• ಶಶಿಧರ್

ಥೈಲ್ಯಾಂಡ್‌ನ ರಾಜಧಾನಿಯಾದ ಬ್ಯಾಂಕಾಕ್‌ ನಗರದಲ್ಲಿ Mahanakhon Skywalk ಇದೆ. ಇದು ಥೈಲ್ಯಾಂಡ್‌ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಲ್ಲಿ ಒಂದು. ನಗರದ ಹೃದಯಭಾಗದಲ್ಲಿ ವಿಶಿಷ್ಟ ‘ಪಿಕ್ಸೆಲ್’ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಇದು, ʻKing Power Mahanakhonʼ ಎಂಬ ಗಗನಚುಂಬಿ ಕಟ್ಟಡದ ಮೇಲಿದೆ. ವಿಶೇಷವೆಂದರೆ ಇದು ಥೈಲ್ಯಾಂಡ್‌ನ ಅತ್ಯಂತ ಎತ್ತರದ ವೀಕ್ಷಣಾ ಡೆಕ್‌ಗಳಲ್ಲಿ ಒಂದು.

ಇದನ್ನೂ ಓದಿ: ಉಂಡು ಅಲ್ಲೇ ಮಲಗಿರಿ

ಆಕಾಶ ಮುಟ್ಟುವ ಅನುಭವ

ಸುಮಾರು 314 ಮೀಟರ್ ಎತ್ತರದಲ್ಲಿ ಈ ವೀಕ್ಷಣಾ ಕೇಂದ್ರವಿದೆ. 360 ಡಿಗ್ರಿಯಲ್ಲಿ ಬ್ಯಾಂಕಾಕ್ ನಗರದ ದೃಶ್ಯಗಳನ್ನು ನೋಡಬಹುದು. ವೇಗವಾದ ಲಿಫ್ಟ್ ಮೂಲಕ ಕೆಲವೇ ಕ್ಷಣಗಳಲ್ಲಿ ಮೇಲಿನ ಮಹಡಿಗೆ ತಲುಪಬಹುದು. 74ನೆಯ ಮಹಡಿಯಲ್ಲಿ ಒಳಾಂಗಣ ವೀಕ್ಷಣಾ ಡೆಕ್ ವ್ಯವಸ್ಥೆಯಿದೆ. ಅಲ್ಲಿಂದಲೇ ನಗರದ ವಿಶಾಲ ನೋಟ ಕಾಣಿಸುತ್ತದೆ. ಈ ಕಟ್ಟಡದ ಮೇಲಕ್ಕೆ ಏರುವ ಪ್ರಯಾಣವೇ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.

Untitled design - 2026-03-24T131855.200

ಪಾತಾಳವೂ ಕಾಣಬಹುದು

ಕಟ್ಟಡದ 78ನೆಯ ಮಹಡಿಯಲ್ಲಿ ‘ಗ್ಲಾಸ್ ಟ್ರೇ’ ಇದೆ. ಈ ಗಾಜಿನ ಛಾವಣಿ ಪ್ರವಾಸಿಗರನ್ನು ಸೆಳೆಯುವ ಅದ್ಭುತ ಆಕರ್ಷಣೆ. ಸುರಕ್ಷತಾ ಕ್ರಮಗಳೊಂದಿಗೆ ಇದರ ಮೇಲೆ ನಡೆಯಬಹುದು. ಈ ಗಾಜಿನ ಮೇಲೆ ನಿಂತು ಕೆಳಗಿನ ನಗರವನ್ನು ನೋಡಿದರೆ, ಪಾತಾಳ ಕಂಡ ಅನುಭವವಾಗುತ್ತದೆ. ಸದಾ ನೆಲದಲ್ಲಿ ನಡೆದಾಡುವ ನಮಗೆ ನೂರಾರು ಮೀಟರ್‌ ಎತ್ತರದಲ್ಲಿ ಪಾರದರ್ಶಕ ಗಾಜಿನ ಮೇಲೆ ನಡೆಯುವುದು ಒಂದು ಹೊಸ ಅನುಭವ ನೀಡುತ್ತದೆ. ಗಾಜಿನ ಕೆಳಗೆ ಕಾಣುವ ರಸ್ತೆ, ಸಂಚಾರಿಸುವ ವಾಹನಗಳು ಮತ್ತು ಕೆಳಗಿನ ಕಟ್ಟಡಗಳು ಮೇಲಿನಿಂದ ಪಕ್ಷಿನೋಟದಂತೆ ಗೋಚರಿಸುತ್ತವೆ.

I-Tilt – 65 ಡಿಗ್ರಿ

I-Tilt, ಸ್ಕೈವಾಕ್‌ನ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ. ಇದೊಂದು 65 ಡಿಗ್ರಿ ತಿರುಗುವ ಗಾಜಿನ ಪ್ಲಾಟ್‌ಫಾರ್ಮ್, ಸುಮಾರು 296 ಮೀಟರ್ ಎತ್ತರದಲ್ಲಿ ನಗರವನ್ನು ವಿಭಿನ್ನ ಕೋನದಲ್ಲಿ ವೀಕ್ಷಿಸಲು ಅವಕಾಶ ನೀಡುತ್ತದೆ. ಪ್ಲಾಟ್‌ಫಾರ್ಮ್ ನಿಧಾನವಾಗಿ ಮುಂದೆ ತಿರುಗುವಾಗ ಉಂಟಾಗುವ ಅನುಭವ ಪ್ರವಾಸಿಗರಿಗೆ ಹೇಳಿ ಮುಗಿಯದ ರೋಮಾಂಚವನ್ನು ನೀಡುತ್ತದೆ.

ಮಹಾನಖೋನ್ ಸ್ಕೈವರ್ಸ್

Mahanakhon SkyVerse ಎಂಬುದು King Power Mahanakhon ಕಟ್ಟಡದೊಳಗಿನ ಡಿಜಿಟಲ್ ಆಕರ್ಷಣೆ. ಇದು ಸಾಮಾನ್ಯ ವೀಕ್ಷಣಾ ಅನುಭವಕ್ಕಿಂತ ಹೆಚ್ಚು ಅನುಭವ ನೀಡುತ್ತದೆ. ತಂತ್ರಜ್ಞಾನ ಮತ್ತು ಕಲ್ಪನೆಯ ಸಂಯೋಜನೆಯೊಂದಿಗೆ ಲೈಟ್, ಸೌಂಡ್ ಹಾಗೂ ಮಲ್ಟಿಮೀಡಿಯಾ ಎಫೆಕ್ಟ್‌ಗಳ ಮೂಲಕ 3D ಅನುಭವವನ್ನು ಕಟ್ಟಿಕೊಡಲಾಗಿದೆ. ಇದರಿಂದ ಪ್ರವಾಸಿಗರಿಗೆ ಆಧುನಿಕ ಡಿಜಿಟಲ್ ಪ್ರಪಂಚದ ಅನುಭವವಾಗುತ್ತದೆ.

Untitled design - 2026-03-24T131758.968

360 ಡಿಗ್ರಿ ನೋಟಕ್ಕೆ ಸಂಜೆ ದಿ ಬೆಸ್ಟ್‌

ಕಟ್ಟಡದ ಮೇಲಿನಿಂದ 360 ಡಿಗ್ರಿಯಲ್ಲೂ ಬ್ಯಾಂಕಾಕ್ ನಗರವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ವಿಶೇಷವಾಗಿ ಸಂಜೆ 5:30ರ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಆಗ ದಿನದ ಬೆಳಕು ಹಾಗೂ ಸೂರ್ಯಾಸ್ತದ ದೃಶ್ಯ ಎರಡನ್ನೂ ಒಂದೇ ವೇಳೆಯಲ್ಲಿ ಕಣ್ತುಂಬಿಕೊಳ್ಳಬಹುದು. ಸೂರ್ಯಾಸ್ತದ ನಂತರ ನಗರದಲ್ಲಿ ವಿದ್ಯುತ್‌ ದೀಪಗಳು ಬೆಳಗುವ ದೃಶ್ಯ ಮನೋಹರವಾಗಿರುತ್ತದೆ. ಒಟ್ಟಾರೆ, ಬ್ಯಾಂಕಾಕ್‌ಗೆ ಭೇಟಿನೀಡಿ ಇಂಥದ್ದೊಂದು ಅವಕಾಶವನ್ನು ಬಿಟ್ಟುಬಂದರೆ ಅದು ನಿಜಕ್ಕೂ ಅಪೂರ್ಣ ಪ್ರವಾಸ ಅಷ್ಟೆ.

ಮಾಹಿತಿ ಪೆಟ್ಟಿಗೆ

ಮಹಾನಖೋನ್ ಕಟ್ಟಡಕ್ಕೆ ಪ್ರವೇಶ ಶುಲ್ಕ ಸಾಮಾನ್ಯವಾಗಿ ಸುಮಾರು 1,000 ಬಾತ್‌ನಷ್ಟಿರುತ್ತದೆ. ಕೆಲವು ಹೆಚ್ಚುವರಿ ಅನುಭವಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕಾಕ್‌ ನಗರದಿಂದ BTS ಸ್ಕೈಟ್ರೇನ್ ಮೂಲಕ ಚೋಂಗ್ ನೋನ್ಸಿ ನಿಲ್ದಾಣಕ್ಕೆ ಬಂದು ಅಲ್ಲಿಂದ ನಡೆದು ಕಟ್ಟಡವನ್ನು ಸುಲಭವಾಗಿ ತಲುಪಬಹುದು.