ನಿಮ್ಮ ನಿರ್ಮಾಣದ ವಿಡಿಯೋ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಯಶಸ್ಸನ್ನು ಹೇಗೆ ಸ್ವೀಕರಿಸಿದ್ದೀರಿ?

ಖಂಡಿತವಾಗಿಯೂ ನಾವು ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ನನ್ನ ಹಿಂದಿನ ಕೆಲವು ಸಿನಿಮಾಗಳು ಬಿಡುಗಡೆಯಾದದ್ದೇ ಅನೇಕರಿಗೆ ತಿಳಿದಿರಲಿಲ್ಲ ಎಂಬ ಕೊರಗು ನನಗಿತ್ತು. ಹಾಗಾಗಿ, ನಿರ್ಮಾಣಕ್ಕಿಳಿದಾಗ ಪ್ರಚಾರದ ಕಡೆಗೆ ವಿಶೇಷ ಗಮನಹರಿಸಿದೆವು. ನಾವೇ ಕುಳಿತು ಪ್ರಚಾರದ ವಿಡಿಯೋಗಳಿಗೆ ಸ್ಕ್ರಿಪ್ಟ್ ಬರೆದೆವು ಹಾಗೂ ಅದರ ಬಗ್ಗೆ ಬಹಳ ಗಂಭೀರವಾಗಿ ಕೆಲಸ ಮಾಡಿದೆವು. ಇದರ ಫಲವಾಗಿ ಚಿತ್ರಕ್ಕೆ ಉತ್ತಮ ಆರಂಭ ದೊರೆಯಿತು ಮತ್ತು ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆ ಅತ್ಯಂತ ಖುಷಿ ನೀಡಿದೆ. ಸಣ್ಣ ಕನ್ನಡ ಸಿನಿಮಾಗಳು ಗೆಲ್ಲಬೇಕು ಎಂಬ ನನ್ನ ಉದ್ದೇಶ ಈ ಮೂಲಕ ಈಡೇರಿದೆ.

ಇದನ್ನೂ ಓದಿ: ಬೃಂದಾವಿಹಾರಿ ಬೆಡಗಿಗೆ ಅಯೋಧ್ಯೆ ಸುತ್ತುವಾಸೆ

ನಿಮ್ಮ ಮುಂಬರುವ ಪ್ರಾಜೆಕ್ಟ್‌ಗಳ ಬಗ್ಗೆ ತಿಳಿಸಿ.

ದೀಕ್ಷಿತ್ ಶೆಟ್ಟಿ: ಸದ್ಯ 'ಬೇಲ್' ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದರಲ್ಲಿ ನಾನು ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಹಾಗೂ ಕಮರ್ಷಿಯಲ್ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಮೂರು ತಲೆಮಾರುಗಳು ಒಟ್ಟಿಗೆ ಕುಳಿತು ನೋಡಬಹುದಾದ, ಹಿರಿಯ ನಟರನ್ನು ಒಳಗೊಂಡ ಮಲ್ಟಿಸ್ಟಾರರ್ ಸಿನಿಮಾ ಇದಲ್ಲದೆ, ಅಶೋಕ್ ಸರ್ ಅವರ ನಿರ್ದೇಶನದ ಚಿತ್ರದ ಶೂಟಿಂಗ್ ಮುಗಿದಿದ್ದು, ಈ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ದುಲ್ಕರ್ ಸಲ್ಮಾನ್ ಜತೆಗಿನ 'ಶ್ರೀ ಶ್ರೀ' ಚಿತ್ರದ ಚಿತ್ರೀಕರಣ ಕೂಡ ಬಹುತೇಕ ಪೂರ್ಣಗೊಂಡಿದೆ. ಇಟಿವಿ ವಿನ್ (ETV Win) ಗಾಗಿ 'ಲಿಟಲ್ ಹಾರ್ಟ್ಸ್' ನಿರ್ಮಾಣದ 'ಜಿಲ್ಲೆರಿ ಜಿಕಟ್ಟು' ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇನ್ನೂ ಒಂದೆರಡು ಸಿನಿಮಾಗಳು ಮಾತುಕತೆಯ ಹಂತದಲ್ಲಿವೆ.

Untitled design - 2026-10-30T120103.848

ಸಿನಿಮಾರಂಗದ ಹಿರಿಯ ನಟ ಶಿವರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಶಿವಣ್ಣ ಅವರೊಬ್ಬ ಅದ್ಭುತ ಮತ್ತು ಸರಳ ವ್ಯಕ್ತಿ. ಚಿತ್ರರಂಗದ ಹೊಸಬರಿಗೆ ಅವರು ಸದಾ ಪ್ರೋತ್ಸಾಹ ನೀಡುತ್ತಾರೆ. ನಮ್ಮ ಮೊದಲ ನಿರ್ಮಾಣದ ಸಿನಿಮಾ ಬಿಡುಗಡೆಯಾದ ಎರಡನೆಯ ವಾರದಲ್ಲಿ, ಅವರ ಕುಟುಂಬದ ಚಿತ್ರವೊಂದು ಪ್ರದರ್ಶನ ಕಾಣುತ್ತಿದ್ದರೂ, ನಮ್ಮ ಸಿನಿಮಾ ನೋಡಲು ಬಂದಿದ್ದರು. ಎಷ್ಟೇ ಎತ್ತರಕ್ಕೆ ಬೆಳೆದರೂ ಎಷ್ಟು ವಿನಯಶೀಲರಾಗಿರಬೇಕು ಎಂಬುದನ್ನು ಅವರಿಂದ ಕಲಿಯಬೇಕು. ಅವರ ಶಕ್ತಿ ಮತ್ತು ನಿರಂತರವಾಗಿ ಸಿನಿಮಾಗಳನ್ನು ಮಾಡುವ ಉತ್ಸಾಹ ನಮಗೆಲ್ಲರಿಗೂ ದೊಡ್ಡ ಸ್ಫೂರ್ತಿ.

ಸಿನಿಮಾದ ಹೊರತಾಗಿ ಪ್ರವಾಸದ ಬಗ್ಗೆ ನಿಮಗೆ ಅಪಾರ ಆಸಕ್ತಿ ಇದೆ. ನಿಮ್ಮ ಪಾಲಿಗೆ ಪ್ರವಾಸ ಎಂದರೇನು?

ಪ್ರವಾಸ ನನ್ನ ಜೀವನದ ಅತ್ಯಂತ ಪ್ರಮುಖ ಭಾಗ. ನಾವು ಹೊರಜಗತ್ತನ್ನು ನೋಡಿದಾಗಲೇ ಪ್ರಪಂಚ ಎಷ್ಟು ವಿಶಾಲವಾಗಿದೆ ಮತ್ತು ಬದುಕಲು ನೂರಾರು ದಾರಿಗಳಿವೆ ಎಂಬುದು ಅರಿವಾಗುತ್ತದೆ. ನಾನು ನಿರ್ವಹಿಸುವ ಪ್ರತಿಯೊಂದು ಪಾತ್ರಕ್ಕೂ, ಪ್ರವಾಸದ ವೇಳೆ ನಾನು ನೋಡುವ ವ್ಯಕ್ತಿಗಳೇ ಸ್ಫೂರ್ತಿಯಾಗುತ್ತಾರೆ. ಇತ್ತೀಚೆಗೆ ಯುರೋಪ್‌ಗೆ ಒಂದು ತಿಂಗಳ ಮಟ್ಟಿಗೆ ಭೇಟಿ ನೀಡಿದ್ದಾಗ ಅಲ್ಲಿನ ಜನರ ಜೀವನಶೈಲಿ ಹಾಗೂ ಸಮಯಪಾಲನೆ ನನ್ನಲ್ಲಿ ಆಶ್ಚರ್ಯ ಮೂಡಿಸಿತ್ತು. ಒಬ್ಬ ನಟನಿಗೆ ಪ್ರವಾಸ ಮಾಡುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ.

ಪ್ರವಾಸಕ್ಕೆ ನಿಮ್ಮ ಅಚ್ಚುಮೆಚ್ಚಿನ ತಾಣಗಳು ಯಾವುವು? ಮತ್ತು ನಿಮ್ಮ ಟ್ರಾವೆಲ್ ಕಂಪಾನಿಯನ್ ಯಾರು?

ನಾನು ಸಮುದ್ರ ತೀರವನ್ನು ಹೆಚ್ಚು ಇಷ್ಟಪಡುವ ಮನುಷ್ಯ. ಕುಂದಾಪುರ, ಗೋಕರ್ಣ, ಮಂಗಳೂರು ಕಡೆಯ ಬೀಚ್‌ಗಳು ಹಾಗೂ ನಗರದ ಗದ್ದಲವಿಲ್ಲದ ಪ್ರಕೃತಿಯ ಮಡಿಲು ನನಗೆ ಬಹಳ ಇಷ್ಟ. ಗೋಕರ್ಣ ನನಗೆ ನೆಮ್ಮದಿ ನೀಡುವ ಸಾಲಿಟ್ಯೂಡ್ (ಏಕಾಂತದ) ಜಾಗ, ಅಲ್ಲಿಗೆ ಹೋದಾಗ ಫೋನ್ ಸ್ವಿಚ್ ಆಫ್ ಮಾಡಿ ಯಾರಿಗೂ ಸಿಗದೆ ಪ್ರಕೃತಿಯೊಂದಿಗೆ ಸಮಯ ಕಳೆಯುತ್ತೇನೆ. ಪುಸ್ತಕ, ಸೀ ಫುಡ್ ಮತ್ತು ನನ್ನ ಬೈಕ್- ಇವುಗಳೇ ನನ್ನ ಟ್ರಾವೆಲ್ ಕಂಪಾನಿಯನ್ಸ್. ಈಗ ಸಿನಿಮಾಗಳ ಶೂಟಿಂಗ್ ಬ್ಯುಸಿ ಇರುವುದರಿಂದ ಬೈಕ್ ರೈಡ್ ಸ್ವಲ್ಪ ಕಡಿಮೆಯಾಗಿದೆ.

Untitled design - 2026-10-30T120155.579

ಸಾಹಸ ಕ್ರೀಡೆಗಳು ಮತ್ತು ಅಧ್ಯಾತ್ಮದ ಕಡೆಗೂ ನಿಮ್ಮ ಒಲವಿದೆ. ಆ ಬಗ್ಗೆ ಹೇಳಿ.

ಹೌದು, ನಾನು ಇತ್ತೀಚೆಗಷ್ಟೇ ಕೋತಾವೊ (Koh Tao) ದಲ್ಲಿ ಸ್ಕೂಬಾ ಡೈವಿಂಗ್ ಸರ್ಟಿಫಿಕೇಶನ್ ಕೋರ್ಸ್ ಮುಗಿಸಿದ್ದೇನೆ. ಮುಂದಿನ ಹಂತದ ತರಬೇತಿಗಾಗಿ ಶ್ರೀಲಂಕಾ ಅಥವಾ ಮಾಲ್ಡೀವ್ಸ್‌ಗೆ ಹೋಗುವ ಯೋಜನೆಯಿದೆ. ಅಧ್ಯಾತ್ಮದ ವಿಚಾರಕ್ಕೆ ಬಂದರೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಯೋಗ ಮತ್ತು ಧ್ಯಾನ ನನ್ನ ದಿನನಿತ್ಯದ ಅಭ್ಯಾಸವಾಗಿದೆ. ನಾನು ದೇವಸ್ಥಾನಗಳಿಗಿಂತ ಹೆಚ್ಚಾಗಿ ಪ್ರಕೃತಿಯನ್ನು ಹಾಗೂ ಇಡೀ ವಿಶ್ವವನ್ನು ದೇವರಂತೆ ಆರಾಧಿಸುತ್ತೇನೆ. ಇತ್ತೀಚೆಗೆ ಪಾಂಡಿಚೇರಿಯ ಆರೋವಿಲ್‌ಗೆ (Auroville) ಹೋಗಿದ್ದಾಗಲೂ ಧ್ಯಾನದಲ್ಲಿ ತೊಡಗಿಸಿಕೊಂಡಿದ್ದೆ.

ಹೊರದೇಶಗಳಿಗೆ ಪ್ರಯಾಣಿಸುವಾಗ ನಿಮ್ಮ ಡಯಟ್ (ಆಹಾರ ಪದ್ಧತಿ) ಹೇಗಿರುತ್ತದೆ?

ನನ್ನ ಪಾತ್ರಗಳಿಗೆ ಮತ್ತು ದೇಹದಾರ್ಢ್ಯತೆಗೆ ಅಗತ್ಯವಿದ್ದರೆ ಮಾತ್ರ ನಾನು ಕಟ್ಟುನಿಟ್ಟಾದ ಡಯಟ್ ಮಾಡುತ್ತೇನೆ. ನನಗೆ ಫಾಸ್ಟ್ ಫುಡ್ ಇಷ್ಟವಿಲ್ಲ. ನಾನು ಎಲ್ಲಿಗೆ ಪ್ರಯಾಣಿಸುತ್ತೇನೋ ಅಲ್ಲಿನ ಸ್ಥಳೀಯ ಊಟಕ್ಕೆ ಬಹಳ ಬೇಗ ಹೊಂದಿಕೊಳ್ಳುತ್ತೇನೆ. ಉದಾಹರಣೆಗೆ, ಮಲೇಷ್ಯಾದಲ್ಲಿ ಶೂಟಿಂಗ್‌ನಲ್ಲಿದ್ದಾಗ ಅಲ್ಲಿನ ಆಹಾರವನ್ನೇ ಇಷ್ಟಪಟ್ಟು ತಿಂದಿದ್ದೆ. ಆಯಾ ಜಾಗದ ಹವಾಮಾನಕ್ಕೆ ಅಲ್ಲಿನ ಆಹಾರವೇ ಸೂಕ್ತ ಎಂಬುದು ನನ್ನ ಅನಿಸಿಕೆ, ಜತೆಗೆ ಮಿತವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದೇನೆ.