ಸೋಲೋ ಟ್ರಾವೆಲ್ ಎಂದರೆ ಸೋತುಬಿಡುವೆ - ರಕ್ಷಿತಾ ಭಾಸ್ಕರ್
ಜೀವನದಲ್ಲಿ ಒಮ್ಮೆಯಾದರೂ ಸ್ಕೈಡೈವ್ ಮಾಡಬೇಕೆಂದುಕೊಂಡಿದ್ದೆ. ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಕೆಳ ಜಗತ್ತಿನ ನೋಟ ಹೇಗಿರುತ್ತದೆ ಎಂಬುದನ್ನು ನೋಡಬೇಕೆಂದುಕೊಂಡಿದ್ದೆ. ಹಕ್ಕಿಗಳಿಗೆ ಮನುಷ್ಯರು ಮತ್ತು ಭೂಮಿ ಹೇಗೆ ಕಾಣಬಹುದು ಎಂದು ತಿಳಿಯುವುದಕ್ಕಾಗಿ ಸ್ವಲ್ಪ ಹೊತ್ತಿಗಾದರೂ ಹಕ್ಕಿಯಾಗಬೇಕೆಂದೆಸಿತ್ತು. ಈ ನನ್ನ ಆಸೆ ದುಬೈ ಪ್ರವಾಸದ ವೇಳೆ ಪೂರ್ಣವಾಗಿದೆ.
ಕನ್ನಡ ಕಿರುತೆರೆಯ ನಟಿ, ಗಾಯಕಿ, ನೃತ್ಯಗಾರ್ತಿ ಮಾತ್ರವಲ್ಲದೆ ತ್ರಿಧಾ ಮ್ಯೂಸಿಕ್ ಅಕಾಡೆಮಿಯ ಸ್ಥಾಪಕಿಯೂ ಆಗಿರುವ ಬಹುಮುಖ ಪ್ರತಿಭೆ ರಕ್ಷಿತಾ ಭಾಸ್ಕರ್ ಸಾಹಸಪ್ರೇಮಿಯೂ ಹೌದು. ಅದರಲ್ಲೂ ಟ್ರಾವೆಲ್ ಅಡ್ವೆಂಚರ್ ಎಂದರೆ ರಕ್ಷಿತಾಗೆ ಬಲು ಇಷ್ಟ. ದೇಶ-ವಿದೇಶಗಳನ್ನು ಸುತ್ತಬೇಕು, ಅಲ್ಲಿನ ಸಂಸ್ಕೃತಿಯನ್ನು ತಿಳಿಯಬೇಕು, ತಪ್ಪದೇ ಅಲ್ಲಿನ ಆಹಾರಗಳ ರುಚಿ ಹೇಗಿದೆಯೆಂದು ಟೇಸ್ಟ್ ಮಾಡಲೇಬೇಕು ಎನ್ನುವುದು ರಕ್ಷಿತಾ ಭಾಸ್ಕರ್ ಅವರ ಲೈಫ್ ಲಾಜಿಕ್.
ಕಾಣದ ಕಡಲಿಗೆ ಹಂಬಲಿಸಿದೆ ಮನ
ಇತ್ತೀಚೆಗಷ್ಟೇ ಕೇರಳದ ತಿರುವನಂತಪುರದ ವರ್ಕಲಾಕ್ಕೆ ಸ್ನೇಹಿತರ ಜತೆಗೆ ಪ್ರವಾಸ ಹೋಗಿ ಬಂದಿದ್ದೆ. ನನಗೆ ಬೀಚ್‌ಗಳೆಂದರೆ ಬಹಳ ಇಷ್ಟವಾದ್ದರಿಂದ ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೆ. ಕಡಲ ತೀರದಲ್ಲಿ ಕುಳಿತು ಬಂದು ಹೋಗುವ ಅಲೆಗಳ ಜತೆ ಮಾತನಾಡುವುದೆಂದರೆ ನನಗೆ ನೆಮ್ಮದಿ ಸಿಗುತ್ತದೆ. ಹೀಗೆ ಸಾಕಷ್ಟು ಹೊತ್ತು ಕಳೆದಿದ್ದೆ. ವರ್ಕಲಾದಲ್ಲಿ ಎಕ್ಸ್‌ಪ್ಲೋರ್ ಮಾಡಲು ತುಂಬಾ ಜಾಗಗಳೇನಿಲ್ಲ. ಅಲ್ಲಿರುವುದೆಲ್ಲವೂ ಕ್ಯೂಟ್ ಹಾಗೂ ಏಸ್ಥೆಟಿಕ್ ಕೆಫೆಗಳಷ್ಟೇ. ಬೀಚ್ ಮುಂದಿನ ರೆಸ್ಟೋರೆಂಟ್ ಗಳಂತೂ ಬಹಳ ಅದ್ಭುತವಾಗಿವೆ. ವರ್ಕಲಾದಲ್ಲಿ ಮಿಸ್ ಮಾಡಲೇ ಬಾರದೆಂಬ ಕೆಲವು ಸ್ಥಳಗಳಿಗೆ ಭೇಟಿ ನೀಡಿದ್ದೆ. ಬೀಚ್ ಪಕ್ಕದಲ್ಲೇ ಸ್ಟೇ ಬುಕ್ ಮಾಡಿದ್ದರಿಂದ ಉಳಿದಂತೆ ಎಲ್ಲ ಸಮಯವೂ ನನಗೂ ಮತ್ತು ಕಡಲಿಗೂ..ಅಷ್ಟೇ.

ಹಕ್ಕಿಯ ನೋಟದ ಸ್ಕೈಡೈವ್
ಜೀವನದಲ್ಲಿ ಒಮ್ಮೆಯಾದರೂ ಸ್ಕೈಡೈವ್ ಮಾಡಬೇಕೆಂದುಕೊಂಡಿದ್ದೆ. ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಕೆಳ ಜಗತ್ತಿನ ನೋಟ ಹೇಗಿರುತ್ತದೆ ಎಂಬುದನ್ನು ನೋಡಬೇಕೆಂದುಕೊಂಡಿದ್ದೆ. ಹಕ್ಕಿಗಳಿಗೆ ಮನುಷ್ಯರು ಮತ್ತು ಭೂಮಿ ಹೇಗೆ ಕಾಣಬಹುದು ಎಂದು ತಿಳಿಯುವುದಕ್ಕಾಗಿ ಸ್ವಲ್ಪ ಹೊತ್ತಿಗಾದರೂ ಹಕ್ಕಿಯಾಗಬೇಕೆಂದೆಸಿತ್ತು. ಈ ನನ್ನ ಆಸೆ ದುಬೈ ಪ್ರವಾಸದ ವೇಳೆ ಪೂರ್ಣವಾಗಿದೆ. ಇದು ನನ್ನ ಜೀವನದಲ್ಲೇ ಬೆಸ್ಟ್ ಅನುಭವ. ಸ್ಕೈಡೈವ್‌ಗೂ ಮುನ್ನ ಈ ವೇಳೆ ಯಾವುದೇ ಅನಾಹುತಗಳಾದರೂ ನಾವು ಜವಾಬ್ದಾರರಲ್ಲ ಎಂಬ ಕನ್ಸೆಂಟ್ ಫಾರ್ಮ್‌ಗೆ ಸಹಿ ಹಾಕಲು ಹೇಳಿದ್ದರು. ಸಹಿ ಹಾಕಬೇಕಾದರೆ ಒಮ್ಮೆಲೇ ಕೈ ನಡುಗಿತ್ತು. ಆದರೆ ಅಲ್ಲಿಯವರೆಗೂ ಬಂದು ಹಾಗೆಯೇ ಹೋಗುವುದು ನನಗಿಷ್ಟವಿಲ್ಲ. ಧೈರ್ಯ ಮಾಡಿ ಹೊಸ ಅನುಭವ ಪಡೆದುಕೊಂಡೆ.
ಅಡ್ವೆಂಚರಸ್ ಟ್ರಾವೆಲ್ ನನಗಿಷ್ಟ
ನಾನು ತುಂಬಾ ಸಾಹಸ ಪ್ರವೃತ್ತಿಯವಳು. ಹಣೆಬರಹವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಂಬಿದವಳು. ಆದ್ದರಿಂದ ಪ್ರವಾಸ, ಪ್ರಯಾಣದ ವೇಳೆ ಸಾಹಸ ಮಾಡಿದರಷ್ಟೇ ಏನಾದರೂ ಹೊಸತನ್ನು ತಿಳಿಯಲು, ಕಲಿಯಲು ಸಾಧ್ಯ. ಟ್ರಾವೆಲ್ ಮಾಡುವುದು ನನಗೆ ಎಷ್ಟು ಇಷ್ಟವೋ ಅಡ್ವೆಂಚರಸ್ ಆಗಿ ಟ್ರಾವೆಲ್ ಮಾಡುವುದೆಂದರೂ ಅಷ್ಟೇ ಇಷ್ಟ.
ಫೇವರಿಟ್ ಫುಡ್ ಅಡ್ಡಾ
ಪ್ರತೀ ವಾರ ಸ್ನೇಹಿತರೊಂದಿಗೆ ಬೆಂಗಳೂರಿನ ಒಂದಲ್ಲಾ ಒಂದು ಹೊಟೇಲ್, ರೆಸ್ಟೋರೆಂಟ್‌ಗೆ ಹೋಗುತ್ತಲೇ ಇರುತ್ತೇನೆ. ಹೊಸ ಫುಡ್ ಐಟಂಗಳನ್ನು ಟ್ರೈ ಮಾಡುತ್ತಿರುತ್ತೇನೆ. ನನ್ನ ರೆಗ್ಯುಲರ್ ಅಡ್ಡವೆಂದರೆ ಆರ್‌ಆರ್ ನಗರದ ʼಸ್ಟೋರೀಸ್ʼ ಅಲ್ಲದೆ ತೈಮಂಡ್ ವಿಸ್ಕ್.
ʻಟ್ರಾವೆಲ್ʼ - ಟೈಮ್ ಮ್ಯಾನೇಜ್ ಮೆಂಟ್
ಯಾವುದೇ ಕೆಲಸವನ್ನು ಮಾಡುವುದಕ್ಕೂ ಟೈಮ್ ಸಿಗುವುದಿಲ್ಲ. ನಾವೇ ಟೈಮ್ ಮಾಡಿಕೊಳ್ಳಬೇಕಾಗುತ್ತದೆ. ಮ್ಯೂಸಿಕ್ ಕ್ಲಾಸ್, ಶೂಟಿಂಗ್ ಹೀಗೆ ಅನೇಕ ಆಸಕ್ತಿಗಳ ನಡುವೆ ನನ್ನಿಷ್ಟದ ಪ್ರವಾಸಕ್ಕಾಗಿ ನಾನೇ ಸಮಯವನ್ನು ಹುಡುಕಿಕೊಳ್ಳುತ್ತೇನೆ. ತಿಂಗಳಿಗೆ ಒಂದು ಬಾರಿಯಾದರೂ ಪ್ರಯಾಣ ಮಾಡಲೇಬೇಕೆನ್ನುವ ಯೋಜನೆಯನ್ನು ಹಾಕಿ ಪ್ಲ್ಯಾನಿಂಗ್ ಜತೆಗೆ ಅದನ್ನು ಕಾರ್ಯರೂಪಕ್ಕೂ ತಂದಿದ್ದೇನೆ.

ದುಬೈನ ಮರುಭೂಮಿಯಲ್ಲಿ
ನನ್ನ ಜೀವನದ ಬೆಸ್ಟ್ ಟ್ರಿಪ್ ಗಳಲ್ಲಿ ದುಬೈ ಪ್ರಮುಖವಾದುದು. ದುಬೈ ಅಂದರೆ ಮೊದಲು ನೆನಪಾಗುವುದು ಅಲ್ಲಿನ ಕ್ಲೀನ್ ನಗರ, ರಸ್ತೆಗಳು. ಅಲ್ಲಿನ ಸರಕಾರ ಕಾರ್ಯರೂಪಕ್ಕೆ ತರುವ ಯಾವುದೇ ನೀತಿ ನಿಯಮಗಳನ್ನು ಅಲ್ಲಿನ ಜನರು ತಪ್ಪದೇ ಪಾಲಿಸುತ್ತಾರೆ. ನನ್ನ ಪಾಲಿಗೆ ಮತ್ತೆ ಮತ್ತೆ ಹೋಗಬೇಕೆನಿಸುವ ದೇಶವದು. ಅಲ್ಲಿ ಇಂಥ ಜಾಗ ಚೆನ್ನಾಗಿಲ್ಲ ಎನ್ನುವಂತಿಲ್ಲ. ಆದರೂ ದುಬೈ ಮರುಭೂಮಿ ನನಗೆ ಅತಿಯಾಗಿ ಇಷ್ಟವಾಗಿದೆ.
ಟ್ರಾವೆಲ್ ಪ್ಲ್ಯಾನಿಂಗ್ ಬೇಕಿಲ್ಲ
ನನಗೆ ಪ್ರವಾಸ ಹೋಗಬೇಕೆನಿಸಿದರೆ ಪೂರ್ವ ತಯಾರಿ ಇಲ್ಲದೆಯೂ ಇದ್ದಕ್ಕಿದ್ದಂತೆಯೇ ಹೊರಟುಬಿಡುತ್ತೇನೆ. ಅದಕ್ಕಾಗಿ ನನಗೆ ಪ್ಲ್ಯಾನಿಂಗ್ ಅಗತ್ಯ ಬರುವುದಿಲ್ಲ. ಅಂತಾರಾಷ್ಟ್ರೀಯ ಪ್ರವಾಸವಾದರಷ್ಟೇ ಎರಡು ತಿಂಗಳ ಮುಂಚಿತವಾಗಿಯೇ ತಯಾರಿಗಳನ್ನು ಪ್ರಾರಂಭಿಸಿಕೊಳ್ಳುತ್ತೇನೆ. ಐಟನರೀಸ್ ಇರಬಹುದು, ಅಲ್ಲಿ ಯಾವ ಥರ ಆಹಾರ ಸಿಗುತ್ತೆ, ವೆದರ್ ಹೇಗಿದೆ ಇವೆಲ್ಲದರ ಬಗ್ಗೆ ಮುಂಚಿತವಾಗಿ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತೇನೆ. ನಾನು ವೆಜಿಟೇರಿಯನ್ ಆಗಿರುವುದರಿಂದ ನನಗೆ ಎಲ್ಲಿ ಹೋದರೂ ಆಹಾರದ ಸಮಸ್ಯೆ ಎದುರಾಗುವುದರಿಂದ ಅದಕ್ಕೊಂದಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರುತ್ತೇನೆ.
ಎಲೆಕ್ಟ್ರಾನಿಕ್ ಐಟಮ್ಸ್‌ಗೆ ಬೈ ಬೈ
ಟ್ರಾವೆಲ್ ಬ್ಯಾಗ್ ಇರಲೇಬೇಕಾದ ವಸ್ತುಗಳ ಪಟ್ಟಿ ದೊಡ್ಡದಿರುತ್ತದೆ. ಆದರೆ ಯಾವ ವಸ್ತುವಿನಿಂದ ದೂರವಿರುತ್ತೀರಿ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ. ಆದರೂ ನನಗೆ ಅವಕಾಶ ಸಿಗುವುದಾದರೆ ವರ್ಕ್ ಹಾಗೂ ಪರ್ಸನಲ್ ಫೋನ್, ಐಪ್ಯಾಡ್ಸ್, ಪವರ್ ಬ್ಯಾಂಕ್, ಚಾರ್ಜರ್ಸ್, ಹೀಗೆ ಯಾವ ಎಲೆಕ್ಟ್ರಾನಿಕ್ ಐಟಂ ಗಳನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದರೆ ನಮಗೆ ಅದರಲ್ಲಿ ಆಯ್ಕೆಯೇ ಇಲ್ಲದ ಕಾರಣ ಅನಿವಾರ್ಯವಾಗಿ ಇಂಥ ವಸ್ತುಗಳನ್ನು ಬಳಕೆ ಮಾಡಲೇಬೇಕಾಗಿದೆ.
ಐರ್ಲೆಂಡ್ ನೆಕ್ಸ್ಟ್ ಡೆಸ್ಟಿನೇಷನ್
ಇದೇ ನನ್ನ ಡ್ರೀಮ್ ಡೆಸ್ಟಿನೇಷನ್ ಎಂಬುದಿಲ್ಲ. ಬಕೆಟ್ ಲಿಸ್ಟ್ ನಲ್ಲಿ ಹಲವಿರುವುದರಿಂದ ಒಂದೊಂದಾಗಿ ಹೋಗಿ ಬರಬೇಕೆಂದಿರುವೆ. ಐ ಹ್ಯಾವ್ ಟು ಸೀ ದಿ ವರ್ಲ್ಡ್. ಅದರಲ್ಲಿ ನಾರ್ತರ್ನ್ ಲೈಟ್ಸ್ ನನ್ನ ಮೊದಲ ಆಯ್ಕೆ. ಈ ನಡುವೆ ಮುಂದಿನ ವರ್ಷಕ್ಕೆ ಐರ್ಲೆಂಡ್ ಗೆ ಹೋಗುವ ಪ್ಲಾನ್ ಸಿದ್ಧ ಮಾಡಿಕೊಂಡಿದ್ದೇನೆ. ದೇಶದೊಳಗೆ ಟೆಂಪಲ್ ರನ್ ಮಾಡುವ ಆಸೆಯಿದೆ. ಅಯೋಧ್ಯೆ, ಕಾಶಿ, ಗಂಗಾ, ಮಥುರಾ, ಸೋಮೇಶ್ವರ ಹೀಗೆ ಎಲ್ಲವನ್ನೂ ಸುತ್ತಿ ಬರಬೇಕಿದೆ.
ಸೋ…ನೋ ಸೋಲೋ
ನಾನು ಸೋಲೋ ರೈಡ್ ಹೋಗಿಲ್ಲ. ಸ್ಟ್ರೇಂಜರ್ಸ್ ಜತೆ ಹೋಗಿದ್ದೇನೆ. ನಾನು ಸೋಲೋ ಟ್ರಾವೆಲ್ ಮಾಡಬಲ್ಲೆನಂಬ ನಂಬಿಕೆಯೇ ನನಗಿಲ್ಲ. ಯಾಕೆಂದರೆ ಟ್ರಾವೆಲ್ ಮಾಡಿದ ಪ್ರತಿ ಕ್ಷಣದ ಅನುಭವವನ್ನೂ ನಾನು ನನ್ನ ಸ್ನೇಹಿತರು ಹಾಗೂ ಫ್ಯಾಮಿಲಿ ಜತೆಗೆ ಹಂಚಿಕೊಳ್ಳುವ ಪ್ರವೃತ್ತಿಯವಳು. ಸೋಲೋ ಟ್ರಿಪ್ ಮಾಡಿದರ ನಡುವೆ ನಾನು ಬರೀ ಫೋನ್ ಕರೆಗಳಲ್ಲೇ ಇದ್ದುಬಿಡುವೆ. ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುವುದರಲ್ಲೇ ಕಾಲ ಕಳೆಯುವೆ ಅನಿಸುತ್ತದೆ.
ಮನಾಲಿ ಚಳಿಯಲಿ
ಪ್ರತೀ ಟ್ರಿಪ್ ನಲ್ಲೂ ಒಂದೊಂದು ರೀತಿಯ ಅನುಭವ ಆಗುತ್ತಲೇ ಇರುತ್ತದೆ. ಅದರಲ್ಲೂ ಮನಾಲಿಗೆ ಹೋಗುವ ಸಂದರ್ಭದಲ್ಲಂತೂ 2-3 ತಿಂಗಳ ಮುಂಚಿತವಾಗಿಯೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆವು. 50-60 ಸಾವಿರ ಕೊಟ್ಟು ಹಿಲ್ ವ್ಯೂ ಸ್ಟೇ ಕೂಡ ಬುಕ್ ಮಾಡಿಕೊಂಡಿದ್ದಾಗಿತ್ತು. ಆದರೆ ಅಂದು ಅತಿಯಾಗಿ ಸ್ನೋ ಫಾಲ್ ಆಗಿದ್ದ ಕಾರಣ ನಾವು ಬುಕ್ ಮಾಡಿದ ಸ್ಟೇ ಗೆ ತಲುಪುವ ರಸ್ತೆಗಳೆಲ್ಲವೂ ಬಂದ್ ಅಗಿದ್ದವು. ಮಧ್ಯರಾತ್ರಿಯ ವೇಳೆ ಅಲ್ಲಿಗೆ ತಲುಪಿದ್ದರಿಂದಾಗಿ ಬೇರೆ ಹೊಟೇಲ್ ಹುಡುಕುವುದಕ್ಕೂ ಸಾಧ್ಯವಾಗದೇ ಆ ಮೈ ಕೊರೆಯುವ ಚಳಿಯಲ್ಲಿ ಕಳೆದ ಕ್ಷಣಗಳನ್ನು ಇಂದಿಗೂ ಮರೆಯುವುದಕ್ಕಾಗಿಲ್ಲ.