ಬದಲಾದ ಬಣ್ಣಗಳೊಂದಿಗೆ ಪ್ರವಾಸಿ ಜೀವನ

ಕಲಾವಿದರ ಬಳಿ ಟ್ರಾವೆಲ್‌ ಲೈಫ್‌ ಕೇಳುವ ಅಗತ್ಯವೇ ಇಲ್ಲ. ಚಿತ್ರೀಕರಣಕ್ಕಾಗಿ, ಪ್ರಮೋಷನ್ಸ್‌ಗಾಗಿ, ಡ್ಯಾನ್ಸ್‌ ಶೋಗಳಿಗಾಗಿ, ಒತ್ತಡದ ಜೀವನದಿಂದ ಬ್ರೇಕ್‌ ಪಡೆಯುವುದಕ್ಕಾಗಿ ಅಲ್ಲದೇ ಪ್ರವಾಸಿ ತಾಣಗಳನ್ನು ತಿಳಿಯುವುದಕ್ಕಾಗಿ ಹೀಗೆ ನಮ್ಮ ಪ್ರವಾಸಗಳಿಗೆ ಅನೇಕ ಆಯಾಮಗಳಿರುತ್ತವೆ. ಅನೇಕ ಬಾರಿ ಸ್ಥಳ ಒಂದೇ ಆದರೂ ಹೋಗಿರುವ ಸಂದರ್ಭಗಳು, ಸಿಗುವ ಅನುಭವಗಳು ಬೇರೆಯದೇ ಇರುತ್ತವೆ.

ಇದನ್ನೂ ಓದಿ: ದೇಹದಲ್ಲಿ ಶಕ್ತಿಯಿರುವಾಗಲೇ ಬ್ಯಾಗ್‌ ಪ್ಯಾಕ್‌ ಮಾಡಿ

ಮೊದಲ ಬಾರಿಗೆ ವಿಮಾನವೇರಿದ್ದೆ..

ಕಾಲೇಜು ದಿನಗಳಲ್ಲಿ ಡ್ಯಾನ್ಸ್‌ ಶೋನಲ್ಲಿ ಭಾಗವಹಿಸುವ ಸಲುವಾಗಿ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದ್ದು 15 ವರ್ಷಗಳ ಹಿಂದೆ ಅಮೆರಿಕಗೆ. ಆಗೆಲ್ಲಾ ವಿಮಾನ ಪ್ರಯಾಣದ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿಯೇ ಇರಲಿಲ್ಲ. ಭಯ, ಗೊಂದಲದ ಹೊರತು ಇನ್ಯಾವ ಭಾವನೆಯೂ ನನ್ನಲ್ಲಿರಲಿಲ್ಲ. ಎಷ್ಟೆಂದರೆ ಸೀಟ್‌ ಬೆಲ್ಟ್‌ ಹಾಕಿಕೊಳ್ಳುವುದು ಹೇಗೆಂಬುದೂ ಗೊತ್ತಿರಲಿಲ್ಲ.

ಬಾಸ್ಟನ್‌ನಲ್ಲಿ ಕಳೆದ ಆ ದಿನಗಳು

ಕ್ಲಬ್‌ ಹೌಸ್‌ ಎಂಬ ಸಂಸ್ಥೆಯ ಮೂಲಕ ಆಯ್ಕೆಯಾದ ನಾನು ಅಮೆರಿಕದ ಬಾಸ್ಟನ್‌ನಲ್ಲಿ ನೃತ್ಯ ಪ್ರದರ್ಶನಕ್ಕಾಗಿ ತೆರಳಿದ್ದೆ. ಎಲ್ಲ ದೇಶಗಳಿಂದಲೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಾರಾದ್ದರಿಂದ ಅದೊಂದು ಥರದಲ್ಲಿ ಸಮುದಾಯ ಕಟ್ಟುವ ಮೀಟ್‌ ಅಪ್‌ ಎನ್ನಬಹುದು. ಒಂದು ವಾರದ ಕಾಲ ಅಲ್ಲಿ ಇರಬೇಕಾಗಿತ್ತು. ಆ ಸ್ಥಳ, ಭಾಷೆ, ಆಹಾರಗಳಿಗೆ ಹೊಂದಿಕೊಳ್ಳುವುದಕ್ಕೇ ನಾನು ಮೊದಲ ನಾಲ್ಕು ದಿನಗಳ ಕಾಲ ಬೇಕಾಗಿತ್ತು. ಮೂಕಾಭಿನಯದ ಮೂಲಕ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದೆ. ಆದರೆ ಬರುವ ವೇಳೆಗಾಗಲೇ ಸಾಕಷ್ಟು ಮಂದಿ ನನಗೆ ಆಪ್ತರಾಗಿ ಇಂದಿಗೂ ಸಂಪರ್ಕದಲ್ಲಿದ್ದಾರೆ. ಅಲ್ಲಿಂದ ಬರುವಾಗ ಲಗೇಜ್‌ ಕಳೆದುಕೊಂಡು ಪೇಚಾಟಕ್ಕೆ ಸಿಲುಕಿದ್ದೆ..

ಕೇರಳ ʻಸದ್ಯʼ ಉಂಡವನಿಗೇ ಗೊತ್ತು

New Project (4)

ದೇವರ ನಾಡನ್ನು ವರ್ಣಿಸುವುದೇ ಕಷ್ಟ. ಅಲ್ಲಿನ ಪರಿಸರ, ಸಂಸ್ಕೃತಿ, ಆಹಾರ ಪದ್ಧತಿಗಳೆಲ್ಲವೂ ಮನಸ್ಸಿಗೆ ಹತ್ತಿರವಾಗಿಬಿಡುತ್ತದೆ. ಕೇರಳದ ಸದ್ಯವನ್ನು ಸೇವಿಸುವ ಅವಕಾಶ ನನಗೂ ಸಿಕ್ಕಿತ್ತು. ಬಾಯಿಲ್ಡ್‌ ರೈಸ್‌ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಡುಗೆ ಎಣ್ಣೆಯಾಗಿ ಕೊಬ್ಬರಿ ಎಣ್ಣೆಯನ್ನೇ ಬಳಸುತ್ತಾರೆ. ಅಕ್ಕಿ ಪಾಯಸ, ಬಾಳೆಕಾಯಿ ಚಿಪ್ಸ್‌ ಹೀಗೆ ಎಲ್ಲವೂ ವಿಶೇಷ. ಕೇರಳಿಗರು ಬಳಸುವ ಮುಂಡು ನನಗ್ಯಾಕೋ ಇಷ್ಟವಾಗಿ ಬರುವಾಗ ಒಂದಷ್ಟು ಸೆಟ್‌ ಮುಂಡು ಖರೀದಿಸಿಕೊಂಡು ಬಂದಿದ್ದೆ.

ಅಂದುಕೊಂಡಂತಿಲ್ಲ ಸಫಾರಿ ಅನುಭವ

ಸಫಾರಿಯ ಬಗೆಗೆ ನನಗೆ ಅಷ್ಟಾಗಿ ಆಸಕ್ತಿಯಿರಲಿಲ್ಲ. ಪತಿ ಶ್ರೇಯಸ್‌ ಒತ್ತಾಯಕ್ಕೆ ಮಣಿದು ಭದ್ರಾ ಸಫಾರಿಗೆ ತೆರಳಿದ್ದೆ. ಅದು ಖುಷಿಯೆನಿಸಿ ಮತ್ತೆ ಬಂಡೀಪುರ ಸಫಾರಿಗೂ ಹೋಗಿದ್ದೆ. ದಟ್ಟ ಕಾಡಿಗೆ ಹೋಗಿ ಅಡ್ವೆಂಚರಸ್‌ ಎಕ್ಸ್‌ಪೀರಿಯನ್ಸ್‌ ಪಡೆದುಕೊಳ್ಳುವ ಯೋಜನೆಯೊಂದಿಗೆ ಹೋದ ನನಗೆ ಸಫಾರಿ ವಿಶೇಷ ಅನುಭವ ನೀಡಿತ್ತು. ಕಾಡಿನ ನಡುವೆ ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ಮಾಡುವ ಸಫಾರಿ ನನಗೆ ಬಹಳ ಮೆಚ್ಚುಗೆಯಾಯ್ತು. ಹಾರ್ನ್‌ ಬಿಲ್‌ ದನಿಗೆ ಜತೆಯಾಗಲು ಹೊರಟು ಡ್ರೈವರ್‌ ನಿಂದ ಬೈಸಿಕೊಂಡಿದ್ದೆ. ಸಫಾರಿಯ ಎರಡನೇ ದಿನ ಹುಲಿಯನ್ನು ನೋಡುವ ಅವಕಾಶ ಸಿಕ್ಕಿತ್ತು. ಸೆಲೆಬ್ರಿಟಿಯನ್ನು ನೋಡುವುದಕ್ಕೆ ಅಭಿಮಾನಿಗಳು ಕಾಯುವಂತೆ ಕಾದು, ಹುಲಿಯನ್ನು ನೋಡುವುದಕ್ಕಾಯ್ತು. ಕ್ಷಣಮಾತ್ರದಲ್ಲಿ ಕಣ್ಮುಂದೆ ಹಾದು ಹೋದ ಚಿರತೆಯ ನೆನಪು ಮರೆಯಲು ಸಾಧ್ಯವಿಲ್ಲ.

ಕೇರಳದಲ್ಲೇ ಕಲಿತ ಕಳರಿಪಯಟ್ಟು

ಪದವಿಯಲ್ಲಿದ್ದಾಗ ಕಳರಿಪಯಟ್ಟು ನಮ್ಮ ಸಿಲೆಬಸ್‌ ಆಗಿದ್ದರಿಂದ ಆಗಲೇ ಬೇಸಿಕ್‌ ಕಲಿತುಕೊಂಡಿದ್ದೆ. ಅದನ್ನು ಇನ್ನಷ್ಟು ಅಭ್ಯಾಸ ಮಾಡಿಕೊಂಡು ಫಿಟ್‌ ಆಗಬೇಕೆಂಬ ಯೋಚನೆ ಬಂತು. ಬೆಂಗಳೂರಿನಲ್ಲೂ ಕಳರಿಪಯಟ್ಟು ಕಲಿಸುವವರು ಇರಬಹುದು. ಆದರೆ ಕೇರಳದ ಕಲೆಯನ್ನು ಅಲ್ಲಿನ ಮಣ್ಣು, ಆ ನೆಲದಲ್ಲಿಯೇ ಇದ್ದು ಕಲಿಯಬೇಕೆಂಬುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿ ಕೇರಳದ ನನ್ನ ಗೆಳತಿಯ ಮನೆಯಲ್ಲಿ ಕೆಲದಿನಗಳ ಮಟ್ಟಿಗೆ ಉಳಿದುಕೊಂಡು ಈ ವಿದ್ಯೆಯನ್ನು ಕಲಿತುಕೊಂಡೆ.

ಕಡಲು ನೀಡುವ ನೆಮ್ಮದಿ

New Project (3)

ನನಗೆ ಸಮುದ್ರವೆಂದರೆ ಬಹಳ ಇಷ್ಟ. ಮಂಗಳೂರು, ಉಡುಪಿ, ಮಲ್ಪೆ ಬೀಚ್, ವರ್ಕಲ ಬೀಚ್ ಸೇರಿದಂತೆ ಅನೇಕ ಕಡಲ ತೀರಗಳಿಗೆ ಹೋಗಿಬಂದಿದ್ದೇನೆ. ಅದೊಂದು ಬಾರಿ ಟ್ರೇನ್‌ ಬುಕ್‌ ಮಾಡದೆಯೇ ದಿಢೀರ್‌ ಆಗಿ ಗೆಳತಿಯೊಂದಿಗೆ ಗೋಕರ್ಣಕ್ಕೆ ಹೋಗಿದ್ದೆ. ಆ ಅಲೆಗಳ ನಡುವೆ ಸಿಗುವ ಖುಷಿ ಜಗತ್ತಿನಲ್ಲಿ ಬೇರೆಲ್ಲೂ ಸಿಗಲಾರದು. ನೀರೊಳಗಿನ ಪ್ರಪಂಚವೇ ಬೇರೆ. ಅಲ್ಲಿ ಜಾತಿ, ಧರ್ಮಗಳ ಬೇಲಿಯೂ ಇಲ್ಲ.

ಬಾಲಿ ಪ್ರವಾಸ ಬೇಕಿತ್ತಾ ?

ದೇಶ-ವಿದೇಶಗಳಲ್ಲಿ ಕೊರೋನಾ ಅಬ್ಬರಿಸುತ್ತಿರುವಾಗಲೇ ನಾನು ಬಾಲಿಗೆ ಪ್ರವಾಸ ಮಾಡಿದ್ದೆ. ಹೇಳಬೇಕೆಂದರೆ ಇಲ್ಲಿಗಿಂತ ಬಾಲಿಯಲ್ಲೇ ಕೊರೋನಾ ಸಂಖ್ಯೆಯ ಹೆಚ್ಚಿದ್ದ ಕಾಲವದು. ಇಂಥ ಸಂದರ್ಭದಲ್ಲೇ ಬಾಲಿ ಪ್ರವಾಸ ಬೇಕಿತ್ತಾ ಎಂದು ಎಲ್ಲರೂ ಕೇಳಿದ್ದರು. ಆದರೂ ಪ್ರವಾಸವನ್ನು ಒಂದಷ್ಟು ರೂಲ್ಸ್‌ಗಳ ನಡುವೆಯೇ ಅಲ್ಲಿನ ಗಿಲಿ ಐಲ್ಯಾಂಡ್‌ ಸುತ್ತಾಟ, ಒಂದಷ್ಟು ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದೆವು.

ಸ್ಪೇನ್‌ನ ಫ್ರೆಮೆಂಕೋ ಕಲಿಯುವಾಸೆ

New Project (7)

ಕರ್ನಾಟಕದಲ್ಲಷ್ಟೇ ಅಲ್ಲದೆ ದೆಹಲಿ, ಚೆನ್ನೈ, ಬಾಂಬೆ, ಕೇರಳ ಹಾಗೂ ಬಾಸ್ಟನ್‌ ಹೀಗೆ ಅನೇಕ ಪ್ರದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. ಭರತನಾಟ್ಯದ ಹೊರತು ಕಥಕ್‌ ಕಲಾಪ್ರಕಾರ ನನಗಿಷ್ಟ. ಪದವಿಯಲ್ಲಿದ್ದಾಗಲೇ ಕಥಕ್‌ ಬೇಸಿಕ್‌ ಕಲಿತುಕೊಂಡಿದ್ದೆ. ಸ್ಪೇನ್‌ ನ ಫ್ಲಮೆಂಕೊ ಎಂಬ ನೃತ್ಯ ಪ್ರಕಾರವೂ ನನಗೆ ಆಪ್ತವೆನಿಸಿದೆ.

ಅಭಿಮಾನಿಗಳೇ ದೇವರು

ಸೆಲೆಬ್ರಿಟಿ ಆದ ನಂತರ ಪ್ರವಾಸ, ಪ್ರಯಾಣ ನನಗೆ ಕಷ್ಟವೆನಿಸಿಲ್ಲ. ಎಲ್ಲೇ ಹೋದರೂ ಅಭಿಮಾನಿಗಳು ಗುರುತಿಸಿ, ಮಾತನಾಡುತ್ತಾರೆ. ಇತ್ತೀಚೆಗಷ್ಟೇ ಪುಣೆಯ ಕನ್ನಡಿಗರಿಗಾಗಿ ಕ್ಷೇತ್ರಪತಿ ಚಿತ್ರದ ಪ್ರಮೋಷನ್‌ಗೆ ಹೋಗಿದ್ದೆ. ಅಲ್ಲೊಬ್ಬ ಮಹಿಳೆ ನನ್ನನ್ನು ಗುರುತಿಸಿ ಕೆಜಿಎಫ್‌ ಪಾತ್ರವನ್ನು ನೆನಪಿಸಿ ಅಳುತ್ತಲೇ ಕೈಮುಗಿದು ಕಾಲಿಗೆ ಬಿದ್ದಿದ್ದರು. ಇಂಥ ಅನುಭವಗಳು ಲೋಕಲ್‌ ಆಗಿ ಟ್ರಾವೆಲ್‌ ಮಾಡಿದಾಗಲಷ್ಟೇ ಸಿಗಲು ಸಾಧ್ಯ.

ಪ್ರಪಂಚ ಸುತ್ತುವಾಸೆ

New Project (6)

ನನಗೆ ಪ್ರಪಂಚ ಸುತ್ತುವಾಸೆ. ಇತ್ತೀಚೆಗೆ ಮೈಸೂರಿನ ಅಮ್ಮ ಮಗ ಭಾರತ ಸುತ್ತಿದ ಸುದ್ದಿ, ಕೊರೋನಾ ಮುಗಿಯುತ್ತಲೇ ಕಾರ್‌ನಲ್ಲಿ ದಂಪತಿಗಳು ಪ್ರಪಂಚ ಸುತ್ತಿದ ಸುದ್ದಿಯೆಲ್ಲವೂ ನೋಡಿದ ಮೇಲೆ ನನಗೂ ಜಗತ್ತು ನೋಡುವ ಆಸೆ ಶುರುವಾಗಿದೆ. ಪ್ರಯಾಣ ಮಾಡುವಾಗ ಸಿಗುವ ಅನುಭವವೇ ಬೇರೆ. ಹೇಗೆ ಪ್ರಯಾಣ ಮಾಡುತ್ತೇವೆ, ಯಾರ ಜತೆಗೆ ಮಾಡುತ್ತೇವೆ ಎಂಬುದರ ಮೇಲೆ ಅನುಭವಗಳು ಬದಲಾಗುತ್ತಲೇ ಹೋಗುತ್ತವೆ.

ಬೆಸ್ಟ್‌ ಟ್ರಾವೆಲ್‌ ಬುಕ್‌

ಅನೇಕ ಕೃತಿಗಳನ್ನು ಓದಿದ್ದೇನೆ. ಕೆಲವು ಕಾದಂಬರಿ, ಕಥಾ ಪ್ರಕಾರಗಳಾದರೂ ಪ್ರವಾಸದ ಅನುಭವಗಳನ್ನು ನೀಡುವುದಿದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಪೆಸಿಫಿಕ್‌ ದ್ವೀಪಗಳು ನನಗೆ ಮೆಚ್ಚುಗೆಯಾಯ್ತು.

ಇದನ್ನೂ ಓದಿ: ನೋಡಿದವರು ಏನಾದ್ರೂ ಅನ್ನಲಿ ವಿದೇಶಿಗರಂತೆ ತಿಂಗಳುಗಟ್ಲೆ ಟ್ರಾವೆಲ್‌ ಮಾಡಿ : ನವೀನ್‌ ಶಂಕರ್‌

ಟ್ರಾವೆಲ್‌ ಸಿನಿಮಾ ಹೇಗಿರಬೇಕು ಗೊತ್ತಾ?

ಬಣ್ಣದಲೋಕ ನನ್ನಿಷ್ಟದ ಆಯ್ಕೆ. ಸೂಕ್ತ ಪಾತ್ರ ಸಿಕ್ಕಿದರೆ ನಟಿಸುತ್ತೇನೆ. ಟ್ರಾವೆಲ್‌ ಸಿನಿಮಾವಾದರೂ ನನಗೆ ಅಭ್ಯಂತರವಿಲ್ಲ. ಟ್ರಾವೆಲ್‌ ಸಿನಿಮಾವೆಂದರೆ ಅಲ್ಲಿ ಪ್ರಯಾಣವೇ ಸಿನಿಮಾವಾಗಬಾರದು. ಕಥೆಯಲ್ಲಿ ಪ್ರಯಾಣವೆಂಬುದು ಒಂದು ಭಾಗವಾಗಬೇಕು.