ಕೈತುಂಬಾ ಸಂಬಳ ನೀಡುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗವನ್ನು ಬಿಟ್ಟು ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಪ್ರವಾಸವೇ ಜೀವನ, ಪ್ರವಾಸದಿಂದಲೇ ಜೀವನ ಎಂದವರು ಬ್ಯಾಕ್‌ಪ್ಯಾಕ್‌ ವಿತ್ ಮಹಾಲಕ್ಷ್ಮಿ.‌ ಸಾಕಷ್ಟು ದೇಶಗಳನ್ನು ಸುತ್ತುತ್ತಾ, ಪ್ರವಾಸದ ಕನಸು ಹೊತ್ತ ಅನೇಕರನ್ನು ದೇಶ ಸುತ್ತಲು ಕರೆದೊಯ್ಯುವ ಇವರ ಪ್ರಯತ್ನವನ್ನು ಮೆಚ್ಚಲೇಬೇಕು. ಪ್ರವಾಸಿ ಜೀವನಕ್ಕಿರುವ ಇರುವ ಸ್ಪೂರ್ತಿ, ಆಸಕ್ತಿಗಳ ಬಗೆಗೆ ಇಲ್ಲಿಗೆ ಕಿರು ಸಂದರ್ಶನ.

ದುಡಿಮೆಯಲ್ಲಿ ಒಂದಷ್ಟು ಮೊತ್ತವನ್ನು ಪ್ರವಾಸಕ್ಕಾಗಿ ಮೀಸಲಿಡಬೇಕು ಎಂಬ ಯೋಜನೆ ಹುಟ್ಟಿಕೊಂಡಿದ್ದು ಹೇಗೆ ?

ಮೊದ ಮೊದಲು ಪ್ರವಾಸಕ್ಕಾಗಿ ಉಳಿತಾಯ ಮಾಡುವ ಯೋಜನೆ ನನಗೂ ಇರಲಿಲ್ಲ. ಸಂಬಳದಲ್ಲಿ ಒಂದಷ್ಟು ಮೊತ್ತವನ್ನು ಸೇವಿಂಗ್ಸ್‌ ಮಾಡಿಕೊಳ್ಳುತ್ತಾ ಬಂದೆ. ಆ ಹಣದಿಂದ ಮೊದಲ ಬಾರಿಗೆ ಒಂದು ಪ್ರವಾಸ ಹೋಗಿ ಬಂದೆ. ಅದು ರೂಢಿಯಾಗುತ್ತಾ ಬಂತು. ಈಗ ನನಗೆ ಯಾವುದೇ ಅಮೌಂಟ್‌ ಬಂದರೂ ಅದರಲ್ಲಿ ಪ್ರವಾಸಕ್ಕಾಗಿಯೇ ಒಂದಷ್ಟು ಹಣವನ್ನು ತೆಗೆದಿಟ್ಟುಕೊಳ್ಳುತ್ತೇನೆ.

ಇದನ್ನೂ ಓದಿ: ಜಪಾನ್‌ನಲ್ಲಿ ಹೆಮ್ಮೆಯ ಕನ್ನಡತಿ ಶ್ವೇತಾ ಆರಾಧ್ಯಾ

ನಿಮ್ಮ ಪ್ರವಾಸದಲ್ಲಿ ಬಜೆಟ್‌ ಸ್ನೇಹಿ ಯೋಜನೆ ಹಾಗೂ ಸುರಕ್ಷತೆಯ ಬಗ್ಗೆ ತಿಳಿಸಿ

ಪ್ರವಾಸವೆಂದರೆ ಸುಮ್ಮನೆ ಹಣ ವ್ಯಯಿಸುವುದಲ್ಲ. ಕಡಿಮೆ ಬಜೆಟ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರವಾಸಿ ತಾಣಗಳನ್ನು ನೋಡುವುದು, ಅಲ್ಲಿನ ಆಹಾರ, ಜೀವನಶೈಲಿ, ಸಂಸ್ಕೃತಿಗಳ ಪರಿಚಯ ಮಾಡಿಕೊಳ್ಳುವುದಾಗಿದೆ. ನಾನು ಈವರೆಗೂ ಮಾಡಿರುವ ಎಲ್ಲ ಪ್ರಯಾಣವೂ ಸುರಕ್ಷಿತವಾಗಿಯೇ ಇತ್ತು. ಹೆಣ್ಣು ಮಕ್ಕಳು ಸೋಲೋ ಟ್ರಾವೆಲ್ ಮಾಡುವಾಗಲಂತೂ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ನಾವು ಲೊಕೇಶನ್‌ ಸರಿಯಾಗಿ ಹಾಕಿಕೊಂಡಿದ್ದೇವಾ, ಆನ್‌ ಟೈಮ್‌ ನಿಯೋಜಿತ ಸ್ಥಳವನ್ನು ತಲುಪಿದ್ದೇವಾ, ಪ್ಲ್ಯಾನ್‌ ಪ್ರಕಾರವಾಗಿಯೇ ಹೋಗುತ್ತಿದ್ದೇವಾ ಇಂಥದ್ದರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಯಾವುದೇ ಭಾಷೆಯವರಾದರೂ ಅವರ ನೋಟ ಹಾಗೂ ಮಾತಿನ ಮೂಲಕವೇ ಅವರ ಉದ್ದೇಶ ಏನು ಎನ್ನುವುದನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಅದರ ಬಗೆಗೆ ನಾನು ಹೆಚ್ಚಿನ ಗಮನಹರಿಸುತ್ತೇನೆ.

Untitled design (37)

ಯೂಟ್ಯೂಬರ್‌ ಆದಮೇಲೆ ಹೆಸರು ಬರುತ್ತದೆ, ಒಂದಷ್ಟು ಮಂದಿ ಗುರುತಿಸುತ್ತಾರೆ. ನಿಮಗೆ ಆ ಅನುಭವವಾಗಿದೆಯೇ ?

ಹೆಸರು, ಗುರುತಿಸಿಕೊಳ್ಳುವುದಕ್ಕಾಗಿ ನಾಣು ಕಂಟೆಂಟ್‌ ಮಾಡಿದವಳಲ್ಲ. ನಾನು ನನ್ನಿಂದಾಗುವಷ್ಟರ ಮಟ್ಟಿಗೆ ಉತ್ತಮ ಕಂಟೆಂಟ್‌ ಕೊಡುವ ಉದ್ದೇಶವನ್ನಿಟ್ಟುಕೊಂಡವಳು. ಇದರಿಂದ ನನಗೆ ಇತರೆ ಯೂಟ್ಯೂಬರ್ಸ್‌ ಅಥವಾ ಇನ್ಯಾವುದೇ ಸಂಪರ್ಕಗಳು ಹೆಚ್ಚಾಗಿಲ್ಲ. ಬದಲಾಗಿ ಕೆಲವೊಂದಷ್ಟು ದೊಡ್ಡ ವ್ಯಕ್ತಿಗಳು ನನ್ನ ಕಂಟೆಂಟ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಹೀಗೆಯೇ ಮುಂದುವರಿಸಿಕೊಂಡು ಹೋಗಿ ಎಂದು ಮೆಸೇಜ್‌ ಮಾಡಿರುವುದಿದೆ.

ಯೂಟ್ಯೂಬ್‌ ಶುರುಮಾಡಬೇಕೆನಿಸಿದ್ದು ಹೇಗೆ ? ದಾಖಲೆಗಾಗಿಯೇ ಅಥವಾ ದುಡಿಮೆಗಾಗಿಯೇ ?

ದುಡಿಮೆಯ ಬಗ್ಗೆ ಯೋಚಿಸಿಲ್ಲವೆಂದಲ್ಲ. ಆದರೆ ನಾನು ಅದನ್ನೇ ಆಧಾರವಾಗಿಸಿಕೊಂಡಿಲ್ಲ. ಅದರಿಂದ ನನಗೆ ಬಂದ ದುಡ್ಡು ಸಹ ಬಹಳ ಕಡಿಮೆ. ಆದರೆ ಅದೆಲ್ಲದಕ್ಕೂ ಹೆಚ್ಚಾಗಿ ಜನರು ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ. ವಿಡಿಯೋಗಳನ್ನು ನೋಡಿ, ತಾವೇ ಅಲ್ಲಿಗೆ ಹೋಗಿ ಬಂದ ಅನುಭವವಾಯ್ತು ಎನ್ನುತ್ತಾರೆ. ಇದು ಇನ್ನಷ್ಟು ಪ್ರಯಾಣಗಳಿಗೆ ನನಗೆ ಸ್ಪೂರ್ತಿ ನೀಡಿದೆ. ಇದರ ಜತೆಗೆ ನನ್ನ ಟ್ರಾವೆಲ್‌ಗಳ ನೆನಪುಗಳನ್ನು ದಾಖಲೆಯಾಗಿ ಉಳಿಸಿಕೊಳ್ಳುವ ಮಾರ್ಗವೂ ಹೌದು..

20ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದೀರಿ. ನಿಮ್ಮ ನೆಚ್ಚಿನ ದೇಶ ಯಾವುದು ?

ಎಲ್ಲದರಲ್ಲೂ ಬೆಸ್ಟ್‌ ವಿಯೆಟ್ನಾಂ. ಆಹಾರದ ವಿಚಾರದಲ್ಲಿ ಹೇಳುವುದಾದರೆ ಶ್ರೀಲಂಕಾ, ನೇಪಾಳದಲ್ಲಿ ಭಾರತೀಯ ಆಹಾರಗಳೇ ಸಿಗುತ್ತವೆ. ಡೆವಲಪ್ಮೆಂಟ್‌, ಇನ್ಫ್ರಾಸ್ಟ್ರಕ್ಚರ್‌ ವಿಚಾರದಲ್ಲಿ ಥೈವಾನ್‌ ನನಗಿಷ್ಟವಾಯ್ತು.

ಉತ್ತಮ ಪ್ರವಾಸಿಗನಾಗಲು ಬೇಕಾದ ಗುಣಲಕ್ಷಣಗಳೇನು ?

ಪ್ರವಾಸ, ಪ್ರಯಾಣದ ಸಂದರ್ಭಗಳಲ್ಲಿ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವನ್ನು ರೂಢಿಸಿಕೊಳ್ಳಲೇ ಬೇಕು. ಇದೇ ಆಹಾರ ಬೇಕು ಎಂದು ಕೂರುವ ಬದಲು ಸ್ಥಳೀಯ ಆಹಾರವನ್ನೋ ಇಲ್ಲವೇ ನೀವೇ ತಂದಿರುವ ಪ್ಯಾಕ್ಡ್‌ ಫುಡ್‌ ಮೊರೆಹೋಗುವುದು ಒಳ್ಳೇಯದು. ನಾನು ಕೆಲವೊಮ್ಮೆ ಫ್ರುಟ್ಸ್‌ ಹಾಗೂ ಡ್ರೈ ಫ್ರುಟ್ಸ್‌ ಜತೆಗಿಟ್ಟುಕೊಳ್ಳುತ್ತೇನೆ. ಲೋಕಲ್‌ ಫುಡ್‌ ಟೇಸ್ಟ್‌ ಮಾಡುವುದೂ ನನಗಿಷ್ಟ. ಇಂಥ ಸಂದರ್ಭಗಳಿಗೆ ಹೊಂದಿಕಳ್ಳದವರು ಪ್ಯಾಕೇಜ್‌ ಟೂರ್‌ಗಳಲ್ಲಿ ಪ್ರವಾಸ ಮಾಡುವುದು ಸೂಕ್ತ.

ಮೊದಲ ಸೋಲೋ ಟ್ರಿಪ್‌ ಅನುಭವ ತಿಳಿಸಿ

ನಾನು ಮೊದಲ ಬಾರಿಗೆ ವಿಯೆಟ್ನಾಂಗೆ ಸೋಲೋ ಟ್ರಿಪ್‌ ಹೋಗಿದ್ದೆ. ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಈ ಪ್ರವಾಸಕ್ಕೆ ಮುಂದಾಗಿದ್ದೆ. ನನಗೆ ಆ ದೇಶ ಹೊಸತನವನ್ನು ಕೊಟ್ಟಿದೆ. ಮೊದಲಿಗೆ ಪ್ರಯಾಣದ ರೂಪುರೇಷೆಯನ್ನು ಸಿದ್ಧಪಡಿಸಿಕೊಂಡಿದ್ದೆ. ಅಲ್ಲಿ ನೋಡಲೇಬೇಕಾದ ಸ್ಥಳಗಳನ್ನು ಗುರುತಿಸಿ ಮೊದಲು ಸೌತ್‌ ವಿಯೆಟ್ನಾಂಗೆ ಹೋದೆ. ಆಮೇಲೆ ಅಲ್ಲಿಂದ ಸೆಂಟ್ರಲ್‌, ನಂತರ ನಾರ್ತ್‌ ಸುತ್ತಾಡಿಕೊಂಡು ಅಲ್ಲಿಂದ ಭಾರತಕ್ಕೆ ವಾಪಸ್ಸಾದೆ. ಸಾಮಾನ್ಯವಾಗಿ ವಿದೇಶಿ ಪ್ರವಾಸದಲ್ಲಿ ಹೆಚ್ಚಿನ ಹಣ ಪೋಲಾಗುವುದು ವಿಮಾನ ಪ್ರಯಾಣದಲ್ಲಿ. ಅದಕ್ಕೆ ವಾರದ ನಡುವೆ, ಮದ್ಯರಾತ್ರಿ ಕೆಲವು ಫ್ಲೈಟ್‌ ಟಿಕೆಟ್‌ ಕಡಿಮೆ ಬೆಲೆಗೆ ಸಿಗುತ್ತದೆ. ಅವುಗಳ ಬಗ್ಗೆ ತಿಳಿದು ಟಿಕೆಟ್‌ ಬುಕಿಂಗ್‌ ಮಾಡುವುದು ಒಳ್ಳೆಯದು.

Untitled design (39)

ಬ್ಯಾಕ್‌ ಪ್ಯಾಕ್‌ ವಿತ್‌ ಮಹಾಲಕ್ಷ್ಮಿ ಎಂಬ ಹೆಸರು ಹೇಗೆ ಬಂತು ?

ನನ್ನ ಪತಿ ಬ್ಯಾಕ್‌ ಪ್ಯಾಕ್‌ ವಿತ್‌ ಮಹಾಲಕ್ಷ್ಮಿ ಎಂಬ ಹೆಸರನ್ನು ಆಯ್ಕೆ ಮಾಡಿದವರು. ನನ್ನ ಜತೆಗೆ ಎಲ್ಲರನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬ ಯೋಜನೆಯೊಂದಿಗೆ ಅವರು ಈ ಹೆಸರು ಸಜೆಸ್ಟ್‌ ಮಾಡಿದ್ದರು. ನನಗೂ ಮೆಚ್ಚುಯಾಗಿ ಅದನ್ನೇ ಸೋಶಿಯಲ್‌ ಮೀಡಿಯಾದಲ್ಲೂ ಇರಿಸಿಕೊಂಡೆ.

ಪ್ರವಾಸಕ್ಕೂ ವಯಸ್ಸಿಗೂ ಸಂಬಂಧವಿದೆಯಾ ?

ಹಾಗೊಂದು ಕಾಲವಿತ್ತು. ಜೀವನ ಪೂರ್ತಿ ದುಡಿಯಬೇಕು. ವಯಸ್ಸಾದಾಗ ದುಡಿಯಲು ಶಕ್ತಿಯಿಲ್ಲವೆಂದಾಗ ತೀರ್ಥಯಾತ್ರೆಗೆ ಹೋಗುವುದು, ಪ್ರವಾಸ ಮಾಡುವುದು. ಆದರೆ ವಯಸ್ಸಾದಮೇಲೆ ಟ್ರಾವೆಲ್‌ ಮಾಡಬಹುದು ಎಂದುಕೊಂಡರೆ ಆಗ ನಿಮ್ಮ ದೇಹದ ಶಕ್ತಿಯಿರುವುದಿಲ್ಲ. ದೇಹ ನಿಮ್ಮ ಮಾತುಕೇಳುವ ಹಂತದಲ್ಲಿರುವುದಿಲ್ಲ. ನಿಮಗೆ ಇಷ್ಟಬಂದಂತೆ ಓಡಾಡುವುದಕ್ಕೂ ಆಗುವುದಿಲ್ಲ.. ಉದಾಹರಣೆಗೆ ಬಂಜಿ ಜಂಪ್‌ ಮಾಡುವದಕ್ಕೆ ಹೋದರೂ ಅದಕ್ಕೆ ನಿಯಮಗಳಿರುತ್ತವೆ.