ಸಿಸ್ಸುವಿನಲ್ಲೊಂದು ಪುಟ್ಟ ಮನೆ…ಪಕ್ಕದಲ್ಲೇ ಮ್ಯಾಗಿ ಅಂಗಡಿ
ಐ ಮೈ ಸೆಲ್ಫ್ ಎ ಸೋಲೋ ಟ್ರಾವೆಲರ್. ರಿಯಲ್ ಲೈಫ್‌ನಲ್ಲಿಯೂ. ಟ್ರಾವೆಲ್ ಅಂದರೆ ಹೊರಜಗತ್ತಿನ ಸುತ್ತಾಟವಷ್ಟೇ ಅಲ್ಲ. ಅದು ನಮ್ಮೊಳಗೇ ನಾವು ಪ್ರಯಾಣಿಸುವುದಕ್ಕೆ, ಆ ಮೂಲಕ ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಆಗಲೇ ಆ ಪ್ರಯಾಣಕ್ಕೊಂದು ಬೆಲೆ ಸಿಗುವುದು. ಈಗಂತೂ ಸೋಲೋ ಟ್ರಾವೆಲ್ ಎಂಬುದು ಟ್ರೆಂಡ್ ಆಗಿದೆ. ಆದರೆ ಅದು ನೀವು ಇಂಡಿಪೆಂಡೆಂಟ್‌ಎಂದು ತೋರಿಸಿಕೊಳ್ಳುವುದಕ್ಕಿರುವ ದಾರಿಯಂತೆ ಕಾಣುತ್ತದೆ. ನನಗೆ ಅದರ ಅಗತ್ಯವಿಲ್ಲ.
ನೀವ್ ನೋಡ್ತಿದ್ದೀರಾ ಜಸ್ಟ್ ಬೆಂಗಳೂರು, ನಾನು ಶೀತಲ್ ಶೆಟ್ಟಿ.. ಹೀಗೆನ್ನುತ್ತಲೇ ಮುದ್ದಾಗಿ ಕಣ್ಣು ಹೊಡೆದು ಸುದ್ದಿ ವಾಹಿನಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಶೀತಲ್, ನಂತರ ಸಿನಿರಂಗಕ್ಕೆ ಎಂಟ್ರಿ ಕೊಟ್ಟು, ನಟನೆ ಹಾಗೂ ನಿರ್ದೇಶನದಲ್ಲೂ ಹೊಸ ಪ್ರಯತ್ನಗಳನ್ನು ಮಾಡಿದವರು. ಶೀಟೇಲ್ಸ್ ಎಂಟರ್ಟೇನ್ಮೆಂಟ್ ಎಂಬ ಸಂಸ್ಥೆಯೊಂದನ್ನು ಕಟ್ಟಿ, ಬೆಳೆಸಿರುವ ಶೀತಲ್ ಶೆಟ್ಟಿಗೆ ಪ್ರವಾಸವೆಂದರೆ ಬಹಳ ಇಷ್ಟ. ಅವರ ಫೇವರಿಟ್ ಶೀತಲ ಪ್ರದೇಶಗಳು, ಎತ್ತರೆತ್ತರ ಗಿರಿಶಿಖರಗಳನ್ನೇರುವ ಖುಷಿಯನ್ನು ಪ್ರವಾಸಿ ಪ್ರಪಂಚದ ಓದುಗರೊಂದಿಗೆ ಹಂಚಿಕೊಂಡಿರುವುದು ಹೀಗೆ.
ಶೀತಲಾಕ್ಷರದಲ್ಲಿ ಪ್ರವಾಸ
ಅವನೊಬ್ಬ ಕೈಗೆ ಸಿಗದ ಬ್ಯುಸಿ ಟ್ರಿಪ್ ಮ್ಯಾನೇಜರ್ exclusive ಟ್ರಿಪ್ ಪ್ಲಾನ್ ಮಾಡ್ತಾನೆ.
ಪುಟ್ಟದೊಂದು ಜರ್ನಿಗೆ ನಮ್ಮನ್ನು ರೆಡಿ ಮಾಡ್ತಾನೆ
ಬದುಕಿನ ಬಸ್ಸಿನಲ್ಲಿ ಕೂರಿಸಿ
ಯಾರೂ ಅರ್ಥ ಮಾಡಿಕೊಳ್ಳಲಾಗದ ಮ್ಯಾಪ್ ಒಂದನ್ನು ಬ್ಯಾಗ್‌ಗೆ ತುರುಕಿಸಿ
ಕನಸುಗಳು ನಿರೀಕ್ಷೆಗಳನ್ನು ಪರ್ಸ್ ನಲ್ಲಿಟ್ಟು
ಅಡ್ಡ ದಾರಿಗಳಲ್ಲಿ ಹಾದಿ ತಪ್ಪಿಸಿ ಕಂಗಾಲು ಮಾಡಿ
ಕಾಡು ಮೇಡಲ್ಲಿ ಧೃತಿಗೆಡಿಸಿ, ಹೆದರಿಸಿ ಹೆದರಿಸಿ ಧೈರ್ಯ ತುಂಬಿ
ಬೇಕಾಬಿಟ್ಟಿ ತಿರುಗಾಡಿಸಿ
ಗುಡ್ಡ ಬೆಟ್ಟ ಅನ್ನೋ ಸವಾಲುಗಳ ಟ್ರೆಕ್ಕಿಂಗ್ ನ ಅನುಭವ ಕೊಟ್ಟು
ನೋವು-ನಲಿವು, ಸುಖ-ದುಃಖ ಎಲ್ಲವನ್ನೂ ಶಾಪಿಂಗ್ ಮಾಡಿಸಿ
ಸ್ನೇಹ- ಪ್ರೀತಿ, ಸೋಲು-ಗೆಲುವು, ಒಳ್ಳೆಯದು-ಕೆಟ್ಟದ್ದನ್ನು ತನ್ನ ಟ್ರಿಪ್ ನ itinerary ಯಲ್ಲಿ ಹಂಚುವ ಇವನು ಒಳ್ಳೆಯ ಟ್ರಿಪ್ ಮ್ಯಾನೇಜರ್. ಬೇಕಾದವರು ಇವನನ್ನು ಕಾಂಟ್ಯಾಕ್ಟ್ ಮಾಡಿ.. ಹಾಗೆ ಟ್ರಿಪ್ ಎಂಜಾಯ್ ಮಾಡೋದು ಮರೀಬೇಡಿ...
-ಶೀತಲಾಕ್ಷರ –
ವರ್ಕೋಹಾಲಿಕ್ ಆಗ್ಬೇಡ್ರಪ್ಪಾ…
ಏಕತಾನತೆಯ ಬದುಕಿಗೆ ಪ್ರವಾಸ, ಪ್ರಯಾಣದಿಂದ ಬದಲಾವಣೆ ಸಿಗುವಂತಾಗುತ್ತದೆ. ಮನಸಿಗೆ ಹಿತವೆನಿಸಲು, ಮುದ ನೀಡಲು ಪ್ರಯಾಣವಂತೂ ಅತಿಮುಖ್ಯ.

ನನ್ನೂರೇ ನನಗೆ ಮೇಲು
ಬ್ರಹ್ಮಾವರದ ಸೀತಾನದಿ ದಡದಲ್ಲಿರೋ ಹಂದಾಡಿ ನನ್ನೂರು. ಮುನ್ನೂರು ವರ್ಷಗಳ ಇತಿಹಾಸವಿರುವ ಗೋಪಾಲ ಕೃಷ್ಣ ದೇವಸ್ಥಾನ ಅಲ್ಲಿದೆ. ಕಂಬಳ, ಕೆಸರುಗದ್ದೆ ಓಟ, ಕೋಳಿ ಅಂಕ, ಚಿಕ್ಕಮೇಳ, ಹುಲಿವೇಷ, ಯಕ್ಷಗಾನ, ನಾಟಕ ಇಂಥ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆ, ವಿಚಾರಗಳು ನಮ್ಮೂರಿನ ಹೆಸರನ್ನು ಇನ್ನಷ್ಟು ವಿಸ್ತಾರಗೊಳಿಸುವಂತೆ ಮಾಡಿದೆ. ಮಳೆಗಾಲದಲ್ಲಂತೂ ಮದುಮಗಳಂತೆ ಕಂಗೊಳಿಸುವ ನನ್ನೂರನ್ನು ನೋಡುವುದೇ ಚೆಂದ. ಗಲಾಟೆ ಗದ್ದಲ ಎಲ್ಲದರಿಂದ ದೂರವಿದ್ದು, ನೆಮ್ಮದಿ ಬೇಕೆನಿಸಿದಾಗೆಲ್ಲ ನಾನು ಊರ ದಾರಿಯತ್ತ ಮುಖ ಮಾಡುತ್ತೇನೆ.
ಸಿಸ್ಸುವಿನಲ್ಲೇ ನಿವೃತ್ತಿಯ ಜೀವನ
ನನ್ನ ಹೆಸರಿನಂತೆಯೇ ನಾನು ಶೀತ ಪ್ರದೇಶಗಳನ್ನು ಇಷ್ಟಪಡುವವಳು. ಸಿನಿಮಾ ಚಿತ್ರೀಕರಣಕ್ಕಾಗಿ ಹಿಮಾಚಲ ಪ್ರದೇಶದ ಮನಾಲಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಸಿಸ್ಸು ಅನ್ನುವ ಪ್ರದೇಶಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಆ ಪರಿಸರ ಅದೆಷ್ಟು ಅದ್ಭುತವಾಗಿತ್ತೆಂದರೆ, ಬದುಕಿನ ನಿವೃತ್ತಿಯ ದಿನಗಳನ್ನು ಅಲ್ಲಿಯೇ ಒಂದು ಮನೆ ಮಾಡಿ ಪಕ್ಕದಲ್ಲೇ ಒಂದು ಮ್ಯಾಗಿ ಅಂಗಡಿ ಇಟ್ಟು ಆರಾಮವಾಗಿ ಕಳೆಯುವ ಆಸೆ ನನಗಾಗಿದೆ.
ಭೂತಾನ್ ಜನಜೀವನ ಅದ್ಭುತ
ನಾನು ಕೋಸ್ಟಲ್‌ನವಳಾದರೂ ನನಗೆ ಮೌಂಟೇನ್‌ಗಳೆಂದರೆ ತುಂಬಾ ಇಷ್ಟ. ಕರ್ನಾಟಕದ ಸ್ಕಂದಗಿರಿ, ರಾಮನಗರ ಬೆಟ್ಟ, ಚಿಕ್ಕಮಗಳೂರಿನ ಗುಡ್ಡ-ಬೆಟ್ಟಗಳು, ನಂದಿ ಹಿಲ್ಸ್‌ನಂಥ ಅನೇಕ ಗಿರಿಧಾಮಗಳಿಗೆ ಭೇಟಿ ನೀಡಿದ್ದೇನೆ. ಹಿಮಾಚಲ ಪ್ರದೇಶ, ಕುಲು ಮನಾಲಿಯೂ ನನಗೆ ತುಂಬ ಇಷ್ಟ. ರಾಜಸ್ಥಾನದ ಮೌಂಟ್ ಅಬು ಭಾರತದಲ್ಲಿ ನನ್ನಿಷ್ಟದ ಜಾಗ. ವಿದೇಶಗಳಲ್ಲಿ ಮೌಂಟೇನ್ ಇರುವ ಜಾಗಗಳಿಗೆ ಭೇಟಿ ನೀಡಿಲ್ಲವಾದರೂ ಭೂತಾನ್‌ನ ಪರಿಸರ, ಜನ, ಅವರ ಜೀವನ ಶೈಲಿಯಂತೂ ಆಕರ್ಷಿಸುವಂತಿದೆ. ಆದರೆ ಡ್ರೀಮ್ ಕಂಟ್ರಿ ಯಾವುದೆಂದು ಕೇಳಿದರೆ ಸ್ವಿಟ್ಜರ್‌ಲ್ಯಾಂಡ್‌ನಂಥ ಅನೇಕ ಪ್ರದೇಶಗಳನ್ನು ಸುತ್ತಾಡಬೇಕೆಂಬ ಆಸೆಯಿದೆ.
ಬದುಕುವುದಕ್ಕೆ ಸಿಂಪಲ್ ಫುಡ್ ಸಾಕಲ್ವೇ?
ಸಾಮಾನ್ಯವಾಗಿ ನಾನು ಅತಿಯಾದ ಆಹಾರ ಸೇವನೆ ಮಾಡುವುದಿಲ್ಲ. ತೀರಾ ಲೈಟ್‌ಫುಡ್ ನನಗಿಷ್ಟ. ಟ್ರಾವೆಲ್ ವೇಳೆಯಂತೂ ಎಣ್ಣೆಯ ಪದಾರ್ಥಗಳನ್ನು, ಖಾದ್ಯಗಳಿಂದ ದೂರವೇ ಉಳಿಯುತ್ತೇನೆ. ಪ್ರಯಾಣದ ವೇಳೆ ಸ್ಥಳೀಯ ಹಣ್ಣುಗಳು, ಚಪಾತಿ, ಬ್ರೆಡ್ ನಂಥ ನನ್ನಿಷ್ಟದ ಕೆಲವೇ ಆಹಾರವನ್ನು ಸೇವಿಸುತ್ತೇನೆ.

ಒಂಟಿ ಒಂಟಿಯಾಗೇ ಟ್ರಾವೆಲ್
ಐ ಮೈ ಸೆಲ್ಫ್ ಎ ಸೋಲೋ ಟ್ರಾವೆಲರ್. ರಿಯಲ್ ಲೈಫ್‌ನಲ್ಲಿಯೂ. ಟ್ರಾವೆಲ್ ಅಂದರೆ ಹೊರಜಗತ್ತಿನ ಸುತ್ತಾಟವಷ್ಟೇ ಅಲ್ಲ. ಅದು ನಮ್ಮೊಳಗೇ ನಾವು ಪ್ರಯಾಣಿಸುವುದಕ್ಕೆ, ಆ ಮೂಲಕ ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಆಗಲೇ ಆ ಪ್ರಯಾಣಕ್ಕೊಂದು ಬೆಲೆ ಸಿಗುವುದು. ಈಗಂತೂ ಸೋಲೋ ಟ್ರಾವೆಲ್ ಎಂಬುದು ಟ್ರೆಂಡ್ ಆಗಿದೆ. ಆದರೆ ಅದು ನೀವು ಇಂಡಿಪೆಂಡೆಂಟ್‌ಎಂದು ತೋರಿಸಿಕೊಳ್ಳುವುದಕ್ಕಿರುವ ದಾರಿಯಂತೆ ಕಾಣುತ್ತದೆ. ನನಗೆ ಅದರ ಅಗತ್ಯವಿಲ್ಲ.
ಪ್ರವಾಸ ಅನಿವಾರ್ಯವಲ್ಲ, ಅವಶ್ಯಕ
ಪ್ರವಾಸ ಅನಿವಾರ್ಯವೆಂಬುದಕ್ಕಿಂತ ಅವಶ್ಯಕವೆನ್ನಬಹುದು. ಒಬ್ಬ ವ್ಯಕ್ತಿ ಭೌತಿಕವಾಗಿ, ಸಾಮಾಜಿಕವಾಗಿ, ಬೆಳೆಯಬೇಕೆಂದರೆ ಸುತ್ತಲಿನ ಪ್ರಪಂಚವನ್ನು ತಿಳಿಯಬೇಕು. ಇಲ್ಲವಾದರೆ ಕೂಪ ಮಂಡೂಕವಾಗಿಬಿಡುತ್ತಾನೆ. ವಿಜ್ಞಾನ ತಂತ್ರಜ್ಞಾನ, ಶಿಕ್ಷಣ, ಕೃಷಿ, ಅಥವಾ ಸಾಮಾಜಿಕ ಜೀವನದ ಬಗೆಗೆ ಖುದ್ದು ಟ್ರಾವೆಲ್ ಮಾಡುತ್ತಲೇ ತಿಳಿಯುವ ಕಲೆ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಪ್ರತಿ 10-15 ಕಿಮೀ ದೂರದ ಅಂತರದಲ್ಲಿ ಜನರ ಜೀವನ ಶೈಲಿ, ವೇಷಭೂಷಣ, ಸಂಪ್ರದಾಯ, ಭಾಷೆ ಎಲ್ಲವೂ ಬದಲಾಗುತ್ತದೆ. ಹೀಗಿರುವಾಗ ನಾವು ಜಗತ್ತನ್ನು ಸುತ್ತಿಲ್ಲವೆಂದರೆ ಬದುಕಿಗೆ ಅರ್ಥವಿಲ್ಲದಾಗುತ್ತದೆ. ಪ್ರವಾಸದಿಂದಾಗಿ ಎಲ್ಲವನ್ನೂಅಳವಡಿಸಿಕೊಳ್ಳುವ ಗುಣ ನಮ್ಮೊಳಗೆ ಹುಟ್ಟಿಕೊಳ್ಳುತ್ತದೆ.
ಫಾರಿನ್ ಟ್ರಿಪ್ ಆಡಂಬರಕ್ಕಾಗಿ ಅಲ್ಲ!
ಆಡಂಬರ ಜೀವನ ನಡೆಸುವವರು ಫಾರಿನ್ ಟೂರ್‌ಗಳಿಗೆ ಹೋಗುತ್ತಿರುತ್ತಾರೆ. ಆದರೆ ಸಾಮಾನ್ಯ ಜೀವನ ನಡೆಸುವವರು, ಕಂಡ ಕನಸುಗಳನ್ನು ಈಡೇರಿಸುವುದಕ್ಕಾಗಿ ಸಾಲ ಮಾಡಿ ತುಪ್ಪ ತಿನ್ನಬೇಕಿಲ್ಲ. ಕೈಲಾಗದಿದ್ದರೂ ಫಾರಿನ್ ಟೂರ್ ಮಾಡುವ ಆಸೆಯಿಂದ ಪ್ರಯೋಜನವೇನೂ ಇಲ್ಲ. ಪ್ರವಾಸದಿಂದ ಜ್ಞಾನ ವೃದ್ಧಿಯಾಗಬೇಕೆಂಬ ಮಾತು ನಿಜ. ಆದರೆ ಜ್ಞಾನ ಪಡೆಯುವುದಕ್ಕೆ ಮಂಡ್ಯ, ಮೈಸೂರಿಗೆ ಹೋದರೂ ಸಾಕು. ಅದಕ್ಕೆ ಫಾರಿನ್ ಟ್ರಿಪ್ ಆಗಲೇಬೇಕೆಂದಿಲ್ಲ. ಕಲಿಯದೆಯೇ ಇರುವವನು 180 ದೇಶಗಳನ್ನು ಸುತ್ತಿದರೂ ಹೊಸತೇನನ್ನೂ ತಿಳಿಯಲಾರನು. ಯು ಶುಡ್ ಹ್ಯಾವ್ ಆ್ಯನ್ ಐ ಟು ಅಡಾಪ್ಟ್ ಆಂಡ್ ಟು ಲರ್ನ್ ಥಿಂಗ್ಸ್.
ಎಲ್ಲದರಂತಲ್ಲ ಪ್ರವಾಸಿ ಪ್ರಪಂಚ
ಕನ್ನಡ ಪತ್ರಿಕಾ ರಂಗದಲ್ಲಷ್ಟೇ ಅಲ್ಲದೆ ಭಾರತೀಯ ಪತ್ರಿಕಾ ರಂಗದಲ್ಲೇ ಇದು ಬಹಳ ಒಳ್ಳೆಯ ಪ್ರಯತ್ನ. ಪ್ರವಾಸ ಅನ್ನುವುದು ಒಬ್ಬ ವ್ಯಕ್ತಿಯ ಸ್ವಭಾವವನ್ನು ಹೇಳುತ್ತದೆ. ಅಂದರೆ ನಮ್ಮ ಪ್ರವಾಸದ ಆಯ್ಕೆ ಹೇಗಿದೆ, ಪ್ರವಾಸದ ವೇಳೆ ಸಹ- ಪ್ರಯಾಣಿಕರ ಜತೆಗಿನ ಸಂಬಂಧ ಅಥವಾ ಹೋದ ಜಾಗದಲ್ಲಿ ನಾವು ಶುಚಿತ್ಚವನ್ನು ಪಾಲಿಸುವ ವಿಧಾನ, ಹೀಗೆ ಇದೆಲ್ಲವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತದೆ. ಈ ನಿಟ್ಟಿನಲ್ಲಿ ಪ್ರವಾಸಿ ಪ್ರಪಂಚ ಕಾರ್ಯಪ್ರವೃತ್ತವಾಗಿದೆ. ವ್ಯಕ್ತಿಯನ್ನು ಅರಿಯುವುದಕ್ಕೆ, ಹಾಗೂ ವ್ಯಕ್ತಿಯ ಕಣ್ಣಿನಿಂದ ಆ ಜಾಗವನ್ನು ಅರಿವುದಕ್ಕೆ ಇದು ಸಹಕಾರಿ. ಹಿರಿಯ ಪತ್ರಕರ್ತ, ಸಂಪಾದಕ ವಿಶ್ವೇಶ್ವರ ಭಟ್ಟರ ಈ ಪ್ರಯತ್ನ ಇನ್ನಷ್ಟು ಮಜಲುಗಳಲ್ಲಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.