ಫಿಲ್ಟರ್ ಕಾಫಿ ಸಿಗದೆ ಮಾಲ್ಡೀವ್ಸ್‌ನಲ್ಲಿ ಪರದಾಟ..
ಟ್ರಾವೆಲ್ ಅಂದರೆ ಪ್ರತಿಯೊಬ್ಬರಿಗೂ ಅವರದೇ ಆದ ಅನಿಸಿಕೆಗಳಿರಬಹುದು. ಆದರೆ ನನಗೆ ಅದು ಅನುಭವ, ಜ್ಞಾನ ಮಾತ್ರವಲ್ಲದೆ ಉಲ್ಲಾಸವನ್ನು ತರುವ ವಿಚಾರವೂ ಹೌದು. ಪುಸ್ತಕಗಳಲ್ಲಿ ಸಿಗುವ ಜ್ಞಾನಕ್ಕೂ ನಾವೇ ಖುದ್ದು ಅಲ್ಲಿಗೆ ತೆರಳಿ ಪಡೆದುಕೊಳ್ಳುವ ಅನುಭವಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ ಎನ್ನುತ್ತಾರೆ ನಟಿ ಜಾಹ್ನವಿ. ಅವರ ಟ್ರಾವೆಲ್ ಲೈಫ್ ಪರಿಚಯ ಇಲ್ಲಿದೆ.
ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ಜಾಹ್ನವಿ ಬಿಗ್ ಬಾಸ್, ನಮ್ಮಮ್ಮ ಸೂಪರ್ ಸ್ಟಾರ್ ಮಾತ್ರವಲ್ಲದೆ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋಗಳ ಮೂಲಕ ಮನೆಮಾತಾದವರು. ಸದ್ಯ ಸ್ಯಾಂಡಲ್‌ವುಡ್ ನಲ್ಲಿ ಯುವನ್ ರಾಬಿನ್‌ಹುಡ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಜಾಹ್ನವಿ, ಕುಟುಂಬದ ಜತೆಗಷ್ಟೇ ಅಲ್ಲದೆ ವೃತ್ತಿಗಾಗಿಯೂ ಪ್ರವಾಸ ಮಾಡುತ್ತಲೇ ಇರುವವರು. ಈ ವಾರದ ಪ್ರವಾಸಿ ಪ್ರಪಂಚದಲ್ಲಿ ನಟಿ ಜಾಹ್ನವಿ ಅವರ ಪ್ರವಾಸಿ ಜೀವನ ಪರಿಚಯ.
ಇದನ್ನೂ ಓದಿ: ಸಮುದ್ರ ತೀರದಲ್ಲೇ ಲವ್ ಒಟಿಪಿ ಕಥೆ ಹುಟ್ಟಿದ್ದು
ವರುಷಕ್ಕೊಂದು ಪ್ರವಾಸ
ಚಿಕ್ಕಪುಟ್ಟ ಪ್ರವಾಸಗಳಿಗೆ ಹೊರತಾಗಿ ಕುಟುಂಬದ ಜತೆಗೆ ವರ್ಷಕ್ಕೊಂದು ಲಾಂಗ್ ಟ್ರಿಪ್ ಮಾಡುತ್ತೇನೆ. ಅದರಲ್ಲೂ ದೇವಾಲಯಗಳಿಗೆ ಭೇಟಿ ನೀಡುವುದೆಂದರೆ ನನಗೆ ಹೆಚ್ಚಿಗೆ ಖುಷಿ. ಶಿರಡಿ, ಶನಿ ಶಿಂಗ್ನಾಪುರ, ಅಸ್ಸಾಂನ ಕಾಮಾಕ್ಯ ದೇವಾಲಯ, ಅಯೋಧ್ಯೆ, ಕಾಶಿ..ಹೀಗೆ ಅನೇಕ ದೇವಾಲಯಗಳನ್ನು ಭೇಟಿ ಮಾಡಿದ್ದೇನೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವ ಜತೆಗೆ ಮನಸು ಧನಾತ್ಮಕ ಚಿಂತನೆಗಳಿಗೆ ತೆರೆದುಕೊಳ್ಳುತ್ತದೆ. ದೇವಾಲಯಗಳಿಗಷ್ಟೇ ಅಲ್ಲ ಅನೇಕ ಪ್ರವಾಸಿ ತಾಣಗಳಿಗೂ ಹೋಗುತ್ತಿರುತ್ತೇನೆ.

ಕಾಮಾಕ್ಯ ದೇವಿಯ ರಕ್ಷೆ
ಅಸ್ಸಾಂನ ಕಾಮಾಕ್ಯ ದೇವಾಲಯಕ್ಕೆ ಈಗಾಗಲೇ ಮೂರು ಬಾರಿ ಹೋಗಿದ್ದೇನೆ. ಆದರೂ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಮೊದಲ ಬಾರಿ ಹೋದ ಒಂದೇ ವಾರದಲ್ಲಿ ಅಲ್ಲಿ ಮತ್ತೊಮ್ಮೆ ಹೋಗುವ ಅವಕಾಶ ನನಗೆ ಲಭಿಸಿತ್ತು. ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಈ ದೇವಾಲಯದ ಬಗ್ಗೆ ಅಶ್ವಿನಿ ಅವರ ಜತೆಗೆ ಮಾತನಾಡಿಕೊಂಡಿದ್ದೆ. ಅದರಂತೆ ಕಾಮಾಕ್ಯಕ್ಕೆ ಅಶ್ವಿನಿಯವರ ಜತೆಗೂ ಒಮ್ಮೆ ಹೋಗಬೇಕೆಂದಿರುವೆ.
ಪ್ರವಾಸ ನನಗಿಷ್ಟ
ಪ್ರಯಾಣಕ್ಕಿಂತ ನನಗೆ ಪ್ರವಾಸವೇ ಅಚ್ಚುಮೆಚ್ಚು. ಅಂದರೆ ಹೋಗಬೇಕಿರುವ ಪ್ರವಾಸಕ್ಕೆ ಕೈಗೊಳ್ಳುವ ದೂರದ ಪ್ರಯಾಣಕ್ಕಿಂತಲೂ ನಾನು ಡೆಸ್ಟಿನೇಷನ್‌ಗೆ ತಲುಪಿ ಅಲ್ಲಿನ ಪರಿಸರವನ್ನು ಹೆಚ್ಚಿಗೆ ನೋಡಲು ಬಯಸುತ್ತೇನೆ.
ಪರಿಚಿತವಲ್ಲದ ತಾಣಗಳ ಭೇಟಿ
ಎಲ್ಲರಿಗೂ ತಿಳಿದಿರುವ ಪ್ರವಾಸಿತಾಣಗಳನ್ನು ನೋಡುವುದಕ್ಕಿಂತ ಎಲೆಮರೆಯ ಕಾಯಿಯಂತೆ ಉಳಿದ ಪ್ರವಾಸಿ ತಾಣಗಳನ್ನು ನೋಡುವುದೇ ಖುಷಿ ನೀಡುತ್ತದೆ. ಇದರಿಂದ ಹೊಸ ಪರಿಸರವನ್ನು ಕಾಣಲು, ಪ್ರಾಮುಖ್ಯತೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.
ಮನಸೂರೆಗೊಂಡ ಮಾಲ್ಡೀವ್ಸ್
ಕುಟುಂಬದೊಂದಿಗೆ ಮಾಲ್ಡೀವ್ಸ್‌ಗೆ ಹೋಗಿಬಂದಿದ್ದೆ. ಅಲ್ಲಿನ ಹಿತವಾದ ವಾತಾವರಣ, ಶುಚಿಯಾದ ಪರಿಸರ, ಸ್ಪಟಿಕದಂತೆ ಪಾರದರ್ಶಕವಾಗಿರುವ ನೀರು, ಬಿಳಿ ಮರಳು ಎಲ್ಲವೂ ಅತ್ಯದ್ಭುತವಾಗಿದೆ. ಆದರೆ ಆಹಾರದ ವಿಚಾರದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಾಗಲೂ ಸಮಸ್ಯೆಗಳಾಗುತ್ತಿರುತ್ತವೆ. ನಮ್ಮ ರುಚಿಗೆ ಅನುಗುಣವಾಗಿ ಆಹಾರ ಸಿಗುವುದಿಲ್ಲ. ಕಾಫಿ ಸಿಗುವುದೂ ಇಲ್ಲ, ಸಿಕ್ಕಿದರೂ ಫಿಲ್ಟರ್ ಕಾಫಿ ಪ್ರೇಮಿಗಳಂತೂ ಪರದಾಡಲೇಬೇಕು.

ಬಿರು ಬೇಸಗೆಯಲ್ಲಿ ದುಬೈ ಸುತ್ತಾಟ
ಕೆಲಸದ ನಿಮಿತ್ತ ಹಿರಿಯ ನಟಿ ತಾರಾ ಅವರೊಂದಿಗೆ ದುಬೈಗೆ ಹೋಗುವ ಅವಕಾಶ ಸಿಕ್ಕಿತ್ತು. ಅವರೊಂದಿಗೆ ಹೋಗುವ ಸಂಭ್ರಮ ಒಂದೆಡೆಯಾದರೆ, ಅರಬ್ ದೇಶವನ್ನು ಸುತ್ತಾಡುವ ತವಕವೂ ನನ್ನಲ್ಲಿತ್ತು. ಇವೆಂಟ್ ಮುಗಿಯುತ್ತಲೇ ಒಂದೆರಡು ದಿನಗಳ ಕಾಲ ಅಲ್ಲೇ ಉಳಿದೆ ಎಲ್ಲರೂ ಜತೆಯಾಗಿ ದುಬೈ ಸುತ್ತಾಡಿದ್ದೆವು. ಬೇಸಗೆಯಲ್ಲಿ ದುಬೈ ಭೇಟಿ ಕಷ್ಟವಾಗಿದ್ದರೂ ಕರಾಮಾ ಸೆಂಟರ್, ಬುರ್ಜ್ ಖಲೀಫಾ ನೋಡ ಬಂದಿದ್ದೆ. ದುಬೈಗೆ ಹೋದಮೇಲೆ ಶಾಪಿಂಗ್ ಮಾಡದೇ ಬರುವುದಾದರೂ ಹೇಗೆ ?
ಮೆಚ್ಚುಗೆಯಾದ ಬಹ್ರೇನ್ ಆತಿಥ್ಯ
ಕನ್ನಡ ಸಂಘದ ಉದ್ಘಾಟನೆಯ ಕಾರ್ಯಕ್ರಮವೊಂದರೆ ನಿರೂಪಣೆಗಾಗಿ ಬಹ್ರೇನ್ ಪ್ರವಾಸ ಕೈಗೊಂಡಿದ್ದೆ. ಅಲ್ಲಿನ ಜನರ ಆತಿಥ್ಯ ನನಗೆ ಆಪ್ತವೆನಿಸಿತು. ಅತಿಥಿಗಳನ್ನು ಆದರಿಸುವ ಅಲ್ಲಿನ ಜನರನ್ನು ಮೆಚ್ಚಲೇಬೇಕು. 5 ದಿನಗಳ ಕಾಲ ಅಲ್ಲಿ ಪ್ರವಾಸಿ ತಾಣಗಳನ್ನು ಸುತ್ತಾಡಿಬಂದಿದ್ದೆ. ಟ್ರಾಫಿಕ್ ಅತೀ ಕಡಿಮೆಯಿರುವ ಅಲ್ಲಿ, ಪ್ರಯಾಣದ ವೇಳೆ ಹಾರ್ನ್ ಮಾಡುವುದೇ ಇಲ್ಲ. ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎನ್ನುವ ನಮ್ಮ ಜನರಿಗೆ ಅಲ್ಲಿನ ನಿಯಮಗಳೆಲ್ಲವೂ ಮಾದರಿಯಾಗಿವೆ.
ಬೆಂಗಳೂರಿನಂತಿದೆ ಶ್ರೀಲಂಕಾ
ಶ್ರೀಲಂಕಾ ಪ್ರವಾಸದ ಅನುಭವ ವಿಭಿನ್ನವಾಗಿತ್ತು. ನಾನು ಬೆಂಗಳೂರಿನಲ್ಲೇ ಇದ್ದೇನೆನ್ನುವ ಅನುಭವ ಶ್ರೀಲಂಕಾದಲ್ಲೂ ಸಿಕ್ಕಿತ್ತು. ನಾನು ಈವರೆಗೆ ಕೈಗೊಂಡ ಪ್ರವಾಸಗಳ ಪೈಕಿ ಅಗ್ಗದ ಪ್ರವಾಸವದು. ಆಹಾರ, ಸ್ಟೇ ಸೇರಿದಂತೆ ಎಲ್ಲವೂ ಬಹಳ ಕಡಿಮೆ ಮೊತ್ತದಲ್ಲೇ ಸಾಧ್ಯವಾಗಿತ್ತು. ಕಡಲತೀರಗಳೇ ನನಗಿಷ್ಟವಾಗಿದ್ದರಿಂದ ಶ್ರೀಲಂಕಾದಲ್ಲಿಯೂ ಬೀಚ್ ಸೈಡ್ ಪ್ರಾಪರ್ಟಿಯಲ್ಲೇ ಉಳಿದುಕೊಂಡಿದ್ದೆ.
ಮಗನ ಜತೆ ಥೈಲ್ಯಾಂಡ್, ಬ್ಯಾಂಕಾಕ್
ಬೇಸಗೆ ರಜೆ ಬಂದರೆ ಮಗನ ಜತೆಗೆ ಪ್ರವಾಸಕ್ಕೆ ಹೊರಟುಬಿಡುತ್ತೇನೆ. ಅವನಿಗೆ ಬಿಸಿಲಿನಲ್ಲಿ ಓಡಾಡುವುದೆಂದರೆ ಕಷ್ಟವೆನಿಸುತ್ತದೆ. ಆದ್ದರಿಂದ ಸಂಜೆಯ ನಂತರ ಸುತ್ತಾಡಲು ಬರುತ್ತಾನೆ. ದುಬೈ ಅವನಿಗೆ ಇಷ್ಟವಾದ ತಾಣ. ಆದರೆ ಬೇಸಗೆಯಲ್ಲಿ ದುಬೈ ಪ್ರವಾಸ ಕಷ್ಟ. ಆದ್ದರಿಂದ ಮುಂದಿನ ದಿನಗಳಲ್ಲಿ ಥೈಲ್ಯಾಂಡ್, ಬ್ಯಾಂಕಾಕ್, ಬಾಲಿಗೆ ಅವನ ಜತೆಗೆ ಹೋಗಬೇಕೆಂದುಕೊಂಡಿದ್ದೇನೆ.

ಅಂಜನಾದ್ರಿ ಬೆಟ್ಟದಿಂದ ಹಂಪಿ ವೀಕ್ಷಣೆ
ಕರ್ನಾಟಕದ ಪ್ರವಾಸಿತಾಣಗಳಿಗೆ ಅದೆಷ್ಟು ಬಾರಿ ಹೋದರೂ ಸಾಕೆನಿಸುವುದಿಲ್ಲ. ಅದರಲ್ಲೂ ಹಂಪಿ ಸುತ್ತಾಡುವುದು ಬಹಳ ಇಷ್ಟ. ಈಗಾಗಲೇ ಅಲ್ಲಿಗೆ ಎರಡು-ಮೂರು ಬಾರಿ ಭೇಟಿ ನೀಡಿದ್ದೇನೆ. ಆದರೂ ಅಂಜನಾದ್ರಿ ಬೆಟ್ಟದಿಂದ ಹಂಪಿಯನ್ನು ನೋಡುವ ಅನುಭವವೇ ಬೇರೆ.
ಸದ್ಯದಲ್ಲೇ ಬೇಸಗೆ ಪ್ರವಾಸ
ಮೇ ತಿಂಗಳ ಅಂತ್ಯಕ್ಕೂ ಮುನ್ನ ಕುಟುಂಬದ ಜತೆಗೆ ಕೇರಳ ಅಥವಾ ಒಡಿಸ್ಸಾಕ್ಕೆ ಹೋಗಿ ಬರಬೇಕೆಂದಿಕೊಂಡಿದ್ದೇನೆ. ದೇವಾಲಯಗಳ ಭೇಟಿ ಪ್ರಮುಖ ಉದ್ದೇಶ. ಅದಾದ ನಂತರ ಮರಳುವ ವೇಳೆ ಸಮೀಪದ ಒಂದಷ್ಟು ಪ್ರವಾಸಿ ತಾಣಗಳನ್ನೂ ನೋಡಿಬರಬೇಕು ಅಂದುಕೊಂಡಿದ್ದೇನೆ.