ವಿಸ್ಲರ್: ಸಮುದ್ರದಿಂದ ಹಿಮಶಿಖರಗಳ ಉತ್ತುಂಗಕ್ಕೆ- ಒಂದು ರೋಮಾಂಚಕ ಪಯಣ
ಪೆಸಿಫಿಕ್ ಸಾಗರದ ನೀಲಿ ಅಲೆಗಳಿಂದ ಹಿಮಾಚ್ಛಾದಿತ ಪರ್ವತ ಶಿಖರಗಳವರೆಗೆ ಪ್ರಕೃತಿಯ ವೈವಿಧ್ಯವನ್ನು ಒಂದೇ ಪ್ರಯಾಣದಲ್ಲಿ ಆಸ್ವಾದಿಸಬೇಕೆ? ಹಾಗಾದರೆ ಕೆನಡಾದ ಬ್ರಿಟಿಷ್ ಕೊಲಂಬಿಯಾದ ‘ಸೀ ಟು ಸ್ಕೈ ಹೈವೇ’ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ವ್ಯಾಂಕೋವರ್ನಿಂದ ವಿಸ್ಲರ್ವರೆಗೆ ಸಾಗುವ ಈ ಹಾದಿ, ಸಮುದ್ರದ ಸೌಂದರ್ಯ ಮತ್ತು ಹಿಮಾಲಯವನ್ನೇ ನೆನಪಿಸುವ ಪರ್ವತಗಳ ಭವ್ಯತೆಯ ಅಪರೂಪದ ಸಂಗಮ.
- ಜ್ಯೋತಿ ಪ್ರಸಾದ್
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು ಪ್ರಕೃತಿಯ ವೈವಿಧ್ಯಮಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಒಂದು ಕಡೆ ವಿಸ್ತಾರವಾದ ನೀಲಿ ಪೆಸಿಫಿಕ್ ಸಾಗರ, ಮತ್ತೊಂದು ಕಡೆ ನಿಧಾನವಾಗಿ ಎತ್ತರಕ್ಕೆ ಏರುತ್ತಾ ಹೋಗುವ ಹಿಮಾವೃತ ಕೋಸ್ಟ್ ಪರ್ವತ ಶ್ರೇಣಿ. ಪೆಸಿಫಿಕ್ ಸಾಗರದ ಕರಾವಳಿ ತೀರದಿಂದ, ಆಕಾಶವನ್ನೇ ಮುಟ್ಟುವಂತೆ ನಿಂತಿರುವ ಕೋಸ್ಟ್ ಪರ್ವತಗಳ ಹಿಮಶಿಖರಗಳವರೆಗೆ ಸಾಗುವ ಪ್ರಯಾಣವು ಪ್ರತಿಯೊಬ್ಬ ಪ್ರವಾಸ ಪ್ರೇಮಿಯ ಜೀವಮಾನದ ಕನಸು. ಇಂಥ ಕನಸನ್ನು ನನಸಾಗಿಸುವ ಅದ್ಭುತ ಪ್ರವಾಸಿ ಮಾರ್ಗ 'ಸೀ ಟು ಸ್ಕೈ ಹೈವೇ’ ಮತ್ತು ಅದರ ತುತ್ತ ತುದಿಯಲ್ಲಿರುವ ವಿಸ್ಲರ್- ಬ್ಲಾಕ್ಕಾಂಬ್ ಅವಳಿ ಪರ್ವತಗಳ ಲೋಕ.
ವ್ಯಾಂಕೋವರ್ ನಗರದಿಂದ ಹೊರಟು ಪೆಸಿಫಿಕ್ ಸಾಗರದ ಕರಾವಳಿಯನ್ನು ಹಾದು ಸಾಗುವ ಈ ಪಯಣ ಕೆಲವೇ ಗಂಟೆಗಳಲ್ಲಿ ಹಿಮಶಿಖರಗಳ ಲೋಕವನ್ನು ತಲುಪಿಸುತ್ತದೆ. ಸಮುದ್ರದ ಸೌಮ್ಯತೆಯಿಂದ ಪರ್ವತಗಳ ಭವ್ಯತೆಯವರೆಗೆ ಬದಲಾಗುವ ಈ ದೃಶ್ಯವೈವಿಧ್ಯವೇ ಈ ಪ್ರವಾಸದ ಅತಿ ದೊಡ್ಡ ಆಕರ್ಷಣೆ.
ಇದನ್ನೂ ಓದಿ: ಪುಟ್ಟ ದೇಶಗಳು, ದೊಡ್ಡ ಹೆಜ್ಜೆಗುರುತು
ಮನಮೋಹಕ ‘ಸೀ ಟು ಸ್ಕೈ ಹೈವೇ’
ಸುಂದರ ನಗರಿ ವ್ಯಾಂಕೋವರ್ನಿಂದ ಹೊರಟು ‘ವಿಸ್ಲರ್ ರೆಸಾರ್ಟ್ ವಿಲೇಜ್’ವರೆಗೆ ಸಾಗುವ ಸುಮಾರು 120 ಕಿಮೀ. ಉದ್ದದ ಹೆದ್ದಾರಿ-99ರ ಮಾರ್ಗವೇ ಈ ಪ್ರಸಿದ್ಧ 'ಸೀ ಟು ಸ್ಕೈ' ಹೈವೇ. ವ್ಯಾಂಕೋವರ್ನಿಂದ ಸ್ಕ್ವಾಮಿಷ್ ಮಾರ್ಗವಾಗಿ ವಿಸ್ಲರ್ ತಲುಪುವ ಈ ಹೆದ್ದಾರಿಯು ಸಮುದ್ರದ ಮಟ್ಟದಿಂದ ಪರ್ವತಗಳ ಎತ್ತರದತ್ತ ಸಾಗುವುದರಿಂದ ‘ಸೀ ಟು ಸ್ಕೈ’ ಎಂಬ ಹೆಸರು ಬಂದಿದೆ. ಪೆಸಿಫಿಕ್ ಕರಾವಳಿಯ ಅತ್ಯಂತ ಸುಂದರವಾದ ಈ ರಸ್ತೆಯಲ್ಲಿ ವಾಹನ ಓಡಿಸುವುದು ಪ್ರತಿಯೊಬ್ಬ ಚಾಲಕನ ಕನಸು. ವ್ಯಾಂಕೋವರ್ನಿಂದ ವಿಸ್ಲರ್ ತಲುಪಲು ಸುಮಾರು 2 ಗಂಟೆಗಳ ಸಮಯ ಬೇಕಾಗುತ್ತದೆ.

ಈ ರಸ್ತೆಯು 'ಹೋ ಸೌಂಡ್'ಎಂಬ ನೀಲಜಲರಾಶಿಯ (Fjord) ಪಕ್ಕದಲ್ಲೇ ಸಾಗುವುದರಿಂದ, ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದರೆ ಒಂದು ಬದಿಯಲ್ಲಿ ಪರ್ವತಗಳ ನಡುವೆ ಚಾಚಿಕೊಂಡಿರುವ ಕಡಲ ತೀರದ ನೀಲಿ ಜಲರಾಶಿ, ಇನ್ನೊಂದು ಬದಿಯಲ್ಲಿ ಮುಗಿಲತ್ತ ಮುಖಮಾಡಿ ನಿಂತಿರುವ ಗಗನಚುಂಬಿ, ದಟ್ಟ ಹಸುರಿನ ಭವ್ಯ ಪರ್ವತಶ್ರೇಣಿಗಳು ಕಾಣಸಿಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಸಮುದ್ರದ ನೀರಿನ ಮೇಲೆ ಚಿನ್ನದ ಬಣ್ಣದ ಕಿರಣಗಳು ನರ್ತಿಸುವಾಗ, ಪರ್ವತಗಳ ಮೇಲೆ ಮೂಡುವ ನೆರಳು- ಬೆಳಕಿನ ಆಟವು ಮನಸಿಗೆ ಮುದ ನೀಡುತ್ತದೆ.
ಹೆದ್ದಾರಿಯ ಪಕ್ಕದಲ್ಲೇ ಇರುವ ದಟ್ಟವಾದ ‘ರೈನ್ ಫಾರೆಸ್ಟ್ʼ ನಡುವೆ, ಹಸಿರು ಮರಗಳ ಮರೆಯಲ್ಲಿ, ಸುಮಾರು 335 ಮೀಟರ್ ಎತ್ತರದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುವ ‘ಶಾನನ್ ಜಲಪಾತ’ವನ್ನು ಪ್ರವಾಸಿಗರು ನೋಡಲೇಬೇಕು. ಹಾಲಿನ ನೊರೆಯಂತೆ ಸುರಿಯುವ ಈ ಜಲಧಾರೆಯ ಸೌಂದರ್ಯವನ್ನು ಸವಿಯುವುದು ಚೇತೋಹಾರಿ ಅನುಭವ.
ಸ್ಕ್ವಾಮಿಶ್ ಮತ್ತು ರೋಮಾಂಚಕ ಗೊಂಡೋಲಾ ರೈಡ್
ಈ ರಮಣೀಯ ಹೆದ್ದಾರಿಯಲ್ಲಿ ಸುಮಾರು 64 ಕಿಮೀ. ಕ್ರಮಿಸಿದರೆ ಸಿಗುವುದೇ ಸುಂದರ ‘ಸ್ಕ್ವಾಮಿಶ್’ ನಗರ. ಈ ನಗರವನ್ನು 'ಕೆನಡಾದ ಸಾಹಸ ಕ್ರೀಡೆಗಳ ರಾಜಧಾನಿ' ಎಂದು ಕರೆಯಲಾಗುತ್ತದೆ. ಈ ಖ್ಯಾತಿಗೆ ಮುಖ್ಯ ಕಾರಣ ಇಲ್ಲಿನ ಪ್ರಮುಖ ಆಕರ್ಷಣೆಯಾದ 'ಸೀ ಟು ಸ್ಕೈ ಗೊಂಡೋಲಾ'. ಈ ಕೇಬಲ್ ಕಾರ್ ಸವಾರಿಯು ಹೆದ್ದಾರಿಯ ಪಕ್ಕದಲ್ಲಿರುವ ಬುಡದಿಂದ ನಮ್ಮನ್ನು ಕೇವಲ 10 ನಿಮಿಷಗಳಲ್ಲಿ ಸಮುದ್ರ ಮಟ್ಟದಿಂದ ಸುಮಾರು 2,900 ಅಡಿ ಎತ್ತರವಿರುವ ಪರ್ವತದ ತುದಿಗೆ ಕರೆದೊಯ್ಯುತ್ತದೆ.
ಇಲ್ಲಿರುವ ‘ಸ್ಕೈ ಪೈಲಟ್’ ತೂಗುಸೇತುವೆ ಪ್ರವಾಸಿಗರ ಪ್ರಮುಖ ಆಕರ್ಷಣೆ. ದೈತ್ಯ ಕಂದಕದ (Gorge) ಮೇಲೆ ತೂಗಾಡುವ ಈ ಸೇತುವೆಯ ಮೇಲೆ ನಡೆಯುವುದು ರೋಮಾಂಚನಕಾರಿ ಅನುಭವ. ಇಲ್ಲಿ ನಿಂತು ಕೆಳಗೆ ನೋಡಿದರೆ ಇಡೀ ‘ಹೋ ಸೌಂಡ್’ ಕಡಲತೀರದ ನೀಲಿ ಜಲರಾಶಿ (Fjord) ಮತ್ತು ಸ್ಕ್ವಾಮಿಶ್ ಕಣಿವೆಯ ವಿಹಂಗಮ ನೋಟ ಕಾಣಸಿಗುತ್ತದೆ.

ಸಾಹಸದ ತಾಣ: ವಿಸ್ಲರ್ ಮತ್ತು ಬ್ಲಾಕ್ ಕಾಂಬ್
ಸ್ಕ್ವಾಮಿಶ್ನಿಂದ ಹೆದ್ದಾರಿಯಲ್ಲಿ ಮತ್ತಷ್ಟು ಮುಂದೆ ಬೆಟ್ಟಗಳನ್ನು ಹತ್ತುತ್ತಾ 45 ಕಿಲೋಮೀಟರ್ ಸಾಗಿದರೆ ಹೆದ್ದಾರಿ ಮುಗಿಯುತ್ತಿದ್ದಂತೆ ನಮ್ಮನ್ನು ಸ್ವಾಗತಿಸುವುದೇ ವಿಸ್ಲರ್ ರೆಸಾರ್ಟ್ ವಿಲೇಜ್. ಯುರೋಪಿಯನ್ ಆಲ್ಪೈನ್ ಶೈಲಿಯ ಸುಂದರ ಕಟ್ಟಡಗಳು ಮತ್ತು ಕೆಫೆಗಳಿಂದ ತುಂಬಿರುವ ಈ ಗ್ರಾಮವು ಜಗತ್ತಿನ ಅತ್ಯುತ್ತಮ ರೆಸಾರ್ಟ್ ತಾಣಗಳಲ್ಲಿ ಒಂದು. ಇಲ್ಲಿನ ವಿಶೇಷತೆಯೆಂದರೆ ಇಡೀ ಗ್ರಾಮವು ವಾಹನಮುಕ್ತವಾಗಿದ್ದು, ಸಂಪೂರ್ಣವಾಗಿ ಸುಂದರ ಪಾದಚಾರಿ ಗ್ರಾಮವಾಗಿ ಮಾರ್ಪಟ್ಟಿದೆ.
ಇಲ್ಲಿಯೇ ಮುಗಿಲು ಮುಟ್ಟಿ ನಿಂತಿರುವ ಅವಳಿ ಪರ್ವತಗಳೇ ವಿಸ್ಲರ್ ಮತ್ತು ಬ್ಲಾಕ್ಕಾಂಬ್. ಉತ್ತರ ಅಮೆರಿಕದಲ್ಲಿಯೇ ಅತಿದೊಡ್ಡ ಸ್ಕೀ ರೆಸಾರ್ಟ್ಗಳಲ್ಲಿ ಒಂದಾಗಿರುವ ಇದು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಚಳಿಗಾಲದಲ್ಲಿ ಈ ಪರ್ವತಗಳು ಮಂಜಿನ ಬಿಳಿ ಹೊದಿಕೆಯನ್ನು ಹೊದ್ದು ನಿಲ್ಲುತ್ತವೆ. ಆ ಸಮಯದಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಚಳಿಗಾಲದಲ್ಲಿ ಸ್ನೋಮೊಬಿಲಿಂಗ್, ಡಾಗ್ಸ್ಲೆಡ್ಡಿಂಗ್, ಟ್ಯೂಬಿಂಗ್ ಮತ್ತು ಐಸ್ ಸ್ಕೇಟಿಂಗ್ನಂಥ ಇತರ ಮೋಜಿನ ಆಟಗಳನ್ನು ಆನಂದಿಸಬಹುದು.
ಇನ್ನು ಬೇಸಗೆಯಲ್ಲಿ, ಹಿಮ ಕರಗಿ ಜಿನುಗುವ ನೀರು- ಹಸಿರು ಕಣಿವೆಗಳನ್ನು ಹಾಗೂ ಆಲ್ಪೈನ್ ಹುಲ್ಲುಗಾವಲುಗಳನ್ನು ಸೃಷ್ಟಿಸುತ್ತದೆ ಮತ್ತು ಬಣ್ಣ ಬಣ್ಣದ ಕಾಡುಹೂವುಗಳು ಅರಳಿ ಈ ಬೆಟ್ಟಗಳು ಸುಂದರವಾಗಿ ಚಾರಣಿಗರ ಪಾಲಿಗೆ ಸ್ವರ್ಗವಾಗುತ್ತವೆ.
ವಿಶ್ವದಾಖಲೆಯ ‘ಪೀಕ್ ಟು ಪೀಕ್ ಗೊಂಡೋಲಾ’
ವಿಸ್ಲರ್ - ಬ್ಲಾಕ್ ಕಾಂಬ್ ಅವಳಿ ಪರ್ವತಗಳ, ಆಕಾಶದೆತ್ತರದ ಶಿಖರಗಳ ತುದಿಗಳನ್ನು ಗಾಳಿಯಲ್ಲಿ ಜೋಡಿಸುವುದೇ ಇಲ್ಲಿನ ಪ್ರಸಿದ್ಧ ‘ಪೀಕ್ ಟು ಪೀಕ್ ಗೊಂಡೋಲಾ’. ಎರಡು ಪರ್ವತಗಳನ್ನು ಸಂಪರ್ಕಿಸುವ, ನಡುವೆ ಯಾವುದೇ ಆಧಾರ ಕಂಬಗಳಿಲ್ಲದ, ಸುಮಾರು 3.02 ಕಿಲೋಮೀಟರ್ಗಳಷ್ಟು ಉದ್ದದ, ಗಾಳಿಯಲ್ಲಿ ತೂಗಾಡುವ ಈ ಎಂಜಿನಿಯರಿಂಗ್ ವಿಸ್ಮಯವು ಇಂದಿಗೂ ಒಂದು ವಿಶ್ವದಾಖಲೆಯಾಗಿದೆ. ಇದು ವಿಶ್ವದ ಅತಿ ಉದ್ದದ ಮತ್ತು ಅತಿ ಎತ್ತರದ ಲಿಫ್ಟ್ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಗೊಂಡೋಲಾದ ಗಾಜಿನ ಕಿಟಕಿಗಳಿರುವ ಕ್ಯಾಬಿನ್ ಒಳಗೆ ಕುಳಿತು ಸಾಗುವ ಆ 11 ನಿಮಿಷಗಳ ಪ್ರಯಾಣ ವರ್ಣನಾತೀತ. ಆಳವಾದ ಕಣಿವೆಯ ತಳದಿಂದ ಸುಮಾರು 1,427 ಅಡಿ ಎತ್ತರದಲ್ಲಿ, ಗಾಳಿಯಲ್ಲಿ ತೇಲುತ್ತಾ ಸಾಗುವಾಗ ಮೈ ರೋಮಾಂಚನವಾಗುತ್ತದೆ. ಕೆಲವು ವಿಶೇಷ ಗೊಂಡೋಲಾಗಳ ತಳಭಾಗವೂ ಕೂಡ ಗಾಜಿನಿಂದ ಮಾಡಲ್ಪಟ್ಟಿರುತ್ತದೆ. ನಾವು ಆ ಗೊಂಡೋಲಾವನ್ನು ಆಯ್ದುಕೊಂಡು ಕುಳಿತು ವಿಹರಿಸುತ್ತಾ ನೇರವಾಗಿ ಕೆಳಗಿನ ಕಣಿವೆಯ ಆಳ, ದಟ್ಟವಾದ ಪೈನ್ ಕಾಡುಗಳು ಮತ್ತು ಹೊಳೆಯುವ ಸರೋವರಗಳನ್ನು ನೋಡಿ ಕುಳಿತಲ್ಲೇ ಸಂಭ್ರಮಿಸಿದ್ದು ಸವಿನೆನಪು. ಕೆಳಗಿನ ಹಸಿರು ಪ್ರದೇಶಗಳಲ್ಲಿ ಸ್ವಚ್ಛಂದವಾಗಿ ಓಡಾಡುವ ಕರಡಿಗಳನ್ನು ಮತ್ತು ಕಣಿವೆಗಳಲ್ಲಿ ಮಿನುಗುವ ಭವ್ಯ ಹಿಮನದಿಗಳನ್ನು ಕಣ್ಣುತುಂಬಿಕೊಂಡ ಆ ನೆನಪು ಇಂದಿಗೂ ನನ್ನನ್ನು ವಿಸ್ಮಯಗೊಳಿಸುತ್ತದೆ.

2010ರ ವಿಂಟರ್ ಒಲಿಂಪಿಕ್ಸ್ ಸವಿನೆನಪು
2010ರ ಜಗತ್ಪ್ರಸಿದ್ಧ ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ವಿಸ್ಲರ್ ವಹಿಸಿತ್ತು. ಅದರ ಸವಿನೆನಪಿಗಾಗಿ ವಿಸ್ಲರ್ ಒಲಿಂಪಿಕ್ ಪ್ಲಾಜಾದಲ್ಲಿ ನಿರ್ಮಿಸಲಾಗಿರುವ ಒಲಿಂಪಿಕ್ ರಿಂಗ್ಸ್ ಮತ್ತು ಪದಕ ಪ್ರದಾನ ವೇದಿಕೆಯ ಮೇಲೆ ನಿಂತು ಹಿಮಾಚ್ಛಾದಿತ ಪರ್ವತಗಳ ಹಿನ್ನೆಲೆಯಲ್ಲಿ ಫೊಟೋ ತೆಗೆದುಕೊಳ್ಳುವುದು ಇಲ್ಲಿನ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.
ಸೀ ಟು ಸ್ಕೈ ಹೆದ್ದಾರಿಯ ಮನಮೋಹಕ ರೋಡ್ ಟ್ರಿಪ್, ಹಾಲಿನ ನೊರೆಯಂತೆ ಜಾರುವ ಶಾನನ್ ಜಲಪಾತದ ರಮಣೀಯ ಸೌಂದರ್ಯ, ಸಾಹಸದ ತಾಣವಾದ ಸ್ಕ್ವಾಮಿಶ್ ಮತ್ತು ಅದರ ಸುಂದರ ಕಣಿವೆಯ ನೋಟ, ಯಾವುದೇ ವಾಹನಗಳ ಓಡಾಟವಿಲ್ಲದ ವಿಸ್ಲರ್ ಗ್ರಾಮದ ಸೊಗಡು ಮತ್ತು ಪೀಕ್ ಟು ಪೀಕ್ ಗೊಂಡೋಲಾದ ವಿಸ್ಮಯ- ಇವೆಲ್ಲವೂ ಸೇರಿದರೆ ಒಂದು ಪರಿಪೂರ್ಣ ಪ್ರವಾಸದ ಆನಂದ ಸಿಗುತ್ತದೆ. ಸಾಹಸ, ಸೌಂದರ್ಯ ಅಥವಾ ಪ್ರಶಾಂತ ವಾತಾವರಣವನ್ನು ಬಯಸುವ ಪ್ರವಾಸಪ್ರಿಯರಿಗೆ ಕೆನಡಾದ ವಿಸ್ಲರ್ ಪ್ರವಾಸವು ಮರೆಯಲಾಗದ ಅನುಭವವನ್ನು ನೀಡುತ್ತದೆ. ಪ್ರಕೃತಿಯ ಭವ್ಯತೆಯ ಮುಂದೆ ಮನುಷ್ಯ ಎಷ್ಟು ಸಣ್ಣವನು ಮತ್ತು ಅವಳ ಮಡಿಲಲ್ಲಿ ಎಷ್ಟು ಸೌಂದರ್ಯ ಅಡಗಿದೆ ಎಂಬುದನ್ನು ನೆನಪಿಸುವ ಈ ನೈಸರ್ಗಿಕ ಸಂಪತ್ತನ್ನು ಒಮ್ಮೆಯಾದರೂ ನೋಡಿ ಆಸ್ವಾದಿಸಬೇಕು.
ಭೇಟಿ ನೀಡಲು ಸೂಕ್ತ ಸಮಯ
ಹಿಮದಾಟ ಮತ್ತು ಸ್ಕೀಯಿಂಗ್ಗಾಗಿ ಡಿಸೆಂಬರ್ನಿಂದ ಮಾರ್ಚ್, ಹಸಿರು ಕಣಿವೆಗಳು ಹಾಗೂ ಹೈಕಿಂಗ್ಗಾಗಿ ಜೂನ್ನಿಂದ ಸೆಪ್ಟೆಂಬರ್ ಉತ್ತಮ ಸಮಯ.
ತಲುಪುವ ಬಗೆ: ವ್ಯಾಂಕೋವರ್ನಿಂದ ಕಾರ್ ಅಥವಾ 'ಸೀ ಟು ಸ್ಕೈ ಶಟಲ್ ʼ ಬಸ್ಗಳ ಮೂಲಕ ವಿಸ್ಲರ್ ತಲುಪಬಹುದು.