಖುಷಿಯ ವಿಚಾರ. ನಮ್ಮ ಗಮನಕ್ಕೂ ಬೀಳದ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಅವುಗಳನ್ನು ಹುಡುಕಿ,ಅಭಿವೃದ್ಧಿಗೊಳಿಸಬೇಕಿದೆ. ಆದರೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ಪ್ರವಾಸಿಗನದ್ದು.

ಸೆಂಟ್ರಲ್‌ ಮಾಲ್‌ನಲ್ಲಿ ಮೊದಲ ಭೇಟಿ

ಬೆಂಗಳೂರು ಅಂದರೆ ನನಗೆ ಮೊದಲು ನೆನಪಾಗುವುದು ರಾಗಿಗುಡ್ಡ ದೇವಸ್ಥಾನ. ನಾನು ವಿಪ್ರೋದಲ್ಲಿ ಕೆಲಸಕ್ಕೆ ಸೇರಿದ್ದ ಸಂದರ್ಭದಲ್ಲಿ ಬಿಟಿಎಂ ಏರಿಯಾದಲ್ಲಿದ್ದೆ. ಆಗ ಹೆಚ್ಚಿಗೆ ಹೋಗುತ್ತಿದ್ದ ದೇವಸ್ಥಾನವದು. ಅಲ್ಲೇ ಸಮೀಪವಿದ್ದ ಜೆಪಿ ನಗರದ ಸೆಂಟ್ರಲ್‌ ಮಾಲ್‌ ನಲ್ಲಿ ರಿಷಬ್‌ ಹಾಗೂ ನನ್ನ ಮೊದಲ ಭೇಟಿಯಾಗಿತ್ತು. ಆ ದಿನಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ.

ಜೂನಿಯರ್‌ ಎನ್‌ಟಿಆರ್‌ ಕುಟುಂಬದ ಜತೆಗೆ

ಜೂನಿಯರ್‌ ಎನ್‌ಟಿಆರ್‌ ಅವರ ತಾಯಿಯ ಹುಟ್ಟೂರು ಕುಂದಾಪುರ. ಯಾವಾಗಾದರೊಮ್ಮೆ ಅವರು ಕುಂದಾಪುರಕ್ಕೆ ಬರುತ್ತಾರಷ್ಟೇ. ವರ್ಷದ ಹಿಂದೆ ಎರಡು ದಿನಗಳ ಮಟ್ಟಿಗೆ ಕುಂದಾಪುರಕ್ಕೆ ಬಂದು ಒಳ್ಳೆಯ ಸಮಯವನ್ನು ಕಳೆದಿದ್ದರು. ಅವರೊಂದಿಗೆ ಉಡುಪಿ ದೇವಸ್ಥಾನ, ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನ ಹಾಗೂ ಕುಂದಾಪುರ ಬೀಚ್‌ಗಳನ್ನೂ ಸುತ್ತಾಡುವ ಅವಕಾಶ ನಮಗೆ ಸಿಕ್ಕಿತ್ತು.

Untitled design (70)

ಟ್ರಾವೆಲ್‌ ಬ್ಯಾಗ್‌ ದೊಡ್ಡದಾಗಿದೆ

ಮಕ್ಕಳ ಜತೆಗೆ ಪ್ರಯಾಣಿಸುವಾಗ ಟಾವೆಲ್‌ ಬ್ಯಾಗ್‌ ಚಿಕ್ಕದಿರಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ನಾನು ವಿಮಾನಕ್ಕಿಂತಲೂ ಕಾರು ಪ್ರಯಾಣವೇ ಬೆಸ್ಟ್‌ ಎನ್ನುತ್ತೇನೆ. ಮಕ್ಕಳ ಲಗೇಜ್‌ ಒಂದು ಕಾರು ಡಿಕ್ಕಿ ಪೂರ್ತಿ ತುಂಬಿಕೊಳ್ಳುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಫೀಡಿಂಗ್‌ ಸಂಬಂಧಿಸಿದ ವಸ್ತುಗಳು ಹೆಚ್ಚಿರುತ್ತಿದ್ದವು. ಈಗಾದೆಲ್ಲವೂ ಬದಲಾಗಿ ಅವರ ಆಹಾರ, ಆಟಿಕೆಗಳೇ ತುಂಬಿಕೊಂಡಿರುತ್ತವೆ.

ಫ್ಯಾನ್ಸಿ ರೆಸ್ಟೋರೆಂಟ್‌ ನನಗಿಷ್ಟವಿಲ್ಲ

ನನಗೆ ಕಾಫಿಯೆಂದರೆ ಬಹಳ ಇಷ್ಟ. ಎಲ್ಲೇ ಹೋದರೂ ಅಲ್ಲಿನ ರುಚಿಕರ ಕಾಫಿಯ ಟೇಸ್ಟ್‌ ಮಾಡುತ್ತೇನೆ. ಚಾಟ್ಸ್‌, ಬಿರಿಯಾನಿ ಎಲ್ಲವೂ ನನ್ನ ಫೇವರಿಟ್‌. ಫ್ಯಾನ್ಸಿ ರೆಸ್ಟೋರೆಂಟ್‌ ಗಿಂತಲೂ ಚಿಕ್ಕದಾದ, ಅಥೆಂಟಿಕ್‌ ಫುಡ್‌ ಸರ್ವ್‌ ಮಾಡುವ ತಾಣಗಳನ್ನು ಹುಡುಕುತ್ತೇನೆ. ಆದರೆ ರಿಷಬ್‌ ಜತೆಗಿರುವಾಗ ಎಲ್ಲೆಂದರಲ್ಲಿ ನಿಲ್ಲಿಸಿ ಫುಡ್‌ ಟೇಸ್ಟ್‌ ಮಾಡುವುದು ಕಷ್ಟವಾಗಿರುವುದರಿಂದ ಅನೇಕ ಬಾರಿ ಪಾರ್ಸಲ್‌ ಮಾಡಿಸಿಕೊಳ್ಳುವುದು ರೂಢಿ.