ನನ್ನ ಲೈಫ್‌ನಲ್ಲಿ ಟ್ರಾವೆಲ್‌ ಅನ್ನೋದು ತುಂಬಾ ಮುಖ್ಯವೆನಿಸಿದೆ. ಬಿಡುವು ಸಿಕ್ಕಾಗೆಲ್ಲಾ ತಿಂಗಳು ಅಥವಾ ಎರಡು ತಿಂಗಳಿಗೊಂದು ಬಾರಿಯಾದರೂ ಪ್ರವಾಸ ಹೋಗಲು ಬಯಸುತ್ತೇನೆ. ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಜನರನ್ನು ಭೇಟಿಯಾಗುವುದಕ್ಕೆ, ವಿಶೇಷ ಸಂಸ್ಕೃತಿ ತಿಳಿದುಕೊಳ್ಳುವುದಕ್ಕೆ, ಅಲ್ಲಿನ ವಿಶೇಷ ಆಹಾರವನ್ನು ಸವಿಯುವುದಕ್ಕೆ ಸಾಧ್ಯವಾಗುತ್ತದೆ. ಇದೆಲ್ಲದರ ಜತೆಗೆ ಟ್ರಾವೆಲ್‌ ಈಸ್‌ ವೆರೀ ಲಿಬರೇಟಿಂಗ್‌, ಟ್ರಾವೆಲ್‌ ಗಿವ್ಸ್‌ ಎ ಲಾಟ್‌ ಆಫ್‌ ಇನ್‌ ಸೈಟ್ಸ್‌. ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಕಳೆದೊಂದು ವರ್ಷದಿಂದ ಜ್ಯೋತಿರ್ಲಿಂಗಗಳಿಗೆ ಹೋಗಿ ಬಂದಿದ್ದೇನೆ. ಚಾರ್‌ ಧಾಮ್‌ಗೂ ಭೇಟಿ ನೀಡಿದ್ದೇನೆ.

2025ರಲ್ಲಿ ಬೆಸ್ಟ್‌ ಟ್ರಾವೆಲ್‌

2025ರಲ್ಲಿ ಐ ಹ್ಯಾವ್‌ ಟ್ರಾವೆಲ್ಡ್‌ ಲೆಂತ್‌ ಆಂಡ್‌ ಬ್ರಡ್ತ್‌ ಆಫ್‌ ಇಂಡಿಯಾ. ಸ್ವಿಟ್ಜರ್‌ಲ್ಯಾಂಡ್, ಕಾಶಿ, ಅಯೋಧ್ಯೆ, ಜಾರ್ಖಂಡ್‌ನ ಬೈದ್ಯನಾಥೇಶ್ವರ್‌, ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ, ಕೇದಾರನಾಥ, ಗೋವಾ, ಮಹಾಕಾಲ್, ಓಂಕಾರೇಶ್ವರ ತ್ರಯಂಬಕೇಶ್ವರ, ಶಿರಡಿ,ಕಾಮಾಕ್ಯ ಹೀಗೆ ಅನೇಕ ಕಡೆ ಹೋಗಿದ್ದೆ. ಕಾಶಿ ನನಗೆ ಬೆಸ್ಟ್.‌ ಕಾಶಿಯ ಜತೆಗೆ ಕನೆಕ್ಟ್‌ ಆಗಿದ್ದೇನೆ. ಆ ಜಾಗದ ಫೀಲ್‌ ಬೇರೆಯೇ ಇದೆ. ಆ ಪಟ್ಟಣದಲ್ಲಿ ಸಿಗುವ ಚೈತನ್ಯವೇ ಬೇರೆ. ಅಲ್ಲಿ ಸುಮಾರು 13,000 ದೇವಾಲಯಗಳಿವೆ. ಅಲ್ಲಿ ನಡೆಯುವ ಗಂಗಾರತಿಯಂತೂ ಮತ್ತೆ ನೋಡಬೇಕೆನಿಸುತ್ತದೆ.

ಇದನ್ನೂ ಓದಿ: ’ಪಾಂಡಿಚೇರಿಯಲ್ಲಿ ಸ್ಟ್ರೀಟ್ ಶಾಪಿಂಗ್ ಮಾಡಿ’- ಅರ್ಚನಾ ಕೊಟ್ಟಿಗೆ

ಮುಂದಿನ ಕ್ರಿಸ್‌ಮಸ್‌ ಯುರೋಪ್‌ನಲ್ಲಿ

ಜ್ಯೋತಿರ್ಲಿಂಗ ದರ್ಶನ ಇನ್ನೂ ಪೂರ್ಣವಾಗಿಲ್ಲ. 2 ಜ್ಯೋತಿರ್ಲಿಂಗಗಳ ದರ್ಶನ ಉಳಿದುಕೊಂಡಿದೆ. ಅವನ್ನು ಈ ವರ್ಷ ಪೂರ್ತಿಗೊಳಿಸುತ್ತೇನೆ. ಅಮೆರಿಕಗೆ ಹೆಣ್ಮಕ್ಕಳ ಪ್ರವಾಸ ಹೋಗುವ ಯೋಚನೆಯನ್ನು ಈ ಬಾರಿ ಸಾಕಾರಗೊಳಿಸಬೇಕಿದೆ. ಅದು ಬಹು ದಿನಗಳ ದುಬಾರಿ ಪ್ರವಾಸವೂ ಹೌದು. ಮುಂದಿನ ಕ್ರಿಸ್‌ಮಸ್‌ಗೆ ಹಾಗೂ ವರ್ಷಾಂತ್ಯಕ್ಕೆ ಯುರೋಪ್‌ಗೆ ಹೋಗಬೇಕೆಂದುಕೊಂಡಿದ್ದೇನೆ.

ವಾಹ್‌ ತಾಜ್‌!

ನಾನು ಸುಡು ಬೇಸಗೆ ಕಾಲದಲ್ಲಿ ತಾಜ್‌ಮಹಲ್‌ಗೆ ಭೇಟಿ ನೀಡಿದ್ದೆ. ಅದೊಂದು ಅತ್ಯಂತ ಸುಂದರವಾದ ಪ್ರವಾಸಿ ತಾಣ. ಬಹಳ ಉತ್ಸುಕಳಾಗಿಯೇ ಹೊಸ ಡ್ರೆಸ್‌, ಹೊಸ ಚಪ್ಪಲಿಯನ್ನು ಹಾಕಿಕೊಂಡು ಅಲ್ಲಿಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿ ಶೂ ಬೈಟ್‌ ಆಗಿ, ಸುಡು ಬಿಸಿಲಿನಲ್ಲಿ ಚಪ್ಪಲಿ ಹಾಕದೆ ನಡೆಯಲೂ ಆಗದೇ ಫಜೀತಿಗೊಳಗಾಗಿದ್ದೆ.

Untitled design (57)

ಕೇದಾರದಲ್ಲಿ ಶಿವಲಿಂಗದ ಸ್ಪರ್ಶ ದರ್ಶನ

ತಾಯಿಯ ಜತೆಗೆ ಮೊದಲ ಬಾರಿಗೆ ಚಾರ್‌ ಧಾಮ್‌ ಪ್ರವಾಸ ಮಾಡಿದ್ದೆ. ಅವರಿಗೆ ಕಷ್ಟವಾಗಬಾರದೆಂಬ ಉದ್ದೇಶಕ್ಕೆ ಮುಂಚಿತವಾಗಿಯೇ ಹೆಲಿಕಾಪ್ಟರ್‌ ಬುಕ್‌ ಮಾಡಿಕೊಂಡಿದ್ದೆ. ಅಮ್ಮನಂತೆ ನಾನೂ ಕೂಡ ಶಿವ ಭಕ್ತೆಯಾಗಿದ್ದರಿಂದ ಅಲ್ಲಿ ನೇರವಾಗಿ ಶಿವಲಿಂಗದ ಸ್ಪರ್ಶ ದರ್ಶನ ಸಿಕ್ಕಿದ್ದು ಮರೆಯಲಾರದ ಅನುಭವ. ರಾತ್ರಿ ಹೊತ್ತು ಮೈ ಕೊರೆಯುವ ಚಳಿಯಿದ್ದರೂ ಗಂಟೆಗಳ ಕಾಲ ಅಲ್ಲೇ ಕೂತು ಧ್ಯಾನ ಮಾಡಿದ್ದೆ. ಅಲ್ಲಿಗೆ ಹೋದವರಿಗೆ ಒಂದು ಶಕ್ತಿ ನಮ್ಮ ಜತೆಗಿದೆ ಎಂಬಂತೆ ಅನುಭವವಾಗುವುದು ಸುಳ್ಳಲ್ಲ.

ಮತ್ತೆಂದೂ ಟ್ರೆಕಿಂಗ್‌ ಬೇಡವೆನಿಸಿದೆ

ನನಗೆ ಟ್ರೆಕ್ಕಿಂಗ್‌ ಎಂದರೆ ಬಹಳ ಇಷ್ಟ. ದೈಹಿಕವಾಗಿ ಸುದೃಢವಾಗಲು ಇದು ಒಳ್ಳೆಯ ಆಯ್ಕೆ. ಒಮ್ಮೆ ಟ್ರೆಕ್ಕಿಂಗ್‌ ಮಾಡಿದ್ದೇನೆ. ಆದರೆ ಮತ್ತೆಂದೂ ಭಾರತದಲ್ಲಿ ಮಾಡುವುದಿಲ್ಲ. ಯಾಕೆಂದರೆ ಅಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯಿರುವುದಿಲ್ಲ. ಹೆಣ್ಣುಮಕ್ಕಳಿಗದು ಬಹಳ ಕಷ್ಟವೆನಿಸುತ್ತದೆ. ನಾನು ಟೆಂಟ್‌ನಲ್ಲಿ, ಸ್ಲೀಪಿಂಗ್‌ ಬ್ಯಾಗ್‌ನಲ್ಲೂ ಮಲಗಬಲ್ಲೆ. ನಡೆಯೋದು, ಹತ್ತೋದು, ಇಳಿಯೋದು ಯಾವುದೂ ನನಗೆ ಅಸಾಧ್ಯವೆಂದೇನಿಲ್ಲ. ಆದರೆ ಟಾಯ್ಲೆಟ್‌ ಫೆಸಿಲಿಟಿ ಇಲ್ಲದೆ ಇದ್ದರೆ ಹೇಗೆ?

Untitled design (56)

ಏರ್‌ಪೋರ್ಟ್‌ ನನ್ನ ಎರಡನೇ ಮನೆ

2025 ನನ್ನ ಪಾಲಿಗೆ ಮರೆಯಾಗದ ವರ್ಷ. ಪ್ರತಿ ತಿಂಗಳೂ ಪ್ರವಾಸ ಮಾಡಿದ್ದೇನೆ. ಮನಾಲಿ, ಬ್ಯಾಂಕಾಕ್‌, ಫುಕೆಟ್‌, ಪಟಾಯ, ಗೋಕರ್ಣ ಹೀಗೆ ಸುತ್ತಾಡುತ್ತಲೇ ಇದ್ದೆ. ಜತೆಗೆ ನಾನು ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗೆಲ್ಲಾ ಒಂದು ವಾರ ಹೈದರಾಬಾದ್‌, ಮತ್ತೊಂದು ವಾರ ಟ್ರಾವೆಲ್‌. ಒಟ್ಟಿನಲ್ಲಿ ಏರ್‌ಪೋರ್ಟ್‌ ನನ್ನ ಎರಡನೇ ಮನೆಯಂತಾಗಿತ್ತು. ಕೆಲವೊಮ್ಮೆ ಮಧ್ಯರಾತ್ರಿ 12 ಗಂಟೆಗೆ ಏರ್‌ಪೋರ್ಟ್‌ಗೆ ಬಂದು 1 ಗಂಟೆಗೆ ಮನೆಗೆ ಹೋಗಿ ಮತ್ತೆ ಮುಂಜಾನೆ 4 ಗಂಟೆಗೆ ಟ್ರಾವೆಲ್‌ಗಾಗಿ ಏರ್‌ಪೋರ್ಟ್‌ಗೆ ಹೋಗಿದ್ದೂ ಇದೆ.

ಬೆಸ್ಟ್‌ ಎನಿಸಿದೆ ಸೋಲೋ ಟ್ರಾವೆಲ್‌

ನಾನು ಒಂದಷ್ಟು ಸೋಲೋ ಟ್ರಿಪ್‌ ಹೋಗಿದ್ದೀನಿ. ಅಸ್ಸಾಂನ ಕಾಮಾಕ್ಯ ದೇವಸ್ಥಾನ, ಪಂಜಾಬ್‌ನ ಅಮೃತಸರ ಗೋಲ್ಡನ್‌ ಟೆಂಪಲ್‌ಗೂ ಒಬ್ಬಳೇ ಹೋಗಿ ಬಂದಿದ್ದೇನೆ. ಪ್ರಯಾಣಕ್ಕೂ ಮೊದಲು ಸ್ನೇಹಿತರೆಲ್ಲರಿಗೂ ಬನ್ನಿ ಎಂದು ಕರೆಯುತ್ತೇನೆ. ಯಾರೂ ಬಂದಿಲ್ಲವೆಂದರೂ ಸೋಲೋ ಟ್ರಿಪ್‌ಗೆ ನಾನು ಸಿದ್ಧಳಾಗಿಬಿಡುತ್ತಿದ್ದೆ.

ಇಂಡಿಗೋ ಎಫೆಕ್ಟ್

ಕಳೆದ ತಿಂಗಳು ನಡೆದ ಇಂಡಿಗೋ ಫ್ಲೈಟ್‌ ಬಿಕ್ಕಟ್ಟು ನನ್ನ ಮೇಲೂ ಪರಿಣಾಮ ಬೀರಿತ್ತು. ಶೂಟಿಂಗ್‌ ಗಾಗಿ ಹೈದರಾಬಾದ್‌ಗೆ ಹೊರಟಿದ್ದ ನಾನು ಬೆಳಗಿನ ಜಾವ 3 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಏರ್‌ಪೋರ್ಟ್‌ನಲ್ಲೇ ಉಳಿಯುವಂತಾಗಿತ್ತು. ಅಂದರೆ ಸುಮಾರು 10-12 ಗಂಟೆಗಳ ಕಾಲ ಏರ್‌ಪೋರ್ಟ್‌ನಲ್ಲೇ ವಾಸ.

Untitled design (59)

ಮಕ್ಕಳ ಜತೆಗೆ ಡಿಸ್ನಿ ಲ್ಯಾಂಡ್‌

ಮಕ್ಕಳಿಗಷ್ಟೇ ಅಲ್ಲ ನನಗೂ ಡಿಸ್ನಿ ಲ್ಯಾಂಡ್‌ ಅಂದರೆ ಬಹಳ ಪ್ರೀತಿ. ಅದಕ್ಕಾಗಿಯೇ ಮಕ್ಕಳ ಜತೆ ಹಾಂಗ್ ಕಾಂಗ್‌ ಡಿಸ್ನಿ ಲ್ಯಾಂಡ್‌, ಪ್ಯಾರಿಸ್‌ ಡಿಸ್ನಿ ಲ್ಯಾಂಡ್‌ಗೂ ಭೇಟಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಜತೆಗೆ ಜಪಾನ್‌ ಡಿಸ್ನಿ ಲ್ಯಾಂಡ್‌, ಕ್ರೂಸ್‌ಗೂ ಹೋಗಬೇಕೆನ್ನುವ ಯೋಜನೆಯಿದೆ. ಈ ವರ್ಷ ಜಪಾನ್‌, ಅಮೆರಿಕಗೆ ಪ್ರವಾಸ ಹೋಗಬೇಕೆಂಬ ಆಸೆಯಿದೆ.

ಟ್ರಾವೆಲ್‌ ಬ್ಯಾಗ್‌ನಲ್ಲಿ ನೆಕ್‌ ಪಿಲ್ಲೋ

ಟ್ರಾವೆಲ್‌ ಬ್ಯಾಗ್‌ನಲ್ಲಿ ಅಗತ್ಯ ವಸ್ತುಗಳಿಗಿಂತ ಅನಗತ್ಯ ವಸ್ತುಗಳೇ ಹೆಚ್ಚಿರುತ್ತದೆ. ಅಗತ್ಯ ಬೀಳಬಹುದೆಂಬ ಚಿಂತನೆಯೊಂದಿಗೆ ಎಲ್ಲ ವಸ್ತುಗಳನ್ನೂ ಬ್ಯಾಗ್‌ನಲ್ಲಿ ಸೇರಿಸಿಕೊಂಡಿರುತ್ತೇನೆ. ಆದರೆ ನನ್ನ ಎಲ್ಲ ಪ್ರವಾಸದಲ್ಲೂ ನನಗಿಷ್ಟವಾದ ಪುಸ್ತಕ ಮತ್ತು ನೆಕ್‌ ಪಿಲ್ಲೋ ಇದ್ದೇ ಇರುತ್ತೆ.

ಬೇಸರ ಕಳೆಯೋದಕ್ಕೆ ಗೋಲ್ಡನ್‌ ಟೆಂಪಲ್‌

ಮನಸ್ಸಿಗೆ ಬೇಸರವೆನಿಸಿದಾಗ ನನಗೆ ನೆನಪಾಗುವ ಸ್ಥಳ ಗೋಲ್ಡನ್‌ ಟೆಂಪಲ್‌. ಅಲ್ಲಿ ಒಂದಿಡೀ ಸಂಜೆಯನ್ನು ಕಳೆದರೆ ಎಲ್ಲ ನೋವುಗಳೂ ಮಾಯವಾಗಿ ಬಿಡುತ್ತವೆಯೆನಿಸುತ್ತದೆ. ಅಲ್ಲಿ ಪ್ರಶಾಂತವಾದ ವಾತಾವರಣಕ್ಕೆ ಎಲ್ಲ ಬೇಸರವನ್ನೂ ಮರೆಸುವ ಶಕ್ತಿಯಿದೆ.

ಕಬ್ಬನ್‌ ಉದ್ಯಾನವನ್ನು ನೋಡಲೇಬೇಕು

ಬೆಂಗಳೂರಿನಲ್ಲಿ ನನ್ನಿಷ್ಟದ ತಾಣ ಕಬ್ಬನ್‌ ಪಾರ್ಕ್.‌ ಕೊರೋನಾ ಸಮಯದಲ್ಲಿ ಹೆಚ್ಚಿನ ಸಮಯವನ್ನು ನಾನು ಅಲ್ಲೇ ಕಳೆದಿದ್ದೆ. ಅಲ್ಲೇ ವರ್ಕೌಟ್‌ ಮಾಡುತ್ತಿದ್ದೆ. ಕಬ್ಬನ್‌ ಪಾರ್ಕ್‌ಗೆ ಯಾವ ಸೀಸನ್‌ನಲ್ಲಿ ಹೋದರೂ ಹಿತವಾದ ವಾತಾವರಣವಿರುತ್ತದೆ, ಸಂಜೆಯಮೇಲಂತೂ ಮೈ ಕೊರೆಯುವ ಚಳಿಯಿರುತ್ತದೆ. ಅದು ಬೆಂಗಳೂರಿನ ಆಸ್ತಿ.