ವ್ಯಾಂಕೂವರ್... ಇದು ಪ್ರಕೃತಿ ಮತ್ತು ಆಧುನಿಕತೆಯ ಸುಂದರ ಸಂಗಮ
ʻಸ್ಟಾನ್ಲಿ ಪಾರ್ಕ್‌ನ ಉತ್ತರತುದಿಯಲ್ಲಿರುವ ʻಲಯನ್ಸ್ ಗೇಟ್ ಬ್ರಿಡ್ಜ್ʼ ಇದೆ. ಇದು ವ್ಯಾಂಕೂವರ್‌ನ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು. ಈ ಸಸ್ಪೆನ್ಷನ್ ಸೇತುವೆಯ ಎತ್ತರ, ಅದರ ಕೆಳಗೆ ಸಾಗುವ ಬೃಹತ್ ಹಡಗುಗಳು ಮತ್ತು ಸಂಜೆಯ ಹೊತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜಗಮಗಿಸುವ ಈ ಸೇತುವೆಯ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.
- ಜ್ಯೋತಿ ಪ್ರಸಾದ್
ಪ್ರಕೃತಿಮಾತೆಯ ಕೈಚಳಕದಲ್ಲಿ ಅದ್ಭುತವಾಗಿ ಮೂಡಿರುವ ಕಲಾಕೃತಿಯಂತಿದೆ ಕೆನಡಾದ ಸುಂದರ ನಗರ ವ್ಯಾಂಕೂವರ್. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಕರಾವಳಿಯಲ್ಲಿ ಈ ನಗರವಿದ್ದು, ವಿಶ್ವದ ಅತಿ ಸುಂದರ ಮತ್ತು ವಾಸಯೋಗ್ಯ ನಗರಗಳಲ್ಲಿ ಒಂದಾಗಿದೆ. ಒಂದೆಡೆ ಪೆಸಿಫಿಕ್ ಮಹಾಸಾಗರದ ನೀಲ ಜಲರಾಶಿ, ಮತ್ತೊಂದೆಡೆ ಹಿಮಾಚ್ಛಾದಿತ ಪರ್ವತ ಶ್ರೇಣಿಗಳು, ಇವೆರಡರ ನಡುವೆ ಹಸಿರಿನ ಚಾದರ ಹೊದ್ದಂತಿರುವ ಕಾಡುಗಳು – ಹೀಗೆ ನಿಸರ್ಗದ ಸೊಬಗಿನೊಂದಿಗೆ ಆಧುನಿಕತೆಯನ್ನೂ ಮೈಗೂಡಿಸಿಕೊಂಡಿರುವ ಈ ನಗರ ಪ್ರವಾಸಿಗರ ಸ್ವರ್ಗವಾಗಿದೆ.
ಅವರವರ ಅಭಿರುಚಿಗೆ ತಕ್ಕಂತೆ ಆಯ್ದುಕೊಳ್ಳಲು ಹಲವಾರು ಪ್ರವಾಸಿ ಆಕರ್ಷಣೆಗಳು ಈ ನಗರದ ಸುತ್ತಲೂ ಇವೆ.
ಇದನ್ನೂ ಓದಿ: ಹಳೆಯದೆಲ್ಲ ತ್ಯಾಜ್ಯವಲ್ಲ...ಅವಕ್ಕೂ ಅವುಗಳದ್ದೇ ಬೆಲೆ ಇದೆ
ಇಂಗ್ಲಿಷ್ ಬೇ ಎಂಬ ಅದ್ಭುತ ಸಮುದ್ರ ತೀರ
ವ್ಯಾಂಕೂವರ್ ಒಂದು ದ್ವೀಪಕಲ್ಪದಂತಿದ್ದು, ಸಮುದ್ರವು ಇಲ್ಲಿನ ಜನ-ಜೀವನದ ಅವಿಭಾಜ್ಯ ಅಂಗ. ಇಲ್ಲಿನ ‘ಇಂಗ್ಲಿಷ್ ಬೇ’ ಸಮುದ್ರ ತೀರವು ಸೂರ್ಯಾಸ್ತದ ವೀಕ್ಷಣೆಗೆ ಅತ್ಯಂತ ಪ್ರಶಸ್ತ ಸ್ಥಳ. ಆಕಾಶವು ಕೇಸರಿ ಮತ್ತು ನೇರಳೆ ಬಣ್ಣದ ವಿನ್ಯಾಸಗಳನ್ನು ಮೂಡಿಸಿದಾಗ, ಆ ಬಣ್ಣಗಳು ಸಮುದ್ರದ ಅಲೆಗಳಲ್ಲಿ ಪ್ರತಿಫಲಿಸುತ್ತವೆ ಈ ನೋಟ ರಮಣೀಯ ಅನುಭವ ನೀಡುತ್ತದೆ. ಈ ಸಮುದ್ರ ತೀರದ ಪ್ರವೇಶದ್ವಾರದಲ್ಲಿ 'ಅಮೇಜಿಂಗ್ ಲಾಫ್ಟರ್' ಕಂಚಿನ ಸುಂದರ ಕಲಾಕೃತಿಗಳಿದ್ದು, ಪ್ರವಾಸಿಗರನ್ನು ಬೆರಗುಗೊಳಿಸುತ್ತವೆ. ವಿವಿಧ ಭಂಗಿಗಳಲ್ಲಿ ಜೋರಾಗಿ ನಗುತ್ತಿರುವ ಈ 14 ಬೃಹತ್ ಮಾನವ ರೂಪದ ಪ್ರತಿಮೆಗಳನ್ನು ನೋಡುತ್ತಿದ್ದಂತೆ ನಮ್ಮ ಮುಖದಲ್ಲೂ ತಂತಾನೇ ನಗು ಅರಳುತ್ತದೆ. ಹಾಗೆಯೇ, ಇಲ್ಲಿರುವ ಸ್ನೇಹ ಮತ್ತು ಆತಿಥ್ಯದ ಸಂಕೇತವಾದ 'ಇನುಕ್ಷುಕ್' ಸ್ಮಾರಕವು ಕೆನಡಾದ ಮೂಲ ನಿವಾಸಿಗಳ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಇದು 2010ರ ವಿಂಟರ್ ಒಲಿಂಪಿಕ್ಸ್‌ನ ಲಾಂಛನವೂ ಆಗಿತ್ತು. ಸಮುದ್ರ ತೀರದಲ್ಲಿ, ಪ್ರತಿವರ್ಷ ನಡೆಯುವ ‘ಸೆಲೆಬ್ರೇಷನ್ ಆಫ್ ಲೈಟ್ʼ ಎಂಬ ಅಂತಾರಾಷ್ಟ್ರೀಯ ಪಟಾಕಿ ಪ್ರದರ್ಶನ ಸ್ಪರ್ಧೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ.

ಯುಬಿಸಿಯ ಕ್ಯಾಂಪಸ್‌ನಲ್ಲಿ
ನಗರದ ಪಶ್ಚಿಮದ ತುದಿಯಲ್ಲಿ ಪ್ರತಿಷ್ಠಿತ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ(UBC) ಇದೆ. ಇದು ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ; ರಮಣೀಯ ನಿಸರ್ಗತಾಣವೂ ಹೌದು. ಇಲ್ಲಿನ ಸುಂದರ ಗುಲಾಬಿ ಹೂದೋಟ ಪ್ರವಾಸಿಗರ ಮನಸೆಳೆಯುತ್ತದೆ. ನಾವು ನಿತ್ಯವೂ ಸಂಜೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಾಯು ವಿಹಾರ ಮುಗಿಸಿ, ಗುಲಾಬಿ ತೋಟದ ಮಧ್ಯೆ, ಪೆಸಿಫಿಕ್ ಸಾಗರದ ತೀರದಲ್ಲಿ ಪರ್ವತಗಳಿಗೆ ಎದುರಾಗಿ, ಕಲ್ಲು ಬೆಂಚಿನ ಮೇಲೆ ಕುಳಿತು ನಿಸರ್ಗದ ಸೊಬಗನ್ನು ಆಸ್ವಾದಿಸುತ್ತಿದ್ದೆವು. ದಿನವೂ ಸಂಜೆ ಸೂರ್ಯನು ಬೆಟ್ಟಗಳ ಹಿಂದೆ ಮೌನವಾಗಿ ಜಾರುತ್ತಾ ಬಣ್ಣಗಳ ಚಿತ್ತಾರ ಸೃಷ್ಟಿಸುವ ದೃಶ್ಯ ಅವಿಸ್ಮರಣೀಯ.
ಸ್ಟಾನ್ಲಿ ಪಾರ್ಕ್
ನಗರದ ಹೃದಯಭಾಗದಲ್ಲಿ ವಿಶಾಲವಾದ ʻಸ್ಟಾನ್ಲಿ ಪಾರ್ಕ್ʼ ಇದೆ. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆ. ಹಸಿರನ್ನು ಹೊದ್ದಿರುವ ಈ ಉದ್ಯಾನದಲ್ಲಿ ದೊಡ್ಡ ದೊಡ್ಡ ಸಿಡಾರ್ ಮತ್ತು ಡೌಗ್ಲಾಸ್ ಮರಗಳಿವೆ. ಈ ಮರಗಳು ನೂರಾರು ವರ್ಷಗಳಿಂದ ಜೀವಜಗತ್ತನ್ನು ಪೋಷಿಸುತ್ತಾ ಬಂದಿವೆ. ಪಾರ್ಕ್‌ನ ಸುತ್ತಲೂ ಪೆಸಿಫಿಕ್ ಸಾಗರದ ಅಲೆಗಳು ಅಪ್ಪಳಿಸುತ್ತಿರುತ್ತವೆ. ಸುಮಾರು 9 ಕಿಮೀ ಉದ್ದದ ರಮಣೀಯ 'ಸೀವಾಲ್’ನ ಹಾದಿಯುದ್ದಕ್ಕೂ ನಡೆಯುತ್ತಲೋ, ಸೈಕಲ್ ತುಳಿಯುತ್ತಲೋ ಸಮುದ್ರದ ಅಲೆಗಳ ಆಟವನ್ನು ಆನಂದಿಸುತ್ತಾ ತಂಗಾಳಿಯನ್ನು ಆಸ್ವಾದಿಸುವುದು ಮನಸಿಗೆ ಹೊಸ ಚೈತನ್ಯ ನೀಡುತ್ತದೆ. ಇಲ್ಲಿ ಸೈಕಲ್ ಬಾಡಿಗೆಗೆ ಪಡೆದು ಸುತ್ತುವ ಅವಕಾಶವೂ ಇದೆ.
ಇಲ್ಲಿನ ಮತ್ತೊಂದು ವಿಶೇಷ 'ನೈನ್ ಓ ಕ್ಲಾಕ್ ಗನ್' ಸಂಪ್ರದಾಯ. 1894ರಿಂದ ಈ ಸಂಪ್ರದಾಯ ರೂಢಿಗೆ ಬಂದಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ಸರಿಯಾಗಿ ಇಲ್ಲಿ ಫಿರಂಗಿ ಹಾರಿಸಲಾಗುತ್ತದೆ. ಹಿಂದೆ ಮೀನುಗಾರರಿಗೆ ಮತ್ತು ಹಡಗುಗಳಿಗೆ ಸಮಯದ ಅರಿವು ನೀಡಲು ಈ ಪದ್ಧತಿ ಬಳಸಲಾಗುತ್ತಿತ್ತು. ಇಂದು ಕುತೂಹಲದ ಕೇಂದ್ರವಾಗಿ ಉಳಿದಿದೆ.
ಸ್ಟಾನ್ಲಿ ಪಾರ್ಕಿನಲ್ಲಿರುವ ʻಟೋಟೆಮ್ ಪೋಲ್ಸ್ʼ ಎಂಬ ಸುಂದರ ಕೆತ್ತನೆಯ ಕಂಬಗಳು ಬ್ರಿಟಿಷ್ ಕೊಲಂಬಿಯಾದ ಮೂಲನಿವಾಸಿಗಳ ಕಲೆ ಮತ್ತು ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿ ನಿಂತಿವೆ. ಇವು ವ್ಯಾಂಕೂವರ್ ನಗರದ ಹಲವಾರು ಕಡೆಗಳಲ್ಲಿ ಕಂಡುಬಂದರೂ, ಇಲ್ಲಿನ ಕೆತ್ತನೆಗಳು ಹೆಚ್ಚು ಜನಪ್ರಿಯ ಮತ್ತು ಆಕರ್ಷಕ ಸ್ಮಾರಕಗಳಾಗಿವೆ.
ʻಸ್ಟಾನ್ಲಿ ಪಾರ್ಕ್‌ನ ಉತ್ತರತುದಿಯಲ್ಲಿರುವ ʻಲಯನ್ಸ್ ಗೇಟ್ ಬ್ರಿಡ್ಜ್ʼ ಇದೆ. ಇದು ವ್ಯಾಂಕೂವರ್‌ನ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು. ಈ ಸಸ್ಪೆನ್ಷನ್ ಸೇತುವೆಯ ಎತ್ತರ, ಅದರ ಕೆಳಗೆ ಸಾಗುವ ಬೃಹತ್ ಹಡಗುಗಳು ಮತ್ತು ಸಂಜೆಯ ಹೊತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜಗಮಗಿಸುವ ಈ ಸೇತುವೆಯ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.
ವ್ಯಾಂಕೂವರ್ ನಗರದ ಸೌಂದರ್ಯವನ್ನು ಪೂರ್ಣವಾಗಿ ಆಸ್ವಾದಿಸಲು ಅಲ್ಲಿನ 'ಸೀಪ್ಲೇನ್'ನಲ್ಲಿ ಹಾರಾಡಲೇಬೇಕು. ರನ್ ವೇ ಬದಲು ಸಮುದ್ರದ ನೀರನ್ನೇ ಬಳಸಿಕೊಂಡು ಹಾರುವ ಈ ಪುಟ್ಟ ವಿಮಾನಗಳು ಪ್ರವಾಸಿಗರಿಗೆ ಅತ್ಯಂತ ರೋಚಕ ಅನುಭವ ನೀಡುತ್ತವೆ. ವಿಮಾನವು ನೀರಿನ ಮೇಲೆ ವೇಗವಾಗಿ ಚಲಿಸುತ್ತಾ ಅಲೆಗಳನ್ನು ಸೀಳಿಕೊಂಡು ಆಕಾಶಕ್ಕೆ ಚಿಮ್ಮುವ ಕ್ಷಣ ಮೈನವಿರೇಳಿಸುತ್ತದೆ. ಈ ವಿಮಾನಗಳು ಪೆಸಿಫಿಕ್ ಸಾಗರದ ಅಲೆಗಳು ಮತ್ತು ಹಿಮಪರ್ವತಗಳ ನಡುವೆ ನಮ್ಮನ್ನು ಕರೆದೊಯ್ಯುವಾಗ, ಯಾವುದೋ ಮಾಯಾಲೋಕದಲ್ಲಿ ವಿಹರಿಸುತ್ತಿರುವಂತೆ ಭಾಸವಾಗುತ್ತದೆ. ವಿಮಾನದ ಪುಟ್ಟ ಕಿಟಕಿಗಳಿಂದ ಈ ದೃಶ್ಯಗಳನ್ನು ನೋಡಬಹುದು. ಕೆಳಗೆ ಹರಡಿರುವ ವಿಶಾಲವಾದ ನೀಲಿ ಜಲರಾಶಿ, ದಟ್ಟ ಹಸಿರಿನಿಂದ ಕೂಡಿದ ಸ್ಟಾನ್ಲಿ ಪಾರ್ಕ್‌ನ ಸಂಪೂರ್ಣ ನೋಟ, ಸಮುದ್ರದ ಮೇಲೆ ಕಮಾನಿನಂತೆ ಹರಡಿರುವ ಭವ್ಯ ಲಯನ್ಸ್ ಗೇಟ್ ಸೇತುವೆ ಹಾಗೂ ಹಿಮಾಚ್ಛಾದಿತ ಪರ್ವತಗಳ ವಿಹಂಗಮ ನೋಟ ಪ್ರತಿಯೊಬ್ಬ ಪ್ರವಾಸಿಯ ಮನಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ಉತ್ತಮ ಸಮಯ
ವ್ಯಾಂಕೋವರ್‌ನ ಈ ಸೊಬಗನ್ನು ಸವಿಯಲು ಹೋಗುವವರಿಗೆ ಜೂನ್‌ನಿಂದ ಆಗಸ್ಟ್ ಅತ್ಯಂತ ಹಿತಕರ. ಹಿಮದ ಆಟಗಳನ್ನು ಇಷ್ಟಪಡುವವರು ಡಿಸೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಭೇಟಿ ನೀಡಬಹುದು.
ನಗರದಲ್ಲಿ ಅನಿರೀಕ್ಷಿತ ಮಳೆ ಬರುವ ಸಂಭವ ಹೆಚ್ಚು. ಹಾಗಾಗಿ ವ್ಯಾಂಕೂವರ್ ಅನ್ನು ‘ರೇನ್ ಕೋವರ್’ ಎನ್ನುತ್ತಾರೆ . ಆದ್ದರಿಂದ ನಿಮ್ಮ ಜತೆಗೆ ಯಾವಾಗಲೂ ಒಂದು ಕೊಡೆ ಅಥವಾ ರೇನ್ ಜಾಕೆಟ್ ಇಟ್ಟುಕೊಳ್ಳುವುದು ಉತ್ತಮ.
ಮಾಹಿತಿ ಪೆಟ್ಟಿಗೆ:
ವ್ಯಾಂಕೂವರ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಂತ ಸುಸಜ್ಜಿತ ಮತ್ತು ವಿಶಿಷ್ಟವಾಗಿದೆ. ಇಲ್ಲಿನ 'ಸ್ಕೈ ಟ್ರೇನ್' ವ್ಯವಸ್ಥೆ ಅದ್ಭುತವಾಗಿದೆ. ಬಸ್, ಮೆಟ್ರೋ, ಸ್ಕೈ ಟ್ರೇನ್ ಜತೆಗೆ ಸೀ-ಪ್ಲೇನ್, ದೋಣಿ ಮತ್ತು ಫೆರ್ರಿಗಳ ಮೂಲಕವೂ ಸಂಚರಿಸಬಹುದು. ಹೀಗೆ ಒಂದೇ ನಗರದಲ್ಲಿ ಭೂಮಿ, ಆಕಾಶ ಮತ್ತು ಜಲಮಾರ್ಗ ಎಲ್ಲಾ ವಿಧದ ಸಾರಿಗೆ ಅನುಭವಗಳನ್ನು ಪಡೆಯಬಹುದು.